‘ಪ್ರೇಮದ ಊರಲಿ’ ರುಕ್ಮಿಣಿ ಪಾತ್ರದ ಮೂಲಕ ಗಮನ ಸೆಳೆದ ತಪಸ್ವಿನಿ ಪೂಣಚ್ಚ, ರಿಷಬ್ ಶೆಟ್ಟಿ ತಮ್ಮನ್ನು ಆಯ್ಕೆ ಮಾಡಿದ್ದು ಹೇಗೆ, ನಟಿಯಾಗುವ ಕನಸೇ ಇಲ್ಲದಿದ್ದರೂ ಚಿತ್ರರಂಗಕ್ಕೆ ಬಂದ ಕಥೆ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

- ಆರ್‌.ಕೇಶವಮೂರ್ತಿ

* ಅದ್ದೂರಿ ಪ್ರತಿಕ್ರಿಯೆ ಯಾವ ರೀತಿಯ ಸಂತೋಷ, ಆತ್ಮವಿಶ್ವಾಸವನ್ನು ಮೂಡಿಸಿದೆ?

ಇದು ಜನರ ಪ್ರೀತಿಯಿಂದ ಸಿಕ್ಕ ಜಯ. ಎಂಥ ಸಂದರ್ಭದಲ್ಲೂ ಒಳ್ಳೆಯ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಮೂಡಿಸಿದೆ. ಈ ಯಶಸ್ಸಿನ ಶ್ರೇಯ ಇಡೀ ತಂಡಕ್ಕೆ ಸಲ್ಲಬೇಕು.

* ಈ ಪಾತ್ರವನ್ನು ಒಪ್ಪಿಕೊಳ್ಳಲು ಪ್ರೇರೇಪಿಸಿದ ಅಂಶ ಯಾವುದು? ಸಿದ್ಧತೆಗಳೇನು?

ಮೊದಲ ಕಾರಣ ನಿರ್ದೇಶಕ ಮನೋಜ್ ಕುಮಾರ್. ನಂತರ ಅವರು ಹೇಳಿದ ಕತೆ ಮತ್ತು ಪಾತ್ರದ ತೂಕ. ಹೆಚ್ಚು ಸಂಭಾಷಣೆ ಇಲ್ಲದೆ ಕಣ್ಣೋಟದಲ್ಲೇ ಭಾವನೆಗಳನ್ನು ಕಟ್ಟಿಕೊಡುವ ಸವಾಲಿತ್ತು. ಚಿತ್ರೀಕರಣಕ್ಕೂ ಮುನ್ನ ನಡೆದ ವರ್ಕ್‌ಶಾಪ್ ಈ ಪಾತ್ರದ ಪೋಷಣೆಗೆ ಸಾಕಷ್ಟು ನೆರವಾಯಿತು.

* ಪ್ರೇಕ್ಷಕರು ರುಕ್ಮಿಣಿ ಪಾತ್ರವನ್ನು ಇಷ್ಟಪಡುತ್ತಿರುವುದಕ್ಕೆ ಕಾರಣ ಏನಿರಬಹುದು?

ನನ್ನ ಪಾತ್ರಕ್ಕೆ ಇದ್ದ ಸರಳತೆ ಮತ್ತು ಸಹಜತೆ. ದೊಡ್ಡ ಫ್ಯಾಮಿಲಿ, ಶ್ರೀಮಂತರು, ವಿದೇಶದಿಂದ ಬಂದವಳು, ಓದಿದ್ದಾಳೆ... ಇಷ್ಟೆಲ್ಲಾ ಇದ್ದಾಗಲೂ ಯಾವುದೇ ಆಡಂಬರ, ಇಗೋ ಇಲ್ಲದೆ ಡೌನ್ ಟು ಅರ್ತ್‌ ಎನ್ನುವಂತೆ ಮೂಡಿ ಬಂದಿರುವುದಕ್ಕೇ ಪ್ರೇಕ್ಷಕರಿಗೆ ನನ್ನ ಪಾತ್ರ ಇಷ್ಟವಾಗಿದೆ.

* ಈ ಚಿತ್ರದಲ್ಲಿ ನಟಿಸುವಾಗ ನಿಮಗೆ ವೈಯಕ್ತಿಕವಾಗಿ ಹೆಚ್ಚು ಆಪ್ತವೆನಿಸಿದ ಸನ್ನಿವೇಶ ಯಾವುದು, ಯಾಕೆ?

ರಂಗಾಯಣ ರಘು ಅವರ ಜೊತೆಗೆ ನಟಿಸಿದ ದೃಶ್ಯಗಳು. ಇವು ಆಪ್ತವಾಗಿರುವುದು ಮಾತ್ರವಲ್ಲ, ಈಗಲೂ ನಾನು ಮರೆಯಲಾಗದ ಸನ್ನಿವೇಶಗಳು. ಅದರಲ್ಲೂ ಮಳೆಯಲ್ಲಿ ರಾತ್ರಿ ಹೊತ್ತಿನಲ್ಲಿ ಶೂಟ್‌ ಮಾಡಿದ ಕ್ಲೈಮ್ಯಾಕ್ಸ್‌, ರಂಗಾಯಣ ರಘು ಅವರ ಕಾಲು ಮುಟ್ಟಿ ನಮಸ್ಕರಿಸುವ ಸನ್ನಿವೇಶಗಳನ್ನು ನೆನಪಿಸಿಕೊಂಡರೆ ಮಾತೇ ಹೊರಡಲ್ಲ. ಯಾಕೆಂದರೆ ಅವರಿಂದ ನಾನು ತುಂಬಾ ಕಲಿತಿದ್ದೇನೆ.

* ನಿಮ್ಮ ಪಾತ್ರಕ್ಕೆ ತನ್ನದೇ ಆದ ಭಾವನಾತ್ಮಕ ನೆಲೆ ಹಾಗೂ ಸ್ವತಂತ್ರ ವ್ಯಕ್ತಿತ್ವವಿದೆ ಎಂದು ನಿಮಗೆ ಅನಿಸಿದೆಯೇ?

ಖಂಡಿತ ಇದೆ. ಹಾಗೆ ಇದ್ದಿದ್ದಕ್ಕೆನೇ ರುಕ್ಮಿಣಿ ಎನ್ನುವ ಪಾತ್ರ ಪ್ರತಿಯೊಬ್ಬರಿಗೂ ಕನೆಕ್ಟ್‌ ಆಗಿರುವುದು. ನಾನು ಕತೆ ಕೇಳುವಾಗಲೇ ಇಲ್ಲಿ ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ ಇದೆ. ಆ ತೂಕದ ತಕ್ಕಡಿಯಲ್ಲಿ ಪಾತ್ರಗಳು ಸಾಗುತ್ತವೆ ಎನ್ನುವ ಚಿತ್ರಣ ಇತ್ತು. ಇದು ತಾಯಿ ಇಲ್ಲದೆ ಬೆಳೆದ ಮಗನ ತಂದೆಯ ಕತೆ. ರಂಗಾಯಣ ರಘು ಪಾತ್ರದ ಲೈಫಿನ ಕತೆ. ಆ ಲೈಫಿನ ಸುತ್ತಾ ನನ್ನ ಪಾತ್ರವೂ ಸೇರಿದಂತೆ ಎಲ್ಲರೂ ಬರುತ್ತಾರೆ.

* ನಾಯಕಿಯಾಗಿ ಗುರುತಿಸಿಕೊಳ್ಳುವ ನಿಮ್ಮ ಪ್ರಯಾಣದಲ್ಲಿ ‘ಪ್ರೇಮದ ಊರಲಿ’ ಚಿತ್ರ ಯಾವ ರೀತಿಯ ತಿರುವು ನೀಡಲಿದೆ?

ಗೆಲುವನ್ನು ಅತಿಯಾದ ಸಂಭ್ರಮವಿಲ್ಲದೆ ಸಹಜವಾಗಿಯೇ ಸ್ವೀಕರಿಸಿದ್ದೇನೆ. ಮುಂದೆ ಏನಾಗಲಿದೆ ಎಂದು ಲೆಕ್ಕಾಚಾರ ಹಾಕುತ್ತಿಲ್ಲ. ಉತ್ತಮ ಪಾತ್ರಗಳು ಬರಬಹುದೆಂಬ ನಿರೀಕ್ಷೆಯಷ್ಟೇ ಇದೆ.

* ಈಗ ಪ್ರೇಕ್ಷಕರು ಪ್ರೇಮಕತೆಗಳಲ್ಲಿ ಯಾವ ರೀತಿಯ ಭಾವನೆಗಳನ್ನು ಹಾಗೂ ಹೊಸತನವನ್ನು ನಿರೀಕ್ಷಿಸುತ್ತಿದ್ದಾರೆ?

ಟ್ರೂ ಲವ್‌ ಎಲ್ಲರಿಗೂ ಬೇಕಿದೆ. ಅದು ಸಿನಿಮಾಗಳಲ್ಲೂ ಕೂಡ. ಈಗ ಜೆನ್‌ ಜೀ ಜಮಾನ ಅಂತೀವಿ. ಅವರು ಕೂಡ ಹುಡುಕುತ್ತಿರುವುದು ಅಥವಾ ನಿರೀಕ್ಷೆ ಮಾಡುತ್ತಿರುವುದು ನೈಜ ಮತ್ತು ನಿಜವಾದ ಪ್ರೀತಿ, ಫ್ಯಾಮಿಲಿ ಬಾಂಡಿಂಗ್‌, ಹೆಣ್ಣ ಮಕ್ಕಳನ್ನು ಗೌರವಿಸುವಂತಹ ವಿಷಯಗಳಿಗೆ ತುಂಬಾ ಮಹತ್ವ ಕೊಡುತ್ತಿದ್ದಾರೆ. ಅಂಥ ಅಂಶಗಳು ಚಿತ್ರಗಳಿದ್ದರೆ ಎಲ್ಲರಿಗೂ ಮೆಚ್ಚುಗೆ ಆಗುತ್ತದೆ.

* ನಿಮಗೆ ಎದುರಾದ ಅಂಥ ಸವಾಲುಗಳು ಯಾವುವು, ಅದರಿಂದ ಕಲಿತ ಪಾಠಗಳೇನು?

ಸವಾಲುಗಳು ನನಗೆ ಖುಷಿ ಕೊಡುತ್ತದೆ. ಅವುಗಳನ್ನು ದಾಟಿದಾಗಲೇ ಸಕ್ಸಸ್‌ ಸಿಗೋದು ಅನ್ನೋ ಸತ್ಯ ಗೊತ್ತಿದೆ. ಪಾಠಗಳು ಕಲಿತಿದ್ದು ಅವಮಾನಗಳಿಂದ. ಯಶಸ್ಸು ಇಲ್ಲದಿದ್ದಾಗ ನಮ್ಮ ನೋಡುವ ರೀತಿ, ಮಾತನಾಡಿಸುವ ಸಂದರ್ಭಗಳು, ನಡೆಸಿಕೊಳ್ಳುವ ರೀತಿಯೇ ಬೇರೆ. ಅದನ್ನು ಹೇಳಕ್ಕಾಗಲ್ಲ. ಆದರೆ, ಅಂಥವನ್ನು ನೋಡಿ ಜೋರಾಗಿ ಮಾತನಾಡುವುದಕ್ಕಿಂತ ಸೈಲೆಂಟಾಗಿದ್ದರೆ ಒಂದು ದಿನ ನಮ್ಮ ಕೆಲಸವೇ ಉತ್ತರಿಸುತ್ತದೆ. ನಾವು ಶೋ ಮಾಡಬೇಕಿರೋದು ನಮ್ಮ ಯಶಸ್ಸನ್ನೇ.

* ಮುಂದೆ ನಿಮ್ಮಿಂದ ಪ್ರೇಕ್ಷಕರು ಯಾವ ರೀತಿಯ ಪಾತ್ರಗಳನ್ನು ನಿರೀಕ್ಷಿಸಬಹುದು? ನಿಮ್ಮ ಕನಸಿನ ಪಾತ್ರ ಯಾವುದು?

ನನಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವಾಸೆ. ಎಕ್ಸ್‌ಪ್ಲೋರ್‌ ಮಾಡುವ ಮನಸ್ಥಿತಿಯವಳು ನಾನು. ಅಂಥ ಎಕ್ಸ್‌ಪ್ಲೋರ್‌ ಆಗುವಂತಹ ಪಾತ್ರಗಳಿಗೆ ಕಾಯುತ್ತಿದ್ದೇನೆ. ಮೈಥಾಲಾಜಿಕಲ್‌ ಹಾಗೂ ಹಿಸ್ಟಾರಿಕಲ್‌ ಕತೆಗಳಲ್ಲಿ ಪಾತ್ರ ಮಾಡುವ ಕನಸು ಇದೆ.

* ನೀವು ‘ಹರಿಕಥೆ ಅಲ್ಲ ಗಿರಿಕಥ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ಅಂತ ಗೊತ್ತು. ಈ ಚಿತ್ರಕ್ಕೆ ನೀವು ಕನೆಕ್ಟ್‌ ಆಗಿದ್ದು ಹೇಗೆ?

ಇದಕ್ಕೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಥಾಂಕ್ಸ್‌ ಹೇಳಬೇಕು. ಯಾಕೆಂದರೆ 2500 ಮಂದಿ ಹುಡುಗಿಯರಲ್ಲಿ ನನ್ನ ಒಂದು ಕ್ಯಾಂಡಿಡ್‌ ಫೋಟೋ ನೋಡಿ ಚಿತ್ರಕ್ಕೆ ಸೆಲೆಕ್ಟ್‌ ಮಾಡಿಕೊಂಡರು. ಮೂರು ತಿಂಗಳು ಅಭಿನಯ ತರಬೇತಿ ಕೊಟ್ಟರು. ಈ ಎಲ್ಲಾ ಕ್ರೆಡಿಟ್ಟು ರಿಷಬ್‌ ಶೆಟ್ಟಿ ಅವರಿಗೆ ಸೇರಬೇಕು.

* ನೀವು ಚಿತ್ರರಂಗಕ್ಕೆ ಬರಬೇಕೆಂದು ತಯಾರಿ ಮಾಡಿಕೊಳ್ಳುತ್ತಿದ್ರಾ?

ಖಂಡಿತ ಇಲ್ಲ. ಯಾಕೆಂದರೆ ಆಕಸ್ಮಿಕವಾಗಿ ನಾನು ಆಡಿಷನ್‌ಗೆ ಫೋಟೋ ಕಳುಹಿಸಿದೆ. ಅದನ್ನು ನೋಡಿ ರಿಷಬ್‌ ಆಯ್ಕೆ ಮಾಡಿದರು ಅಂತ ಗೊತ್ತಾಗಿ ನನಗೇ ಶಾಕ್‌ ಆಯಿತು. ಮಾಡೆಲಿಂಗ್‌ ಇಲ್ಲ, ಸೀರಿಯಲ್‌ ಇಲ್ಲ. ರಂಗಭೂಮಿಯ ನಂಟು ಇಲ್ಲ. ಕಾರ್ಟೂನ್‌ ನೆಟ್ವರ್ಕ್‌ ಚಾನಲ್‌ ನೋಡಿಕೊಂಡಿದ್ದವಳು ನಾನು... ಹ್ಹಹ್ಹಹ್ಹ. ಹೀಗೆ ನಟಿಯಾಗಿ ಬಂದಿದ್ದೇ ಆಕಸ್ಮಿಕ.

* ನಿಮ್ಮ ಮುಂದಿನ ಸಿನಿಮಾ ಯಾವಾಗ?

ಡಿ.4ಕ್ಕೆ ಮಿಸ್ಟರ್ ಜಾಕ್‌ ಎನ್ನುವ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ನಾನು ಟೀಚರ್‌ ಪಾತ್ರ ಮಾಡಿದ್ದೇನೆ. ಬೇರೆ ಹೊಸ ಚಿತ್ರಗಳು ಒಪ್ಪಿಕೊಂಡಿಲ್ಲ.