ದಕ್ಷಿಣ ಭಾರತದ ಚಿತ್ರರಂಗ ಸದಾ ದೊಡ್ಡ ಪೈಪೋಟಿ ಇರುತ್ತದೆ. ಕಳೆದ ಕೆಲವು ವರ್ಷಗಳಿಂದ ಸೌತ್ ಇಂಡಿಯನ್ ನಟಿಯರು ಕೇವಲ ದಕ್ಷಿಣಕ್ಕೆ ಸೀಮಿತವಾಗದೆ ಬಾಲಿವುಡ್ ಅಂಗಳದಲ್ಲೂ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ನಯನತಾರಾ, ಸಮಂತಾ ಅಥವಾ ರಶ್ಮಿಕಾ ಮಂದಣ್ಣ ಅವರೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಎಂಬ ಮಾತಿತ್ತು.
ರಶ್ಮಿಕಾ-ಸಮಂತಾ ಅವರನ್ನೇ ಓವರ್‌ಟೇಕ್ ಮಾಡಿದ್ರಾ ಈ ನಟಿ?
ದಕ್ಷಿಣ ಭಾರತದ ಚಿತ್ರರಂಗ ಅಂದರೆ ಅಲ್ಲಿ ಬಣ್ಣದ ಲೋಕದ ಅದ್ಧೂರಿತನಕ್ಕೆ ಕೊರತೆಯಿಲ್ಲ. ಇಲ್ಲಿ ಪ್ರತಿಭೆ ಮತ್ತು ಸೌಂದರ್ಯದ ನಡುವೆ ಸದಾ ದೊಡ್ಡ ಪೈಪೋಟಿ ಇರುತ್ತದೆ. ಕಳೆದ ಕೆಲವು ವರ್ಷಗಳಿಂದ ದಕ್ಷಿಣದ ನಟಿಯರು ಕೇವಲ ದಕ್ಷಿಣಕ್ಕೆ ಸೀಮಿತವಾಗದೆ ಬಾಲಿವುಡ್ ಅಂಗಳದಲ್ಲೂ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ನಯನತಾರಾ, ಸಮಂತಾ ಅಥವಾ ರಶ್ಮಿಕಾ ಮಂದಣ್ಣ ಅವರೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಎಂಬ ಮಾತಿತ್ತು. ಆದರೆ, ಈಗ ಈ ಎಲ್ಲಾ ಸ್ಟಾರ್ ನಟಿಯರನ್ನು ಬದಿಗಿಟ್ಟು ಒಬ್ಬ ನಟಿ ಸಂಭಾವನೆಯ ವಿಷಯದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅವರೇ 'ಸಹಜ ಸುಂದರಿ' ಸಾಯಿ ಪಲ್ಲವಿ ಎನ್ನಲಾಗುತ್ತಿದೆ!
ಗ್ಲಾಮರ್ ಇಲ್ಲದಿದ್ದರೂ ಕಿಕ್ಕೇರಿಸುವ ನಟನೆ:
ಸಾಯಿ ಪಲ್ಲವಿ ಅವರ ವಿಶೇಷವೆಂದರೆ ಅವರ ಸರಳತೆ. ಯಾವುದೇ ಚಿತ್ರದಲ್ಲೂ ಅವರು ಅತಿಯಾದ ಮೇಕಪ್ ಅಥವಾ ಪಾರದರ್ಶಕ ಉಡುಪುಗಳನ್ನು ಧರಿಸಿ ಗ್ಲಾಮರ್ ಪ್ರದರ್ಶನ ಮಾಡುವುದಿಲ್ಲ. ಮುಖದ ಮೇಲಿನ ಮೊಡವೆಗಳನ್ನು ಮುಚ್ಚಲು ಕೂಡ ಅವರು ಇಷ್ಟಪಡುವುದಿಲ್ಲ. ಆದರೂ, ಅವರ ನಟನೆ ಮತ್ತು ಅವರ ಅದ್ಭುತ ನೃತ್ಯಕ್ಕೆ ಇಡೀ ಭಾರತವೇ ಫಿದಾ ಆಗಿದೆ. ಚಲನಚಿತ್ರ ಪ್ರಚಾರದ ಸಮಯದಲ್ಲೂ ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಳ್ಳುವ ಇವರ ಸರಳತೆಯೇ ಇವರ ಅತಿದೊಡ್ಡ ಪ್ಲಸ್ ಪಾಯಿಂಟ್.
ಸಂಭಾವನೆಯಲ್ಲಿ ಹೊಸ ದಾಖಲೆ:
ಇತ್ತೀಚಿನ ವರದಿಗಳ ಪ್ರಕಾರ, ಸಾಯಿ ಪಲ್ಲವಿ ಈಗ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದಾರೆ. ರಶ್ಮಿಕಾ ಮಂದಣ್ಣ ಪ್ರತಿ ಚಿತ್ರಕ್ಕೆ ₹4 ಕೋಟಿಯಿಂದ ₹10 ಕೋಟಿಯವರೆಗೆ ಸಂಭಾವನೆ ಪಡೆದರೆ, ಸಮಂತಾ ರುತ್ ಪ್ರಭು ₹3 ಕೋಟಿಯಿಂದ ₹8 ಕೋಟಿಯವರೆಗೆ ಚಾರ್ಜ್ ಮಾಡುತ್ತಾರೆ. ಅತ್ತ ಲೇಡಿ ಸೂಪರ್ ಸ್ಟಾರ್ ನಯನತಾರಾ ₹3 ರಿಂದ ₹12 ಕೋಟಿ ಪಡೆಯುತ್ತಾರೆ. ಆದರೆ ಸಾಯಿ ಪಲ್ಲವಿ ಈಗ ಪ್ರತಿ ಚಿತ್ರಕ್ಕೆ ಬರೋಬ್ಬರಿ ₹3 ಕೋಟಿಯಿಂದ ₹15 ಕೋಟಿಯವರೆಗೆ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಅವರು ತಮ್ಮ ಸಮಕಾಲೀನ ಎಲ್ಲಾ ನಟಿಯರನ್ನು ಹಿಂದಿಕ್ಕಿದ್ದಾರೆ.
ಬಾಲಿವುಡ್ ಪ್ರವೇಶ ಮತ್ತು ‘ರಾಮಾಯಣ’ ಕ್ರೇಜ್:
ಸಾಯಿ ಪಲ್ಲವಿ ಅವರ ಬೇಡಿಕೆ ಹೆಚ್ಚಾಗಲು ಕಾರಣ ಅವರ ಬಾಲಿವುಡ್ ಎಂಟ್ರಿ. ಇತ್ತೀಚೆಗಷ್ಟೇ ಅವರು ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಜೊತೆ ‘ಏಕ್ ದಿನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ಅವರ ಕೆಮಿಸ್ಟ್ರಿ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಇನ್ನು ಎಲ್ಲಕ್ಕಿಂತ ದೊಡ್ಡ ವಿಷಯವೆಂದರೆ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ ಈ ಚಿತ್ರದ ಮೂಲಕ ಸಾಯಿ ಪಲ್ಲವಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.

ದಕ್ಷಿಣದ ಸಣ್ಣ ಹಳ್ಳಿಯ ಹುಡುಗಿಯ ಪಾತ್ರಗಳಿಂದ ಹಿಡಿದು ಈಗ ಬಾಲಿವುಡ್‌ನ ‘ಸೀತೆ’ಯ ಪಾತ್ರದವರೆಗೆ ಸಾಯಿ ಪಲ್ಲವಿ ಅವರ ಪಯಣ ಅದ್ಭುತವಾಗಿದೆ. ನಟನೆಗೆ ಹೆಚ್ಚಿನ ಒತ್ತು ನೀಡುವ ಈ ನಟಿ, ಇಂದು ಸಂಭಾವನೆಯ ವಿಷಯದಲ್ಲೂ ‘ನಂಬರ್ ಒನ್’ ಪಟ್ಟಕ್ಕೇರಿರುವುದು ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ಆದರೆ, ಸಂಭಾವನೆ ಸಂಗತಿಯನ್ನು ಯಾರೂ ವೈಯಕ್ತಿವಾಗಿ ಅಧಿಕೃತವಾಗಿ ಹೇಳಿಕೊಳ್ಳುವುದಿಲ್ಲ. ಜೊತೆಗೆ, ನಿರ್ಮಾಪಕರು ಕೂಡ ನಟನಟಿಯರ ಸಂಭಾವನೆಯನ್ನು ಹೆಚ್ಚಿನ ಸಂದರ್ಭಗಳಲ್ಲಿ ರಿವೀಲ್ ಮಾಡುವುದಿಲ್ಲ. ಇವೆಲ್ಲಾ ಹರಿದಾಡುತ್ತಿರುವ ಸುದ್ದಿಗಳಷ್ಟೇ ಎಂಬುದನ್ನು ಸಿನಿಪ್ರಿಯರು ಗಮನದಲ್ಲಿ ಇಟ್ಟಿರಬೇಕು!


