ಆದಿತ್ಯ ಧರ್ ಅವರ ಸಂಶೋಧನೆ, ಕಟ್ಟುನಿಟ್ಟಾದ ನಿರ್ದೇಶನ ಮತ್ತು ರಣವೀರ್ ಸಿಂಗ್ ಅವರ ಎನರ್ಜಿ ಈ ಸಿನಿಮಾವನ್ನು ಭಾರತೀಯ ಚಿತ್ರರಂಗದ 'ಮಾಸ್ಟರ್ ಪೀಸ್' ಆಗಿ ರೂಪಿಸಿದೆ. ಶೂಟಿಂಗ್ ಸಮಯದಲ್ಲಿ ಆದ ಸಣ್ಣ ಬದಲಾವಣೆಗಳು ಇಂದು ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣ ಹರಿಯುವಂತೆ ಮಾಡಿದೆ. ಆ ಸೀಕ್ರೆಟ್ ತಿಳಿಯಲು ಈ ಸ್ಟೋರಿ ನೋಡಿ..

8 ಗಂಟೆಗಳ ಕಥೆ, 350 ಕೋಟಿ ಬಜೆಟ್: 'ಧುರಂಧರ್' ಎರಡು ಭಾಗಗಳಾಗಿ ಮೂಡಿಬಂದಿದ್ದರ ಹಿಂದಿದೆ ಅಚ್ಚರಿಯ ರಹಸ್ಯ!

Add Asianetnews Kannada as a Preferred SourcegooglePreferred

ಬಾಲಿವುಡ್ ಸೇರಿದಂತೆ ಇಡೀ ಭಾರತದಲ್ಲಿ ಈಗ ಎಲ್ಲಿ ಕೇಳಿದರೂ 'ಧುರಂಧರ್ 2' ಚಿತ್ರದದ್ದೇ ಸದ್ದು. ರಣವೀರ್ ಸಿಂಗ್ ಅವರ ಆಕ್ಷನ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ, ಈ ಸಿನಿಮಾ ಇಷ್ಟೊಂದು ದೀರ್ಘವಾಗಿ ಮೂಡಿಬರಲು ಮತ್ತು ಎರಡು ಭಾಗಗಳಾಗಿ ತೆರೆಕಾಣಲು ಕಾರಣವೇನು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಸ್ವತಃ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ಮೇಕಿಂಗ್ ಹಿಂದಿನ ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ವಿಭಿನ್ನ ಎನ್ನಲೇಬೇಕು!

ಒಂದೇ ಸಿನಿಮಾ ಆಗಬೇಕಿತ್ತು, ಆದರೆ 8 ಗಂಟೆ ಆಯಿತು!

ನಿಮಗೆ ಗೊತ್ತಿರಲಿ, ಆದಿತ್ಯ ಧರ್ ಅವರು ಮೊದಲು ಈ ಕಥೆಯನ್ನು ಕೇವಲ ಒಂದೇ ಸಿನಿಮಾವಾಗಿ ಮಾಡಲು ಪ್ಲಾನ್ ಮಾಡಿದ್ದರು. ಆದರೆ ಚಿತ್ರೀಕರಣ ಶುರುವಾಗಿ, ಎಡಿಟಿಂಗ್ ಟೇಬಲ್‌ಗೆ ಬಂದಾಗ ಅಕ್ಷರಶಃ ಆಘಾತ ಕಾದಿತ್ತು. ಇಡೀ ಸಿನಿಮಾದ ದೃಶ್ಯಗಳನ್ನು ಜೋಡಿಸಿದಾಗ ಅದು ಬರೋಬ್ಬರಿ 8 ಗಂಟೆಗಳ ಸುದೀರ್ಘ ಕಥೆಯಾಗಿ ಮಾರ್ಪಟ್ಟಿತ್ತು! "ಕೇವಲ 10 ಸೆಕೆಂಡ್ ಇರಬೇಕೆಂದು ಅಂದುಕೊಂಡಿದ್ದ ಸಣ್ಣ ದೃಶ್ಯಗಳು, ಶೂಟಿಂಗ್ ಮಾಡುವಾಗ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದು 2 ನಿಮಿಷಗಳ ಕಾಲಾವಧಿ ತಗೆದುಕೊಂಡವು" ಎನ್ನುತ್ತಾರೆ ಆದಿತ್ಯ. ಯಾವುದನ್ನು ಕತ್ತರಿಸಬೇಕು, ಯಾವುದನ್ನು ಇಡಬೇಕು ಎಂಬ ಗೊಂದಲದಲ್ಲಿದ್ದಾಗ, ಚಿತ್ರವನ್ನು ಎರಡು ಭಾಗಗಳಾಗಿ ಮಾಡುವುದೇ ಸೂಕ್ತ ಎಂದು ಅವರು ನಿರ್ಧರಿಸಿದರು.

ಅರ್ಜುನ್ ರಾಂಪಾಲ್ ಎಂಟ್ರಿ ಸೀನ್ ಸೃಷ್ಟಿಸಿದ ಮ್ಯಾಜಿಕ್!

ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್ ಅವರು 'ಮೇಜರ್ ಇಕ್ಬಾಲ್' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸೀನ್ ಕೇವಲ ಎರಡೂವರೆ ನಿಮಿಷ ಇರಬೇಕಿತ್ತು. ಆದರೆ ಕ್ಯಾಮರಾ ಮುಂದೆ ಕಲಾವಿದರ ಅಭಿನಯ ಮತ್ತು ಸಂಭಾಷಣೆಗಳು ಎಷ್ಟೊಂದು ಅದ್ಭುತವಾಗಿ ಮೂಡಿಬಂದವೆಂದರೆ, ಆ ಒಂದು ದೃಶ್ಯವೇ ಅಂತಿಮವಾಗಿ 9 ನಿಮಿಷಗಳಷ್ಟು ದೀರ್ಘವಾಯಿತು. ಶೇ. 95ರಷ್ಟು ಸ್ಕ್ರಿಪ್ಟ್‌ಗೆ ಬದ್ಧರಾಗಿದ್ದರೂ, ಸೆಟ್‌ನಲ್ಲಿ ಹುಟ್ಟಿಕೊಂಡ ಎಷ್ಟೋ ತಮಾಷೆಯ ಸಂಭಾಷಣೆಗಳು ಸಿನಿಮಾದ ಮೆರುಗನ್ನು ಹೆಚ್ಚಿಸಿದವು.

ಕಡಿಮೆ ಬಜೆಟ್‌ನಲ್ಲಿ ಬೃಹತ್ ಗೆಲುವು!

ಇಷ್ಟೊಂದು ದೊಡ್ಡ ಸ್ಟಾರ್ ಕಾಸ್ಟ್ ಇರುವ, ಎರಡು ಭಾಗಗಳ ಸಿನಿಮಾ 'ಧುರಂಧರ್‌'ಗೆ ಸಾವಿರಾರು ಕೋಟಿ ಖರ್ಚಾಗಿರಬಹುದು ಎಂದು ನೀವು ಅಂದುಕೊಂಡಿದ್ದರೆ ಅದು ಸುಳ್ಳು! ಧುರಂಧರ್ ಪಾರ್ಟ್ 1 ಮತ್ತು ಪಾರ್ಟ್ 2 ಎರಡನ್ನೂ ಸೇರಿಸಿ ಚಿತ್ರೀಕರಣಕ್ಕೆ ತಗುಲಿದ ಒಟ್ಟು ವೆಚ್ಚ ಕೇವಲ 255 ಕೋಟಿ ರೂಪಾಯಿಗಳು. ಪ್ರಚಾರ ಮತ್ತು ಬಿಡುಗಡೆಯ ಖರ್ಚುಗಳನ್ನೆಲ್ಲಾ ಸೇರಿಸಿದರೆ ಸುಮಾರು 350 ಕೋಟಿ ರೂಪಾಯಿಗಳ ಬಜೆಟ್ ಆಗಬಹುದು. ಇಂದಿನ ಕಾಲದಲ್ಲಿ ಎರಡು ಬೃಹತ್ ಸಿನಿಮಾಗಳಿಗೆ ಇದು ಅತ್ಯಂತ ಮಿತವ್ಯಯದ ಬಜೆಟ್ ಎನ್ನಬಹುದು. ಆದರೆ, ಈ ಸಿನಿಮಾ ತಂದುಕೊಟ್ಟ ಲಾಭ ಅಧಿಕ.. ಈಗ ಬಿಡುಗಡೆ ಆಗಿರುವ ಧುರಂಧರ್ 2 ಸಿನಿಮಾದ ಗಳಿಕೆ 2000 ಕೋಟಿಗೂ ಮೀರಬಹುದು ಎನ್ನಲಾಗುತ್ತಿದೆ. ಅಲ್ಲಿಗೆ ನಿರ್ಮಾಪಕೂ ಆಗಿರುವ ಆದಿತ್ಯ ಧರ್ ಅವರು ಸದ್ಯವೇ ಮತ್ತೊಂದು ಬಿಗ್ ಬಜೆಟ್ ಸಿನಿಮಾವನ್ನು ಶುರು ಮಾಡುಬಹುದು.

ಲಾಭದ ಸುನಾಮಿ:

ನಿರ್ಮಾಪಕರಿಗೆ ಈ ಸಿನಿಮಾ 'ಅಕ್ಷಯ ಪಾತ್ರೆ'ಯಂತಾಗಿದೆ. ಧುರಂಧರ್ ಪಾರ್ಟ್ 1 ಬಿಡುಗಡೆಯಾದಾಗಲೇ ಹಾಕಿದ ಬಂಡವಾಳವೆಲ್ಲಾ ವಾಪಸ್ ಬಂದು, ಸುಮಾರು 300 ಕೋಟಿಗೂ ಅಧಿಕ ಲಾಭ ತಂದುಕೊಟ್ಟಿತ್ತು. ಅಂದರೆ, ಈಗ ಬಿಡುಗಡೆಯಾಗಿ ಅಬ್ಬರಿಸುತ್ತಿರುವ 'ಧುರಂಧರ್ 2' ಸಿನಿಮಾದಿಂದ ಬರುತ್ತಿರುವ ಪ್ರತಿಯೊಂದು ರೂಪಾಯಿಯೂ ಚಿತ್ರತಂಡಕ್ಕೆ ಬರೀ ಲಾಭವೇ!

ಒಟ್ಟಿನಲ್ಲಿ, ಆದಿತ್ಯ ಧರ್ ಅವರ ಸಂಶೋಧನೆ, ಕಟ್ಟುನಿಟ್ಟಾದ ನಿರ್ದೇಶನ ಮತ್ತು ರಣವೀರ್ ಸಿಂಗ್ ಅವರ ಎನರ್ಜಿ ಈ ಸಿನಿಮಾವನ್ನು ಭಾರತೀಯ ಚಿತ್ರರಂಗದ 'ಮಾಸ್ಟರ್ ಪೀಸ್' ಆಗಿ ರೂಪಿಸಿದೆ. ಶೂಟಿಂಗ್ ಸಮಯದಲ್ಲಿ ಆದ ಸಣ್ಣ ಬದಲಾವಣೆಗಳು ಇಂದು ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣ ಹರಿಯುವಂತೆ ಮಾಡಿದೆ.