BBK 7 Winner Shine Shetty: ಬಿಗ್ ಬಾಸ್ ಕನ್ನಡ 7 ವಿಜೇತ, ನಟ ಶೈನ್ ಶೆಟ್ಟಿ ಅವರು ಗಲ್ಲಿ ಕಿಚನ್ ಮಾರಿದ್ದೇಕೆ? ಇದಕ್ಕೆ ಕಾರಣ ಏನು?
ಬಿಗ್ ಬಾಸ್ ಕನ್ನಡ ಸೀಸನ್ 7 ಶೋನಲ್ಲಿ ಕಾಣಿಸಿಕೊಳ್ಳೋ ಮುನ್ನ ಶೈನ್ ಶೆಟ್ಟಿ ( Shine Shetty ) ಅವರು ʼಲಕ್ಷ್ಮೀ ಬಾರಮ್ಮʼ, ʼಮೀರಾ ಮಾಧವʼ ಧಾರಾವಾಹಿಗಳಲ್ಲಿ ನಟಿಸಿದ್ದರು. ಸೀರಿಯಲ್‌ನಿಂದ ಹೊರಗಡೆ ಬರುತ್ತಿದ್ದಂತೆ ಅವರು ʼಗಲ್ಲಿ ಕಿಚನ್ʼ ಎನ್ನುವ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಅವರಿಗೆ ಹೆಸರು ತಂದಿತ್ತು. ಸಿನಿಮಾಗಳತ್ತ ಮುಖ ಮಾಡಿರೋ ಶೈನ್ ಶೆಟ್ಟಿ ಅವರು ʼಗಲ್ಲಿ ಕಿಚನ್ʼನನ್ನು ಬೇರೆಯವರಿಗೆ ಹಸ್ತಾಂತರ ಮಾಡಿದರು. ಈ ಬಗ್ಗೆ ಇತ್ತೀಚೆಗೆ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು.
ನನಗೆ ದುರಹಂಕಾರ ಬಂತು ಅಂದ್ರು
“ಹೀರೋ ಆಗಿ ನನ್ನನ್ನು ನಾನು ನೋಡಬೇಕು ಅನ್ನೋದಕ್ಕಿಂತನೂ ನನಗೆ ಒಬ್ಬ ನಟನಾಗಿ ನನ್ನನ್ನು ನೋಡಬೇಕು, ಪ್ರಶಂಸೆ ಸಿಗಬೇಕು, ಅವಕಾಶಗಳು ಬರಬೇಕು ಅನ್ನೋದು ಜಾಸ್ತಿ ಇತ್ತು. ನಾನು ಮೊಬೈಲ್ ಕ್ಯಾಂಟೀನ್ ಬಂದ್ ಮಾಡಿದೆ ಅಂತ ಜನರು ನೆಗೆಟಿವ್ ಆಗಿ ಮಾತಾಡ್ತಾರೆ, ಶೈನ್ ಶೆಟ್ಟಿಗೆ ದುರಹಂಕಾರ ಬಂತು ಅಂತ. ನಾನು ಕಾಮೆಂಟ್ಸ್‌ಗಳನ್ನು ಓದೋಕೆ ಹೋಗೋದಿಲ್ಲ. ನನ್ನ ನಿರ್ಧಾರಗಳು ಯಾಕೆ ತಗೊಂಡೆ ಅನ್ನುವಂತ ಕ್ಲಾರಿಟಿ ನನಗೆ ಇರಬೇಕಾದ್ರೆ, ಇನ್ನೊಬ್ಬರ ಅಭಿಪ್ರಾಯವು ಮ್ಯಾಟರ್ ಆಗಬಾರದು” ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.
ಸಿನಿಮಾ ಕಡೆಗೆ ಮುಖ ಮಾಡ್ತೀನಿ
“ಗಲ್ಲಿ ಕಿಚನ್ ನನ್ನ ಪ್ರೀತಿಯ ಸಂಸ್ಥೆ. ಅದು ನಿಮ್ಮನ್ನು ಬೆಳೆಸಿದೆ, ನಮ್ಮ ಮನೆಯವರನ್ನು ನೋಡಿಕೊಂಡಿದೆ. ಅದನ್ನು ನಾನು ಬಿಡುವಾಗ ತುಂಬ ಬೇಸರ ಆಗುವುದು. ಆದರೆ ನಾನು ಏನು ಮಾಡ್ತಿದೀನಿ ಅಂತ ನನಗೆ ಸ್ಪಷ್ಟನೆ ಇರಬೇಕು. ನಮ್ಮ ಕುಟುಂಬ ಆರ್ಥಿಕವಾಗಿ ಚೆನ್ನಾಗಿರಬೇಕು ಎಂದಾಗ ಏನು ಮಾಡಬೇಕು, ಏನು ಮಾಡಬಾರದು ಎನ್ನೋದು ಗೊತ್ತಿರಬೇಕು. ಇನ್ನು ನನ್ನ ಗಮನವನ್ನು ಸಿನಿಮಾ ಕಡೆಗೆ ಕೊಡ್ತೀನಿ ಎಂದಾಗ ನಮ್ಮ ಕುಟುಂಬ ಸೆಕ್ಯೂರ್ ಆಗಿರಬೇಕು” ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.
ನನಗೆ ಸ್ಪಷ್ಟನೆ ಇದೆ
“ಯಾವುದನ್ನು ಇನ್ನೊಬ್ಬರಿಗೆ ಹಸ್ತಾಂತರಿಸಬೇಕು ಅನ್ನುವಂತ ನಿರ್ಧಾರ ತಗೊಳೋ ಮುಂಚೆ ನಮಗೆ ಸ್ಪಷ್ಟನೆ ಇರುತ್ತದೆ. ನಾನು ಗಲ್ಲಿ ಕಿಚನ್ ಬಿಡುವ ನಿರ್ಧಾರವನ್ನು ಸರಿಯಾದ ಸಮಯಕ್ಕೆ ತಗೊಂಡಿದೀನಿ. ಆರು ವರ್ಷಗಳ ಕಾಲ ಹೋಟೆಲ್ ನಡೆಸಿದೆ. ಗಲ್ಲಿ ಕಿಚನ್ ಆದ್ಮೇಲೆ ನನಗೆ ಬಿಗ್ ಬಾಸ್ ಅವಕಾಶ ಸಿಗ್ತು, ಸಿನಿಮಾಗಳು ಬಂತು. ಏನೂ ಇಲ್ಲದಿದ್ದಾಗ ನಮ್ಮ ಜೀವನಕ್ಕೆ ಗಲ್ಲಿ ಕಿಚನ್ ನೆರವಾಗಿತ್ತು. ಒಂದು ಹಂತದ ನಂತರ ಇದು ಇನ್ನೊಬ್ಬರ ಕೈ ಹಿಡಿದ್ರೆ ಅವರ ಜೀವನವನ್ನು ನಡೆಕೊಂಡು ಹೋಗುತ್ತೆ ಅನ್ನುವಂತ ಒಂದು ಒಳ್ಳೆ ಉದ್ದೇಶದಿಂದಲೇ ನಾನು ಅದನ್ನು ಬೇರೆಯವರಿಗೆ ಕೊಟ್ಟೆ. ನನಗಿಂತ ಇನ್ನೊಬ್ಬರಿಗೆ ಯಾರಿಗಾದ್ರೂ ಇದನ್ನು, ಅವಶ್ಯಕತೆ ಇದ್ದೋರಿಗೆ ಕೊಟ್ಟರೆ ಅವರಿಗೆ ಸಹಾಯ ಆಗುವುದು. ನಮ್ಮ ಸಿನಿಮಾಕ್ಕೆ ಬೇರೆಯವರು ಹಣ ಹಾಕಿರುತ್ತಾರೆ, ಸಿನಿಮಾಕ್ಕೆ ಸಂಪೂರ್ಣ ಗಮನ ಕೊಡಲೇಬೇಕು. ಇದು ತುಂಬ ಮುಖ್ಯ” ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.
ಅಂದಹಾಗೆ ಶೈನ್ ಶೆಟ್ಟಿ, ಅಂಕಿತಾ ಅಮರ್ ನಟನೆಯ ʼಜಸ್ಟ್ ಮ್ಯಾರೀಡ್ʼ ಸಿನಿಮಾ ಇಂದು ರಿಲೀಸ್ ಆಗಿದೆ. ರೊಮ್ ಕಾಮ್ ಆಧಾರಿತ ಸಿನಿಮಾವಿದು. ಬಿ ಅಜನೀಶ್ ಲೋಕನಾಥ್ ನಿರ್ಮಾಣದ ಚಿತ್ರವಿದು.
