ಆಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್, ಬೆಂಚ್ ಕಾಯುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಕೋಚ್ ಗೌತಮ್ ಗಂಭೀರ್ ಜೊತೆಗಿನ ಮಾತುಕತೆಯನ್ನು ಅವರು ಹಂಚಿಕೊಂಡಿದ್ದಾರೆ.
ನವದೆಹಲಿ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಇದರ ಬೆನ್ನಲ್ಲೇ ಕಳೆದೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ಸಂಜು ಸ್ಯಾಮ್ಸನ್ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
ಆಫ್ಘಾನಿಸ್ತಾನ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 22 ಎಸೆತಗಳಲ್ಲಿ 57 ರನ್ ಸಿಡಿಸುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಫಾರ್ಮ್‌ಗೆ ಮರಳಿದ ಸಂಜು ಸ್ಯಾಮ್ಸನ್
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿರುವ ಸಂಜು ಸ್ಯಾಮ್ಸನ್, ಇದಾದ ಬಳಿಕ 15 ವರ್ಷದ ವೈಭವ್ ಸೂರ್ಯವಂಶಿ, ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಬಳಿಕ ಸಂಜು ಸ್ಯಾಮ್ಸನ್, ಭಾರತ ಟಿ20 ತಂಡದಿಂದ ಹೊರಗುಳಿಯುವಂತೆ ಆಗಿತ್ತು. ಆದರೆ ಇದೀಗ ಸಂಜು ಸ್ಯಾಮ್ಸನ್ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿಯಂತಹ ಆಟಗಾರನನ್ನು ಹೊರಗಿಡುವಂತಹ ತೀರ್ಮಾನ ತೆಗೆದುಕೊಳ್ಳುವುದು ಸುಲಭದ ಮಾತಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಭಾರತ ತಂಡವನ್ನು ಮುನ್ನಡೆಸುವಂತಹ ನಾಯಕತ್ವದ ಗುಣ ಅಷ್ಟು ಸುಲಭವಲ್ಲ. 15 ವರ್ಷದ ಆಟಗಾರ 700-800 ರನ್ ಬಾರಿಸಿದಂತ ಆಟಗಾರ ತಂಡದ ಜತೆಯಲ್ಲಿದ್ದಾಗ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಾಗ ಧೈರ್ಯ ಬೇಕು ಎಂದಿದ್ದಾರೆ.
ನಾನು ಇಂತಹ ಪರಿಸ್ಥಿತಿ ಎದುರಿಸಿದ್ದೇನೆ
ಈ ಸರಣಿಗೂ ಮೊದಲು ವೈಭವ್ ಚೆನ್ನಾಗಿ ಆಡಿದ್ದರು. ಇದೇ ವೇಳೆ ಕಳೆದ ಮೂರ್ನಾಲ್ಕು ಪಂದ್ಯಗಳಲ್ಲಿ ನಾನು ಚೆನ್ನಾಗಿ ಆಡಿರಲಿಲ್ಲ. ಅವರು ಒಳ್ಳೆಯ ಫಾರ್ಮ್‌ನಲ್ಲಿದ್ದು, ತಂಡಕ್ಕಾಗಿ ಸರಣಿ ಗೆಲ್ಲಿಸಲು ತುದಿಗಾಲಿನಲ್ಲಿದ್ದರು. ಇಂತಹ ಸಂದರ್ಭದಲ್ಲಿ ನಾಯಕರಾದವರು ತೆಗೆದುಕೊಳ್ಳುವ ನಿರ್ಧಾರ ಮುಖ್ಯವಾಗುತ್ತದೆ. ನಾನು ಕೂಡಾ ಇದನ್ನೆಲ್ಲಾ ನೋಡಿದ್ದೇನೆ ಎಂದು ಅವರ ಮುಂದೆ ಹೇಳಿದ್ದೇನೆ. ನಾಯಕನಾಗಿದ್ದಾಗ ನಾನು ಕೂಡಾ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಹೀಗಾಗಿ ಇದೆಲ್ಲಾ ಅರ್ಥವಾಗುತ್ತದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ ಸಂಜು ಸ್ಯಾಮ್ಸನ್, ಎರಡನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾದರು. ಸಂಜು ಕೇವಲ 22 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 4 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಸ್ಪೋಟಕ 57 ರನ್ ಚಚ್ಚಿದರು. ಅಂದಹಾಗೆ ಇದು ಸಂಜು ಸ್ಯಾಮ್ಸನ್ ಬಾರಿಸಿದ ಏಳನೇ ಟಿ20 ಅರ್ಧಶತಕ ಎನಿಸಿಕೊಂಡಿತು.
ಜಿಂಬಾಬ್ವೆ ಎದುರಿನ ಟಿ20 ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ, ಇದೀಗ ಆಫ್ಘಾನಿಸ್ತಾನ ಎದುರಿನ ಮೊದಲೆರಡು ಟಿ20 ಪಂದ್ಯಗಳಲ್ಲಿ ಬೆಂಚ್ ಕಾಯಿಸುತ್ತಿದ್ದಾರೆ. ಈ ಕುರಿತಂತೆ ಮಾತನಾಡಿದ ಸಂಜು, 'ನಾನು ಮೊದಲೇ ಹೇಳಿದಂತೆ ಕಮ್ಯುನಿಕೇಷನ್ ತುಂಬಾನೆ ಮುಖ್ಯವಾಗುತ್ತದೆ. ಈ ಸರಣಿಗೂ ಮುನ್ನ ನಮ್ಮ ಹೆಡ್ ಕೋಚ್ ಗೌತಮ್ ಗಂಭೀರ್, ನನ್ನ ಜತೆ ತುಂಬಾ ವಿಚಾರ ಮಾತನಾಡಿದರು. ಹೀಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಸಂಜು ಸ್ಯಾಮ್ಸನ್ ಅಭಿಪ್ರಾಯಪಟ್ಟಿದ್ದಾರೆ. ಇದೀಗ ಮೂರನೇ ಪಂದ್ಯದಲ್ಲಾದರೂ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


