‘ರೂಪಾ ಅಯ್ಯರ್ ಅವರು ಒಂದು ಕಾಲದ ಹೇಳದೇ ಹೋದ ಘಟನೆಗಳನ್ನು ತೆರೆಯ ಮೇಲೆ ಹೇಳಲು ಹೊರಟ್ಟಿದ್ದಾರೆ. ಇದಕ್ಕಾಗಿ ಬಹಳ ವರ್ಷಗಳ ಪ್ರಯತ್ನ ಪಟ್ಟಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಅವರ ರಾಷ್ಟ್ರಪ್ರೇಮ. ಎಲ್ಲರೂ ಈ ಚಿತ್ರ ನೋಡಿ’ ಎಂದಿದ್ದಾರೆ ಹಿರಿಯ ನಟ ಸುಚೇಂದ್ರ ಪ್ರಸಾದ್.

ಇದು ಕನ್ನಡಗರಿಂದ ನಿರ್ಮಾಣವಾಗಿರುವ ದೇಶಪ್ರೇಮ ಸಾರುವ ಹಿಂದಿ ಚಿತ್ರ 

ನಟಿಯಾಗಿ, ನಿರ್ದೇಶಕಿಯಾಗಿ ಅಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿರುವ ರೂಪಾ ಅಯ್ಯರ್ (Roopa Iyer) ನಿರ್ದೇಶನದ "ಆಜಾದ್ ಭಾರತ್" ಹಿಂದಿ ಚಿತ್ರ ಜನವರಿ 2 ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

'ನೀರಾ ಆರ್ಯ' ಚಿತ್ರದ ಶೀರ್ಷಿಕೆಯನ್ನು "ಆಜಾದ್ ಭಾರತ್"(Azad Bharat) ಎಂದು ಬದಲಾಯಿಸಲಾಗಿದೆ. 

'ನೀರಾ ಆರ್ಯ' (Nira Arya) ಎಂಬ ಹೆಸರಿನಿಂದ ಆರಂಭವಾದ ಈ ಚಿತ್ರದ ಶೀರ್ಷಿಕೆಯನ್ನು "ಆಜಾದ್ ಭಾರತ್" ಎಂದು ಬದಲಿಸಲಾಗಿದೆ. ಈ ಚಿತ್ರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಅರ್ಪಣೆ ಮಾಡಲಾಗಿದೆ.‌ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ ಕಥೆ 'ಆಜಾದ್ ಭಾರತ್' ಚಿತ್ರದಲ್ಲಿದೆ. ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಮೂರು ಮಹಿಳಾ ಮುಖ್ಯ ಪಾತ್ರಗಳಿದ್ದು, ನಾನು ನೀರಾ ಆರ್ಯ ಪಾತ್ರದಲ್ಲಿ, ಹಿತ ಚಂದ್ರಶೇಖರ್ ದುರ್ಗಾ ಪಾತ್ರದಲ್ಲಿ ನಟಿಸಿದ್ದೇವೆ. ಸರಸ್ವತಿ ರಾಜಾಮಣಿ ಎಂಬ ಪಾತ್ರದಲ್ಲಿ ಜನಪ್ರಿಯ ನಟಿಯೊಬ್ಬರು ಕಾಣಿಸಿಕೊಂಡಿದ್ದಾರೆ.

ಸುರೇಶ್ ಒಬೆರಾಯ್, ಬಿರಾದಾರ್, ಸುಚೇಂದ್ರ ಪ್ರಸಾದ್, ಜೀ ವಾಹಿನಿಯ ಮುಖ್ಯಸ್ಥರಾದ ಸುಭಾಷ್ ಚಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಂಗೀತ ನಿರ್ದೇಶನವನ್ನು ನನ್ನ ಪತಿ ಗೌತಮ್ ಶ್ರೀವತ್ಸ ಮಾಡಿದ್ದಾರೆ. ಶ್ರಿ ಕ್ರೇಜಿ ಮೈಂಡ್ಸ್ ಅವರ ಸಂಕಲನವಿರುವ ಈ ಚಿತ್ರವನ್ನು ನಾನು, ಜಯಗೋಪಾಲ್ ಹಾಗೂ ರಾಜೇಂದ್ರ ರಾಜನ್ ನಿರ್ಮಿಸಿದ್ದೇವೆ. ಜನವರಿ ತಿಂಗಳನ್ನು ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಮಾಸ ಎಂದು ಆಚರಿಸುತ್ತಾರೆ. ಹಾಗಾಗಿ ಜನವರಿ ಎರಡನೇ ತಾರೀಖು ಈ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ.

ಈ ಚಿತ್ರವನ್ನು ನಿರ್ಮಾಣ ಮಾಡುವ ಮೊದಲು ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದವರನ್ನು ಸಂಪರ್ಕ ಮಾಡಿ ಅನೇಕ ಮಾಹಿತಿ ಪಡೆದುಕೊಂಡಿದ್ದೇನೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಚಿತ್ರ ತೋರಿಸುವ ಯೋಚನೆ ಇದೆ. 2026 ರ ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ‌ ಎಂದು ನಿರ್ಮಾಪಕಿ, ನಟಿ ನಿರ್ದೇಶಕಿ ರೂಪಾ ಅಯ್ಯರ್ ತಿಳಿಸಿದರು.

ರಾಷ್ಟ್ರಪ್ರೇಮ ಸಾರುವ ಚಿತ್ರ

ರೂಪಾ ಅಯ್ಯರ್ ಅವರು ಒಂದು ಕಾಲದ ಹೇಳದೇ ಹೋದ ಘಟನೆಗಳನ್ನು ತೆರೆಯ ಮೇಲೆ ಹೇಳಲು ಹೊರಟ್ಟಿದ್ದಾರೆ. ಇದಕ್ಕಾಗಿ ಬಹಳ ವರ್ಷಗಳ ಪ್ರಯತ್ನ ಪಟ್ಟಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಅವರ ರಾಷ್ಟ್ರಪ್ರೇಮ. ಎಲ್ಲರೂ ಈ ಚಿತ್ರ ನೋಡಿ ಎಂದರು ಹಿರಿಯ ನಟ ಸುಚೇಂದ್ರ ಪ್ರಸಾದ್.

ಇಂತಹ ದೇಶಪ್ರೇಮ ಸಾರುವ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ. ದುರ್ಗಾ ಪಾತ್ರದಲ್ಲಿ ಅಭಿನಯಿಸಿರುವುದಾಗಿ ನಟಿ ಹಿತ ಚಂದ್ರಶೇಖರ್ ಹೇಳಿದರು.

ಚಿತ್ರದಲ್ಲಿ ಏಳು ಹಾಡುಗಳಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತ ಫಡ್ನವಿಸ್ ಅವರು ನಮ್ಮ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ಯಶ್ ರಾಜ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆದಿದೆ ಎಂದರು ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ.

ನಿರ್ಮಾಪಕ ಜಯಗೋಪಾಲ್ ಹಾಗೂ ಸಂಕಲನಕಾರ ಶ್ರೀ ಕ್ರೇಜಿಮೈಂಡ್ಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.