Asianet Suvarna News Asianet Suvarna News

ದೇವರ ಸ್ವಂತ ನಾಡಿನ ಆಚೆಗೂ ಮಾಲಿವುಡ್ ಸಿನಿಮಾಗಳು ಜನಪ್ರಿಯ....

ಹೆಂಚು ಹಾಸಿದ ಅಂಕಣದ ಮನೆ. ಮನೆ ಎದುರು ಹಸಿರು ತೋಟ, ಮನೆಯ ವೆರಾಂಡದಲ್ಲಿ ಆರಾಮ ಕುರ್ಚಿಗಳು, ಮೇಲೆ ಪುಟ್ಟ ಕಿಟಕಿಗಳುಳ್ಳ ಮನೆ, ಮನೆಯ ಹಿಂಭಾಗ ವಿಶಾಲವಾದ ಹಸಿರು ನೀರಿನ ಕೆರೆ, ಮೆಟ್ಟಿಲುಗಳಿಳಿದು ಈಜಲು, ಮೀಯಲು ಅನುಕೂಲ. ಮನೆಯೊಳಗೋ ಗುರುವಾಯೂರಪ್ಪನ ಫೋಟೋ, ಹಳೆ ಕಾಲದ ಈಸಿ ಚೇರು, ಕವಳ ಹಾಕಿ ಉಗುಳುವ ಪೀಕದಾನಿ, ಮನೆಯಂಗಳದ ತುದಿಯಲ್ಲಿ ತೆಂಗಿನ ಮರಗಳ ಸಾಲು, ಹಳೆ ಜೀಪು, ಗಾಳಿಗೆ ತೊನೆಯುವ ಪೈರು... ಇಷ್ಟೆಲ್ಲ ಜೀವಂತಿಕೆಯ ಪ್ರತೀಕವಾಗಿ ಅಪ್ಪಟ ದೇಸಿ ಸೊಗಡನ್ನು ಕಾಣಲು ಸಾಧ್ಯವಾಗುವುದು ಮಲಯಾಳಂ ಸಿನಿಮಾಗಳಲ್ಲಿ.
 

know why mollywood films priorities nature in every aspects
Author
Bangalore, First Published Jun 1, 2020, 4:35 PM IST

-ಕೃಷ್ಣಮೋಹನ ತಲೆಂಗಳ.

ಕಥೆಯೂ, ಪ್ರಾದೇಶಿಕತೆಯೂ, ಪಾತ್ರಧಾರಿಗಳ ಆಯ್ಕೆಯೂ ಮಾತ್ರವಲ್ಲ ಸಮಕಾಲೀನ ವಿಷಯಗಳನ್ನೊಳಗೊಂಡ ಕಥೆ, ಅದಕ್ಕೆ ಪೂರಕವಾದ ತಂತ್ರಜ್ನರು... ಹೀಗೆ ಪ್ರತಿ ವಿಭಾಗದಲ್ಲೂ ಸಹಜತೆಯಿಂದಲೇ ಗಮನ ಸೆಳೆಯುತ್ತದೆ ಮಾಲಿವುಡ್ ಸಿನಿಮಾಗಳು. ಇದೇ ಕಾರಣಕ್ಕೆ ಕನ್ನಡಿಗರೂ ಸೇರಿದಂತೆ ಮಲಯಾಳಂ ಸಿನಿಮಾಗೆ ದೊಡ್ಡದೊಂದು ಪ್ರೇಕ್ಷಕ ವರ್ಗವಿದೆ, ಅಭಿಮಾನಿಗಳೂ ಇದ್ದಾರೆ, ಹುಡುಕಿ, ಆರಿಸಿ ಮಲಯಾಳಂ ಸಿನಿಮಾಗಳನ್ನು ವೀಕ್ಷಿಸಿ ಖುಷಿ ಪಡುವ ದೊಡ್ಡ ಅಭಿಮಾನಿ ವರ್ಗವೇ ಇದೆ.

ರೋಮ್ಯಾನ್ಸೇ ಮಾಡದ ದುಲ್ಕರ್ ರಿಯಲ್‌ ಲೈಫ್‌ನಲ್ಲಿ ಇಷ್ಟೊಂದು ರಸಿಕನಾ?

ಅಲ್ಲಿ ಕಥೆಯ ಆಯ್ಕೆಯೇ ತುಂಬ ವಿಶೇಷ. ಪುಟ್ಟ ಪುಟ್ಟ ವಿಚಾರಗಳನ್ನೇ ಹಿಡಿದು ಕಥೆಯಾಗಿಸಿ ಮತ್ತದನ್ನು ವಿಸ್ತರಿಸಿ, ಏಕತಾನತೆ ಕಾಡದಂತೆ ವಿವರಿಸಿ, ಕಥೆಗೆ ಪೂರಕವಾಗಿ ಚಿತ್ರೀಕರಿಸಿ, ಎಲ್ಲದಕ್ಕಿಂತ ಮಿಗಿಲಾಗಿ ಈ ಕಥೆಗಾಗಿಯೇ ಹುಟ್ಟಿದಾರೆಯೋ ಎಂಬಷ್ಟು ಹೊಂದಿಕೆಯಾಗುವ ನಟವರ್ಗವನ್ನು ಆರಿಸುವುದೇ ಅವರ ಹೆಗ್ಗಳಿಕೆ. ಅಲ್ಲಿ ದೇಸಿ ಸೊಗಡಿದೆ. ಹೀರೋ ಪ್ಯಾಂಟಿಗಿಂತ ಹೆಚ್ಚಾಗಿ ಲುಂಗಿಯನ್ನೇ ಉಡುತ್ತಾನೆ. ಶೂಗಳಿಗಿಂತ ಜಾಸ್ತಿ ಹವಾಯ್ ಚಪ್ಪಲಿಯನ್ನೇ ತೊಡುತ್ತಾನೆ. ಅವರ ಡ್ಯುಯಟ್ ಹಾಡುಗಳು ಊರಿನ ತೋಟ, ಜುಳುಜುಳು ಹರಿಯುವ ನದಿ, ಹಳೆ ಕಾಲದ ಮರದ ಕಂಬಗಳ, ಕೆಂಪು ನೆಲದ ಮನೆಯೊಳಗೇ ನಡೆಯುತ್ತವೆ. ಓಣಂ, ಕೌಟುಂಬಿಕ ಊಟ, ವಯಸ್ಸಾದವರ ಮೇಲಿನ ಅಭಿಮಾನ, ದೇವಸ್ಥಾನ, ಚರ್ಚು, ಮಸೀದಿಗಳಲ್ಲಿನ ಸಂಪ್ರದಾಯಗಳು ಎಲ್ಲವನ್ನೂ ಬಹುತೇಕ ಎಲ್ಲ ಸಿನಿಮಾಗಳಲ್ಲಿ ತೋರಿಸಲಾಗುತ್ತದೆ, ಮಾತ್ರವಲ್ಲ, ಅಷ್ಟೇ ಕಟುವಾಗಿ ಧರ್ಮಾತೀತವಾಗಿ ಎಲ್ಲ ಹುಳುಕುಗಳನ್ನು ವಿವಾದವಿಲ್ಲದೆ ಟೀಕಿಸಲಾಗುತ್ತದೆ...

know why mollywood films priorities nature in every aspects

ಇತ್ತೀಚೆಗೆ ಬಂದ ತಂತ್ರಜ್ನಾನ ಆಧರಿಸಿದ ಆಂಡ್ರಾಯ್ಡ್ ಕುಂಞಪ್ಪನ್ ನಂತಹ ಸಿನಿಮಾದಿಂದ ಹಿಡಿದು, ನಿಫಾ ವೈರಸ್ ಭೀಕರತೆಯನ್ನು ತೆರೆದಿಟ್ಟ ವೈರಸ್ ಮೂವಿಯಿಂದ ತೊಡಗಿ, ಸ್ವಾತಂತ್ರ್ಯಪೂರ್ವದ ಕಥೆಯನ್ನೂ ತೋರಿಸುವಷ್ಟು ತಾಂತ್ರಿಕ ಪರಿಣತಿ ಮಲಯಾಳಿಗಳಲ್ಲಿದೆ. ಊರಿಗೆ ಶೇಂದಿಯ ಬಾಟಲಿ ತರಲಾಗದ ವಿಚಿತ್ರ ಸನ್ನಿವೇಶ, ಒಂದು ಸಣ್ಣ ಕಾರಣಕ್ಕೆ ತಾನು ಚಪ್ಪಲಿಯನ್ನೇ ಧರಿಸುವುದಿಲ್ಲವೆಂದು ಶಪಥ ಮಾಡುವ ಹೀರೋ, ಮನೆಗೆ ತಂದ ಮೊದಲ ಸೆಕೆಂಡ್ ಹ್ಯಾಂಡ್ ನ್ಯಾನೋ ಕಾರು, ಮನೆಯ ಹಿತ್ತಲಿನಲ್ಲಿರುವ ಹಲಸಿನ ಮರವನ್ನು ತನ್ನ ಹಿತಶತ್ರುಗಳೇ ಕಡಿದು ಮಾರಾಟ ಮಾಡಿಯಾರೇ ಎಂದು ಭಯ ಪಡುವ ಯಜಮಾನ....ಶಾಪಿಂಗ್ ಮಾಲ್ ಅಂಗಡಿಯೊಳಗೆ ಸಿಲುಕಿಕೊಳ್ಳುವ ಹೆಲೆನ್... ಹೀಗೆ ಸಣ್ಣ ಕಥೆಗಳೇ ಎರಡೂ ಕಾಲು ಗಂಟೆಗಳ ಕಾಲದ ಸಿನಿಮಾವಾಗಿ ನಮ್ಮನ್ನು ಕಾಡುತ್ತದೆ.

ಕನ್ಯತ್ವ ಪ್ರಶ್ನಿಸಿದ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ನಟಿ; ಕೊಟ್ಟ ಉತ್ತರ ನೋಡಿ!

ಮಲಯಾಳಂ ಸಿನಿಮಾಗಳು ಯಾಕೆ ಇಷ್ಟವಾಗುತ್ತದೆ ಎಂದರೆ....

1) ಅವರ ಕಥಾ ಹಂದರ ಕುತೂಹಲಕಾರಿಯಾಗಿರುತ್ತದೆ. ಒಂದು ವೇಳೆ ಹೇಳುವಂಥಹ ಕ್ಲೈಮಾಕ್ಸ್ ಇಲ್ಲದಿದ್ದರೂ ಕಥೆಯ ಓಘ, ಹರಿವು, ವಿವರಣೆ ನಮ್ಮನ್ನು ಕಾಡುವಂತಿರುತ್ತದೆ.

2) ಹೀರೋಗೋಸ್ಕರ, ಭಾಷೆಯ ಹೆಸರಿನಲ್ಲಿ, ಅತಿರೇದ ಸಂಭಾಷಣೆ, ಅಥವಾ ಹೀರೋನ ವೈಯಕ್ತಿಕ ವರ್ಚಸ್ಸನ್ನೇ ವೃದ್ಧಿಸುವ ಹಿಡನ್ ಅಜೆಂಡಾ ಇರಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ.

know why mollywood films priorities nature in every aspects

3) ಮಲಯಾಂಳ ಸಿನಿಮಾದಲ್ಲಿ ಬಡವ ಬಡವನ ಹಾಗೆಯೇ ಕಾಣಿಸುತ್ತಾನೆ. ಹಳ್ಳಿ ಹಳ್ಳಿಯಂತೆಯೇ ಇರುತ್ತದೆ. ವೃದ್ಧರೂ, ತೀರಾ ವಯಸ್ಸಾದ ವೃದ್ಧರೂ ಪಾತ್ರ ನಿರ್ವಹಿಸುತ್ತಾರೆ. ಮೋಹನ್ ಲಾಲ್, ಮಮ್ಮೂಟ್ಟಿಯಂತಹ ಹೀರೋಗಳು ವಯಸ್ಸಾಗುತ್ತಾ ಬಂದ ಹಾಗೆ ತಮ್ಮ ವಯಸ್ಸಿಗೆ ಹೊಂದುವಂಥಹ ಪಾತ್ರಗಳನ್ನೇ ನಿರ್ವಹಿಸುತ್ತಾರೆ. ಅವರೀಗಲೂ ಕಾಲೇಜ್ ಬಾಯ್ ಪಾತ್ರಗಳನ್ನು ಮಾಡುವುದಿಲ್ಲ.

4) ಹಳ್ಳಿ, ಹಳ್ಳಿಯ ಮನೆಗಳು, ತೊರೆ, ಕಡಲು, ಬೆಟ್ಟದ ಸೌಂದರ್ಯ, ತರಕಾರಿ ಮೊಳಕೆಯೊಡೆಯುುವದರಿಂದ ತರಕಾರಿ ಆಗುವ ವರೆಗಿನ ಹಂತ ಹಂತದ ದೃಶ್ಯಗಳು, ಹೈನುಗಾರಿಕೆ, ದೋಣಿ, ಚಂದಿರ, ಹಳ್ಳಿಯ ಹಳೆಯ ಶಾಲೆ, ಖಾಸಗಿ ಬಸ್ಸುಗಳು, ಎಳವೆಯ ಮರೆತು ಹೋದ ಆಟಗಳು, ಬೆಂಚಿನಲ್ಲಿ ಕುಳಿತು ಗಾಜಿನ ಲೋಟದಲ್ಲಿ ಚಹಾ ಕುಡಿಯಬಲ್ಲ ಕಾಕನ ಹೊಟೇಲು, ನೇಂದ್ರ ಬಾಳೆಹಣ್ಣುಗಳನ್ನು ನೇತುಹಾಕಿದ ಗೂಡಂಗಡಿಗಳು... ಹೀಗೆ ನಮ್ಮದೇ ಊರಿನ ಅಕ್ಕಪಕ್ಕದಲ್ಲಿ ಸೆರೆಹಿಡಿದಂಥ ದೃಶ್ಯ ಸಂಯೋಜನೆ ಸಹಜತೆಯನ್ನು ಕಟ್ಟಿಕೊಡುತ್ತವೆ.

ಇಂಡಸ್ಟ್ರೀಗೆ ಬರುವ ಮುನ್ನವೇ ಮಗನಿದ್ದ ; ಫಿಟ್ನೆಸ್‌ ಫ್ರೀಕ್‌ ನೈಲಾ ಉ‍ಷಾ ಫೋಟೋ!

5) ಆಡಂಬರ, ಮಿತಿ ಮೀರಿದ ಹೊಗಳಿಕೆ, ವಯಸ್ಸಿಗೆ ಅತೀತವಾದ ಪಾತ್ರ ಹಂಚಿಕೆ, ಹಾಸ್ಯದ ಹೆಸರಿನಲ್ಲಿ ದ್ವಂದ್ವಾರ್ಥದ ಸಂಭಾಷಣೆ, ಹಳ್ಳಿಯಲ್ಲಿರುವ ಹೀರೋವೂ ಬಿಳಿ ಬಣ್ಣದ ಪ್ಯಾಂಟು, ಶೂಸ್ ಧರಿಸಿ ಯಾವುದೋ ಪಾಪ್ ಮಾದರಿ ಹಾಡಿಗೆ ಕುಣಿಯುವುದು ಇತ್ಯಾದಿ ಅಸಂಬದ್ಧಗಳು ಕಾಣಿಸುವುದು ಅಪರೂಪ.

6) ಗ್ರಾಮ್ಯ ಪ್ರಾಪರ್ಟಿಗಳನ್ನು ಅವರು ತುಂಬ ಪರಿಣಾಮಕಾರಿಯಾಗಿ ಬಳಸುತ್ತಾರೆ. ದನದ ಹಟ್ಟಿ, ಎಳೆ ಕರು, ಕಚ್ಛಾ ರಸ್ತೆ, ತರಕಾರಿ ತೋಟ, ತೋಟದಿಂದ ಹೊತ್ತು ತರುವ ಬಾಳೆಗೊನೆ, ಪಚ್ಚೆಕರಿ (ತರಕಾರಿ), ಮದುವೆ ಮನೆಗಳಲ್ಲಿ ಕಾಣುವ ದೇಸಿ ಸೊಗಡು ಇವೆಲ್ಲ ಪ್ರೇಕ್ಷಕನನ್ನು ವಾಸ್ತವ ಲೋಕದೊಳಗೆ ಸಮ್ಮಿಳಿತಗೊಳಿಸುವಲ್ಲಿ ನೆರವಾಗುತ್ತದೆ.

7) ಬಹುತೇಕ ಮಲಯಾಳದ ಜನಪ್ರಿಯ ಸಿನಿಮಾಗಳಲ್ಲಿ ಕಥೆಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಗಮನ ನೀಡುತ್ತಾರೆ. ಇತ್ತೀಚೆಗೆ ಬಂದ ಪೃಥ್ವಿರಾಜ್ ಅಭಿನಯದ ಡ್ರೈವಿಂಗ್ ಲೈಸೆನ್ಸ್, ಅಯ್ಯಪ್ಪನುಂ-ಕೋಶಿಯುಂ ಮತ್ತಿತರ ಸಿನಿಮಾಗಳಲ್ಲಿ ಹೊಡೆದಾಟ, ಅಬ್ಬರದ ಡೈಲಾಗುಗಳ ಡೆಲಿವರಿಗಳಿಗಿಂತಲೂ ಹೆಚ್ಚಿನ ಪ್ರಾಧಾನ್ಯತೆಯನ್ನು ಸಹಜ ಸಂಭಾಷಣೆ ಹಾಗೂ ಎರಡೂ ಸಮಬಲದ ಪಾತ್ರಗಳ ವರ್ಚಸ್ಸನ್ನು ಕುಸಿಯದಂತೆ ನೋಡಿಕೊಳ್ಳುವುಲ್ಲಿಗೆ ನೀಡುವುದು ಕಂಡು ಬರುತ್ತದೆ. ಇದೇ ಕಾರಣಕ್ಕೆ ಸಿನಿಮಾ ಕೊನೆಯ ವರೆಗೂ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ.

8) ಮಲಯಾಳಂನ ಜನಪ್ರಿಯ ಸಿನಿಮಾಗಳು ವಿಷಯದ ಆಯ್ಕೆಯಲ್ಲೇ ಗೆಲ್ಲುತ್ತವೆ. ಪುಟ್ಟ ಪುಟ್ಟ ಘಟನೆ, ಭಾವುಕ ನಿರ್ಧಾರಗಳು, ಸಣ್ಮದೊಂದು ಎಳೆಯ ವಿಸ್ತರಣೆ ಇಷ್ಟವಾಗುತ್ತದೆ. ಫಹಾದ್ ಫಾಸಿಲ್ ಅಭಿನಯದ ಸಿನಿಮಾವೊಂದರಲ್ಲಿ ಕಳ್ಳನೊಬ್ಬ ನುಂಗಿದ ಚಿನ್ನದ ಸರವನ್ನು ಹುಡುಕುವುದೇ ಇಡೀ ಚಿತ್ರದ ಕಥೆಯಾಗಿ ಗಮನ ಸೆಳೆಯುತ್ತದೆ. ವ್ಯವಸ್ಥೆಯನ್ನು ಅವರು ವಿಡಂಬನೆ ಮಾಡುವ ರೀತಿ, ಕಟು ಟೀಕೆಗಳು, ಪಕ್ಷ, ಧರ್ಮ, ವ್ಯವಸ್ಥೆಯ ಎಲ್ಲವನ್ನೂ ಸಮಚಿತ್ತದಿಂದ ಮಾಡುವ ವಿಮರ್ಶೆಗಳು ಕೂಡಾ ಕಥೆಯ ಹಂದರಗಳಾಗಿರುತ್ತವೆ. ಜನರೂ ಅವನ್ನು ಸಹಜವಾಗಿ ಸ್ವೀಕರಿಸುತ್ತಾರೆ.

'ಕಲ್ಲಂಗಡಿ ಬಿಕಿನಿ' ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ದಕ್ಷಿಣದ ನಟಿ!

9) ತಾಂತ್ರಿಕವಾಗಿಯೂ ಮಲಯಾಳಂ ಸಿನಿಮಾ ಗೆಲ್ಲುತ್ತದೆ. ಅವರು ನ್ಯಾನೋ ತಂತ್ರಜ್ನಾನದಿಂದ ಹಿಡಿದು ವಿದೇಶದಲ್ಲಿ ಶೂಟ್ ಮಾಡುವ ಸಿನಿಮಾದ ವರೆಗೂ ಕಥೆ ಹೆಣೆಯಬಲ್ಲರು. ಹಿಂದೊಂದು ಕಾಲದಲ್ಲಿ ಮಲಯಾಳಿಗಳ ಇಂಗ್ಲಿಷ್ ಉಚ್ಛಾರ ವಿಚಿತ್ರವಾಗಿರುತ್ತಿತ್ತು. ಆದರೆ ಈಗಿನ ಕಾಲಮಾನದ ನಟ ವರ್ಗ ಇಂಗ್ಲಿಷ್ ನ್ನು ಸಹಜವಾಗಿ ಮಾತನಾಡುತ್ತದೆ. ಚಿತ್ರದ ಚಿತ್ರೀಕರಣ, ಸಂಕಲನ, ಸಂಗೀತ, ತಂತ್ರಜ್ನಾನದ ಬಳಕೆಯಲ್ಲೂ ಮಲಯಾಳಂ ಸಿನಿಮಾ ಹಿಂದುಳಿದಿಲ್ಲ.

10) ಮಲಯಾಳಂ ಸಿನಿಮಾ ಅಭಿಮಾನಿಗಳಿಗೆಲ್ಲರಿಗೂ ಮಲಯಾಳಂ ಶೇ.100ರಷ್ಟು ಬರುವುದಿಲ್ಲ. ಆದರೆ ಅಮೆಝಾನ್ ಪ್ರೈಂ, ನೆಟ್ ಫ್ಲಿಕ್ಸ್ ನಂತಹ ವ್ಯವಸ್ಥೆಗಳು ಸಬ್ ಟೈಟಲ್ ಸಹಿತ ಅತ್ಯುತ್ತಮ ಸಿನಿಮಾಗಳನ್ನು ಪ್ರೇಕ್ಷಕರ ವರೆಗೆ ತಲುಪಿಸಿ ಭಾಷೆಗಳ ಗಡಿಯನ್ನು ಮೀರುತ್ತಿದೆ. ಮಲಯಾಳಂ ಮೇಲೆ ಹಿಡಿತವಿಲ್ಲದವರಿಗೂ ಮಲಯಾಳಂ ಸಿನಿಮಾಗಳಲ್ಲಿ ಪದೇ ಪದೇ ಕೇಳಿಸುವ ಮಾತುಗಳು...

-ಪಕ್ಷೇ...
-ಅಪ್ಪೋ ತಾನ್ ಮಲಯಾಳಿ ಅಲ್ಲೇ
-ತಾಂಗಳ್ ವೆಶಮಿಕ್ಕಿಲ್ಲ ಸಾರೇ
-ಅಪ್ಪೊ ನಿಂಙಳ್ ವಿಟ್ಟೋ
-ತಾನ್ ವಂಡಿ ವಿಡ್ರಾ...
-ನಿನಕ್ಕೆಂದ್ ಪ್ರಾಂದೋ...
-ಎಡಾ ಥೆಂಡಿ
-ಮಕ್ಕಳೇ ವೆಶಮಿಕ್ಕಿಂಡ
-ಸುಗಮಾಣೋ ಅಳಿಯ
-ಕಕ್ಷಿ... ಆ ದೇಹಂ, ಪುಳ್ಳಿಕ್ಕಾರ್

ಹಿಂದೆ ಮೋಹನ್ ಲಾಲ್, ಸುರೇಶ್ ಗೋಪಿ, ಮಮ್ಮೂಟ್ಟಿ, ಮಮ್ಮುಕೋಯ, ಜಗದಿ ಶಿವಕುಮಾರ್, ನೆಡುಮುಡಿ ವೇಣು, ಇನ್ನೊಸೆಂಟ್ ಹೀಗೆ ಒಂದು ತಲೆಮಾರಿತ್ತು....
ಇದು ಇದು ವಿಸ್ತರಿಸಿದೆ. ಫಹದ್ ಫಾಸಿಲ್, ದುಲ್ಖರ್ ಸಲ್ಮಾನ್, ನಿವಿನ್ ಪೋಳಿ, ದಿಲೀಪ್, ಜಯಸೂರ್ಯ, ಅನೂಪ್ ಮೆನನ್, ಕುಂಞಕ್ಕೋ ಬೋಬನ್ ಮತ್ತಿತರ ಯುವ ನಟರ ಹೆಸರು ಕನ್ನಡಿಗರ ಬಾಯಲ್ಲೂ ನಲಿದಾಡುತ್ತಿದೆ. ಅಲ್ಲಿನ ನೆಡುಮುಡಿ ವೇಣು, ಇನ್ನೊಸೆಂಟ್, ಸುರಾಜ್ ವೆಂಜರಮೂಡು ಮತ್ತಿತರ ಪೋಷಕ, ಹಾಸ್ಯ ನಟರೆಂಬ ವರ್ಗದವರು ನಿರ್ವಹಿಸುವ ಸವಾಲಿನ, ಕಠಿಣ, ಗಂಭೀರ ಪಾತ್ರಗಳನ್ನು ನೋಡುವಾಗ ಅವರ ಪ್ರತಿಭೆ ಅದ್ಭುತ ಎನಿಸುತ್ತದೆ. ಕೇವಲ ಹಾಸ್ಯ, ರೊಮಾನ್ಸ್, ಹೊಡೆದಾಟಗಳಿಗೆ ಅಲ್ಲಿ ಯಾರೂ ಸೀಮಿತರಾಗಿಲ್ಲ. ಬಡ ಕೂಲಿ ಕಾರ್ಮಿಕನಿಂದ ಹಿಡಿದು ಭ್ರಷ್ಟ ರಾಜಕಾರಣಿ ವರೆಗೆ ವೈವಿಧ್ಯಮಯ ಪಾತ್ರಗಳು ಅವರಿಗೆ ದೊರಕುತ್ತವೆ. ಪಕ್ಕಾ ಮಿಮಿಕ್ರಿ ಪಟು, ಹಾಸ್ಯ ನಟ ಸುರಾಜ್ ಡ್ರೈವಿಂಗ್ ಲೈಸೆನ್ಸ್ ಸಿನಿಮಾದಲ್ಲಿ ನಾಯಕನಿಗೆ ಸರಿಸಮಾನಾದ ಪೋಷಕ ನಟನಾಗಿ ಕಾಡುತ್ತಾನೆ.

60 ವರ್ಷ ತುಂಬಿದರೂ ಲಾಲೇಟ್ಟ ಯಂಗ್‌ ಯಂಗ್‌!

ಈಗೀಗ ಮಲಯಾಳಂ ಸಿನಿಮಾದಲ್ಲಿ ಬೆಂಗಳೂರಿನ ಪ್ರಸ್ತಾಪ ಸಾಕಷ್ಟು ಬರುತ್ತದೆ, ಕನ್ನಡ ಪದಗಳ ಹಾಸು ಹೊಕ್ಕಾಗಿವೆ. ಬೆಂಗಳೂರನ್ನೂ ಚೆಂದಕೆ ತೋರಿಸುತ್ತಾರೆ. ಬ್ಯಾಂಗಲೋರ್ ಡೇಸ್ ಮತ್ತಿತರ ಸಿನಿಮಾಗಳೇ ಇದಕ್ಕೆ ಸಾಕ್ಷಿ. ದುಬೈ, ಗಲ್ಫ್, ಚೆನ್ನೈ ಮತ್ತಿತರ ಪ್ರದೇಶಗಳನ್ನೂ ಅವರು ಸಿನಿಮಾಗಳಲ್ಲಿ  ಚೆನ್ನಾಗಿ ತೋರಿಸುತ್ತಾರೆ. ಕನ್ನಡದ ಆಪ್ತಮಿತ್ರದ ಮೂಲ ಮಣಿಚಿತ್ತತ್ತಾಲ್ ಮೊದಲು ಬಂದಿದ್ದು ಮಲಯಾಳಂನಲ್ಲಿ, ನಿನಗಾಗಿ ಸಿನಿಮಾದ ಮೂಲದ ನಿರಂ ಚಿತ್ರ ಮಲಯಾಳಂನ ಸೂಪರ್ ಹಿಟ್ ಚಿತ್ರವಾಗಿತ್ತು. ಚೆಲ್ಲಾಟದ ಮೂಲ ಪುಲಿವಾಲ ಕಲ್ಯಾಣಂ, ಮನ್ಮಥ ಸಿನಿಮಾದ ಮೂಲ ಕುನ್ನಿಕೂನನ್, ಸಾಫ್ಟ್ ವೇರ್ ಗಂಡ ಸಿನಿಮಾದ ಮೂಲ ಮೈ ಬಾಸ್ ದಿಲೀಪ್ ಅಭಿನಯದ ಜನಪ್ರಿಯ ಚಿತ್ರ. ಲಾಲೇಟ್ಟನ್ ಅಭಿನಯದ ದೃಶ್ಯಂ ಸಿನಿಮಾ ಕನ್ನಡದಲ್ಲಿ ದೃಶ್ಯ ಹೆಸರಿನಲ್ಲಿ ಸೂಪರ್ ಹಿಟ್ ಆಯಿತು. ಕನ್ನಡದ ಹಲವು ಜನಪ್ರಿಯ ಸಿನಿಮಾಗಳಿಗೆ ಮಲಯಾಳಂ ಸ್ಫೂರ್ತಿಯಾಗಿದೆ.

ಮಲಯಾಳಂ ಸಿನಿಮಾ ರಂಗ ಭಾರತದ ನಾಲ್ಕನೇ ಅತಿ ದೊಡ್ಡ ಸಿನಿಮಾ ಉದ್ಯಮವಾಗಿ ಗುರುತಿಸಿಕೊಂಡಿದೆ. ಮರಣ ಸಿಂಹಾಸನಂ, ವಾನಪ್ರಸ್ಥಂ ನಂತಹ ಸಿನಿಮಾಗಳು ಕ್ಯಾನ್ ಫಿಲ್ಮ್ ಫೆಸ್ಟ್ನ ಲ್ಲಿ ಪ್ರದರ್ಶನ ಕಂಡಿದ್ದವು.

ಎಲಿಪತ್ತಾಯಂ, ಗುರು, ಆಡಮಿಂಟೆ ಮಕನ್ ಅಬು, ಖ್ಯಾತ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಅವರ ಮುಖಮುಖಂ, ಅನಂತರಂ, ಮತಿಲುಕಲ್, ವಿಧೇಯನ್, ಕಥಾಪುರುಷನ್, ನಿಝಾಲ್ ಕ್ಕುತು ಮತ್ತಿತರ ಚಿತ್ರಗಳು, ಚೆಮ್ಮೀನ್, ಪಿರ್ ವಾಯಿ, ಸ್ವಾಹಂ ಇವೆಲ್ಲ ಪ್ರಶಸ್ತಿ ಪುರಸ್ಕೃತ ಕೆಲವು ಜನಪ್ರಿಯ ಸಿನಿಮಾಗಳು. 1984ರಲ್ಲಿ ನಿರ್ಮಿಸಿದ ಮೊದಲ 3ಡಿ ಸಿನಿಮಾ ಮೈ ಡಿಯರ್ ಕುಟ್ಟಿಚ್ಚಾತನ್.

ಶೂಟಿಂಗ್ ಸೆಟ್ ಮೇಲೆ ದಾಳಿ; ಭಜರಂಗದಳ ಜಿಲ್ಲಾಧ್ಯಕ್ಷ ಅರೆಸ್ಟ್!

ಮಲಯಾಳಂನ ಮೊದಲ ಸಿನಿಮಾ ವಿಗತಕುಮಾರನ್ ಚಿತ್ರೀಕರಣ 1928ರಲ್ಲಿ ಆರಂಭವಾಗಿ ತಿರುವನಂತಪುರಂನ ಕ್ಯಾಪಿಟಲ್ ಥಿಯೇಟರಿನಲ್ಲಿ 1930 ಅ.23ರಂದು ಬಿಡುಗಡೆಗೊಂಡಿತು. ಇದರ ನಿರ್ದೇಶಕರು ಜೆ.ಸಿ.ಡೇನಿಯಲ್. 2001ರಲ್ಲಿ ಬಂದ ನರಸಿಂಹಂ ಮೊಟ್ಟಮೊದಲ ಏಕೈಕ ನಟನಿದ್ದ ಸಿನಿಮಾ. 1961ರಲ್ಲಿ ಬಂದ ಕಂದಂ ಬಚಾ ಕೋಟ್ ಮಲಯಾಳಂನ ಪ್ರಥಮ ಕಲರ್ ಸಿನಿಮಾ. 2013ರಲ್ಲಿ ಬಂದ ಜೀತೂ ಜೋಸೆಫ್ ನಿರ್ದೇಶನದ ಮೋಹನ್ ಲಾಲ್ ಅಭಿನಯದ ದೃಶ್ಯಂ ಸಿನಿಮಾ ಥಿಯೇಟರುಗಳಲ್ಲಿ 500 ಮಿಲಿಯನ್ ಗಳಿಗಿಂತಲೂ ಹೆಚ್ಚು ಆದಾಯ ಗಳಿಸಿದ ಮೊದಲ ಸಿನಿಮಾ. ಇದೇ ಸಿನಿಮಾ ಕನ್ನಡದಲ್ಲೂ ರವಿಚಂದ್ರನ್ ಅಭಿನಯದಲ್ಲಿ ತೆರೆ ಕಂಡು ಜನಪ್ರಿಯವಾಗಿದೆ. 2019ರಲ್ಲಿ ಬಂದ ಪೃಥ್ವಿರಾಜ್ ಅಭಿನಯದ ಲೂಸಿಫರ್ 2 ಬಿಲಿಯನ್ ಗೂ ಅಧಿಕ ಗಳಿಕೆ ಮಾಡಿದ ಮೊದಲ ಮಲಯಾಳಂ ಸಿನಿಮಾ ಖ್ಯಾತಿಗೆ ಪಾತ್ರವಾಗಿದೆ.

ಒಂದು ದೊಡ್ಡ ತಾಂತ್ರಿಕ ವರ್ಗ, ಇತಿಹಾಸದ ಅನುಭವ, ನಟ ನಟಿಯರು, ಸಹಜತೆಯನ್ನು ಸ್ವೀಕರಿಸುವ ಪ್ರೇಕ್ಷಕರು, ಗಡಿ ದಾಟಿ ಕಲಾಸಕ್ತರನ್ನು ಆಕರ್ಷಿಸುವಂತಹ ಕತೆ, ಸಬ್ಜೆಕ್ಟು ಇತ್ಯಾದಿಗಳು ಮಲಯಾಳಂ ಸಿನಿಮಾದ ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಇದೆ. ಹಾಗೂ ಆ ಕುರಿತು ಚರ್ಚೆಗಳು, ವಿಮರ್ಶೆಗಳನ್ನು ಹುಟ್ಟು ಹಾಕುತ್ತಲೇ ಇದೆ.ಒಂದು ಭಾಷೆಯ ಸಿನಿಮಾ ಚೆನ್ನಾಗಿದೆ ಎಂದರೆ ಇನ್ನೊಂದು ಚೆನ್ನಾಗಿಲ್ಲ ಅಂತ ಅರ್ಥವಲ್ಲ, ಭಾಷಾ ದುರಾಭಿಮಾನವೂ ಅಲ್ಲ. ಅಲ್ಯಾಕೆ ಚೆಂದದ ಸಿನಿಮಾಗಳು ಬರುತ್ತವೆ, ಜನ ಯಾಕೆ ಇಷ್ಟ ಪಡುತ್ತಾರೆ, ಮತ್ತೆ ಮತ್ತೆ ಅಂಥದ್ದೇ ಸಿನಿಮಾ ನೋಡುವ ಗುಂಗು ಹಿಡಿಸುತ್ತದೆ ಎಂದು ನಾವು ಯೋಚಿಸಬೇಕಿದೆ ಅಷ್ಟೆ.

Follow Us:
Download App:
  • android
  • ios