ಮಹಿಳಾ ಏಷ್ಯಾಕಪ್ ಟಿ20 ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದ್ದು, ಪಾಕ್ ತಂಡ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯದ ನಂತರ, ಪಾಕ್ ಅಭಿಮಾನಿಯೊಬ್ಬರಿಗೆ ಭಾರತೀಯ ಅಜ್ಜಿಯೊಬ್ಬರು ನೀಡಿದ ಖಡಕ್ ಉತ್ತರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತೀಯ ಮಹಿಳಾ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ವೈಭವೋಪೇತ ಗೆಲುವು ಸಾಧಿಸಿದೆ. ದುಬೈನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ತಂಡವು ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಪಾಕಿಸ್ತಾನ ಮಹಿಳಾ ತಂಡ ದಾಖಲಿಸಿದ ಅತ್ಯಂತ ಕನಿಷ್ಠ ಸ್ಕೋರ್ ಆಗಿದೆ. ಭಾರಿ ನಿರೀಕ್ಷೆಯೊಂದಿಗೆ ಮೈದಾನಕ್ಕೆ ಬಂದಿದ್ದ ಪಾಕ್ ಅಭಿಮಾನಿಗಳು ಪಂದ್ಯ ಮುಗಿಯುತ್ತಿದ್ದಂತೆ ಮುಖ ಸಣ್ಣಗೆ ಮಾಡಿಕೊಂಡು ನಿರಾಶೆಯಿಂದ ಮರಳಿದರು.

ವೈರಲ್ ಆಯ್ತು ಭಾರತೀಯ ಅಜ್ಜಿಯ 'ಕಡಕ್' ಉತ್ತರ!

ಈ ಪಂದ್ಯ ಮುಗಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದ ಸಕತ್ ವೈರಲ್ ಆಗುತ್ತಿದೆ. ಪಾಕಿಸ್ತಾನದ ಪ್ರಸಿದ್ಧ ರೀಲ್ ಸ್ಟಾರ್ ಹಾಗೂ ಅಭಿಮಾನಿಯೊಬ್ಬರು ಸ್ಟೇಡಿಯಂನಲ್ಲಿದ್ದ ಭಾರತೀಯ ಮೂಲದ ಹಿರಿಯ ಅಜ್ಜಿಯ ಬಳಿ ವೀಡಿಯೊ ಮಾಡುತ್ತಾ, "ಮೇಡಂ, ಈ ವಯಸ್ಸಿನಲ್ಲೂ ಪಂದ್ಯ ನೋಡಲು ಬಂದಿದ್ದೀರಾ?" ಎಂದು ಕಾಲೆಳೆಯುವ ಧಾಟಿಯಲ್ಲಿ ಪ್ರಶ್ನಿಸಿದರು.

ಒಂದೇ ಏಟಿನ ಉತ್ತರ!

ಪಾಕ್ ಅಭಿಮಾನಿಯ ಈ ಪ್ರಶ್ನೆಗೆ ಅಜ್ಜಿ ನೀಡಿದ ಒಂದೇ ಒಂದು ಏಟಿನ ಉತ್ತರಕ್ಕೆ ಆತನ ಬಾಯಿ ಮುಚ್ಚಿಹೋಯಿತು. ತಕ್ಷಣವೇ ಅಜ್ಜಿ "ಹಾಗಾದರೆ... ನನ್ನ ವಯಸ್ಸು ಎಷ್ಟು ಅಂತ ನಿನ್ನ ಅಂದಾಜು?" ಎಂದು ತಿರುಗೇಟು ನೀಡಿದರು. ಅಜ್ಜಿಯ ಈ ಸ್ವ್ಯಾಗ್ ಮತ್ತು ತೀಕ್ಷ್ಣ ಪ್ರತಿಕ್ರಿಯೆಗೆ ಮರುಮಾತವಾಡದ ಪಾಕ್ ಅಭಿಮಾನಿ, ಕೊನೆಗೆ ಭಾರತೀಯ ಅಭಿಮಾನಿಗಳ ಉತ್ಸಾಹವನ್ನು ಬಹಿರಂಗವಾಗಿಯೇ ಹೊಗಳಬೇಕಾಯಿತು. "ಭಾರತೀಯ ಅಭಿಮಾನಿಗಳು ತಮ್ಮ ತಂಡಕ್ಕೆ ನೀಡುವ ಬೆಂಬಲವೇ ಅಪಾರ. ಅದಕ್ಕಾಗಿಯೇ ಅವರ ಆಟಗಾರರು ಮೈದಾನದಲ್ಲಿ ಇಷ್ಟೊಂದು ಅದ್ಭುತವಾಗಿ ಆಡುತ್ತಾರೆ" ಎಂದು ತನ್ನ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನವನ್ನು ತೀವ್ರವಾಗಿ ಟೀಕಿಸಿದನು.

ಕೇವಲ 55 ರನ್‌ಗಳಿಗೆ ಪಾಕ್ ಧೂಳೀಪಟ!

ಪಂದ್ಯದಲ್ಲಿ ಪಾಕಿಸ್ತಾನದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಭಾರತದ ಪ್ರಬಲ ಸ್ಪಿನ್ ಪಡೆಯನ್ನು ಎದುರಿಸಿ ಮೈದಾನದಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಕೇವಲ 56 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲೇ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ ವಿಕೆಟ್ ಕಳೆದುಕೊಂಡು ಸ್ವಲ್ಪ ಆಘಾತ ಎದುರಾಯಿತು. ಆದರೆ, ಈ ಸಣ್ಣ ಮೊತ್ತದ ಪಂದ್ಯದಲ್ಲಿ ಕೊನೆಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಸುಲಭ ಗೆಲುವು ತಂದಿತ್ತರು.

ಪಾಕ್ ನಾಯಕಿ ಫಾತಿಮಾ ಸನಾ ವಿವಾದಾತ್ಮಕ ಸನ್ನೆ!

ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಅವರ ಆಕ್ರಮಣಕಾರಿ ನಡವಳಿಕೆ ವಿವಾದಕ್ಕೆ ಕಾರಣವಾಯಿತು. ಶಫಾಲಿ ವರ್ಮಾ ಅವರು ಫಾತಿಮಾ ಎಸೆದ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದ್ದರು. ಇದರಿಂದ ಕೆರಳಿದ ಫಾತಿಮಾ, ಮೂರನೇ ಎಸೆತವನ್ನು ಶಫಾಲಿಗೆ ಶಾರ್ಟ್ ಬೌಲ್ ಮಾಡಿದರು. ಚೆಂಡನ್ನು ಹೊಡೆಯುವ ಯತ್ನದಲ್ಲಿ ಶಫಾಲಿ ನೀಡಿದ ಕಠಿಣ ಕ್ಯಾಚ್ ಅನ್ನು ತಾನೇ ಹಿಡಿದ ಫಾತಿಮಾ, ಅತ್ಯಂತ ಉಗ್ರವಾಗಿ ಸಂಭ್ರಮಿಸಿದರು. ಶಫಾಲಿ ಔಟ್ ಆದ ತಕ್ಷಣ, ಫಾತಿಮಾ ಸನಾ ತಮ್ಮ ಕೈಸನ್ನೆಯ ಮೂಲಕ "ಮೈದಾನದಿಂದ ಹೊರಗೆ ಹೋಗು" ಎಂದು ಶಫಾಲಿಗೆ ಸೂಚಿಸಿದರು. ಪಾಕ್ ನಾಯಕಿಯ ಈ ಕ್ರೀಡಾಸ್ಪೂರ್ತಿಯಿಲ್ಲದ ವರ್ತನೆಗೆ ಪ್ರಸಾರಕರಾದ ಭಾರತೀಯ ಆಂಕರ್‌ಗಳು ಮತ್ತು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.