ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಪಾಪಣ್ಣ, ಹಣ ನೀಡಲಿಲ್ಲವೆಂದು ಪತ್ನಿ ಗಾಯತ್ರಿಯನ್ನು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ.

ಮೈಸೂರು (ಆ.18): ಕುಡಿತಕ್ಕೆ ಹಣ ನೀಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದ ಆಘಾತಕಾರಿ ಘಟನೆ ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ

ಪಾಪಣ್ಣ(45) ಕೊಲೆ ಮಾಡಿದ ಆರೋಪಿ, ಗಾಯತ್ರಿ (38) ಕೊಲೆಯಾದ ಪತ್ನಿ.

ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪಾಪಣ್ಣ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದು, ಸಾಲಗಾರನಾಗಿ ಕುಡಿತದ ಚಟಕ್ಕೆ ಬಿದ್ದಿದ್ದ. ಇದರಿಂದಾಗಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಹಣಕ್ಕಾಗಿ ಆತ ಗಾಯತ್ರಿ ಹಾಗೂ ಮಕ್ಕಳನ್ನು ಸತತವಾಗಿ ಪೀಡಿಸುತ್ತಿದ್ದ. ಜಮೀನು ಮಾರಾಟ ಮಾಡಿ ಹಣ ನೀಡುವಂತೆ ಗಾಯತ್ರಿಯನ್ನು ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ಗಾಯತ್ರಿ ಇದಕ್ಕೆ ಒಪ್ಪದಿದ್ದರಿಂದ ಆಕೆಯ ಮೇಲೆ ಆಗಾಗ ದೈಹಿಕ ಹಿಂಸೆ ನಡೆಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ದಿನ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಾಪಣ್ಣ ಗಾಯತ್ರಿಯ ಮೇಲೆ ಮಚ್ಚಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಈ ದಾಳಿಯಿಂದ ಗಾಯತ್ರಿ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ. ಕೊಲೆಯ ನಂತರ ಪರಾರಿಯಾಗಲು ಯತ್ನಿಸಿದ ಪಾಪಣ್ಣನನ್ನು ಆತನ ಮಗನೇ ಹಿಡಿದು ವಿಜಯನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾನೆ. ಮಗನ ದೂರಿನ ಆಧಾರದ ಮೇಲೆ ವಿಜಯನಗರ ಪೊಲೀಸರು ಆರೋಪಿ ಪಾಪಣ್ಣನನ್ನು ಬಂಧಿಸಿದ್ದಾರೆ.

ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಆರೋಪಿಯ ವಿರುದ್ಧ ಕೊಲೆ ಆರೋಪದಡಿ ದೂರು ದಾಖಲಿಸಲಾಗಿದೆ. ಈ ಘಟನೆ ಕುಟುಂಬದೊಳಗಿನ ಹಿಂಸಾಚಾರ ಮತ್ತು ಕುಡಿತದ ದುಷ್ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.