ಭೂಮಿಕಾ ಮತ್ತು ಮಗುವನ್ನು ಸಾಯಿಸಲು ಶಕುಂತಲಾ ಆಕೆ ಜಾರಿ ಬೀಳುವ ಸಲುವಾಗಿ ನೆಲದ ಮೇಲೆ ಎಣ್ಣೆ ಸುರಿದಿದ್ದಾಳೆ. ಅದರ ಮೇಲೆ ಭೂಮಿಕಾ ಕಾಲಿಟ್ಟಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗ್ತಿದ್ದಂತೆಯೇ ನಿರ್ದೇಶಕರಿಗೆ ಜೀವ ಬೆದರಿಕೆ ಬಂದಿದೆ ನೋಡಿ!
ಅಮೃತಧಾರೆಯಲ್ಲಿ ಭೂಮಿಕಾ ಈಗ ತುಂಬು ಗರ್ಭಿಣಿ. ಆದರೆ, ಹೇಳಿದ್ದನ್ನೇ ಹೇಳುವ, ಒಂದೇ ವಿಧಾನವನ್ನೇ ಎಲ್ಲೆಡೆಯೂ ತೋರಿಸುವ, ಅದೇ ಸಿದ್ಧ ಮಾದರಿಯನ್ನೇ ತುರುಕುವ ಹೆಸರೇ ಸೀರಿಯಲ್ ಎನ್ನುವುದು ವೀಕ್ಷಕರಿಗೆ ತಿಳಿದದ್ದೇ. ಅದೇ ರೀತಿ ಇದೀಗ ಭೂಮಿಕಾಳ ಮಗುವನ್ನು ಸಾಯಿಸಲು ಶಕುಂತಲಾ ತಂತ್ರ ಹೂಡಿದ್ದಾಳೆ. ತನ್ನ ಮೇಲೆ ಅಟ್ಯಾಕ್ ಆದ ಕಾರಣಕ್ಕೆ ಗೌತಮ್ ತನ್ನ ಆಸ್ತಿಗಳನ್ನು ಪಾಲು ಮಾಡಿದ್ದಾನೆ. ಅದರಲ್ಲಿ ಬಹುದೊಡ್ಡ ಪಾಲು ಭೂಮಿಕಾ ಮತ್ತು ಮಗುವಿನ ಹೆಸರಿನಲ್ಲಿ ಇರುವ ಕಾರಣಕ್ಕೆ ಶಕುಂತಲಾ ಮಗುವನ್ನು ಸಾಯಿಸುವ ಪ್ಲ್ಯಾನ್ ಮಾಡಿದ್ದಾಳೆ. ಸೀರಿಯಲ್ ವಿಲನ್ಗಳು ನಾಯಕಿಯನ್ನು ಇಲ್ಲವೇ ಆಕೆಯ ಹೊಟ್ಟೆಯಲ್ಲಿ ಇರುವ ಮಗುವನ್ನು ಸಾಯಿಸಲು ಒಂದಿಷ್ಟು ಸಿದ್ಧ ಮಾದರಿಗಳಿವೆ. ಅವುಗಳಲ್ಲಿ ಒಂದು ಎಣ್ಣೆ ಚೆಲ್ಲುವುದು!
ಸಾಮಾನ್ಯವಾಗಿ ನಾಯಕಿ ಮೆಟ್ಟಿಲ ಮೇಲಿನಿಂದ ಇಳಿದು ಬರುವಾಗ ಎಣ್ಣೆ ಚೆಲ್ಲುವುದು ಇರುತ್ತದೆ. ಇಲ್ಲಿ ಸ್ವಲ್ಪ ವಿಭಿನ್ನವಾಗಿ ನಾಯಕಿ ಭೂಮಿಕಾ ದೇವರ ಮನೆಗೆ ಬರ್ತಿರೋ ವೇಳೆ, ನೆಲದ ಮೇಲೆ ಎಣ್ಣೆ ಚೆಲ್ಲಿದ್ದಾಳೆ ಶಕುಂತಲಾ. ಅದರ ಮೇಲೆ ಭೂಮಿಕಾ ಕಾಲಿಟ್ಟಿದ್ದಾಳೆ. ಅಲ್ಲಿಗೆ ಪ್ರೊಮೊ ಕಟ್ ಆಗಿದೆ. ಭೂಮಿಕಾ ಬಿಳ್ತಾಳೋ ಇಲ್ಲವೋ, ಆಕೆಯ ರಕ್ಷಣೆಯನ್ನು ಯಾರಾದ್ರೂ ಮಾಡ್ತಾರೋ ಅಥವಾ ಭೂಮಿಕಾ ಮಗುವನ್ನು ಕಳೆದುಕೊಳ್ತಾಳೋ... ಹೀಗೆ ಏನೆಲ್ಲಾ ತಿರುವು ಈಗ ಸೀರಿಯಲ್ ಪಡೆದುಕೊಳ್ಳಬಹುದು. ಸೀರಿಯಲ್ ಕಥೆ ಏನೇ ಇರಲಿ. ಆದರೆ ಸೀರಿಯಲ್ ನಿರ್ದೇಶಕರಿಗೆ ಮಾತ್ರ ಈಗ ಸೀರಿಯಲ್ ಪ್ರೇಮಿಗಳಿಂದ ಜೀವ ಬೆದರಿಕೆ ಬಂದಿದೆ!
ಅಮೃತಧಾರೆಯ ಪ್ರೊಮೋ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಂತೆಯೇ, ಕೆಲವರು ನಿರ್ದೇಶಕರಿಗೆ ತಮಾಷೆಯಿಂದ ಬೆದರಿಕೆ ಹಾಕಿದ್ದಾರೆ. ಶೆಟ್ಟಿ ಶೆಟ್ಟಿ ಎನ್ನುವ ಸೋಷಿಯಲ್ ಮೀಡಿಯಾ ಖಾತೆದಾರರೊಬ್ಬರು, ಭೂಮಿಕಾ ಬೀಳುವುದಿಲ್ಲ.. ಭಾಗ್ಯಮ್ಮ ಅವ್ರು ಅಥವಾ ಮಲ್ಲಿ ಬಂದು ಹಿಡಿಯುತ್ತಾರೆ ಅನಿಸುತ್ತೆ ಎನ್ನುತ್ತಲೇ ಆಕಸ್ಮಾತ್ ಮಗೂಗೆ ಏನಾದ್ರೂ ತೊಂದರೆ ಆದ್ರೆ ಜನ ಎಲ್ಲಾ ಸೇರಿ ಹುಚ್ಚು ನಾ*** ಹೊಡೆದ ಹಾಗೆ ಹೊಡೀತಾರೆ, ಯೋಚ್ನೆ ಮಾಡಿ ನಿರ್ದೇರ್ಶಕರೇ ಎಂದು ಬರೆದಿದ್ದು ಅಚ್ಚರಿ ಎಂದರೆ ಅದಕ್ಕೆ 100ಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ. ಇನ್ನು ಕೆಲವು ನಿಜ ನಿಜ. ನಾವೂ ಹಾಗೇ ಮಾಡುತ್ತೇವೆ ಎಂದಿದ್ದಾರೆ! ಅಲ್ಲಿಗೆ ಭೂಮಿಕಾಳ ಮಗುವಿಗೆ ಏನಾದರೂ ಆದರೆ ತಮ್ಮಿಂದ ನೋಡಲು ಸಾಧ್ಯವಿಲ್ಲ ಎನ್ನುವುದು ಪ್ರೇಕ್ಷಕರ ನಿಲುವು. ಆದರೆ ಇದು ಸೀರಿಯಲ್ ಆಗಿರೋ ಕಾರಣ ಯಾವ ಟರ್ನ್ ಬೇಕಾದರೂ ತೆಗೆದುಕೊಳ್ಳಬಹುದು.
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಆಸ್ತಿ ಭಾಗವಾಗಿದೆ. ಜೈದೇವ ತನಗೆ ಅಣ್ಣನ ಬಳಿಕ ಪಟ್ಟ ಸಿಗುತ್ತದೆ ಎಂದು ಕಾಯುತ್ತಿದ್ದ. ಆದರೆ ಆ ಜಾಗವನ್ನು ಇನ್ನೋರ್ವ ತಮ್ಮ ಪಾರ್ಥನಿಗೆ ನೀಡಿದ್ದಾನೆ ಗೌತಮ್. ಇದು ಜೈದೇವನ ಹೊಟ್ಟೆ ಉರಿಸುತ್ತಿದೆ. ಎಲ್ಲಾ ತನ್ನ ಪಾಲಾದರೆ ಅಣ್ಣ-ಅತ್ತಿಗೆ ಜೊತೆ ಹೆಂಡತಿಯನ್ನೂ ಮುಗಿಸಿ ಲವರ್ ಜೊತೆ ಆರಾಮಾಗಿ ಇರೋಣ ಎಂದುಕೊಂಡಿದ್ದ ಅವನು. ಅದೇ ಇನ್ನೊಂದೆಡೆ ಪೆದ್ದು ಪತ್ನಿ ಮಲ್ಲಿ ಕೂಡ ಸ್ಟ್ರಾಂಗ್ ಆಗಿದ್ದಾಳೆ. ಗಂಡನ ಅಕ್ರಮಕ್ಕೆ ಫುಲ್ಸ್ಟಾಪ್ ಇಡುವುದನ್ನು ಕಲಿಯುತ್ತಿದ್ದಾರೆ. ಹೆಣ್ಣು ಮುನಿದರೆ ಮಾರಿ ಎನ್ನುವುದನ್ನು ತೋರಿಸುತ್ತಿದ್ದು, ಎಲ್ಲಾ ಕಡೆಗಳಿಂದಲೂ ಜೈದೇವ ಲಾಕ್ ಆಗಿದ್ದಾನೆ. ಇದೀಗ ಕುತಂತ್ರದಿಂದ ಶಕುಂತಲಾ ಭೂಮಿಕಾ ಮತ್ತು ಮಗುವನ್ನು ಮುಗಿಸೋ ಪ್ಲ್ಯಾನ್ ಮಾಡುತ್ತಿದ್ದಾಳೆ.