ಗಟ್ಟಿಮೇಳದಲ್ಲಿ ಆದ್ಯಾ ಆಗಿ, ಅಮೃತಧಾರೆಯಲ್ಲಿ ಈಗ ಮಲ್ಲಿಯಾಗಿ ನಟಿಸುತ್ತಿರುವ ನಟಿ ಅನ್ವಿತಾ ಸಾಗರ್ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
ಸದ್ಯ ಅಮೃತಧಾರೆ ಸೀರಿಯಲ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇದರಲ್ಲಿ ಶಕುಂತಲಾಳ ಅಸಲಿ ರೂಪ ಬಯಲಾದರೆ ಅಲ್ಲಿ ಕಥೆ ಮುಗಿದಂತೆ. ಅದೇ ಇನ್ನೊಂದೆಡೆ ಜೈದೇವನ ಅಸಲಿ ರೂಪ ಪತ್ನಿಗೆ ಗೊತ್ತಾಗಿದ್ದು, ಇವೆಲ್ಲವೂ ಮನೆಯವರಿಗೆ ತಿಳಿಯಬೇಕಿದೆ. ಒಂದೆಡೆ, ಶಕುಂತಲಾ ಬಣ್ಣ ಬಯಲು ಮಾಡುವ ಕನಕದುರ್ಗಕ್ಕೆ ಗೌತಮ್, ಭೂಮಿಕಾ, ಆನಂದ್, ಅಪರ್ಣಾ ಹೋಗಿದ್ದಾರೆ. ಪಂಕಜಾ ಬಗ್ಗೆ ತಿಳಿದುಕೊಳ್ಳೋಕೆ ಭೂಮಿಕಾ, ಆನಂದ್ ಹರಸಾಹಸ ಪಡುತ್ತಿದ್ದಾರೆ. ಅದೇ ಇನ್ನೊಂದೆಡೆ, ಎಲ್ಲರನ್ನೂ ಬೇರೆ ಕಡೆ ಕಳುಹಿಸಿ, ಜೈದೇವ ತನ್ನ ಲವರ್ ದಿಯಾಳನ್ನು ಮನೆಗೇ ಕರೆಸಿಕೊಂಡಿದ್ದ. ಆದರೆ ಈ ವಿಷಯ ಮಲ್ಲಿಗೆ ತಿಳಿಯಿತು. ಇದರಿಂದ ದೆವ್ವದ ವೇಷದಲ್ಲಿ ಆಕೆಗೆ ಭಯ ಹುಟ್ಟಿಸಿದ್ದಾಳೆ. ದೆವ್ವವನ್ನು ನೋಡಿ ದಿಯಾ ಭಯಭೀತಳಾಗಿದ್ದು ಮನೆಯಿಂದ ಓಡಿ ಹೋಗಿದ್ದಾಳೆ. ಪೆದ್ದು ಮಲ್ಲಿ ಸದ್ಯ ಅಷ್ಟರಮಟ್ಟಿಗೆ ಬುದ್ಧಿವಂತೆಯಾಗಿದ್ದಾಳೆ.
ಇದು ಅಮೃತಧಾರೆ ಸೀರಿಯಲ್ ಕಥೆಯಾದರೆ, ಅಲ್ಲಿ ದೆವ್ವದ ಮೂಲಕ ಭಯ ಹುಟ್ಟಿಸಿರೋ ಮಲ್ಲಿ ಅರ್ಥಾತ್ ಅನ್ವಿತಾ ಸಾಗರ್ ಇದೀಗ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಮೋ ವೆಂಕಟೇಶ ಎನ್ನುವುದು ಸಿನಿಮಾ ಹೆಸರು. ಅದರ ವಿಡಿಯೋ ಇದೀಗ ವೈರಲ್ ಆಗಿದ್ದು, ಅದರಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ನಟಿ ಇದರಲ್ಲಿ ತಮ್ಮದು ರಶ್ಮಿ ಎನ್ನುವ ಪಾತ್ರ. ಆರ್ಕಿಟೆಕ್ಟ್ ಆಗಿ ನಟಿಸುತ್ತಿದ್ದೇನೆ ಎಂದಿದ್ದಾರೆ. ಇದರಲ್ಲಿ ಗಟ್ಟಿಮೇಳದ ರೌಡಿ ಬೇಬಿ ಥರ ಪಾತ್ರ, ಇದರ ಹೊರತಾಗಿಯೂ ಫ್ಯಾಮಿಲಿ ಬಿಟ್ಟು ಕೊಡದ ಹುಡುಗಿಯ ಪಾತ್ರ ತಮ್ಮದು ಎಂದಿದ್ದಾರೆ. ತಮ್ಮ ಮನೆಯವರು ಯಾವುದೆಲ್ಲಾ ಬೇಡ ಎಂದುಕೊಂಡಿರುತ್ತಾರೋ ಅದೆಲ್ಲವೂ ಆಗುತ್ತದೆ. ಬದುಕು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಕೊನೆಗೆ ಒಬ್ಬನ ಮೇಲೆ ಲವ್ ಆಗಿ ಬ್ರೇಕಪ್ ಆಗುತ್ತದೆ. ಬಳಿಕ ಆಗುವುದೇ ರಶ್ಮಿಯ ನೋವಿನ ಕಥೆ ಎಂದಿದ್ದಾರೆ. ಮನೆಯ ಚೌಕಟ್ಟು ದಾಟಿ ಪ್ರೀತಿಗೆ ಬಿದ್ದ ಹುಡುಗಿ ಬದುಕು ಹೇಗಾಗುತ್ತೆ ಎನ್ನುವ ಬಗ್ಗೆ ಇದರಲ್ಲಿ ತಿಳಿಸಲಾಗಿದೆ ಎಂದಿರುವ ನಟಿ, ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದಿದ್ದಾರೆ.
ಇನ್ನು ನಟಿ ಅನ್ವಿತಾ ಸಾಗರ್ ಕುರಿತು ಹೇಳುವುದಾದರೆ, ಇವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್ಎಲ್ಬಿ ಸೀರಿಯಲ್ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.
ಸೀರಿಯಲ್ನಲ್ಲಿ, ಅವಕಾಶ ಇದ್ದರೂ ಸಿನಿಮಾಕ್ಕೆ ಬರಲು ಕಾರಣವನ್ನೂ ತಿಳಿಸಿರುವ ಅವರು, ಧಾರಾವಾಹಿಗೆ ಅಂಟಿಕೊಂಡಿರುವುದು ಬೇಡ ಎಂದುಕೊಂಡೆ. ಸಿನಿಮಾಕ್ಕೆ ಬರಬೇಕು ಎನ್ನುವ ಹಂಬಲ ಇತ್ತು. ಇದೀಗ ಬಣ್ಣದ ಲೋಕಕ್ಕೆ ಬಂದು 10 ವರ್ಷನೇ ಆಗಿದೆ. ಸೀರಿಯಲ್ನಲ್ಲಿಯೂ ಸಾಕಷ್ಟು ಡಿಮಾಂಡ್ ಇದ್ದರೂ, ಸಿನಿಮಾ ನನ್ನ ಮೊದಲ ಪ್ರೀತಿ. ಐತಿಹಾಸಿಕ, ಪೌರಾಣಿಕ ಪಾತ್ರ ಮಾಡುವ ಆಸೆ ಕೂಡ ಇದೆ ಎಂದಿದ್ದಾರೆ ಅನ್ವಿತಾ. ಅಂದಹಾಗೆ ಈ ಚಿತ್ರಕ್ಕಾಗಿ ಅವರು ಪಾರ್ವತಿ ಎನ್ನುವ ಹೆಸರು ಇಟ್ಟುಕೊಂಡಿದ್ದಾರೆ. ತಮ್ಮ ಅಜ್ಜ ಈ ಹೆಸರು ಇಟ್ಟಿರುವುದಾಗಿ ಅನ್ವಿತಾ ಹೇಳಿದ್ದಾರೆ. ಆದ್ದರಿಂದ ಚಿತ್ರದಲ್ಲಿ ಪಾರ್ವತಿ ಎಂದೇ ಹೆಸರು ಇದೆ.
