ಹಳಿಯಾಳದಲ್ಲಿ ಹಣಕಾಸಿನ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದು ಒಬ್ಬರಿಗೆ ಚಾಕು ಇರಿದ ಘಟನೆ ನಡೆದಿದೆ. ಗಾಯಾಳುವನ್ನು ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಉತ್ತರ ಕನ್ನಡ (ಜು.17):ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರಕ್ಕೆ ಮಾತಿಗೆ ಮಾತು ಬೆಳೆಸಿ ಸ್ನೇಹಿತನಿಗೆ ಚಾಕು ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಶ್ರೀದೇವಿ (ಯಲ್ಲಮ್ಮಾ ಬಾರ್) ವೈನ್ ಶಾಪ್‌ನಲ್ಲಿ ನಡೆದಿದೆ.

ಈ ಘಟನೆಯಲ್ಲಿ ಸಾದಿಕ್ (ಸದ್ದಾಮ್) ಬಾಷಾ ಖಾನ್ (34) ಎಂಬ ಯುವಕ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಆರೋಪಿಯಾಗಿರುವ ಸಮೀವುಲ್ಲಾ ಸೋಹೆಲ್ ಬೇಪಾರಿ (27) ಚಾಕು ಇರಿದಿರುವ ಆರೋಪಿಯಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ಗಾಯಾಳು ಸಾದಿಕ್ ಮತ್ತು ಆರೋಪಿ ಸಮೀವುಲ್ಲಾ ಇಬ್ಬರೂ ಕ್ರಿಮಿನಲ್ ಹಿನ್ನೆಲೆಯುಳ್ಳ ರೌಡಿ ಶೀಟರ್‌ಗಳಾಗಿದ್ದು, ಹಳಿಯಾಳ ಠಾಣೆಯಲ್ಲಿ ಎಂಓಬಿ (ಮಾದರಿ ಗುನ್ನೆಗಾರ) ಆಗಿ ದಾಖಲಾಗಿದ್ದಾರೆ. ಘಟನೆಯ ದಿನ ವೈನ್ ಶಾಪ್‌ನಲ್ಲಿ ಮದ್ಯ ಸೇವಿಸುವ ವೇಳೆ ಇಬ್ಬರ ನಡುವೆ ಹಣದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕುಡಿದ ಮತ್ತಿನಲ್ಲಿದ್ದ ಸಮೀವುಲ್ಲಾ, ಸಾದಿಕ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣ ಹಳಿಯಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಸಮೀವುಲ್ಲಾನನ್ನು ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಾದಿಕ್‌ನನ್ನು ತಕ್ಷಣ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವನ ಪರಿಸ್ಥಿತಿ ಚಿಂತಾಜನಕವಾಗಿರುವುದರಿಂದ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.