ಹೊಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಯೊಂದಿಗೆ ಜಗಳವಾಡಿದ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ, ವ್ಯಾಪಾರಿಯು ತನ್ನ ಮೇಲಿದ್ದ ಕುದಿಯುವ ಎಣ್ಣೆಯನ್ನು ಯುವಕನೊಬ್ಬನ ಮೇಲೆ ಎಸೆದು ಪ್ರತೀಕಾರ ತೀರಿಸಿಕೊಂಡಿದ್ದಾನೆ.
ಬೆಂಗಳೂರು (ಡಿ.12): ಬೀದಿ ಬದಿ ವ್ಯಾಪಾರಿಯೊಬ್ಬರೊಂದಿಗೆ ಪುಂಡ ಯುವಕರಿಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ವ್ಯಾಪಾರಿ ಮೇಲೆ ಹಲ್ಲೆ ಮಾಡಿದ ಘಟನೆ ಹೊಸೂರಿನ ಟ್ಯಾಂಕ್ ಸ್ಟ್ರೀಟ್ ರಸ್ತೆಯಲ್ಲಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ.
ತಿಂಡಿ ಎಸೆದು ಪುಂಡರಿಂದ ದಾಂಧಲೆ:
ಆರಂಭದಲ್ಲಿ, ಆ ಯುವಕರು ವ್ಯಾಪಾರಿಯ ಅಂಗಡಿಯಲ್ಲಿದ್ದ ತಿಂಡಿಗಳನ್ನು ಎಸೆದು ದರ್ಪ ಪ್ರದರ್ಶಿಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ, ಯುವಕರು ವ್ಯಾಪಾರಿಗೆ ಆಹಾರದ ಪಾತ್ರೆಯೊಂದರಿಂದ ತಲೆಗೆ ಹೊಡೆದಿದ್ದಾರೆ. ಈ ಅನಿರೀಕ್ಷಿತ ಹಲ್ಲೆಯಿಂದ ಕುಪಿತಗೊಂಡ ವ್ಯಾಪಾರಿ, ತಕ್ಷಣವೇ ತನ್ನ ಬಳಿ ಇದ್ದ ಕುದಿಯುವ ಎಣ್ಣೆಯನ್ನು ಪುಂಡನ ಮೇಲೆ ಎಸೆದು ಪ್ರತಿದಾಳಿ ನಡೆಸಿದ್ದಾರೆ.
ಬಿಸಿ ಎಣ್ಣೆ ಮೈಮೇಲೆ ಬಿದ್ದ ತಕ್ಷಣ ಕಿರುಚಾಡಿದ ಪುಂಡ:
ಪಾತ್ರೆಯಿಂದ ತಲೆಗೆ ಹೊಡೆದ ಯುವಕನ ಮೇಲೆ ವ್ಯಾಪಾರಿ ಕುದಿಯುವ ಎಣ್ಣೆಯನ್ನು ಎರಚಿದ್ದಾರೆ. ಬಿಸಿ ಎಣ್ಣೆ ಮೈಮೇಲೆ ಬಿದ್ದ ತಕ್ಷಣ ಆ ಯುವಕ ತೀವ್ರ ನೋವಿನಿಂದ ರಸ್ತೆಯಲ್ಲಿ ಒದ್ದಾಡಿದ್ದಾನೆ. ಇದನ್ನು ಕಂಡ ಮತ್ತೊಬ್ಬ ಯುವಕ, ಕೋಪದಲ್ಲಿ ಸುತ್ತಲೂ ಇದ್ದ ಕಲ್ಲನ್ನು ತೆಗೆದುಕೊಂಡು ವ್ಯಾಪಾರಿಯ ಅಂಗಡಿಯ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಘಟನೆಯ ನಂತರ, ಹಲ್ಲೆಗೊಳಗಾದ ಯುವಕನ ಪರಿಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಹೊಸೂರು ಪೊಲೀಸರು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.


