ಬಾಲಿವುಡ್ ಲೆಜೆಂಡ್ ಅಮಿತಾಬ್ ಬಚ್ಚನ್ ವಯಸ್ಸಾದ್ಮೇಲೆ ಏನೆಲ್ಲ ಸಮಸ್ಯೆ ಕಾಡುತ್ತೆ ಎಂಬುದನ್ನು ಎಲ್ಲರ ಮುಂದಿಟ್ಟಿದ್ದಾರೆ. ನಿತ್ಯ ಏನೆಲ್ಲ ತೊಂದ್ರೆ ಆಗ್ತಿದೆ, ಅದನ್ನು ಹೇಗೆ ಎದುರಿಸುತ್ತಿದ್ದೇನೆ ಎಂಬುದನ್ನು ಹೇಳಿದ್ದಾರೆ. 

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Bollywood Big B Amitabh Bachchan) ಗೆ ಈಗ 82ರ ಹರೆಯ. ಈಗ್ಲೂ ಅಮಿತಾಬ್ ಬಚ್ಚನ್ ಯುವಕರನ್ನು ನಾಚಿಸುವಷ್ಟು ಆಕ್ಟಿವ್ ಆಗಿದ್ದಾರೆ. ಸಿನಿಮಾ ಶೂಟಿಂಗ್, ರಿಯಾಲಿಟಿ ಶೋ ಶೂಟಿಂಗ್ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಅಮಿತಾಬ್ ಬಚ್ಚನ್ ಸಕ್ರಿಯವಾಗಿದ್ದಾರೆ. ಆಗಾಗ ತಮ್ಮ ಸಮಸ್ಯೆ, ಸಮಾಜ, ಸಂಬಂಧಗಳ ಬಗ್ಗೆ ಪೋಸ್ಟ್ ಹಾಕುವ ಅಮಿತಾಬ್ ಬಚ್ಚನ್, ವಯಸ್ಸಾದ್ಮೇಲೆ ಏನೆಲ್ಲ ಸಮಸ್ಯೆ ಆಗ್ತಿದೆ ಅನ್ನೋದನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.

ಹಿಂದೆ ಸುಲಭವಾಗಿದ್ದ ಕೆಲ್ಸಗಳು ಈಗ ಕಷ್ಟವಾಗ್ತಿದೆ, ಆ ಕೆಲ್ಸದ ಬಗ್ಗೆ ಹೆಚ್ಚು ಗಮನದ ಅಗತ್ಯವಿದೆ ಅಂತ ಅಮಿತಾಬ್ ಬಚ್ಚನ್ ಹೇಳ್ಕೊಂಡಿದ್ದಾರೆ. ಮನೆಯ ವಿವಿಧ ಸ್ಥಳಗಳಲ್ಲಿ ಈಗ 'ಹ್ಯಾಂಡಲ್ ಬಾರ್ಗಳು' ಅಗತ್ಯವಿದೆ ಎಂಬುದನ್ನು ಅಮಿತಾಬ್ ಬಚ್ಚನ್ ಒಪ್ಕೊಂಡಿದ್ದಾರೆ.

ವಯಸ್ಸಿನ ಪ್ರಭಾವ - ಸಣ್ಣ ಕೆಲಸಕ್ಕೂ ಶ್ರಮ ಅಗತ್ಯ : ದೈನಂದಿನ ಕೆಲ್ಸದಲ್ಲಿ ಈಗ ಔಷಧಿ ಜೊತೆ ಆರೋಗ್ಯ ಹೆಚ್ಚು ಪ್ರಭಾವ ಬೀರಿದೆ ಎಂದಿದ್ದಾರೆ. ದೇಹ ಕ್ರಮೇಣ ಸಮತೋಲನ ಕಳೆದುಕೊಳ್ಳುತ್ತದೆ. ಅದ್ರ ಮೇಲೆ ಕೆಲಸ ಮಾಡೋದು ಅಗತ್ಯ. ಇದಕ್ಕೆ ಯೋಗ, ವ್ಯಾಯಾಮ, ಪ್ರಾಣಾಯಾಮ, ಮೊಬಿಲಿಟಿ ಟ್ರೈನಿಂಗ್ ಅಗತ್ಯ ಅಂತ ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಸಣ್ಣ ಪುಟ್ಟ ಕೆಲ್ಸಕ್ಕೂ ಸಾಕಷ್ಟು ಶ್ರಮದ ಅಗತ್ಯವಿದೆ. ಹಿಂದೆ ಸುಲಭವಾಗಿ ಮಾಡ್ತಿದ್ದ ಕೆಲ್ಸ ಈಗ್ಲೂ ಸುಲಭ ಅಂದ್ಕೊಳ್ಳೋದು ತಪ್ಪು. ಒಂದು ದಿನ ಮಿಸ್ ಆದ್ರೂ ನೋವು, ಬಿಗಿತ ಕಾಣಿಸಿಕೊಳ್ಳುತ್ತೆ. ಸಾಧಾರಣವಾದ ಕೆಲ್ಸ ಮಾಡುವಾಗ್ಲೂ ಆಲೋಚನೆ ಮಾಡಿ, ಕೆಲ್ಸ ಮಾಡ್ಬೇಕು ಎಂದು ಅಮಿತಾಬ್ ಹೇಳಿಕೊಂಡಿದ್ದಾರೆ.

ನಿಂತು ಪ್ಯಾಂಟ್ ಧರಿಸುವ ಬದಲು ಕುಳಿತು ಪ್ಯಾಂಟ್ ಧರಿಸಿ, ನಿಂತು ಪ್ಯಾಂಟ್ ಧರಿಸಿದ್ರೆ ಬ್ಯಾಲೆನ್ಸ್ ಗೆ ತೊಂದ್ರೆ ಆಗುತ್ತೆ ಅಂತ ವೈದ್ಯರು ಸಲಹೆ ನೀಡಿದ್ದಾರೆ ಎಂದ ಬಚ್ಚನ್, ಮನೆಗೆ ಹ್ಯಾಂಡಲ್ ಬಾರ್ ಅಳವಡಿಸಿರುವ ಬಗ್ಗೆಯೂ ಹೇಳಿದ್ದಾರೆ. ಮನೆಯಲ್ಲಿ ಕೆಲವು ಕಡೆ ಹ್ಯಾಂಡಲ್ ಬಾರ್ ಹಾಕಿಸಿದ್ದೇನೆ. ಮೊದಲು ನನಗೆ ಅದನ್ನು ನೋಡಿ ನಗು ಬರ್ತಿತ್ತು. ಈಗ ಅದು ಎಷ್ಟು ಮುಖ್ಯ ಅನ್ನೋದು ಗೊತ್ತಾಗಿದೆ ಅಂತ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ನೆಲದ ಮೇಲೆ ಬಿದ್ದ ಕಾಗದವನ್ನು ಎತ್ತುವ ಸಣ್ಣ ಕೆಲ್ಸನೂ ಈಗ ತುಂಬಾ ಕಷ್ಟ ಅನ್ನಿಸುತ್ತೆ. ಮೊದಲು ವೇಗವಾಗಿ ಮಾಡಲಾಗುತ್ತಿದ್ದ ಕೆಲಸಗಳು ಈಗ ನಿಧಾನವಾಗಿ ಮತ್ತು ಅನಿಶ್ಚಿತವಾಗಿವೆ ಅಂತ ಅಮಿತಾಬ್ ಬಚ್ಚನ್ ಬರೆದುಕೊಂಡಿದ್ದಾರೆ. ನನ್ನ ಬ್ಲಾಗ್ ಓದಿ ಜನ ನಗ್ಬಹುದು ಎಂಬುದನ್ನು ಒಪ್ಪಿಕೊಂಡ ಅಮಿತಾಬ್, ಆದ್ರೆ ಇದು ಎಲ್ಲರ ಜೀವನದಲ್ಲಿ ನಡೆಯುವಂತಹದ್ದು ಎಂಬ ಕಟು ಸತ್ಯವನ್ನು ಹೇಳಿದ್ದಾರೆ.

ಇಂಥ ಸ್ಥಿತಿ ಬರದೆ ಇರ್ಲಿ ಅಂತ ನಾನು ಬಯಸ್ತೇನೆ. ಆದ್ರೆ ಬಂದೇ ಬರುತ್ತೆ. ನಾವು ಹುಟ್ಟಿದ ತಕ್ಷಣ ಅವನತಿಯ ಪ್ರಯಾಣ ಶುರುವಾಗುತ್ತೆ. ಯೌವನದಲ್ಲಿ, ನಾವು ಜೀವನದ ಸವಾಲುಗಳನ್ನು ಬೇಗನೆ ಜಯಿಸ್ತೇವೆ. ವಯಸ್ಸಾದಂತೆ, ಜೀವನವು ನಮಗೆ ಸ್ಪೀಡ್ ಬ್ರೇಕ್ ತೋರಿಸುತ್ತೆ ಎಂದು ಅಮಿತಾಬ್ ಬಚ್ಚನ್ ಬರೆದಿದ್ದಾರೆ. ತಾತ್ವಿಕ ರೀತಿಯಲ್ಲಿ ತಮ್ಮ ಬ್ಲಾಗ್ ಮುಗಿಸಿದ ಅವರು, ನಿಜವಾದ ತೃಪ್ತಿ ಜೀವನದ ಉದ್ದೇಶವನ್ನು ಪೂರೈಸುವಲ್ಲಿ ಮತ್ತು ಭವಿಷ್ಯಕ್ಕಾಗಿ ತಯಾರಿ ನಡೆಸುವುದರಲ್ಲಿದೆ ಎಂದಿದ್ದಾರೆ. ತಮಗೆ ಈ ಎಲ್ಲ ಜ್ಞಾನ ಮಗಳು ಶ್ವೇತಾ ನೀಡಿದ ದಿವ್ಯ ಮಂತ್ರೋಚ್ಛಾರದಿಂದ ಬಂದಿದೆ ಎಂದು ಬರೆದಿದ್ದಾರೆ. 

ಸದ್ಯ ಅಮಿತಾಬ್ ಬಚ್ಚನ್ ಸೆಕ್ಷನ್ 84 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ನಾಗ್ ಅಶ್ವಿನ್ ಆಕ್ಷನ್ ಚಿತ್ರ ಕಲ್ಕಿ 2898 AD ಯ ಮುಂದುವರಿದ ಭಾಗದಲ್ಲೂ ನಟಿಸಲಿದ್ದಾರೆ.