ಹಣಕ್ಕಾಗಿ ಮಾತ್ರ ಸಿನಿಮಾ ಮಾಡುವುದಿಲ್ಲ ಎಂದ ಅನುಪಮಾ ಪರಮೇಶ್ವರನ್. ಸಿನಿಮಾ ಜರ್ನಿ, ವೈಯಕ್ತಿಕ ಸವಾಲುಗಳು, ಥೆರಪಿ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ ನಟಿ ಹಂಚಿಕೊಂಡ ಇಂಟರೆಸ್ಟಿಂಗ್ ವಿಚಾರಗಳಿವು.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ಯ ಬಹುಬೇಡಿಕೆಯ ನಟಿಯರಲ್ಲಿ ಅನುಪಮಾ ಪರಮೇಶ್ವರನ್ ಕೂಡ ಒಬ್ಬರು. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಅನುಪಮಾ, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ತೆಲುಗು ಸಿನಿಮಾ ‘ಕ್ರೇಜಿ ಕಲ್ಯಾಣಂ’ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ನಟಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಕೈಯಲ್ಲಿ ಹಲವು ಸಿನಿಮಾಗಳನ್ನು ಹೊಂದಿರುವ ಅನುಪಮಾ, ತಮ್ಮ ಸಿನಿ ಜರ್ನಿ, ಸಿನಿಮಾ ಆಯ್ಕೆ, ವೈಯಕ್ತಿಕ ಜೀವನದ ಸವಾಲುಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಹಣಕ್ಕಾಗಿ ಮಾತ್ರ ಸಿನಿಮಾ ಮಾಡುವುದಿಲ್ಲ!
ಸದ್ಯ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಸುಮಾರು 10 ಸಿನಿಮಾಗಳಲ್ಲಿ ಅನುಪಮಾ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ತಮ್ಮ ಇಂದಿನ ಮನಸ್ಥಿತಿಯ ಬಗ್ಗೆ ಮಾತನಾಡಿರುವ ಅವರು, 'ಈಗ ನಾನು ತುಂಬಾ ಫ್ರೀ ಆಗಿದ್ದೇನೆ. ಮನಸ್ಸಿನಲ್ಲಿ ಒಳ್ಳೆಯ ಧನಾತ್ಮಕ ಭಾವನೆ ಇದೆ. ಯಾಕೆ ಹೀಗೆ ಎಂದು ಗೊತ್ತಿಲ್ಲ, ಆದರೆ ಸದ್ಯ ನಾನು ತುಂಬಾ ಸಂತೋಷವಾಗಿದ್ದೇನೆ' ಎಂದು ಹೇಳಿದ್ದಾರೆ.
ತಮ್ಮ ಪಾತ್ರಗಳ ಆಯ್ಕೆಯಲ್ಲಿ ಅನುಪಮಾ ಸಾಕಷ್ಟು ಗಮನ ವಹಿಸುತ್ತಾರೆ. ಒಂದು ಪಾತ್ರವನ್ನು ರೂಪಿಸುವಲ್ಲಿ ತಮ್ಮ ಅಭಿಪ್ರಾಯ ಎಷ್ಟು ಮುಖ್ಯವಾಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಅದು ಕಥೆ, ನಿರ್ದೇಶಕರು ಹಾಗೂ ಚಿತ್ರತಂಡದೊಂದಿಗಿನ ಹೊಂದಾಣಿಕೆಯನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ.
'ನನ್ನ ಅಭಿಪ್ರಾಯಕ್ಕೆ ಬೆಲೆ ಇಲ್ಲ ಎಂದಾದರೆ ನಾನು ಸುಮ್ಮನಿದ್ದು ನನ್ನ ಕೆಲಸ ಮಾಡುತ್ತೇನೆ. ಆದರೆ ನನ್ನ ಅಭಿಪ್ರಾಯವನ್ನು ಗೌರವಿಸಿ ಚರ್ಚೆಗೆ ಅವಕಾಶ ನೀಡಿದರೆ ಖಂಡಿತವಾಗಿಯೂ ನನ್ನ ಸಲಹೆಗಳನ್ನು ಹಂಚಿಕೊಳ್ಳುತ್ತೇನೆ. ‘ಕ್ರೇಜಿ ಕಲ್ಯಾಣಂ’ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ನಿರ್ದೇಶಕ ಬದ್ರಪ್ಪ ಗಜುಲ ಅವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದೆವು. ಬಳಿಕ ದೃಶ್ಯಗಳನ್ನು ಚಿತ್ರೀಕರಿಸಿದೆವು' ಎಂದು ತಿಳಿಸಿದ್ದಾರೆ.
ಚಿತ್ರೀಕರಣದ ವೇಳೆ ಕಥೆ ಅಥವಾ ಸಂಭಾಷಣೆಯಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆಗಳಾದರೂ ಅದನ್ನು ಸಹಜವಾಗಿ ಸ್ವೀಕರಿಸುವುದಾಗಿ ಅನುಪಮಾ ಹೇಳಿದ್ದಾರೆ. 'ನಾನು ಒಂದು ದೃಶ್ಯಕ್ಕಾಗಿ ಮಾನಸಿಕವಾಗಿ ಸಿದ್ಧವಾಗಿರುತ್ತೇನೆ. ಆದರೆ ಸೆಟ್ಗೆ ಬಂದಾಗ ಕೆಲವೊಮ್ಮೆ ಬದಲಾವಣೆಗಳಾಗಿವೆ ಎಂದು ಹೇಳುತ್ತಾರೆ. ಕೆಲವು ಬಾರಿ ಆ ಬದಲಾವಣೆಗಳು ದೃಶ್ಯವನ್ನು ಇನ್ನಷ್ಟು ಚೆನ್ನಾಗಿ ಮಾಡುತ್ತವೆ. ಇವೆಲ್ಲ ಸಿನಿಮಾದಲ್ಲಿ ಸಹಜ. ಹಾಗಾಗಿ ನಾವು ಅದಕ್ಕೆ ಸಿದ್ಧರಾಗಿರಬೇಕು' ಎಂದಿದ್ದಾರೆ.
ಒಂದೇ ರೀತಿಯ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ!
ತಮ್ಮ ಸಿನಿಮಾ ಆಯ್ಕೆಯ ಹಿಂದಿನ ಉದ್ದೇಶದ ಬಗ್ಗೆಯೂ ಅನುಪಮಾ ಮಾತನಾಡಿದ್ದಾರೆ. ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗದೆ ವಿಭಿನ್ನ ಜಾನರ್ಗಳಲ್ಲಿ ಕೆಲಸ ಮಾಡುವುದು ತಮ್ಮ ಆಸೆ ಎಂದಿದ್ದಾರೆ.
'ನಾನು ಯಾವಾಗಲೂ ಬಹುಮುಖ ನಟಿಯಾಗಬೇಕು ಎಂದು ಬಯಸಿದ್ದೇನೆ. ಒಂದೇ ರೀತಿಯ ಜಾನರ್ಗಳಲ್ಲಿ ಮತ್ತೆ ಮತ್ತೆ ನಟಿಸುವುದರಿಂದ ನನಗೆ ಬೋರ್ ಆಗುತ್ತದೆ. ಅದಕ್ಕಾಗಿಯೇ ‘ಟಿಲ್ಲು ಸ್ಕ್ವೇರ್’, ‘ಪರದಾ’ ಮತ್ತು ‘ಕ್ರೇಜಿ ಕಲ್ಯಾಣಂ’ನಂತಹ ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವೆಬ್ ಶೋಗಳು, ರೀಲ್ಸ್, ಕಿರುಚಿತ್ರಗಳು ಹಾಗೂ ಮ್ಯೂಸಿಕ್ ವಿಡಿಯೋಗಳಲ್ಲೂ ಕೆಲಸ ಮಾಡಲು ಇಷ್ಟಪಡುತ್ತೇನೆ. ನನ್ನನ್ನು ಒಂದು ಚೌಕಟ್ಟಿನೊಳಗೆ ಸೀಮಿತಗೊಳಿಸಿಕೊಳ್ಳಲು ಬಯಸುವುದಿಲ್ಲ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇರಬೇಕು' ಎಂದು ಹೇಳಿದ್ದಾರೆ.
ಸಿನಿಮಾ ಮಾಡುವುದರ ಹಿಂದೆ ಹಣವೊಂದೇ ಉದ್ದೇಶವಾಗಿರಬಾರದು ಎಂಬುದು ಅನುಪಮಾ ಅವರ ಅಭಿಪ್ರಾಯ. 'ಹಣಕ್ಕಾಗಿ ಮಾತ್ರ ಕೆಲಸ ಮಾಡಲು ನನಗೆ ಇಷ್ಟವಿಲ್ಲ. ನಾನು ಮಾಡುವ ಕೆಲಸವನ್ನು ಪ್ರೀತಿಸಬೇಕು. ಅದರಲ್ಲಿ ಆಸಕ್ತಿ ಮತ್ತು ಉತ್ಸಾಹ ಇರಬೇಕು. ಅದಕ್ಕಾಗಿಯೇ ವಿಭಿನ್ನ ಸಿನಿಮಾಗಳನ್ನು ಅನ್ವೇಷಿಸಲು ಬಯಸುತ್ತೇನೆ' ಎಂದು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.
ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದ ಅನುಪಮಾ!
ನಟನೆ ಮಾತ್ರವಲ್ಲದೆ ಕೆಲವು ವರ್ಷಗಳ ಹಿಂದೆ ಮಲಯಾಳಂ ಸಿನಿಮಾವೊಂದರಲ್ಲಿ ಸಹಾಯಕ ನಿರ್ದೇಶಕಿಯಾಗಿಯೂ ಅನುಪಮಾ ಕೆಲಸ ಮಾಡಿದ್ದರು. ಆ ಅನುಭವ ತಮ್ಮ ಸಿನಿಮಾ ಜ್ಞಾನವನ್ನು ಹೆಚ್ಚಿಸಿತು ಎಂದು ಅವರು ಹೇಳಿದ್ದಾರೆ.
'ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದಾಗ ಸಿನಿಮಾ ನಿರ್ಮಾಣದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಸಾಧ್ಯವಾಯಿತು. ಆ ನೆನಪು ನನಗೆ ತುಂಬಾ ವಿಶೇಷ. ಆ ಅನುಭವ ನನ್ನ ನಟನೆ ಹಾಗೂ ಕಥೆಗಳ ಆಯ್ಕೆಗೆ ಸಹಾಯ ಮಾಡಿದೆ. ಪರದೆಯ ಮೇಲೆ ನಟರನ್ನು ನೋಡುತ್ತೇವೆ, ಅವರಿಗೆ ಮನ್ನಣೆ ಸಿಗುತ್ತದೆ. ಆದರೆ ತೆರೆಮರೆಯಲ್ಲಿ ಕೆಲಸ ಮಾಡುವ ಅನೇಕ ಜನರಿಗೆ ಅಷ್ಟೊಂದು ಗುರುತು ಸಿಗುವುದಿಲ್ಲ. ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದು ನನಗೆ ವರ್ಣಿಸಲಾಗದಷ್ಟು ಸಂತೋಷ ಮತ್ತು ತೃಪ್ತಿ ನೀಡಿದೆ' ಎಂದು ಅನುಪಮಾ ತಿಳಿಸಿದ್ದಾರೆ.
ಕಷ್ಟದ ಸಮಯದಿಂದ ಹೊರಬರಲು ಥೆರಪಿ ಸಹಾಯ ಮಾಡಿತು!
ಇತ್ತೀಚಿನ ಸಂದರ್ಶನಗಳಲ್ಲಿ ಅನುಪಮಾ ತಮ್ಮ ವೈಯಕ್ತಿಕ ಜೀವನದ ಕಠಿಣ ಹಂತದ ಬಗ್ಗೆಯೂ ಮಾತನಾಡಿದ್ದರು. ಆ ಸಮಯದಿಂದ ಹೇಗೆ ಹೊರಬಂದರು ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ, ಕುಟುಂಬ ಮತ್ತು ಸ್ನೇಹಿತರ ಬೆಂಬಲದ ಜೊತೆಗೆ ಥೆರಪಿ ಕೂಡ ಸಹಾಯ ಮಾಡಿತು ಎಂದು ಹೇಳಿದ್ದಾರೆ.
'ಮೊದಲು ನನ್ನ ಮನಸ್ಸು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಅರಿತುಕೊಂಡೆ. ಅಲ್ಲಿಂದಲೇ ಬದಲಾವಣೆ ಶುರುವಾಯಿತು. ನನ್ನ ಕುಟುಂಬದವರು ಮತ್ತು ಸ್ನೇಹಿತರು ಸಾಕಷ್ಟು ಸಹಾಯ ಮಾಡಿದರು. ನಾನು ಅನುಭವಿಸಿದ ನೋವು, ಭವಿಷ್ಯದಲ್ಲಿ ನನ್ನ ಮೇಲೆ ಪರಿಣಾಮ ಬೀರಬಹುದಾಗಿದ್ದ ಕೆಲವು ಸಂಕೀರ್ಣ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಯಿತು. ಹೀಗಾಗಿ ಥೆರಪಿ ಪಡೆಯಲು ಆರಂಭಿಸಿದೆ' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಥೆರಪಿ ಮೂಲಕ ತಮ್ಮ ಸಮಸ್ಯೆಗಳ ಹಿಂದಿನ ಆಳವಾದ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದೂ ಅನುಪಮಾ ತಿಳಿಸಿದ್ದಾರೆ.
ಕಷ್ಟದ ಸಮಯದಲ್ಲೂ ನಟನೆಗೆ ತೊಂದರೆಯಾಗಲಿಲ್ಲ!
ವೈಯಕ್ತಿಕ ಜೀವನದ ಕಠಿಣ ಹಂತ ತಮ್ಮ ಅಭಿನಯದ ಮೇಲೂ ಪರಿಣಾಮ ಬೀರಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅನುಪಮಾ, ಆ ಸಮಯದಲ್ಲಿ ‘ಕ್ರೇಜಿ ಕಲ್ಯಾಣಂ’ ಮತ್ತು ‘ಭೋಗಿ’ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದುದಾಗಿ ಹೇಳಿದ್ದಾರೆ.
'‘ಕ್ರೇಜಿ ಕಲ್ಯಾಣಂ’ ಸಿನಿಮಾದ ಕೆಲಸವನ್ನು ಹೇಗೋ ಚೆನ್ನಾಗಿ ನಿಭಾಯಿಸಿದೆ. ‘ಭೋಗಿ’ ಗಂಭೀರ ಪಾತ್ರ ಹೊಂದಿರುವ ಸಿನಿಮಾ. ಅದರಲ್ಲಿನ ನನ್ನ ಪಾತ್ರಕ್ಕೂ ‘ಬೈಸನ್’ ಸಿನಿಮಾದ ಪಾತ್ರಕ್ಕೂ ಕೆಲವು ಸಾಮ್ಯತೆಗಳಿವೆ. ನನಗೆ ಮತ್ತೆ ಮೊದಲಿನಿಂದ ಶುರು ಮಾಡುವಂತಹ ಪಾತ್ರ ನೀಡಿದ ಮಾರಿ ಸರ್ ಅವರಿಗೆ ಯಾವಾಗಲೂ ಕೃತಜ್ಞಳಾಗಿರುತ್ತೇನೆ. ‘ಭೋಗಿ’ ಸೆಟ್ಗೆ ಹೋದಾಗ ಸಂಪತ್ ಗಾರು ಅವರಿಗೆ ನನ್ನ ಬಾಡಿ ಲ್ಯಾಂಗ್ವೇಜ್ ಪರಿಚಿತವಾಗಿತ್ತು. ನನಗೂ ಆ ಪಾತ್ರವನ್ನು ನಿರ್ವಹಿಸುವುದು ಸುಲಭವಾಯಿತು' ಎಂದು ಹೇಳಿದ್ದಾರೆ.
ಸದ್ಯ ಹೊಸ ಕಥೆಗಳನ್ನು ಕೇಳುವುದನ್ನೇ ನಿಲ್ಲಿಸಿದ್ದಾರಂತೆ!
ಇನ್ನು ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾಲು ಸಾಲು ಸಿನಿಮಾಗಳನ್ನು ಹೊಂದಿರುವ ಅನುಪಮಾ, ಸದ್ಯ ಹೊಸ ಕಥೆಗಳನ್ನು ಕೇಳುವುದಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸುವುದೇ ತಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
'ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಬೇಕು ಎಂಬ ಕಾರಣಕ್ಕೆ ಹೊಸ ಕಥೆಗಳನ್ನು ಕೇಳುವುದನ್ನು ನಿಲ್ಲಿಸಿದ್ದೇನೆ. ನನ್ನಿಂದಾಗಿ ನಿರ್ದೇಶಕರು ಕಾಯುವಂತಾಗುವುದು ನನಗೆ ಇಷ್ಟವಿಲ್ಲ. ಯಾಕೆಂದರೆ ಸಮಯ ಕಳೆದಂತೆ ಸಾಕಷ್ಟು ಬದಲಾವಣೆಗಳಾಗಬಹುದು. ಸದ್ಯ ಒಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದೇನೆ. ಒಂದು ತಮಿಳು ಸಿನಿಮಾ ಪೂರ್ಣಗೊಳಿಸಿದ್ದೇನೆ. ಇನ್ನೂ ಎರಡು ತಮಿಳು ಸಿನಿಮಾಗಳಲ್ಲಿ ನಟಿಸಬೇಕಿದೆ. ಇದರ ಜೊತೆಗೆ ಮೂರು ಮಲಯಾಳಂ ಸಿನಿಮಾಗಳಿಗೂ ಸಹಿ ಹಾಕಿದ್ದೇನೆ' ಎಂದು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದರ ನಡುವೆ ಹಿಂದಿ ಚಿತ್ರರಂಗಕ್ಕೂ ಪದಾರ್ಪಣೆ ಮಾಡಲು ಅನುಪಮಾ ಸಿದ್ಧರಾಗಿದ್ದಾರೆ. 'ನನ್ನ ಹಿಂದಿ ಸಿನಿಮಾ ಈಗಿನ ಕೆಲಸದ ವೇಳಾಪಟ್ಟಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ನೋಡುತ್ತೇನೆ' ಎಂದು ಹೇಳುವ ಮೂಲಕ ಮಾತು ಮುಗಿಸಿದ್ದಾರೆ. ಒಂದೇ ಭಾಷೆ ಅಥವಾ ಜಾನರ್ಗೆ ಸೀಮಿತವಾಗದೆ ವಿಭಿನ್ನ ಪಾತ್ರಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಅನುಪಮಾ ಪರಮೇಶ್ವರನ್ ಮುಂದಾಗಿದ್ದಾರೆ. ಹಣಕ್ಕಿಂತಲೂ ಕೆಲಸದ ಮೇಲಿನ ಪ್ರೀತಿ ಮತ್ತು ಆಸಕ್ತಿಗೆ ಆದ್ಯತೆ ನೀಡುವ ಅವರ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.






