ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ 'ಮಂಕಿ ಕ್ಯಾಪ್' ಧರಿಸಿದ ಕಳ್ಳರ ತಂಡವೊಂದು ಪೊಲೀಸರ ಮನೆಗಳೂ ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದೆ. ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಗಲಕೋಟೆ (ಡಿ.12): ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಇತ್ತೀಚೆಗೆ 'ಮಂಕಿ ಕ್ಯಾಪ್' ಧರಿಸಿದ ಕಳ್ಳರ ತಂಡವೊಂದು ಭಯದ ವಾತಾವರಣ ಸೃಷ್ಟಿಸಿದ್ದು, ನಿನ್ನೆ ರಾತ್ರಿ ಒಂಬತ್ತಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದೆ.
ಪೊಲೀಸರ ಮನೆಗಳನ್ನೂ ಬಿಡದ ಖದೀಮರು!
ಈ ಕಳ್ಳರು ಎಂತಹ ಖತರ್ನಾಕ್ ಖದೀಮರೆಂದರೆ, ಅವರು ಪಟ್ಟಣದ ಮೂರು ಜನ ಪೊಲೀಸ್ ಸಿಬ್ಬಂದಿಯ ಮನೆಗಳಿಗೂ ಕನ್ನ ಹಾಕಿರುವುದು! ಪೊಲೀಸರ ಮನೆಯೊಳಗೆ ನುಗ್ಗಿ ಒಳಭಾಗವನ್ನು ಅಸ್ತವ್ಯಸ್ತಗೊಳಿಸಿ ಕೆಲ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಪೊಲೀಸರ ಮನೆಗಳನ್ನೇ ಗುರಿಯಾಗಿಸಿರುವ ಈ ಖದೀಮರ ಕಾರ್ಯವು ಪಟ್ಟಣದ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಮಂಕಿ ಕ್ಯಾಪ್ ಗ್ಯಾಂಗ್ ಸಿಸಿಟಿವಿಯಲ್ಲಿ ಸೆರೆ:
ಕೈಯಲ್ಲಿ ಕೋಲು ಮತ್ತು ಬ್ಯಾಟರಿ ಹಿಡಿದು, ಮಂಕಿ ಕ್ಯಾಪ್ ಧರಿಸಿದ ನಾಲ್ಕು ಜನರ ತಂಡವು ರಾತ್ರಿ ವೇಳೆ ಬಿಂದಾಸ್ ಆಗಿ ಮನೆ ಮನೆಗಳಿಗೆ ಓಡಾಡುತ್ತಿರುವ ದೃಶ್ಯ ಪಟ್ಟಣದ ಕೆಲವು ಮನೆಗಳ ಹೊರಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಕಳ್ಳರ ಚಲನವಲನ ಸ್ಪಷ್ಟವಾಗಿ ಸೆರೆಯಾಗಿದ್ದರೂ, ಅವರ ಗುರುತು ಪತ್ತೆ ಹಚ್ಚುವ ಕಾರ್ಯ ಸವಾಲಾಗಿದೆ. ಈ ಕೃತ್ಯಗಳ ಕುರಿತು ಮಾಹಿತಿ ಪಡೆದ ಹುನಗುಂದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಆತಂಕ ಪಡದಂತೆ ಮತ್ತು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.


