2026ರ ದುಲೀಪ್ ಟ್ರೋಫಿ ಗೆದ್ದ ಪೂರ್ವ ವಲಯ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, 15 ವರ್ಷದ ಉಪನಾಯಕ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮ್ಮ ವೃತ್ತಿಜೀವನದಷ್ಟೇ ವಯಸ್ಸಿನ ಅನುಭವವನ್ನು ವೈಭವ್ ಹೊಂದಿದ್ದಾರೆ ಎಂದು ಶಮಿ ಹೇಳಿದ್ದು, ಯುವ ಆಟಗಾರರ ಪ್ರಬುದ್ಧತೆಯನ್ನು ಶ್ಲಾಘಿಸಿದ್ದಾರೆ.

ಚೆನ್ನೈ: ಇಶಾನ್ ಕಿಶನ್ ನೇತೃತ್ವದ ಪೂರ್ವ ವಲಯ ತಂಡವು 2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಪೂರ್ವ ವಲಯ ತಂಡದ ಜತೆಗಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ, ಸಹ ಆಟಗಾರರ ಜತೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದಾರೆ. ಇದೆಲ್ಲದರ ನಡುವೆ ಪೂರ್ವ ವಲಯ ತಂಡದ ಉಪನಾಯಕ ಹಾಗೂ 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಶಮಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ.

2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ 36 ವರ್ಷದ ಮೊಹಮ್ಮದ್ ಶಮಿ, ಮೂರು ಪಂದ್ಯಗಳನ್ನಾಡಿ 7 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಲ್ಲೂ ಫೈನಲ್‌ನಲ್ಲಿ ಎರಡು ಪ್ರಮುಖ ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪೂರ್ವ ವಲಯ ತಂಡವು ಚಾಂಪಿಯನ್ ಆದ ಬೆನ್ನಲ್ಲೇ ಮಾತನಾಡಿದ ಮೊಹಮ್ಮದ್ ಶಮಿ, ವೈಭವ್ ಸೂರ್ಯವಂಶಿ, ಅಕ್ಷರಶಃ ನನ್ನ ವೃತ್ತಿಜೀವನದಷ್ಟೇ ಅನುಭವವನ್ನು ಹೊಂದಿದ್ದಾರೆ' ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ದುಲೀಪ್ ಟ್ರೋಫಿ ಫೈನಲ್ ಪಂದ್ಯವು ಮೊಹಮ್ಮದ್ ಶಮಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ 100ನೇ ಪಂದ್ಯ ಎನಿಸಿಕೊಂಡಿತು. 2010, ನವೆಂಬರ್ 17ರಂದು ಮೊಹಮ್ಮದ್ ಶಮಿ, ಬಂಗಾಳ ಪರ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಇದಾಗಿ ನಾಲ್ಕು ತಿಂಗಳ ಬಳಿಕ ಅಂದರೆ ಮಾರ್ಚ್ 27, 2011ರಂದು ವೈಭವ್ ಸೂರ್ಯವಂಶಿ ಹುಟ್ಟಿದ್ದರು. ಕೇವಲ 15ನೇ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್‌ನ ಉಪನಾಯಕನಾಗಿ, ದುಲೀಪ್ ಟ್ರೋಫಿ ಗೆಲ್ಲುವಲ್ಲಿ ಬಿಹಾರ ಮೂಲದ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ.

ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕೆ:

ದುಲೀಪ್ ಟ್ರೋಫಿ ಗೆಲುವಿನ ಬಳಿಕ ಮಾತನಾಡಿದ ಶಮಿ, ನಾನು ಈ ಟೂರ್ನಿಯನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡಿದೆ. ನಮ್ಮ ತಂಡದಲ್ಲಿರುವ ಈ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಅಕ್ಷರಶಃ ನನ್ನ ವೃತ್ತಿಜೀವನದಷ್ಟೇ ಅನುಭವ ಹೊಂದಿದ್ದಾರೆ. ಇನ್ನೂ ಆತನಲ್ಲಿ ಅದೇ ಮುಗ್ದತೆ, ಅಕ್ಕ ಪಕ್ಕದವರ ಜತೆ ಜೋಕ್ ಮಾಡಿ ನಗಿಸುವುದು ಹಾಗೂ ಕೆಲವು ವಿಚಾರಗಳನ್ನು ತಕ್ಷಣವೇ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುವುದು. ಬಹುತೇಕ ಈಗಿನ ಎಲ್ಲಾ ಯಂಗಸ್ಟರ್ಸ್‌ ಪ್ರಬುದ್ದರಾಗಿರುತ್ತಾರೆ. ಇವರೆಲ್ಲ ಐಪಿಎಲ್ ಸೇರಿದಂತೆ ಹಲವು ಹೈ ಲೆವೆಲ್ ಟೂರ್ನಿಗಳನ್ನು ಆಡುವುದರಿಂದ ಬೇಗನೇ ಪ್ರಬುದ್ದತೆ ಬರುತ್ತದೆ. ಹೀಗಾಗಿ ಅವರಿಗೆ ಹೆಚ್ಚಿನ ಕೋಚಿಂಗ್ ಅಗತ್ಯವಿಲ್ಲ. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಅವರಿಗೆ ತಾಂತ್ರಿಕವಾಗಿ ಸಲಹೆಗಳನ್ನು ನೀಡಬೇಕಾಗುತ್ತದೆ' ಎಂದು ಶಮಿ ಹೇಳಿದ್ದಾರೆ.

192 ರನ್ ಗಳಿಸಿದ ವೈಭವ್ ಸೂರ್ಯವಂಶಿ:

ಪೂರ್ವ ವಲಯ ತಂಡದ ಉಪನಾಯಕ ಹಾಗೂ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, 2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ 3 ಪಂದ್ಯಗಳ ಐದು ಇನ್ನಿಂಗ್ಸ್‌ಗಳನ್ನಾಡಿ 192 ರನ್ ಸಿಡಿಸಿ ಮಿಂಚಿದರು. ಈ ಮೂಲಕ ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದರು.