ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಲವು ನಿಯಮಗಳನ್ನು ಉಲ್ಲಂಘಿಸಿದೆ. ಮ್ಯಾಚ್ ರೆಫ್ರಿ ಕ್ಷಮೆಯಾಚಿಸಿದ್ದಾರೆಂದು ಪಿಸಿಬಿ ಸುಳ್ಳು ಹೇಳಿಕೊಂಡಿದ್ದು, ಈ ಬಗ್ಗೆ ಐಸಿಸಿ ಆಕ್ಷೇಪ ವ್ಯಕ್ತಪಡಿಸಿದೆ.  

ದುಬೈ: ಈ ಬಾರಿ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ವಿರುದ್ಧವೇ ಕ್ರಮಕೈಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಮುಂದಾಗಿದೆ. ಭಾರತೀಯ ಆಟಗಾರರ ನೋ ಶೇಕ್‌ಹ್ಯಾಂಡ್‌ ವಿಚಾರದಲ್ಲಿ ಪ್ರತಿಭಟಿಸಿ, ಯುಎಇ ವಿರುದ್ಧ ಪಂದ್ಯ ವಿಳಂಬ ಸೇರಿದಂತೆ ಹಲವು ನಿಯಮಗಳನ್ನು ಪಾಕ್‌ ಉಲ್ಲಂಘಿಸಿತ್ತು.

ಈ ಬಗ್ಗೆ ಪಿಸಿಬಿಗೆ ಐಸಿಸಿ ಸಿಇಒ ಸಂಗೋಜ್‌ ಗುಪ್ತಾ ಪತ್ರ ಬರೆದಿದ್ದು, ಯುಎಇ ವಿರುದ್ಧ ಪಂದ್ಯದ ದಿನ ಪಾಕಿಸ್ತಾನ ನಿಯಮ ಉಲ್ಲಂಘಿಸಿದೆ ಎಂದಿದ್ದಾರೆ. ಆಟಗಾರರು ಮತ್ತು ಮ್ಯಾಚ್‌ ಅಧಿಕಾರಿಗಳಿಗೆ ಮಾತ್ರ ಪ್ರವೇಶವಿರುವ ಸ್ಥಳಕ್ಕೆ ಪಾಕ್‌ ಮಾಧ್ಯಮ ವ್ಯವಸ್ಥಾಪಕ ಪ್ರವೇಶಿಸಿದ್ದಾರೆ. ಅಲ್ಲದೆ, ರೆಫ್ರಿ ಆ್ಯಂಡಿ ಪೈಕ್ರಾಫ್ಟ್‌, ಪಾಕ್‌ ನಾಯಕ, ಕೋಚ್‌ ಜೊತೆಗಿನ ಮಾತುಕತೆಯ ವಿಡಿಯೋ ಚಿತ್ರೀಕರಣ ಮಾಡಿ, ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಮೂಲಕ ನಿಯಮ ಉಲ್ಲಂಘಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, ರೆಫ್ರಿ ಪಾಕ್‌ ತಂಡದ ಬಳಿ ಕ್ಷಮೆಯಾಚಿಸಿದ್ದಾರೆ ಎಂಬ ಪಿಸಿಬಿ ಹೇಳಿಕೆಗೂ ಐಸಿಸಿ ಆಕ್ಷೇಪ ವ್ಯಕ್ತಪಡಿಸಿದೆ. ವಾಸ್ತವವಾಗಿ ಅವರು ತಪ್ಪಾದ ಸಂವಹನಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ ಎನ್ನಲಾಗಿದೆ.

ರೆಫ್ರಿ ಕ್ಷಮೆಯಾಚಿಸಿದ್ದಾರೆಂದು ಸುಳ್ಳು ಹೇಳಿದ ಪಾಕ್‌ ತಂಡ?

ದುಬೈ: ಭಾರತೀಯ ಆಟಗಾರರ ನೋ ಶೇಕ್‌ಹ್ಯಾಂಡ್‌ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್‌ ಪಾಕಿಸ್ತಾನ ತಂಡದ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಬುಧವಾರ ಹೇಳಿಕೊಂಡಿತ್ತು. ಆದರೆ ಕ್ಷಮೆಯಾಚನೆ ವಿಚಾರದಲ್ಲಿ ಪಾಕ್‌ ಸುಳ್ಳು ಹೇಳಿದೆ ಎಂದು ಏಷ್ಯಾಕಪ್‌ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದಾಗಿ ವರದಿಯಾಗಿವೆ.

‘ಭಾರತ-ಪಾಕ್‌ ಪಂದ್ಯದ ವೇಳೆ ಆಟಗಾರರ ಹಸ್ತಲಾಘವ ನಿಷೇಧಿಸಿದ್ದಕ್ಕೆ ಐಸಿಸಿಯ ವಿವಾದಾತ್ಮಕ ಮ್ಯಾಚ್‌ ರೆಫ್ರಿ ಆಂಡಿ ಪೈಕ್ರಾಫ್ಟ್ ಪಾಕಿಸ್ತಾನ ತಂಡದ ವ್ಯವಸ್ಥಾಪಕ ಮತ್ತು ನಾಯಕನ ಬಳಿ ಕ್ಷಮೆಯಾಚಿಸಿದ್ದಾರೆ’ ಎಂದು ಪಿಸಿಬಿ ಹೇಳಿತ್ತು. ಆದರೆ ಮೂಲಗಳ ಪ್ರಕಾರ, ಯಾವುದೇ ತಪ್ಪು ಮಾಡದ ರೆಫ್ರಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಕೇಳಿಯೂ ಇಲ್ಲ ಎಂದು ಗೊತ್ತಾಗಿದೆ.

ಈ ನಡುವೆ, ರೆಫ್ರಿ ಪೈಕ್ರಾಫ್ಟ್‌, ಪಾಕ್‌ ನಾಯಕ ಸಲ್ಮಾನ್‌, ಕೋಚ್‌ ಮೈಕ್‌ ಹೆಸ್ಸನ್‌ ಹಾಗೂ ತಂಡದ ವ್ಯವಸ್ಥಾಪಕ ನವೀದ್‌ ಚೀಮಾ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಪಿಸಿಬಿ ಬುಧವಾರ ಹಂಚಿಕೊಂಡಿತ್ತು. ಇದು ಕ್ಷಮೆಯಾಚನೆಗೆ ನಿದರ್ಶನ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಆಡಿಯೋ ಮ್ಯೂಟ್‌ ಮಾಡಿ, ಮಾತುಕತೆಯ ಶಬ್ಧ ಕೇಳಿಸದಂತೆ ವಿಡಿಯೋ ಹಂಚಿಕೊಂಡಿದ್ದು ಭಾರೀ ಟ್ರೋಲ್‌ಗೆ ಗುರಿಯಾಗಿದೆ. ಮಾತುಕತೆಯ ವಿಡಿಯೋ ಹಂಚಿಕೊಂಡು, ಕ್ಷಮೆಯಾಚನೆ ಎಂದು ಪಾಕ್‌ ಬಿಂಬಿಸುತ್ತಿದೆ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ವ್ಯಂಗ್ಯವಾಡಿದ್ದಾರೆ.

ಕಳಪೆ ಗುಣಮಟ್ಟದ ಜೆರ್ಸಿ: ಪಾಕಿಸ್ತಾನ ಕ್ರಿಕೆಟ್‌ ಮೇಲೆ ಭ್ರಷ್ಟಾಚಾರದ ಕರಿನೆರಳು!

ಕರಾಚಿ: ಹ್ಯಾಂಡ್‌ಶೇಕ್‌ ವಿವಾದ ನಡುವೆ ಪಾಕಿಸ್ತಾನ ಕ್ರಿಕೆಟ್‌ ಮೇಲೆ ಭ್ರಷ್ಟಾಚಾರದ ಕರಿನೆರಳು ಆವರಿಸಿದೆ. ಪಾಕ್‌ ಮಾಜಿ ಕ್ರಿಕೆಟಿಗ ಅತೀಕ್‌ ಜಮಾನ್‌ ಈ ಬಗ್ಗೆ ಆರೋಪ ಮಾಡಿದ್ದು, ಏಷ್ಯಾಕಪ್‌ನಲ್ಲಿ ಪಾಕ್‌ ಆಟಗಾರರಿಗೆ ಅತ್ಯಂತ ಕಳಪೆ ಗುಣಮಟ್ಟದ ಜೆರ್ಸಿ ನೀಡಲಾಗಿದೆ ಎಂದು ದೂರಿದ್ದಾರೆ. ಇದರ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಬೇರೆ ಎಲ್ಲಾ ತಂಡಗಳ ಆಟಗಾರರು ಉತ್ತಮ ಜೆರ್ಸಿ ಧರಿಸಿದರೆ, ಪಾಕಿಸ್ತಾನ ಆಟಗಾರರು ಕಳಪೆ ಗುಣಮಟ್ಟದ ಜೆರ್ಸಿ ಧರಿಸಿದ್ದರಿಂದ ಬೇಗನೇ ಬೆವರುತ್ತಿದ್ದಾರೆ. ವೃತ್ತಿಪರರ ಬದಲು ಸ್ನೇಹಿತರಿಗೆ ಟೆಂಡರ್‌ ನೀಡಿದ್ದರ ಪರಿಣಾಮ ಇದು. ಬೆವರಿಗಿಂತಲೂ ಭ್ರಷ್ಟಾಚಾರವೇ ಹೆಚ್ಚು ತೊಟ್ಟಿಕ್ಕುತ್ತಿದೆ’ ಎಂದು ಆರೋಪಿಸಿದ್ದಾರೆ.