ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮಾಜಿ ನಾಯಕ ಮೈಕಲ್ ವಾನ್ ತೀವ್ರವಾಗಿ ಟೀಕಿಸಿದ್ದಾರೆ. ಪಾಕ್ ಬ್ಯಾಟಿಂಗ್ ಪಡೆಯನ್ನು ಕೌಂಟಿ ಕ್ರಿಕೆಟ್‌ನ ಎರಡನೇ ಡಿವಿಷನ್ ತಂಡಕ್ಕೆ ಹೋಲಿಸಿದ್ದಾರೆ.

ಲಂಡನ್‌ (ಆ.29): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮಾಜಿ ಇಂಗ್ಲೆಂಡ್ ನಾಯಕ ಮೈಕಲ್ ವಾನ್ (Michael Vaughan) ಕಠಿಣ ಪದಗಳಿಂದ ಟೀಕಿಸಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ ಕೇವಲ 110 ರನ್‌ಗಳಿಗೆ ಆಲೌಟ್ ಆದ ಬೆನ್ನಲ್ಲೇ, ಪಾಕ್ ಬ್ಯಾಟಿಂಗ್ ಪಡೆ ಪ್ರದರ್ಶಿಸಿದ ಬ್ಯಾಟಿಂಗ್‌ ವಿರುದ್ಧ ವಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡಕ್ಕೆ ಸರಣಿಯ ಆರಂಭದಿಂದಲೂ ಹಿನ್ನಡೆಯಾಗುತ್ತಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 53 ರನ್‌ಗಳ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ, ನಾಯಕ ಬಾಬರ್ ಆಜಮ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರಿಂದ ಲಾರ್ಡ್ಸ್‌ನಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿತ್ತು. ಆದರೆ, ಬಾಬರ್ ಆಗಮನವೂ ಪಾಕ್ ಪಡೆಯ ಅದೃಷ್ಟ ಬದಲಾಯಿಸಲಿಲ್ಲ. ಶುಕ್ರವಾರ ನಡೆದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತರೆಗೆಲೆಯಂತೆ ಉದುರಿದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 110 ರನ್‌ಗಳಿಗೆ ಪತನಗೊಂಡು ಇಂಗ್ಲೆಂಡ್‌ಗೆ ಬೃಹತ್ ಮುನ್ನಡೆ ಬಿಟ್ಟುಕೊಟ್ಟಿತು.

ಆರಂಭಿಕ ಆಟಗಾರ ಅಜಾನ್ ಅವೈಸ್ ಗಳಿಸಿದ 46 ರನ್‌ಗಳೇ ಪಾಕಿಸ್ತಾನದ ಪರ ಗರಿಷ್ಠ ವೈಯಕ್ತಿಕ ರನ್ ಎನಿಸಿತು. ಇನ್ನುಳಿದಂತೆ ನಾಯಕ ಬಾಬರ್ ಆಜಮ್ (8), ಅಬ್ದುಲ್ಲಾ ಶಫೀಕ್ (5), ಶಾನ್ ಮಸೂದ್ (1) ಮತ್ತು ಮೊಹಮ್ಮದ್ ರಿಜ್ವಾನ್ (7) ಸೇರಿದಂತೆ ಪ್ರಮುಖರು ಒಂದಂಕಿ ರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

'ಇಂಗ್ಲೆಂಡ್ ಬೌಲರ್‌ಗಳಿಗೆ ಯಾವುದೇ ಸವಾಲೇ ಇಲ್ಲ!'

ಪಾಕ್ ಪಡೆಯ ಈ ದಯನೀಯ ಪ್ರದರ್ಶನವನ್ನು ಬಿಬಿಸಿ 'ಟೆಸ್ಟ್ ಮ್ಯಾಚ್ ಸ್ಪೆಷಲ್' (BBC Test Match Special) ಕಾರ್ಯಕ್ರಮದಲ್ಲಿ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡ ಮೈಕಲ್ ವಾನ್, ನಾನು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಇಂಗ್ಲೆಂಡ್ ಬೌಲರ್‌ಗಳಿಗೆ ಮೈದಾನದಲ್ಲಿ ಯಾವುದೇ ರೀತಿಯ ಸವಾಲೇ ಎದುರಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ನಾನು ನೋಡಿರುವ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಪಾಕಿಸ್ತಾನದ್ದು ಅತ್ಯಂತ ಸುಲಭವಾಗಿ ವಿಕೆಟ್ ಒಪ್ಪಿಸುವ ತಂಡ. ಇಂಗ್ಲೆಂಡ್‌ನ ಪ್ರತಿಯೊಬ್ಬ ಬೌಲರ್ ಕೂಡ ವಿಕೆಟ್ ಪಡೆಯಲು ಸಾಲಿನಲ್ಲಿ ನಿಲ್ಲುವಂತಾಗಿದೆ, ಏಕೆಂದರೆ ಅಲ್ಲಿ ವಿಕೆಟ್‌ಗಳು ಸುಲಭವಾಗಿ ಸಿಗುತ್ತವೆ ಎಂಬುದು ಅವರಿಗೆ ತಿಳಿದಿದೆ" ಎಂದಿದ್ದಾರೆ.

ಇಂಗ್ಲೆಂಡ್ ಬೌಲರ್‌ಗಳಿಗೆ ಯಾವುದೇ ರನ್ ನೀಡುವ ಭಯವಿಲ್ಲ. ಅವರ ಬೌಲಿಂಗ್ ಅಂಕಿ-ಅಂಶಗಳನ್ನು ಹಾಳುಮಾಡುವ ಸಾಮರ್ಥ್ಯವಿರುವ ಯಾವುದೇ ಬ್ಯಾಟರ್ ಆ ಪಡೆ ಯಲ್ಲಿಲ್ಲ. ಬೌಲರ್‌ಗಳ ಪರಿಸ್ಥಿತಿ ಹೇಗಿದೆಯೆಂದರೆ, 'ಸಾಲು ಸಾಲಾಗಿ ಬನ್ನಿ, ಯಾರಿಗೆಲ್ಲ ವಿಕೆಟ್ ಬೇಕು?' ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದು ಯಾವುದೇ ಕೋನದಲ್ಲೂ ಟೆಸ್ಟ್ ಬ್ಯಾಟಿಂಗ್ ಲೈನ್‌ಅಪ್ ಅಲ್ಲ!

ಪಾಕ್ ಪಡೆಯ ಬ್ಯಾಟಿಂಗ್ ಶಕ್ತಿಯನ್ನು ಕೌಂಟಿ ಕ್ರಿಕೆಟ್‌ನ ಎರಡನೇ ಡಿವಿಷನ್ ತಂಡಕ್ಕೆ ಹೋಲಿಸಿದ ವಾನ್, ಪಾಕಿಸ್ತಾನ ದೊಡ್ಡ ಮೊತ್ತ ಬಾರಿಸುವುದು ಸಾಧ್ಯವೇ ಇಲ್ಲ ಎಂಬುದು ಇಂಗ್ಲೆಂಡ್ ಪಡೆಯ ಪ್ರತಿಯೊಬ್ಬರಿಗೂ ತಿಳಿದಿದೆ. ಹೀಗಾಗಿ ಅವರು ಮೈದಾನದಲ್ಲಿ 40 ರಿಂದ 50 ಓವರ್‌ಗಳ ಕಾಲ ಮಾತ್ರ ಬೌಲಿಂಗ್ ಮಾಡಬೇಕಿರುತ್ತದೆ. ಬೌಲರ್‌ಗಳು ತಮಗಿರುವ ಪೂರ್ಣ ಶಕ್ತಿಯನ್ನು ಹಾಕಿ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ನಾಯಕ ಜೋ ರೂಟ್ ಬಳಿ ಹೋಗಿ 'ಇನ್ನೊಂದು ಓವರ್ ನಾನು ಮಾಡುತ್ತೇನೆ' ಎಂದು ಕೇಳಿ ವಿಕೆಟ್ ಪಡೆಯುತ್ತಿದ್ದಾರೆ," ಎಂದು ವಿವರಿಸಿದ್ದಾರೆ.

ಇಂಗ್ಲೆಂಡ್ ಬೌಲಿಂಗ್ ಪಡೆ ಉತ್ತಮವಾಗಿ ಮೂಡಿಬರುತ್ತಿದೆ ಮತ್ತು ಬಲವಾದ ಬ್ಯಾಟಿಂಗ್ ಪಡೆಯನ್ನು ಸಹ ಎದುರಿಸುವ ಶಕ್ತಿ ತೋರುತ್ತಿದೆ. ಆದರೆ ಇದು ಪಾಕಿಸ್ತಾನದ ಬ್ಯಾಟಿಂಗ್ line-up. ಇದನ್ನು ಟೆಸ್ಟ್ ಪಂದ್ಯದ ಬ್ಯಾಟಿಂಗ್ ಲೈನ್‌ಅಪ್ ಎಂದು ಕರೆಯಲು ಸಾಧ್ಯವೇ ಇಲ್ಲ. ಇದು ಸೆಕೆಂಡ್ ಡಿವಿಷನ್ ಕೌಂಟಿ ಕ್ರಿಕೆಟ್ ಬ್ಯಾಟಿಂಗ್‌ನಂತಿದೆ ಎಂದು ಖಾರವಾಗಿ ಚಾಟಿ ಬೀಸಿದ್ದಾರೆ.

ಪಂದ್ಯದ ನಡುವೆ ಪಾಕಿಸ್ತಾನದ ಮತ್ತೊಬ್ಬ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಹಿಮ್ಮಡಿ ನೋವಿನಿಂದ (Calf strain) ಬಳಲಿದ್ದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಆಗಮಿಸಿರಲಿಲ್ಲ. ಇನ್ನು ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದ್ದು, ಒಟ್ಟಾರೆ 261 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದೆ.