ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ಕೋಚ್ ಆಗಿ ಜಹೀರ್ ಖಾನ್ ನೇಮಕಗೊಂಡಿದ್ದಾರೆ. ಈ ನೇಮಕದ ಹಿಂದೆ ಎಂ.ಎಸ್. ಧೋನಿ ಅವರ ಪ್ರಮುಖ ಪಾತ್ರವಿದ್ದು, ಅವರು ಮುಂಬರುವ ಸೀಸನ್‌ನಲ್ಲಿ ಆಟಗಾರನಾಗಿಯೇ ಮುಂದುವರಿಯಲಿದ್ದಾರೆ. ಸ್ಟೀಫನ್ ಫ್ಲೆಮಿಂಗ್ ನಿರ್ಗಮನದ ನಂತರ ಧೋನಿ ಕೋಚ್ ಆಗಲಿದ್ದಾರೆ ಎಂಬ ಊಹಾಪೋಹಗಳಿಗೆ ಇದು ತೆರೆ ಎಳೆದಿದೆ.
ಚೆನ್ನೈ: ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹೊಸ ಕೋಚ್ ಆಗಿ ನೇಮಿಸಿದೆ. ಇದರ ಬೆನ್ನಲ್ಲೇ ಮಾಜಿ ನಾಯಕ ಎಂ.ಎಸ್. ಧೋನಿ ಪಾತ್ರದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಮುಂಬರುವ ಸೀಸನ್‌ನಲ್ಲಿ ಧೋನಿ ಆಟಗಾರನಾಗಿಯೇ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಖಚಿತಪಡಿಸಿದೆ.
18 ವರ್ಷಗಳ ಸುದೀರ್ಘ ಒಡನಾಟದ ಬಳಿಕ ಸ್ಟೀಫನ್ ಫ್ಲೆಮಿಂಗ್ ಕೋಚ್ ಹುದ್ದೆ ತೊರೆದಿದ್ದರು. ಆ ಜಾಗಕ್ಕೆ ಧೋನಿ ಮುಖ್ಯ ಕೋಚ್ ಅಥವಾ ಮೆಂಟರ್ ಆಗಿ ಬರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಧೋನಿ ಆಟಗಾರನಾಗಿಯೇ ಲಭ್ಯವಿದ್ದು, ಬೇರೆ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಎಂದು ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ 'ಇಂಡಿಯನ್ ಎಕ್ಸ್‌ಪ್ರೆಸ್'ಗೆ ಸ್ಪಷ್ಟಪಡಿಸಿದ್ದಾರೆ.
ಜಹೀರ್ ಎಂಟ್ರಿ ಹಿಂದೆಯೂ ಇದೆ 'ತಲಾ' ಕೈವಾಡ
ಜಹೀರ್ ಖಾನ್ ಅವರನ್ನು ಕೋಚ್ ಹುದ್ದೆಗೆ ತರುವಲ್ಲಿ ಧೋನಿ ಪಾತ್ರ ಬಹಳ ದೊಡ್ಡದಿದೆ. ಫ್ಲೆಮಿಂಗ್‌ಗೆ ಬದಲಿ ವ್ಯಕ್ತಿಯನ್ನು ಹುಡುಕುವ ಜವಾಬ್ದಾರಿಯನ್ನು ಮ್ಯಾನೇಜ್‌ಮೆಂಟ್ ಧೋನಿಗೆ ನೀಡಿತ್ತು. ಆಗ ಜಹೀರ್ ಖಾನ್ ಹೆಸರನ್ನು ಸೂಚಿಸಿದ್ದೇ ಧೋನಿ. ಅಂತಿಮವಾಗಿ ಧೋನಿ, ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಮತ್ತು ಮಾಲೀಕರಾದ ರೂಪಾ ಗುರುನಾಥ್ ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಜಹೀರ್ ಖಾನ್ 2017ರಲ್ಲಿ ಐಪಿಎಲ್‌ಗೆ ವಿದಾಯ ಘೋಷಿಸಿದ್ದರು. ಇದಾಗಿ ಎರಡು ವರ್ಷಗಳ ಬಳಿಕ 2019ರಲ್ಲಿ ಜಹೀರ್ ಖಾನ್, ಮುಂಬೈ ಇಂಡಿಯನ್ಸ್ ಡೈರೆಕ್ಟರ್ ಆಫ್ ಕ್ರಿಕೆಟ್ ಆಪರೇಷನ್ ಆಗಿ ನೇಮಕವಾಗಿದ್ದರು. ಇನ್ನು ಇದಾದ ಬಳಿಕ ಇತ್ತೀಚೆಗೆ 2025ರ ಐಪಿಎಲ್ ಟೂರ್ನಿಯಲ್ಲಿ ಜಹೀರ್ ಖಾನ್ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‌ನಲ್ಲಿ ಆಟಗಾರನಾಗಿ ಹಾಗೂ ಸಹಾಯಕ ಸಿಬ್ಬಂದಿಯಾಗಿ ಜಹೀರ್ ಖಾನ್ ಅವರ ಅನುಭವವನ್ನು ಪರಿಗಣಿಸಿ ಧೋನಿ, ಸಿಎಸ್‌ಕೆ ಫ್ರಾಂಚೈಸಿಗೆ ಮಾಜಿ ಎಡಗೈ ವೇಗಿಯನ್ನು ಹೆಡ್ ಕೋಚ್ ಆಗಿ ನೇಮಿಸಲು ಸಲಹೆ ನೀಡಿದ್ದರಂತೆ.
ಬದಲಾಗುತ್ತಾ ಸಿಎಸ್‌ಕೆ ಹಣೆಬರಹ?
ಗಾಯದ ಸಮಸ್ಯೆಯಿಂದಾಗಿ ಕಳೆದ ಸೀಸನ್‌ನ ಬಹುಪಾಲು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ 45 ವರ್ಷದ ಧೋನಿ, ಮುಂಬರುವ ಸೀಸನ್‌ನಲ್ಲಿ ಹೇಗೆ ಆಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಜಹೀರ್ ಖಾನ್ ತಂತ್ರಗಾರಿಕೆ ಹಾಗೂ ಧೋನಿ ಉಪಸ್ಥಿತಿ ಜೊತೆಯಾದರೆ, ಸಿಎಸ್‌ಕೆ ತನ್ನ ಹಳೆಯ ವೈಭವಕ್ಕೆ ಮರಳಲಿದೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ.


