ಮದುವೆಯಾದ ಹೊಸತರಲ್ಲಿ ಶಾರುಖ್​ ಖಾನ್​ ಹೇಗೆ ಪೊಸೆಸಿವ್​ ಆಗಿದ್ದರು ಎಂಬ ಬಗ್ಗೆ ಪತ್ನಿ ಗೌರಿ ಖಾನ್​ ಹೇಳಿದ್ದೇನು? 

ನಟ ಶಾರುಖ್​ ಖಾನ್​ (Shah Rukh Khan) ಮತ್ತು ಅವರ ಪತ್ನಿ ಗೌರಿ ಖಾನ್​ ಅವರ ದಾಂಪತ್ಯ ಜೀವನಕ್ಕೆ 32 ವರ್ಷಗಳಾಗುತ್ತಾ ಬಂದಿವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ ಜೊತೆ ಮದುವೆಯಾಗುವ ಬಗ್ಗೆ ಹಲವಾರು ತರಕಾರುಗಳು ಇರುವ ನಡುವೆಯೂ ಈ ದಂಪತಿ ಮೂರು ದಶಕಗಳಿಂದ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಶಾರುಖ್​ ಖಾನ್​ ವಯಸ್ಸು 57 ಆದರೂ ತರುಣರನ್ನೂ ನಾಚಿಸುವಂತೆ ಚಿತ್ರರಂಗದಲ್ಲಿ ನಾಯಕನಾಗಿಯೇ ಮಿಂಚುತ್ತಿದ್ದರೆ, ಅವರ ಪತ್ನಿ 52 ವರ್ಷದ ಗೌರಿ ಖಾನ್​ ಅವರು ಇಂಟೀರಿಯರ್ ಡಿಸೈನರ್ ಆಗಿದ್ದು ಸದ್ಯ ಅದರಲ್ಲಿಯೇ ಬಿಜಿ ಇದ್ದಾರೆ. ಮೊನ್ನೆಯಷ್ಟೇ ಇಂಟೀರಿಯರ್​ ಡಿಸೈನ್​ ಕುರಿತು ಗೌರಿ ಖಾನ್​ ಅವರು ಬರೆದಿರುವ ಪುಸ್ತಕದ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಪತಿ ಶಾರುಖ್​ ಮತ್ತು ಮಕ್ಕಳ ಕುರಿತು ಸಾಕಷ್ಟು ವಿಚಾರಗಳನ್ನು ಗೌರಿ ಖಾನ್​ ಶೇರ್​ ಮಾಡಿಕೊಂಡಿದ್ದಾರೆ. ಬಿಜಿನೆಸ್​ ಮತ್ತು ನಿರ್ಮಾಣದಲ್ಲಿ ಬಿಜಿಯಾಗಿರುವ ಮಗ ಆರ್ಯನ್​ ಖಾನ್​ ಕುರಿತೂ ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಗೌರಿ ಖಾನ್​ ತಮ್ಮ ಪತಿ ಶಾರುಖ್​ ಖಾನ್​ ಹೇಗೆ ಪೊಸೆಸಿವ್​ ಆಗಿದ್ದರು ಎಂಬ ಬಗ್ಗೆ ಬೋಲ್ಡ್​ ಆಗಿ ಮಾತನಾಡಿದ್ದರು. ಅದರ ವಿಡಿಯೋ ವೈರಲ್​ ಆಗಿದೆ. ಸಂದರ್ಶನವೊಂದರಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಅಂದಹಾಗೆ ಮುಸ್ಲಿಂ ಯುವಕನಾಗಿದ್ದ ಶಾರುಖ್ ಖಾನ್​ ಹಾಗೂ ಹಿಂದೂ ಯುವತಿಯಾಗಿದ್ದ ಗೌರಿ ಅವರ ಲವ್​ ಸ್ಟೋರಿಯೇ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಅಷ್ಟಕ್ಕೂ ಇವರ ಲವ್​ ಸ್ಟೋರಿ (Love story) ಶುರುವಾದಾಗ ಶಾರುಖ್ ಅವರಿಗೆ 18 ವರ್ಷ ಹಾಗೂ ಗೌರಿ ಅವರಿಗೆ 14 ವರ್ಷ! 1984ರಲ್ಲಿ ಶಾರುಖ್ ಖಾನ್ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌರಿ ಅವರನ್ನು ನೋಡಿದ್ದ ಶಾರುಖ್​ ಅವರಿಗೆ ಲವ್​ ಆ್ಯಟ್​ ಫಸ್ಟ್​ ಸೈಟ್​ ಆಗಿತ್ತು. ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅಂತರ್​ಧರ್ಮೀಯ ವಿವಾಹಕ್ಕೆ ಸಾಕಷ್ಟು ವಿರೋಧ ಬಂದಿದ್ದವು. ಕೊನೆಗೆ ಎಲ್ಲ ಅಡೆತಡೆಗಳನ್ನು ದಾಟಿ ಈ ಜೋಡಿ ಮದುವೆಯಾಗಿದೆ.

ಆರ್ಯನ್ ಖಾನ್​​ಗೆ ಮಾತನಾಡಲೂ ಪುರುಸೊತ್ತಿಲ್ವಂತೆ! ಶಾರುಖ್​ ಪತ್ನಿ ಹೇಳಿದ್ದೇನು?

ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲು ಶಾರುಖ್​-ಗೌರಿ (Shah rukh- Gouri) ರಿಜಿಸ್ಟರ್ ಮದುವೆ ಆಗಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದ ಪ್ರಕಾರ, ನಂತರ ಪಂಜಾಬಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು. ಅಂದಹಾಗೆ, ಆ ವೇಳೆ 'ರಾಜು ಬನ್‌ ಗಯಾ ಹೀರೋ' ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದರು. ಆ ಸಿನಿಮಾದ ಸೆಟ್‌ನಿಂದಲೇ ಸ್ಯೂಟ್‌ ಅನ್ನು ತಂದಿದ್ದ ಶಾರುಖ್, ಅದನ್ನೇ ಮದುವೆಗೆ ಧರಿಸಿದ್ದರಂತೆ! 1997ರ ನವೆಂಬರ್‌ನಲ್ಲಿ ಆರ್ಯನ್‌ ಖಾನ್‌ಗೆ ಗೌರಿ ಜನ್ಮ ನೀಡಿದರು. ಆನಂತರ 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದರು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಆ ಮಗುವಿಗೆ ಅಬ್‌ರಾಮ್‌ ಎಂದು ಹೆಸರಿಟ್ಟಿದ್ದಾರೆ. ಒಟ್ಟು ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ.

 ಇನ್ನು ಮದುವೆಯ ಆರಂಭದ ದಿನಗಳಲ್ಲಿ ಶಾರುಖ್​ ತಮ್ಮ ಬಗ್ಗೆ ಎಷ್ಟೊಂದು ಪೊಸೆಸಿವ್ ಆಗಿದ್ದರು ಎಂದು ಗೌರಿ ಖಾನ್ ಹೇಳಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಇದು 1997ರಲ್ಲಿ ನಡೆದ ಸಂದರ್ಶನದ ವಿಡಿಯೋ ಆಗಿದೆ. ಇದರಲ್ಲಿ ಅವರು ಶಾರುಖ್ ಖಾನ್ ಅವರ ಸ್ವಭಾವದ ಬಗ್ಗೆ ಮಾತಾಡಿದ್ದಾರೆ. ಬಿಳಿ ಬಟ್ಟೆಯನ್ನು ಹಾಕದಂತೆ ತಮಗೆ ಶಾರುಖ್​ ಆರಂಭದಲ್ಲಿ ಹೇಳುತ್ತಿದ್ದರು. ಅದಕ್ಕೆ ಕಾರಣ ಅದು ಪಾರದರ್ಶಕ (Transparent) ಆಗಿತ್ತು ಎನ್ನುವ ಕಾರಣಕ್ಕೆ. ಆದ್ದರಿಂದ ಅದನ್ನು ಧರಿಸಲು ನನಗೆ ಬಿಡುತ್ತಿರಲಿಲ್ಲ ಎಂದಿದ್ದಾರೆ. ಆದರೆ ಶಾರುಖ್ ಖಾನ್ ಅವರ ಈ ಸ್ವಭಾವದ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಅದನ್ನು ಹೇಗ್ಹೇಗೋ ನಿಭಾಯಿಸಿದೆ. ಇದು ತುಂಬಾ ಹಳೆಯ ವಿಷಯ ಆಗಿರು ಕಾರಣ ಅಲ್ಲಿಯೇ ಬಿಟ್ಟಿದ್ದೇನೆ ಎಂದರು. ಇದೇ ವೇಳೆ ಶಾರುಖ್​ ಅಂದು ತಾವು ಮಾಡಿದ್ದು ತಪ್ಪು ಎಂದು ತಪ್ಪೊಪ್ಪಿಕೊಂಡಿದ್ದಾರೆ. ನಾನು ಹಾಗೆ ಮಾಡಬಾರದಿತ್ತು ಎಂದಿದ್ದಾರೆ.

ವೈವಾಹಿಕ ಜೀವನದಲ್ಲಿ ಹ್ಯಾಪಿಯಾಗಿರಲು ಬಾಲಿವುಡ್ ಕಪಲ್ ಶಾರುಖ್ ಖಾನ್-ಗೌರಿ ಖಾನ್ ಟಿಪ್ಸ್‌

ಇಂಟೀರಿಯರ್​ ಡಿಸೈನಿಂಗ್​ ಹೊರತಾಗಿಯೂ ಗೌರಿ ಖಾನ್​ 1999ರಲ್ಲಿ ಸಿನಿಮಾ ನಿರ್ಮಾಣಕ್ಕಿಳಿದರು. ಗೌರಿ ಪೂರ್ಣಪ್ರಮಾಣದಲ್ಲಿ ನಿರ್ಮಾಣ ಮಾಡಿದ ಮೊದಲ ಸಿನಿಮಾ 'ಮೈ ಹೂಂ ನಾ'. ಆ ಸಿನಿಮಾ ಬ್ಲಾಕ್​ಬಸ್ಟರ್​ ಎಂದು ಸಾಬೀತಾಯಿತು. ಆನಂತರ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಬ್ಯಾನರ್ (Banner) ಮೂಲಕ 'ಪಹೇಲಿ' , 'ಓಂ ಶಾಂತಿ ಓಂ', 'ಮೈ ನೇಮ್ ಈಸ್ ಖಾನ್', 'ರಾ ಓನ್', 'ಚೆನ್ನೈ ಎಕ್ಸ್‌ಪ್ರೆಸ್‌', 'ಹ್ಯಾಪಿ ನ್ಯೂ ಇಯರ್' ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಗೌರಿ ನಿರ್ಮಿಸಿದ್ದಾರೆ.