ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡವು ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ದಿನೇಶ್ ಕಾರ್ತಿಕ್ ಅವರ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿದೆ. ಇದೀಗ, ಸ್ಟಿಫನ್ ಫ್ಲೆಮಿಂಗ್ ರಾಜೀನಾಮೆಯಿಂದ ತೆರವಾಗಿರುವ ಸಿಎಸ್‌ಕೆ ಹೆಡ್ ಕೋಚ್ ಹುದ್ದೆಗೆ ದಿನೇಶ್ ಕಾರ್ತಿಕ್ ಸೂಕ್ತ ಅಭ್ಯರ್ಥಿ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಆರ್‌ಸಿಬಿ ತಂಡವು ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಆರ್‌ಸಿಬಿ ತಂಡವು ಬರೋಬ್ಬರಿ 17 ವರ್ಷಗಳ ಬಳಿಕ ಸತತ ಎರಡು ಸಲ ಟ್ರೋಫಿ ಗೆದ್ದು ಬೀಗಿದೆ. ಇದು ಸಾಧ್ಯವಾಗಿದ್ದು ಹೆಡ್ ಕೋಚ್ ಆಂಡಿ ಫ್ಲವರ್ ಹಾಗೂ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್ ತಂತ್ರಗಾರಿಕೆ. ಇದೀಗ ಆರ್‌ಸಿಬಿ ಯಶಸ್ಸಿನ ಗೇಮ್ ಚೇಂಜರ್, ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತೆಕ್ಕೆಗೆ ಜಾರುತ್ತಾರಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಅಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕ ಮ್ಯಾಥ್ಯೂ ಹೇಡನ್ ಅವರು ಕೊಟ್ಟ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೇ ಹುಟ್ಟುಹಾಕಿದೆ.
ಸದ್ಯ ಸ್ಟಿಫನ್ ಫ್ಲೆಮಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಮೂರು ಸೀಸನ್‌ಗಳಿಂದ ದಯನೀಯ ವೈಫಲ್ಯ ಅನುಭವಿಸುತ್ತಾ ಬಂದಿದೆ. ಹೀಗಿರುವಾಗಲೇ ದಿನೇಶ್ ಕಾರ್ತಿಕ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಸ್ಟಿಫನ್ ಫ್ಲೆಮಿಂಗ್ ಸ್ಥಾನವನ್ನು ತುಂಬಬಹುದು ಎಂದು ಆಸೀಸ್ ದಿಗ್ಗಜ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ದಿನೇಶ್ ಕಾರ್ತಿಕ್ ಸಿಎಸ್‌ಕೆ ಪಾಲಾಗ್ತಾರಾ?
'ದಿನೇಶ್ ಕಾರ್ತಿಕ್ ಅವರನ್ನು ಚೆನ್ನೈಗೆ ಕರೆತರುವ ವಿಷಯವನ್ನು ಸಿಎಸ್‌ಕೆ ಫ್ರಾಂಚೈಸಿ ಸರಿಯಾಗಿ ನಿಭಾಯಿಸುತ್ತದೆ ಎಂದು ನಾನು ಬಲವಾಗಿ ಆಶಿಸುತ್ತಿದ್ದೇನೆ. ಫ್ಲೆಮಿಂಗ್ ಅವರ ಜತೆ ಸೇರಿ ಧೋನಿ ಅದ್ಭುವಾಗಿ ತಂಡವನ್ನು ನಿಭಾಯಿಸಿದ್ದರು. ಅದು ಸಿಎಸ್‌ಕೆ ತಂಡದ ನಿಜವಾದ ಪ್ರಬಲ ಶಕ್ತಿಯ ಕೇಂದ್ರವಾಗಿತ್ತು ಎಂದು ಹೇಡನ್ ಸ್ಪೋರ್ಟ್‌ಸ್ಟಾರ್‌ಗೆ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಸಿಎಸ್‌ಕೆ ಮುಂದಿನ ಕೋಚ್ ಯಾರಾಗಬಹುದು ಎನ್ನುವ ವಿಚಾರವಾಗಿ ಕೆಲವು ಹೆಸರುಗಳು ಪ್ರಸ್ತಾಪವಾಗಿವೆ. ಅವುಗಳಲ್ಲಿ ದಿನೇಶ್ ಕಾರ್ತಿಕ್ ಅವರ ಹೆಸರು ಕೂಡಾ ಒಂದಾಗಿದೆ. ಸಿಎಸ್‌ಕೆ ಹೆಡ್‌ಕೋಚ್ ಆಗುವಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವರು ಸಿದ್ದರಾಗಿದ್ದಾರೆ ಎಂದೇ ನನಗೆ ಅನಿಸುತ್ತಿದೆ. ತಂಡಕ್ಕೆ ಸ್ಥಳೀಯ ಕೋಚ್ ಇರುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಸಿಎಸ್‌ಕೆ ಮಾಜಿ ಆಟಗಾರರೂ ಆಗಿರುವ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
ನನಗೆ ಗೊತ್ತು ಸಾಕಷ್ಟು ಫ್ರಾಂಚೈಸಿಗಳು, ಅಂತಾರಾಷ್ಟ್ರೀಯ ಕ್ರಿಕೆಟ್ ಕೋಚ್ ಹಿಂದೆ ಓಡುತ್ತಾರೆ ಅಂತ. ಸ್ಥಳೀಯವಾಗಿ ಬೇರು ಮಟ್ಟದಲ್ಲಿ ಪ್ರತಿಭೆಗಳ ಬಗ್ಗೆ ಮಾಹಿತಿಯಿರುವ, ಚೆನ್ನೈನ ಹಿನ್ನೆಲೆಯನ್ನು ಹೊಂದಿರುವ ದಿನೇಶ್ ಕಾರ್ತಿಕ್, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೂಕ್ತವಾದ ಹೆಡ್‌ಕೋಚ್ ಆಗಬಹುದು ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ದಿನೇಶ್ ಕಾರ್ತಿಕ್ ಮನೆಯಂಗಳದಲ್ಲಿ ಚೆಂಡು:
ಐಪಿಎಲ್‌ಗೆ ವಿದಾಯ ಹೇಳಿದ ಬಳಿಕ ತಮಿಳುನಾಡು ಮೂಲದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಆರ್‌ಸಿಬಿ ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಕೆ ಮಾರ್ಗದರ್ಶನದಲ್ಲಿ ಆರ್‌ಸಿಬಿ ತಂಡವು 2025 ಹಾಗೂ 2026ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಸಮಯ ಸಿಕ್ಕಾಗಲೆಲ್ಲಾ ಡಿಕೆ ತಾವು ಐಪಿಎಲ್‌ನಲ್ಲಿ ಚೆನ್ನೈ ಪರ ಆಡುವ ಬಗ್ಗೆ ಒಲವು ತೋರಿದ್ದರು. ಆದರೆ ಡಿಕೆಯನ್ನು ಸಿಎಸ್‌ಕೆ ಖರೀದಿಸಿರಲಿಲ್ಲ. ಇದೀಗ ಮುಂಬರುವ ಸೀಸನ್‌ನಲ್ಲಿ ಡಿಕೆ ಆರ್‌ಸಿಬಿ ತಂಡದಲ್ಲೇ ಮುಂದುವರೆಯುತ್ತಾರೋ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ತೆಕ್ಕೆಗೆ ಜಾರುತ್ತಾರೋ ಕಾದು ನೋಡಬೇಕಿದೆ.


