ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿತದ ದಾಸನಾದ ಮಗನೊಬ್ಬ ತನ್ನ ತಾಯಿಯನ್ನು ಕೊಂದು ಶವಕ್ಕೆ ಬೆಂಕಿ ಹಚ್ಚಿ ಪಕ್ಕದಲ್ಲೇ ಮಲಗಿದ್ದಾನೆ. ಈ ಹಿಂದೆಯೂ ತಂದೆಯ ಮೇಲೆ ಹಲ್ಲೆ ನಡೆಸಿದ್ದ ಈತನ ಕೃತ್ಯ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಚಿಕ್ಕಮಗಳೂರು: ಜಿಲ್ಲೆಯ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ಮನುಷ್ಯತ್ವವನ್ನು ಮರೆತ ಭಯಾನಕ ಘಟನೆ ನಡೆದಿದೆ. ಕುಡಿತದ ವ್ಯಸನಿಯಾಗಿದ್ದ ಮಗನು ತನ್ನ ತಾಯಿಯನ್ನು ಕೊಂದು, ನಂತರ ಶವಕ್ಕೆ ಬೆಂಕಿ ಹಚ್ಚಿದ್ದು ಮಾತ್ರವಲ್ಲದೆ, ಅದರ ಪಕ್ಕದಲ್ಲೇ ಮಲಗಿದ್ದಾನೆ.

ಮಾತೃವನ್ನು ಕೊಂಡ ಪಾಪಿ ಮಗ ಪವನ್ (28) ತನ್ನ ತಾಯಿ ಭವಾನಿ (52) ಅವರನ್ನು ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ನಂತರ, ತಾಯಿಯ ಮೃತದೇಹವನ್ನು ಸುಟ್ಟು ಹಾಕಿದ್ದಾನೆ. ಈ ಭೀಕರ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪವನ್‍ನನ್ನು ಆಲ್ದೂರು ಪಿಎಸ್‌ಐ ಮತ್ತು ಇನ್‌ಸ್ಪೆಕ್ಟರ್‌ಗಳ ಮಾರ್ಗದರ್ಶನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪ್ಪನಿಗೂ ಚಿತ್ರಹಿಂಸೆ

ಪವನ್‌ನ ಈ ಹಿಂದೆ ನಡೆಸಿದ ಕೃತ್ಯಗಳು ಕೂಡ ಕ್ರೂರತೆಯ ತೀವ್ರತೆ ಪ್ರತಿಬಿಂಬಿಸುತ್ತವೆ. ತಿಂಗಳ ಹಿಂದೆ ಅಪ್ಪನ ಚರ್ಮ ಸುಲಿಯುವಂತೆ ಹೊಡೆದಿದ್ದ ಪಾಪಿ ಪುತ್ರ. ಇಂತಹ ಮಕ್ಕಳು ಹುಟ್ಟೋದ್ಕಿಂತ, ಹುಟ್ಟದೇ ಇರೋದೇ ಒಳ್ಳೆಯದು. ತಾಯಿಯನ್ನ ಕೊಂದವ ಅಪ್ಪನ ಮೇಲೂ ಮೃಗೀಯ ವರ್ತನೆ ತೋರಿದ್ದ. ಕೆಲವು ತಿಂಗಳುಗಳ ಹಿಂದೆ ತನ್ನ ತಂದೆ ಸೋಮೇಗೌಡನನ್ನು ಲೆದರ್ ಬೆಲ್ಟ್‌ನಿಂದ ಹೊಡೆದು, ಅವರ ಬೆನ್ನಿನ ಚರ್ಮವೇ ಸುಲಿಯುವಂತೆ ಮಾಡಿದನು. ಮಗನಿಂದಲೇ ಬೆನ್ನಿನ ಚರ್ಮ ಸುಲಿಸಿಕೊಂಡ ನತದೃಷ್ಟ ಅಪ್ಪ ಸೋಮೇಗೌಡನ ಬೆನ್ನಿನ ಸ್ಥಿತಿ ನೋಡಿದ್ರೆ ಎಂಥವರ ಕಣ್ಣಲ್ಲೂ ನೀರು ಬರುತ್ತೆ. ಈ ಕುರಿತು ಅಕ್ಕಪಕ್ಕದವರು ಅನೇಕ ಬಾರಿ ಪವನ್‌ಗೆ ಬುದ್ಧಿ ಹೇಳಿದ್ದರೂ ಅದನ್ನು ಆತ ಕೇಳಿರಲಿಲ್ಲ.

ಪೋಷಕರ ಸಹನೆ, ಮಮಕಾರ

ತಂದೆ ಮತ್ತು ತಾಯಿ ತಮ್ಮ ಮಗನಿಂದ ಅನುಭವಿಸುತ್ತಿದ್ದ ದೌರ್ಜನ್ಯವನ್ನು ಮಗು ಎಂಬ ಮಮಕಾರದಿಂದ ಬೇರೆ ಯಾರಿಗೂ ಹೇಳದೆ ಬಹಿರಂಗಪಡಿಸಿರಲಿಲ್ಲ. ನಿತ್ಯ ಕೂಲಿ ಮಾಡೋದು ಸಂಜೆ ಕುಡಿದು ಬಂದು ಅಪ್ಪ-ಅಮ್ಮನನ್ನ ಹೊಡೆಯೋದೇ ಇವನ ಕಾಯಕವಾಗಿತ್ತು. ಈ ಘಟನೆಯು ಗ್ರಾಮಸ್ಥರಲ್ಲಿ ಆಘಾತವನ್ನುಂಟು ಮಾಡಿದೆ. ತಾಯಿಯನ್ನು ಕೊಂದು ಸುಟ್ಟ ಕ್ರೂರ ಮಗ ಪವನ್ ಈಗ ಪೊಲೀಸರ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.