'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಕಾಂಗ್ರೆಸ್ ವಿರೋಧ; ಇದನ್ನ ನಾನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸಾ
'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದನ್ನ ನಾನು ಒಪ್ಪಲ್ಲ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿರುವ 'ದಿ ಕೇರಳ ಸ್ಟೋರಿ' ಸಿನಿಮಾ ದೊಡ್ಡ ವಿವಾದ ಸೃಷ್ಟಿಸಿದೆ. ಈ ಸಿನಿಮಾ ಮೇ 5 ರಂದು ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಕೇರಳದಲ್ಲಿ ಈ ಸಿನಿಮಾ ರಿಲೀಸ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ. ಕೇರಳದ ಆಡಳಿತಾರೂಢ ಸಿಪಿಐ(ಎಂ) ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ವಿವಾದಾತ್ಮಕ 'ದಿ ಕೇರಳ ಸ್ಟೋರಿ' ವಿರುದ್ಧ ವಾಗ್ದಾಳಿ ನಡೆಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜದಲ್ಲಿ ವಿಷವನ್ನು ಉಗುಳುವ ಪರವಾನಗಿಯಲ್ಲ ಎಂದಿವೆ. 'ದಿ ಕೇರಳ ಸ್ಟೋರಿ' ನೈಜ ಘಟನೆ ಆಧಾರಿತ ಸಿನಿಮಾವಿದು ಎನ್ನಲಾಗುತ್ತಿದೆ.
ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಸ್ಲಿಂ ಯುವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಕೆಲಸ ಹುಡುಕಿ ಬೇರೆ ದೇಶಗಳಿಗೆ ಹೋಗುವ ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡಲಾಗುತ್ತಿದೆ ಎಂದು ತೋರಿಸಲಾಗಿದೆ. ಆದರೆ ಈ ಸಿನಿಮಾ ವಿರುದ್ಧ ಕೇರಳದ ಅನೇಕ ಮಂದಿ ಕಿಡಿ ಕಾರುತ್ತಿದ್ದು ಇದು ಸುಳ್ಳು, ಆಧಾರ ರಹಿತವಾಗಿ ಸಿನಿಮಾ ಮಾಡಲಾಗಿದೆ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ, ನಾಯಕಿ 'ಈಗ ನಾನು ಫಾತಿಮಾ ಬಾ, ಅಫ್ಘಾನಿಸ್ತಾನದ ಜೈಲಿನಲ್ಲಿರುವ ಐಸಿಸ್ ಭಯೋತ್ಪಾದಕಿ' ಎಂದು ಹೇಳುತ್ತಾರೆ. '32,000 ಹುಡುಗಿಯರು ಸಹ ತನ್ನಂತೆ ಐಸಿಸ್‌ಗೆ ನೇಮಕಗೊಂಡು ಮತಾಂತರಗೊಂಡಿದ್ದಾರೆ' ಎನ್ನುವ ಡೈಲಾಗ್ ಇದೆ.
The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್!
ಈ ಸಿನಿಮಾದ ವಿರುದ್ಧ ಕಿಡಿ ಕಾರಿರುವ ಕೇರಳ, 'ಈ ಚಿತ್ರ ಸುಳ್ಳಿನ ಕಂತೆ. 32,000 ಮಹಿಳೆಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಈ ಸಿನಿಮಾ ಹೇಳುತ್ತಿದೆ. ಟ್ರೇಲರ್‌ನಲ್ಲಿ ಸಾಕಷ್ಟು ಸುಳಿವುಗಳನ್ನು ನೀಡಿದೆ. ಇದು ರಾಜ್ಯ ಮತ್ತು ಸಮುದಾಯದ ಮಾನಹಾನಿ ಮಾಡುವ ಉದ್ದೇಶ ಹೊಂದಿದ್ದು, ಇದರ ಹಿಂದೆ ಸಂಘಪರಿವಾರದ ಕೈವಾಡವಿದೆ' ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಆರೋಪ ಮಾಡಿದ್ದಾರೆ. 'ಇದು ದ್ವೇಷ ಮತ್ತು ಧಾರ್ಮಿಕ ದ್ವೇಷದ ಬೀಜಗಳನ್ನು ಬಿತ್ತುವ ಕೆಟ್ಟ ಅಜೆಂಡಾದ ಭಾಗವಾಗಿದೆ ಆದರೆ ಅಂತಹ ಶಕ್ತಿಗಳನ್ನು ಸೋಲಿಸಲು ಕೇರಳದ ಜನರು ಒಗ್ಗಟ್ಟಾಗಿ ನಿಲ್ಲುತ್ತಾರೆ' ಎಂದಿದ್ದಾರೆ.
'ದಿ ಕೇರಳ ಸ್ಟೋರಿ' ಸಿನಿಮಾ ವಿರುದ್ಧ ಆಕ್ರೋಶ, ಬ್ಯಾನ್‌ಗೆ ಹೆಚ್ಚಿದ ಒತ್ತಾಯ; ಅಂತದ್ದೇನಿದೆ ಈ ಚಿತ್ರದಲ್ಲಿ?
ಈ ಬಗ್ಗೆ ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸ ಕೂಡ ಪ್ರತಿಕ್ರಿಯೆ ನೀಡಿ, ಸಿನಿಮಾ ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. 'ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಮೇ 5 ರಂದು ತೆರೆಗೆ ಬರಲಿದೆ. ನಾನು ಈ ಹಿಂದೆ ಸಮುದಾಯದ/ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ' ಎಂದು ಹೇಳಿದ್ದಾರೆ.