ಕನ್ನಡ ಹಾಗೂ ತುಳು ಭಾಷೆಯಲ್ಲಿ ಹಾಸ್ಯಮಯವಾಗಿ ಬೈಯುವ ಮೂಲಕ ಫೇಮಸ್ ಆಗಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಶಾ ಪಂಡಿತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಗಳೂರಿನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಅವರು, ತಮ್ಮ ವಿಶಿಷ್ಟ ಶೈಲಿಯ ಮಾತುಗಾರಿಕೆಯಿಂದ ಕರಾವಳಿ ಭಾಗದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು.
ತುಳು ಭಾಷೆಯಲ್ಲಿ ಹಾಸ್ಯಮಯವಾಗಿ ಬೈಯುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಕರಾವಳಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಶಾ ಪಂಡಿತ್ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಅವರ ಹಠಾತ್ ಸಾವು ಅವರ ಸಾಕಷ್ಟು ಅಭಿಮಾನಿಗಳಿಗೆ ಆಘಾತ ನೀಡಿದೆ. ತಮ್ಮನ್ನು ತಾವು ರಂಗಭೂಮಿ ಕಲಾವಿದೆ ಎಂದು ಹೇಳಿಕೊಂಡಿದ್ದ ಅವರು ಬಿಡುವಿನ ವೇಳೆಯಲ್ಲಿ ಹಾಸ್ಯಮಯವಾಗಿ ರೀಲ್ಸ್ ಮಾಡುತ್ತಿದ್ದರು.
ಮಂಗಳೂರಿನ ಅಳಪೆ ಬಳಿ ಸಣ್ಣದೊಂದು ಟೆಂಟ್‌ನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಅವರು ಫ್ರೀಯಾಗಿದ್ದ ಸಮಯದಲ್ಲಿ ರೀಲ್ಸ್ ಮಾಡುತ್ತಿದ್ದರು. ತಾವು ಮಾಡುವ ರೀಲ್ಸ್‌ಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಜನರಿಗೆ ಅವರು ತುಳು ಭಾಷೆಯಲ್ಲಿ ಹಾಸ್ಯಮಯವಾಗಿ ಬೈಯುವ ರೀತಿ ಎಲ್ಲರನ್ನೂ ಸೆಳೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ಅವರಿಗೆ ಈ ವಯಸ್ಸಲ್ಲಿ ಇದೆಲ್ಲಾ ಬೇಕಾ ನಿಮಗೆ, ನೀವು ಅಜ್ಜಿ ಆಗಿದ್ದೀರಿ, ಲಿಪ್‌ಸ್ಟಿಕ್ ಯಾಕೆ ಹಾಕ್ತೀರಿ, ಹುಬ್ಬಿಗೆ ಕಾಡಿಗೆ ಏಕೆ ಹಾಕುವಿರಿ ಎಂದೆಲ್ಲಾ ವೈಯಕ್ತಿಕವಾಗಿ ಕಾಮೆಂಟ್ ಮಾಡಿದಾಗ ಅವರಿಗೆ ತುಳು ಹಾಗೂ ಕನ್ನಡ ಭಾಷೆಯಲ್ಲಿ ಅವರು ಹಾಸ್ಯಮಯವಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಮಂಗ ಮುಸುಟಿನವನೆ ಮರುವಾಯಿ ಬಾಯವನೇ ಎಂದು ಅವರು ಬೈಯ್ಯುವ ರೀತಿ ಅನೇಕರಿಗೆ ನಗು ತರಿಸುತ್ತಿತ್ತು. ಹೀಗೆ ಎಲ್ಲರನ್ನು ತಮ್ಮ ಮಾತಿನ ಮೂಲಕವೇ ನಗಿಸುತ್ತಿದ್ದ ಅವರ ಹಠಾತ್ ಸಾವು ಅನೇಕರಿಗೆ ಆಘಾತ ಉಂಟು ಮಾಡಿದೆ.
ಅವರ ಇನ್ಸ್ಟಾಗ್ರಾಮ್ ಖಾತೆಯಿಂದಲೇ ಅವರ ಸಾವಿನ ವಿಚಾರ ಪೋಸ್ಟ್ ಆಗಿದ್ದು, ನಿಮ್ಮೆಲ್ಲರ ಆಶಾ ಪಂಡಿತ್ ನಮ್ಮನೆಲ್ಲಾ ಅಗಲಿದ್ದಾರೆ. ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಮಾಹಿತಿ ನೀಡಲಾಗಿದೆ. ಈ ವಿಚಾರ ತಿಳಿದ ಅನೇಕರು ಅವರ ಹಠಾತ್ ಸಾವಿಗೆ ಆಘಾತ ವ್ಯಕ್ತಪಡಿಸಿದ್ದು ಸಂತಾಪ ಸೂಚಿಸಿದ್ದಾರೆ. ನಿನ್ನೆ ರಾತ್ರಿ ಅವರು ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಪೋಸ್ಟ್‌ಗೆ ಅನೇಕರು ನಂಬುವುದಕ್ಕೆ ಆಗುತ್ತಿಲ್ಲ, ಈ ವಿಚಾರ ನಿಜವೇ ಎಂದು ಕಾಮೆಂಟ್ ಮಾಡಿ ಕೇಳುತ್ತಿದ್ದಾರೆ. ನಿಜವಾಗಿಯೂ ಇದೊಂದು ಆಘಾತಕಾರಿ ವಿಚಾರ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಕರಾವಳಿ ಮೂಲದ ನಟಿ ಅಶ್ವಿತಿ ಶೆಟ್ಟಿ ಕೂಡ ಆಶಾ ಪಂಡಿತ್ ಸಾವಿಗೆ ಶಾಕ್ ಆಗಿದ್ದು, ನನಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನೀವು ನನ್ನ ಮುಖದಲ್ಲಿ ಯಾವಾಗಲೂ ನಗು ತರಿಸುತ್ತಿದ್ದೀರಿ, ನನಗೆ ನಿಮ್ಮನ್ನು ಮುಖತಃ ಪರಿಚಯ ಇಲ್ಲ, ಆದರೆ ಈ ವಿಚಾರ ತಿಳಿದು ನನಗೆ ನಿಜಕ್ಕೂ ಮನಸ್ಸು ಕೆಟ್ಟಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಒಂದೇ ಕಾರನ್ನು 8 ಬಾರಿ ಮಾರಿದ ಚಾಲಾಕಿ: 24 ಗಂಟೆಯೊಳಗೆ ಮಾರಿದ ಕಾರನ್ನು ಕದಿಯುತ್ತಿದ್ದ ಕಳ್ಳನ ಬಂಧನ
ಇತ್ತೀಚೆಗೆ ಅವರು ಪ್ರಸಿದ್ಧಿಗೆ ಬಂದ ನಂತರ ಅವರನ್ನು ಕೆಲವು ಯುಟ್ಯೂಬರ್‌ಗಳು ಮಾತನಾಡಿಸಿದಾಗ ತಾನು ಸುಮಾರು 14 ವರ್ಷಗಳ ಕಾಲ ನಾಟಕಗಳಲ್ಲಿ ವೇಷ ಹಾಕುತ್ತಿದೆ. ದೇವಿಯ ಪಾತ್ರವನ್ನು ಮಾಡಿದ್ದೇನೆ. ಒಂದು ಕಾಲದಲ್ಲಿ ನಾನು ಬಹಳ ಫೇಮಸ್ ನಾಟಕ ಕಲಾವಿದೆಯಾಗಿದೆ ಎಂದು ಹೇಳಿಕೊಂಡಿದ್ದರು. ಆಶಾ ಪಂಡಿತ್ ಅವರು ತುಸು ಸಿನಿಮಾಗಳ ಹಾಡನ್ನು ಕೂಡ ಬಹಳ ಸೊಗಸಾಗಿ ಹಾಡುತ್ತಿದ್ದರು. ತಮ್ಮ ವಿಶಿಷ್ಟ ಶೈಲಿಯ ಮಾತುಗಾರಿಕೆಯಿಂದಾಗಿ ಕರಾವಳಿ ಭಾಗದಲ್ಲಿ ಅವರು ಸಾಕಷ್ಟು ಫೇಮಸ್ ಆಗಿದ್ದರು. ಆದರೆ ಅವರ ಈ ಹಠಾತ್ ಸಾವು ಅನೇಕರನ್ನು ದುಃಖಿಸುವಂತೆ ಮಾಡಿದ್ದು, ಸಾವು ಇಷ್ಟೊಂದು ಅನಿರೀಕ್ಷಿತ ಎಂದು ಎಲ್ಲರೂ ಯೋಚಿಸುವಂತೆ ಮಾಡಿದೆ. ಉಸಿರಿರುವಷ್ಟು ಸಮಯ ಎಲ್ಲರನ್ನೂ ತಮ್ಮ ಮಾತಿನ ಮೂಲಕ ನಗಿಸುತ್ತಿದ್ದ ಜನರ ಪ್ರೀತಿಯ ಆಶಾಕ್ಕನಿಗೆ ದೇವರು ಸದ್ಗತಿ ನೀಡಲಿ.
ಇದನ್ನೂ ಓದಿ: ಆತ ಮಾಡಿದ್ದು 5 ಕೊಲೆ, ಆಕೆಯದ್ದು 1 : ಜೀವಾವಧಿ ಶಿಕ್ಷೆಗೊಳಗಾದ ಇಬ್ಬರಿಗೂ ಜೈಲಲ್ಲಿ ಪ್ರೀತಿ: ಮದುವೆಗೆ ಕೋರ್ಟ್ ಪೆರೋಲ್


