Deepika Padukone rushed to hospital: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ತೀವ್ರ ಬಳಲಿಕೆ ಕಂಡುಬಂದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈಗವರು ಚೇತರಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್‌ ಕೆ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. 

ಹೈದರಾಬಾದ್‌: ಕರ್ನಾಟಕ ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಶೂಟಿಂಗ್‌ ನಡುವೆಯೇ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಪ್ರಾಜೆಕ್ಟ್‌ ಕೆ (Project K movie shooting) ಎಂಬ ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಅದಾದ ನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹಿಂದಿ ಮತ್ತು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ. 

ದೀಪಿಕಾ ಪಡುಕೋಣೆ ಅವರ ಆರೋಗ್ಯದಲ್ಲಿ ಬಳಲಿಕೆ ಕಂಡುಬಂದಿದೆ, ಅದಾದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಮತ್ತೆ ಶೂಟಿಂಗ್‌ ಸೆಟ್‌ಗೆ ಬಂದಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, "ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ತೀವ್ರ ಬಳಲಿಕೆ ಕಂಡುಬಂದಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೀಪಿಕಾ ಅವರ ಎದೆಬಡಿತ ಇದ್ದಕ್ಕಿದ್ದಂತೆ ಏರಿಕೆಯಾಯಿತು. ನಂತರ ತುಂಬಾ ಬಳಲಿಕೆಯಿಂದ ಕಂಡುಬಂದರು. ಅವರೇ ಇದನ್ನು ಗಮನಿಸಿ ತಿಳಿಸಿದರು. ತಕ್ಷಣ ಚಿಕಿತ್ಸೆ ನೀಡಲಾಗಿದ್ದು. ಸೆಟ್‌ಗೆ ವಾಪಸಾಗಿದ್ದಾರೆ ಮತ್ತು ಗುಣಮುಖರಾಗುತ್ತಿದ್ದಾರೆ," ಎಂದು ಮೂಲವೊಂದು ಹೇಳಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Aishwarya Rai ಯಿಂದ Alia Bhatt ವರೆಗೆ ಗಂಡನಿಗಿಂತ ಹೆಚ್ಚು ಸಂಪಾದಿಸುವ ನಟಿಯರು

ದಕ್ಷಿಣ ಚಿತ್ರರಂಗದ ಖ್ಯಾತ ನಟ ಪ್ರಭಾಸ್‌ (South Indian star Prabhas) ಅವರ ಜೊತೆ ಪ್ರಾಜೆಕ್ಟ್‌ ಕೆ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇದು ದಕ್ಷಿಣ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆಯವರ ಎರಡನೇ ಚಿತ್ರವಾಗಿದೆ. ಅವರ ಚೊಚ್ಚಲ ಚಿತ್ರ ರಿಯಲ್‌ ಸ್ಟಾರ್‌ ಉಪೇಂದ್ರ (Real Star Upendra) ಅವರು ನಾಯಕರಾಗಿ ನಟಿಸಿರುವ ಐಶ್ವರ್ಯ. ಇದು ಕನ್ನಡ ಚಿತ್ರವಾಗಿದ್ದು, ಇದಾದ ಬಳಿಕ ಅವರು ದಕ್ಷಿಣ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ದಕ್ಷಿಣದ ಸ್ಟಾರ್‌ ನಟನ ಜತೆ ನಟಿಸುತ್ತಿದ್ದಾರೆ. ಸದ್ಯ ಹೈದರಾಬಾದಿನಲ್ಲಿ (Hyderabad) ಶೂಟಿಂಗ್‌ ನಡೆಯುತ್ತಿದೆ. ಪ್ರಾಜೆಕ್ಟ್‌ ಚಿತ್ರದಲ್ಲಿ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ (Amitabh Bachchan) ಮತ್ತು ದಿಶಾ ಪಟಾಣಿ (Disha Patani) ಕೂಡ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಸದ್ಯ, ಶಾರುಖ್‌ ಖಾನ್‌ (Shah Rukh Khan) ಜೊತೆ ಪಠಾಣ್‌ (Pathaan) ಮತ್ತು ಹೃತಿಕ್‌ ರೋಷನ್‌ (Hrithik Roshan) ಜೊತೆ ಫೈಟರ್‌ (Fighter) ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.

ಇದನ್ನೂ ಓದಿ: Deepika Padukone ಸೇರಿದಂತೆ ಡ್ರಗ್ಸ್' ವ್ಯಸನದ ಆರೋಪವಿರುವ ಟಾಪ್‌ ನಟಿಯರು ಇವರೇ

ಇತ್ತೀಚೆಗೆ ಕಡಿಮೆ ವಯಸ್ಸಿಗೆ ಸಿನೆಮಾ ನಟನಟಿಯರು ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವಿದ್ದರೂ, ಸಣ್ಣ ಆರೋಗ್ಯ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಕಾರಣಕ್ಕಾಗಿಯೇ ದೀಪಿಕಾ ಪಡುಕೋಣೆಗೆ ಆರೋಗ್ಯ ಸಮಸ್ಯೆ ಕಂಡುಬಂದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕನ್ನಡದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಚಿರು ಸರ್ಜಾ, ಗಾಯಕ ಕೆಕೆ ಸೇರಿದಂತೆ ಹಲವು ನಟನಟಿಯರು ಇತ್ತೀಚೆಗೆ ಫಿಟ್‌ನೆಸ್‌ ಹೊಂದಿದ್ದರೂ ಹೃದಯಾಘಾತದಿಂದ ಮೃತಪಟ್ಟ ಹಲವು ಪ್ರಕರಣಗಳು ಕಣ್ಣ ಮುಂದಿವೆ. ಈ ಕಾರಣಕ್ಕಾಗಿಯೇ ಆರೋಗ್ಯದ ಮೇಲೆ ಎಲ್ಲರೂ ಇನ್ನಿಲ್ಲದ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. 

ಜನಸಾಮಾನ್ಯರು ಸಹ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಯೋಗ, ಧ್ಯಾನ ಮತ್ತು ಎಷ್ಟೆಲ್ಲಾ ಫಿಟ್‌ನೆಸ್‌ ಕಾಳಜಿ ವಹಿಸುವ ನಟನಟಿಯರಿಗೇ ಆರೋಗ್ಯ ಸಮಸ್ಯೆ ಎದುರಾಗಿರುವ ಹಿನ್ನೆಲೆ ಜನಸಾಮಾನ್ಯರು ಚಿಂತೆಗೀಡಾಗಿರುವುದಂತೂ ಸುಳ್ಳಲ್ಲ.