ಬೀದರ್ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ, ಬಾಗಲಕೋಟೆಯಲ್ಲಿ ಸರಣಿ ಕಳ್ಳತನ, ಮತ್ತು ಬಸವಕಲ್ಯಾಣದಲ್ಲಿ ಪಿಡಿಓ ಮನೆ ಕಳ್ಳತನಕ್ಕೆ ಯತ್ನ ನಡೆದಿದೆ. ಈ ಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಆತಂಕವನ್ನು ಸೃಷ್ಟಿಸಿದ್ದು, ಪೊಲೀಸ್ ಸಿಬ್ಬಂದಿಯ ಮನೆಗಳೇ ಸುರಕ್ಷಿತವಲ್ಲದಂತಾಗಿದೆ.
ಬೀದರ್ (ಡಿ.12): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆಯೇ ಎಂಬ ಪ್ರಶ್ನೆ ಇದೀಗ ವ್ಯಾಪಕವಾಗಿ ಕೇಳಿಬರುತ್ತಿದೆ. ವಿರೋಧ ಪಕ್ಷದವರು ಮಾಡುತ್ತಿರುವ ಆರೋಪಗಳಿಗೆ ರಾಜ್ಯದಲ್ಲಿ ಸರಣಿಯಾಗಿ ನಡೆಯುತ್ತಿರುವ ಹಾಡುಹಗಲೇ ಕಳ್ಳತನ, ದರೋಡೆ ಮತ್ತು ಬಾಂಬ್ ಬೆದರಿಕೆ ಘಟನೆಗಳು ಆರೋಪಗಳಿಗೆ ಪುಷ್ಟಿ ನೀಡುತ್ತಿವೆ. ಇಂದು ಬೆಳಿಗ್ಗೆಯಷ್ಟೇ ಬೀದರ್ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ ಇಮೇಲ್ ಬಂದಿದೆ. ಮತ್ತೊಂದೆಡೆ, ಬಾಗಲಕೋಟೆಯಲ್ಲಿ ಒಂದೇ ದಿನದಲ್ಲಿ ಒಂಬತ್ತಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿ ಖದೀಮರ ಗ್ಯಾಂಗ್ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದೆ. ಈ ಕಳ್ಳರು ಪೊಲೀಸ್ ಸಿಬ್ಬಂದಿ ಮತ್ತು ಸರ್ಕಾರಿ ನೌಕರರ ಮನೆಗಳನ್ನೇ ಟಾರ್ಗೆಟ್ ಮಾಡಿ ರಾಜಾರೋಷವಾಗಿ ಕಳವು ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಬಸವಕಲ್ಯಾಣದಲ್ಲಿ ಹಾಡಹಗಲೇ ಪಿಡಿಓ ಮನೆ ಕಳ್ಳತನಕ್ಕೆ ಯತ್ನ
ಇಂತಹ ಭಯಾನಕ ಘಟನೆಗಳ ನಡುವೆಯೇ, ಬಸವಕಲ್ಯಾಣದಲ್ಲಿ ಹಾಡಹಗಲೇ ಪಿಡಿಓ ಮನೆ ಕಳ್ಳತನಕ್ಕೆ ಯತ್ನ ನಡೆದಿದೆ. ಬಸವಕಲ್ಯಾಣದ ಬಿರಾದಾರ ಕಾಲೋನಿಯಲ್ಲಿನ ರಿಜ್ವಾನ್ ಎಂಬುವವರ ಮನೆಗೆ ನಿನ್ನೆ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿದು ಖದೀಮನೊಬ್ಬ ನುಗ್ಗಿದ್ದಾನೆ. ಆದರೆ, ಮನೆಯೊಳಗೆ ಜನರ ಇರುವಿಕೆ ಕಂಡುಬಂದ ಕೂಡಲೇ ಆ ಕಳ್ಳ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯವರು ನೋಡುತ್ತಿದ್ದಂತೆ ಆ ಖದೀಮ ಕಂಪೌಂಡ್ ಹಾರಿ ಎದ್ನೊ ಬಿದ್ನೋ ಎಂದು ಓಡಿ ಹೋಗಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲ?
ದಿನನಿತ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಪೊಲೀಸ್ ಸಿಬ್ಬಂದಿಯ ಮನೆಗಳೇ ಸುರಕ್ಷಿತವಾಗಿಲ್ಲದಿರುವುದು ನೋಡಿದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ನಿಜವಿರಬಹುದು ಎನ್ನುವ ಅಭಿಪ್ರಾಯ ಜನರಲ್ಲಿ ಮೂಡುತ್ತಿದೆ. ರಾಜ್ಯಾದ್ಯಂತ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ.


