ಮಂಗಳೂರಿನ ಕೋಟೇಕಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಗಾಗಿ 2 ವರ್ಷಗಳಿಂದ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ತೆರವುಗೊಳಿಸುವ ಸಾಧ್ಯತೆಯಿದೆ. ಸರ್ವಿಸ್ ರಸ್ತೆ ನಿರ್ಮಾಣದ ಅಗತ್ಯತೆ ಮತ್ತು ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ, ಪಟ್ಟಣ ಪಂಚಾಯತ್ ಪರ್ಯಾಯ ಜಾಗದ ಹುಡುಕಾಟದಲ್ಲಿದೆ. ಈ ಕ್ಯಾಂಟೀನ್ ಅನ್ನು ಆಸ್ಪತ್ರೆಗಳ ಬಳಿ ನಿರ್ಮಿಸಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋಟೇಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಇದೀಗ ತೆರವು ಭೀತಿ ಎದುರಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೊಲ್ಯ-ಕೋಟೇಕಾರ್ ಮಾರ್ಗದಲ್ಲಿ ನೂತನ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವುದೇ ಇದಕ್ಕೆ ಪ್ರಮುಖ ಕಾರಣ.

ಕಟ್ಟಡ ನಿರ್ಮಾಣವಾಗಿ 2 ವರ್ಷವಾದರೂ ಆಗದ ಉದ್ಘಾಟನೆ

ಕೋಟೇಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಎಸ್. ಶೆಟ್ಟಿ ಮಾತನಾಡಿ, "ಪ್ರಸ್ತುತ ಪಟ್ಟಣ ಪಂಚಾಯತ್ ಆಡಳಿತ ಅಧಿಕಾರಕ್ಕೆ ಬರುವ ಮುನ್ನವೇ, ಸುಮಾರು ಎರಡು ವರ್ಷಗಳ ಹಿಂದೆ ಈ ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿತ್ತು. ಆದರೆ, ದುರಾದೃಷ್ಟವಶಾತ್ ಇದು ಇನ್ನೂ ಉದ್ಘಾಟನೆಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ" ಎಂದು ತಿಳಿಸಿದರು.

ಕ್ಯಾಂಟಿನ್ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಲು ಪಟ್ಟಣ ಪಂಚಾಯತ್ ಹಣ ಮೀಸಲಿಟ್ಟಿತ್ತು. ಆದರೆ, ಇದೀಗ ರಸ್ತೆ ವಿಸ್ತರಣೆಗೆ ಕಟ್ಟಡವನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ಬಂದಿರುವುದರಿಂದ ಅನುದಾನವನ್ನು ಅನಗತ್ಯವಾಗಿ ವೆಚ್ಚ ಮಾಡದಿರಲು ನಿರ್ಧರಿಸಲಾಗಿದೆ. NHAI ನಿಂದ ಅಧಿಕೃತ ನೋಟಿಸ್ ಬಂದ ತಕ್ಷಣ ಕೌನ್ಸಿಲ್ ಸಭೆಯಲ್ಲಿ ಸ್ಥಳಾಂತರದ ಕುರಿತು ನಿರ್ಣಯ ಅಂಗೀಕರಿಸಿ, ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಆಸ್ಪತ್ರೆಗಳ ಬಳಿ ನಿರ್ಮಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು

ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿರ್ಮಿಸುವ ಬದಲು, ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಗಳಿಂದ ನಿತ್ಯ ನೂರಾರು ರೋಗಿಗಳು ಬರುವ ದೇರಳಕಟ್ಟೆಯ ಪ್ರಮುಖ ಆಸ್ಪತ್ರೆಗಳ ಸಮೀಪ ಈ ಕ್ಯಾಂಟೀನ್ ನಿರ್ಮಿಸಿದ್ದರೆ ಬಡಜನರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರು ಹೇಳಿದ್ದಾರೆ.

ಇತ್ತೀಚೆಗೆ ನಡೆದ 'ದಿಶಾ' (DISHA) ಸಮಿತಿ ಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಕ್ಯಾಂಟೀನ್ ಸ್ಥಳಾಂತರಕ್ಕೆ ಸೂಕ್ತ ಪರ್ಯಾಯ ಜಾಗ ಗುರುತಿಸಿ ನಿರ್ಣಯ ಕೈಗೊಳ್ಳುವಂತೆ ಕೋಟೇಕಾರ್ ಪಟ್ಟಣ ಪಂಚಾಯತ್‌ಗೆ ಸೂಚನೆ ನೀಡಿದ್ದರು. ಈ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಮಾಲಿನಿ, ಸುಮಾರು ಎರಡು ವರ್ಷಗಳ ಹಿಂದೆ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ ಸಮಾಲೋಚಿಸಿ ಈ ಸ್ಥಳವನ್ನು ಅಂತಿಮಗೊಳಿಸಲಾಗಿತ್ತು. ಆ ಸಮಯದಲ್ಲಿ NH-66 ರ ಪಕ್ಕದಲ್ಲಿ ಬೇರೆ ಸರ್ಕಾರಿ ಜಾಗ ಲಭ್ಯವಿರಲಿಲ್ಲ ಎಂದು ಮಾಹಿತಿ ನೀಡಿದರು.

ಸರ್ವಿಸ್ ರಸ್ತೆ ನಿರ್ಮಾಣವೇಕೆ ಅಗತ್ಯ?

ರಾಷ್ಟ್ರೀಯ ಹೆದ್ದಾರಿ 66 ರ 12+000 ಕಿ.ಮೀ ನಿಂದ 12+700 ಕಿ.ಮೀ ವರೆಗಿನ 700 ಮೀಟರ್ ವ್ಯಾಪ್ತಿಯಲ್ಲಿ NHAI ಸರ್ವಿಸ್ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಸಿದ್ಧತೆ ನಡೆಸುತ್ತಿದೆ. ಈ ಭಾಗವು ಅಪಘಾತ ವಲಯ ಎಂದು ಗುರುತಿಸಲ್ಪಟ್ಟಿದ್ದು, ಜೀವಹಾನಿ ತಡೆಯುವ ಉದ್ದೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಸರ್ವಿಸ್ ರಸ್ತೆ ಇಲ್ಲದೆ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದು, ವಿಧಿ ಇಲ್ಲದೆ ಹಲವು ವಾಹನ ಸವಾರರು ಒನ್‌ವೇ ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಇಂದಿರಾ ಕ್ಯಾಂಟೀನ್ ಯೋಜನೆಯ ಹಿನ್ನೆಲೆ:

ಬಡವರು ಮತ್ತು ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು 2017 ರಲ್ಲಿ ರಾಜ್ಯದಲ್ಲಿ ಜಾರಿಗೆ ತರಲಾಯಿತು. 2018 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ವಿಸ್ತರಿಸಲ್ಪಟ್ಟ ಈ ಯೋಜನೆಯಡಿ, ಪ್ರಸ್ತುತ ಜಿಲ್ಲೆಯಾದ್ಯಂತ 13 ಇಂದಿರಾ ಕ್ಯಾಂಟೀನ್‌ಗಳು ಸಕ್ರಿಯವಾಗಿದೆ.