ಇಂಗ್ಲೆಂಡ್ ವಿರುದ್ಧದ 7ನೇ ಟಿ20 ಪಂದ್ಯದಲ್ಲಿ ಭಾರತೀಯ ಮಿಶ್ರ ದಿವ್ಯಾಂಗ ಕ್ರಿಕೆಟ್ ತಂಡ 118 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಗೆಲುವನ್ನು ತಂಡವು ಲಾರ್ಡ್ಸ್ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ಅವರ ಶೈಲಿಯಲ್ಲಿ ಕೋಟ್ ಕಳಚಿ ಸಂಭ್ರಮಿಸುವ ಮೂಲಕ ಸ್ಮರಣೀಯವಾಗಿಸಿತು.
ಬೆಂಗಳೂರು (ಆ.20): ಮಿಶ್ರ ದಿವ್ಯಾಂಗ ಕ್ರಿಕೆಟ್ ಸರಣಿಯ (Mixed Disability Series) ಕೊನೆಯ ಹಾಗೂ 7ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 118 ರನ್‌ಗಳ ಬೃಹತ್ ಗೆಲುವು ಸಾಧಿಸಿದ ಭಾರತೀಯ ಮಿಶ್ರ ದಿವ್ಯಾಂಗ ಕ್ರಿಕೆಟ್ ತಂಡ, ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ಅವರ ಐತಿಹಾಸಿಕ 'ಶರ್ಟ್ ಕಳಚಿದ' ಸಂಭ್ರಮಾಚರಣೆಯನ್ನು ಮರುಸೃಷ್ಟಿಸಿದೆ. ಕೇವಲ ಪಂದ್ಯ ಗೆಲ್ಲುವುದು ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಸಿದ್ಧ ವಿಜಯೋತ್ಸವಕ್ಕೆ ಅದ್ಭುತ ಗೌರವ ಸಲ್ಲಿಸುವ ಮೂಲಕ ದಿವ್ಯಾಂಗ ಆಟಗಾರರು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಭಾರತದ ಅಬ್ಬರ
ಏಳು ಪಂದ್ಯಗಳ ಸರಣಿಯ ಕೊನೆಯ ಹಾಗೂ ಸಮಾಧಾನಕರ ಗೆಲುವಿನ ಪಂದ್ಯದಲ್ಲಿ ಭಾರತ ತಂಡ ಸರ್ವಾಂಗೀಣ ಪ್ರದರ್ಶನ ನೀಡಿತು. ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 206 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಅರ್ಜುನ್ ಗಾವ್ರೆ 44 ಎಸೆತಗಳಲ್ಲಿ 68 ರನ್ ಗಳಿಸಿದರೆ, ನಾಯಕ ಮಜೀದ್ ಮಾಗ್ರೆ ಕೇವಲ 19 ಎಸೆತಗಳಲ್ಲಿ ಅಜೇಯ 63 ರನ್ ಬಾರಿಸಿ ಬಿರುಗಾಳಿ ಬ್ಯಾಟಿಂಗ್ ನಡೆಸಿದರು. 207 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್ ತಂಡ ಕೇವಲ 88 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಹಲಾಲ್ ಅಹಮದ್ ವಾನಿ 21 ರನ್ನಿಗೆ 4 ವಿಕೆಟ್ ಹಾಗೂ ಜಯೇಶ್ ಪರ್ಮಾರ್ 14 ರನ್ನಿಗೆ 3 ವಿಕೆಟ್ ಕಬಳಿಸಿ ಮಿಂಚಿದರು. ಕೊನೆಯ ಪಂದ್ಯವನ್ನು ಭಾರತ ಭಾರಿ ಅಂತರದಿಂದ ಗೆದ್ದುಕೊಂಡರೂ, 7 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 4-3 ಅಂತರದಲ್ಲಿ ತನ್ನದಾಗಿಸಿಕೊಂಡಿತು.
ಲಾರ್ಡ್ಸ್ ಅಂಗಳದಲ್ಲಿ ಗಂಗೂಲಿ ಶೈಲಿಯ ಆಚರಣೆ
2002ರಲ್ಲಿ ಇಂಗ್ಲೆಂಡ್ ವಿರುದ್ಧ ನಾಟ್‌ವೆಸ್ಟ್ ಟ್ರೋಫಿ ಫೈನಲ್ ಗೆದ್ದಾಗ ಅಂದಿನ ನಾಯಕ ಸೌರವ್ ಗಂಗೂಲಿ ಲಾರ್ಡ್ಸ್ ಬಾಲ್ಕನಿಯಲ್ಲಿ ಜೆರ್ಸಿ ಬಿಚ್ಚಿ ಗಾಳಿಯಲ್ಲಿ ಬೀಸಿ ಸಂಭ್ರಮಿಸಿದ್ದರು. ಅದೇ ಐತಿಹಾಸಿಕ ಕ್ಷಣವನ್ನು ನೆನಪಿಸುವಂತೆ, ಭಾರತೀಯ ದಿವ್ಯಾಂಗ ಕ್ರಿಕೆಟ್ ಮಂಡಳಿಯ (DCCI) ಆಟಗಾರರು ಮತ್ತು ಅಧಿಕಾರಿಗಳು ಲಾರ್ಡ್ಸ್ ಬಾಲ್ಕನಿಯಲ್ಲಿ ತಮ್ಮ ಕೋಟ್/ಬ್ಲೇಜರ್‌ಗಳನ್ನು ಕಳಚಿ, ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಆಚರಿಸಿದರು.
ಈ ಸಂಭ್ರಮಾಚರಣೆಯ ವಿಡಿಯೋವನ್ನು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಡಿಬಿಸಿಐ, "ಲಾರ್ಡ್ಸ್ ಅಂಗಳದಲ್ಲಿ ಭಾರತ ಗೆದ್ದಾಗ ಸಂಭ್ರಮಾಚರಣೆಯ ಹುಮ್ಮಸ್ಸೇ ಬೇರೆ! ಕೋಟ್‌ಗಳನ್ನು ಕಳಚಿ, ಹೈ ಸ್ಪಿರೀಟ್‌ನೊಂದಿಗೆ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ ಈ ಕ್ಷಣ ಎಂದಿಗೂ ಮರೆಯಲಾಗದು. 118 ರನ್‌ಗಳ ಅಮೋಘ ಗೆಲುವು, ಒಂದು ಅವಿಸ್ಮರಣೀಯ ಆಚರಣೆ" ಎಂದು ಬರೆದುಕೊಂಡಿದೆ.
ಏನಿದು 'ಮಿಶ್ರ ದಿವ್ಯಾಂಗ ಕ್ರಿಕೆಟ್' (Mixed Disability Cricket)?
ಮಿಶ್ರ ದಿವ್ಯಾಂಗ ಕ್ರಿಕೆಟ್ ಮಾದರಿಯು ದೈಹಿಕ ವಿಕಲಚೇತನ, ಶ್ರವಣ ದೋಷ (ಕಿವುಡು) ಮತ್ತು ಕಲಿಕಾ ನ್ಯೂನತೆಗಳನ್ನು ಒಳಗೊಂಡಂತೆ ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಕ್ರೀಡಾಪಟುಗಳನ್ನು ಒಳಗೊಂಡಿರುತ್ತದೆ. ಇಂತಹ ಎಲ್ಲಾ ಆಟಗಾರರನ್ನು ಒಂದೇ ತಂಡವಾಗಿ ಸೇರಿಸಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತದೆ.


