2027ರ ಐಪಿಎಲ್ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ಹೆಡ್‌ ಕೋಚ್ ಆಗಿ ನೇಮಿಸಿಕೊಂಡಿದೆ. ಸ್ಟಿಫನ್ ಫ್ಲೆಮಿಂಗ್ ನಿರ್ಗಮನದ ನಂತರ ಹಲವು ದಿಗ್ಗಜರ ಹೆಸರು ಕೇಳಿಬಂದರೂ, ಅಂತಿಮವಾಗಿ ಜಹೀರ್ ಖಾನ್ ಈ ಸ್ಥಾನ ಅಲಂಕರಿಸಿದ್ದಾರೆ. ಇದರಿಂದ ಕಳೆದ ಕೆಲವು ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಿರುವ ಸಿಎಸ್‌ಕೆ ತಂಡದ ಅದೃಷ್ಟ ಬದಲಾಗುವ ನಿರೀಕ್ಷೆಯಿದೆ.

ಬೆಂಗಳೂರು: 2027ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬರುವ ಐಪಿಎಲ್ ಟೂರ್ನಿಗೆ ಹೆಡ್‌ ಕೋಚ್ ಆಗಿ 2011ರ ಏಕದಿನ ವಿಶ್ವಕಪ್ ಹೀರೋ ಹಾಗೂ ಆರ್‌ಸಿಬಿ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ನೇಮಿಸಿಕೊಂಡಿದೆ.

ಕೆಲ ತಿಂಗಳ ಹಿಂದಷ್ಟೇ ಸ್ಟಿಫನ್ ಫ್ಲೆಮಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್‌ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಸಿಎಸ್‌ಕೆ ಫ್ರಾಂಚೈಸಿಯು ಹೊಸ ಕೋಚ್ ಹುಡುಕಾಟದಲ್ಲಿತ್ತು. ಈ ವೇಳೆ ಕಿವೀಸ್ ಮೂಲದ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ, ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಆಲ್ಬಿ ಮಾರ್ಕೆಲ್ ಹೆಸರು ಮುಂಚೂಣಿಯಲ್ಲಿದ್ದವು. ಆದರೆ ಇದೀಗ ಸಿಎಸ್‌ಕೆ ಫ್ರಾಂಚೈಸಿಯು ಅಚ್ಚರಿಯ ರೀತಿಯಲ್ಲಿ ಜಹೀರ್ ಖಾನ್ ಅವರನ್ನು ತನ್ನ ತಂಡದ ಹೆಡ್‌ ಕೋಚ್ ಆಗಿ ನೇಮಿಸಿಕೊಂಡಿದೆ.

ಆರ್‌ಸಿಬಿ ಮಾಜಿ ಕ್ರಿಕೆಟಿಗ ಜಹೀರ್ ಖಾನ್

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಜಹೀರ್ ಖಾನ್ 2017ರಲ್ಲಿ ಐಪಿಎಲ್‌ಗೆ ವಿದಾಯ ಘೋಷಿಸಿದ್ದರು. ಇದಾಗಿ ಎರಡು ವರ್ಷಗಳ ಬಳಿಕ 2019ರಲ್ಲಿ ಜಹೀರ್ ಖಾನ್, ಮುಂಬೈ ಇಂಡಿಯನ್ಸ್ ಡೈರೆಕ್ಟರ್ ಆಫ್ ಕ್ರಿಕೆಟ್ ಆಪರೇಷನ್ ಆಗಿ ನೇಮಕವಾಗಿದ್ದರು. ಇನ್ನು ಇದಾದ ಬಳಿಕ ಇತ್ತೀಚೆಗೆ 2025ರ ಐಪಿಎಲ್ ಟೂರ್ನಿಯಲ್ಲಿ ಜಹೀರ್ ಖಾನ್ ಲಖನೌ ಸೂಪರ್ ಜೈಂಟ್ಸ್‌ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಒಟ್ಟು 100 ಐಪಿಎಲ್ ಪಂದ್ಯಗಳನ್ನಾಡಿದ ಅನುಭವ ಇರುವ ಜಹೀರ್ ಖಾನ್ 27.27ರ ಸರಾಸರಿಯಲ್ಲಿ 102 ವಿಕೆಟ್ ಕಬಳಿಸಿದ್ದಾರೆ. ಇನ್ನು ಭಾರತ ಪರ ಮೂರು ಮಾದರಿಯಿಂದ 610 ವಿಕೆಟ್ ಕಬಳಿಸುವ ಮೂಲಕ ಭಾರತ ಕಂಡ ಅತ್ಯಂತ ಯಶಸ್ವಿ ಎಡಗೈ ವೇಗಿಯಾಗಿ ಹೊರಹೊಮ್ಮಿದ್ದಾರೆ.

2011ರ ಏಕದಿನ ವಿಶ್ವಕಪ್ ಹೀರೋ ಜಹೀರ್ ಖಾನ್:

ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಭಾರತ ವೇಗದ ದಾಳಿಯನ್ನು ಮುನ್ನಡೆಸಿದ್ದ ಜಹೀರ್ ಖಾನ್, 2011ರ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಅದರಲ್ಲೂ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಪವರ್‌ ಪ್ಲೇನಲ್ಲಿ ಜಹೀರ್ ಖಾನ್ ಎಸೆದ ಟೈಟ್ ಸ್ಪೆಲ್ ಯಾವ ಭಾರತೀಯ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವೇ ಇಲ್ಲ.

ಇನ್ನಾದರೂ ಬದಲಾಗುತ್ತಾ ಚೆನ್ನೈ ಸೂಪರ್ ಕಿಂಗ್ಸ್ ಅದೃಷ್ಟ?:

ಐದು ಬಾರಿಯ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2023ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ತಂಡವು ಕಳೆದ ಮೂರು ವರ್ಷಗಳಿಂದ ದಯನೀಯ ವೈಫಲ್ಯ ಅನುಭವಿಸುತ್ತಾ ಬಂದಿದೆ. ಕಳೆದ ಮೂರು ಸೀಸನ್‌ನಲ್ಲಿ ಫೈನಲ್‌ಗೇರುವುದು ಒಂದೆಡೆ ಇರಲಿ, ಕನಿಷ್ಠ ಪ್ಲೇ ಆಫ್‌ಗೇರಲು ಪರಡಾಡುತ್ತಿದೆ. ಇದೀಗ ಜಹೀರ್ ಖಾನ್ ಹೆಡ್‌ ಕೋಚ್ ಬಳಿಕವಾದರೂ ಚೆನ್ನೈ ಸೂಪರ್ ಕಿಂಗ್ಸ್ ಅದೃಷ್ಟ ಬದಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.