- ಶಶಿಕರ ಪಾತೂರು

ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಎನ್ನುವ ಪದಕ್ಕೆ ಭಾವನಾತ್ಮಕವಾಗಿ ಎಲ್ಲರೂ ಕನೆಕ್ಟ್ ಆಗುವುದಿದ್ದರೆ ಅದು ರಾಜ್ ಕುಮಾರ್ ಅವರಿಗೆ ಮಾತ್ರ. ಕನ್ನಡಿಗರ ಪರವಾಗಿ ಅವರು ಹೇಗೆ ನಿಂತುಕೊಂಡಿದ್ದರೋ, ಅದೇ ರೀತಿ ಇಂದು ಕನ್ನಡಿಗರು ಕೂಡ ಅವರ ಪರ ಮಾತುಗಳನ್ನಾಡುತ್ತಲೇ ಇರುತ್ತಾರೆ. ಭಾಷೆ, ಮಣ್ಣಿನ ಹೋರಾಟ ಮತ್ತು ತಮ್ಮ ಚಿತ್ರಗಳ ಸಂದೇಶದ ಮೂಲಕ ಸಿನಿಮಾ ನಟ ಎನ್ನುವುದನ್ನೂ ಮೀರಿ ನಿಂತವರು ಡಾ.ರಾಜ್. ಅದೇ ಕಾರಣಕ್ಕೆ ಅವರಿಗೆ ಸಂದಾಯವಾದ ಮತ್ತು ಮರಣೋತ್ತರವಾಗಿ ಸಂದಾಯವಾಗುವ ಪ್ರತಿಯೊಂದು ಗೌರವ ಕೂಡ ನಾಡಿನ ಅಭಿಮಾನವಾಗಿ ಕಂಡಿದ್ದೇವೆ. ಈ ನಿಟ್ಟಿನಲ್ಲಿ ಇಂದಿನ ತಾರೆಯರು ಸಹ ಸ್ವಲ್ಪವೂ ಹಿಂದೆ ಬಿದ್ದಿಲ್ಲ. ಪ್ರಸ್ತುತ ಕನ್ನಡದ ನಂಬರ್ ಒನ್ ತಾರೆಯಾಗಿ ಗುರುತಿಸಿಕೊಳ್ಳುತ್ತಿರುವ ಹರಿಪ್ರಿಯಾ ಅವರು ಕೂಡ ಡಾ.ರಾಜ್ ಕುಮಾರ್ ಅವರಿಗೆ ಸಂದಾಯವಾಗಬೇಕಾದ ಸ್ಥಾನವೊಂದರ ಬಗ್ಗೆ ಮಾತನಾಡಿದ್ದಾರೆ. ಅದು ಲಂಡನ್ ನ ಮೇಡನ್ ಟುಸ್ಸಾಡ್ ನಲ್ಲಿ ಅಣ್ಣಾವ್ರ ಪ್ರತಿಮೆ ಯಾಕೆ ಇಲ್ಲ ಎನ್ನುವ ಪ್ರಶ್ನೆಯಾಗಿತ್ತು. ಈ ಬಗ್ಗೆ ಅವರು ಮಾತನಾಡಿದ್ದು ಚಂದನವನ ಕ್ರಿಟಿಕ್ಸ್ ಅಕಾಡೆಮಿಯ ಟ್ರೋಫಿ ಲಾಂಚ್ ಮಾಡಿದ ಸಂದರ್ಭದಲ್ಲಿ. ಆ ಬಗ್ಗೆ ಸುವರ್ಣ ಆನ್ಲೈನ್ ನ್ಯೂಸ್ ಕಡೆಯಿಂದ  ಅವರಲ್ಲಿ ಮಾತನಾಡಿದಾಗ ಹರಿಪ್ರಿಯಾ ನೀಡಿರುವ ಸವಿವರವಾದ ಪ್ರತಿಕ್ರಿಯೆ ಇಲ್ಲಿದೆ.

ಚಿಲ್ಕ ಮೂಲಕ ನಟನೆಯ ಚಿಲಕ ತೆಗೆದ ಪೂಜಾ ಹಗ್ಡೆ

ಮೇಡನ್ ಟುಸ್ಸಾಡ್ ನಲ್ಲಿ ಡಾ.ರಾಜ್ ಪ್ರತಿಮೆಯ ಕೊರತೆ ಕಂಡಿದ್ದು ಯಾವಾಗ?
ಲಂಡನ್ ನಲ್ಲಿರುವ ಮೇಡನ್ ಟುಸ್ಸಾಡ್ ಮ್ಯೂಸಿಯಂ ಎಲ್ಲರ ಆಕರ್ಷಣೆಯ ಕೇಂದ್ರ. ಕಲಾವಿದರಿಗಂತೂ ಅಲ್ಲಿ ತಮ್ಮ ಮೇಣದ ಪ್ರತಿಮೆ ಇದ್ದರೆ ಅದೊಂದು ಸೌಭಾಗ್ಯ. ಆದರೆ ಅಲ್ಲಿ ಸಿನಿಮಾ ಮಾತ್ರವಲ್ಲ, ಎಲ್ಲ ಕ್ಷೇತ್ರದ ಮಹನೀಯರ ಪ್ರತಿಮೆಗಳನ್ನು ಕೂಡ ಸ್ಥಾಪಿಸಲಾಗಿದೆ. ಅಲ್ಲಿಗೆ ದೇಶ, ವಿದೇಶಗಳಿಂದ ಜನರು ಬರುವ ಕಾರಣ, ಅಲ್ಲಿನ ಪ್ರತಿಮೆಗಳೇ ಕತೆಗಳನ್ನು ಸಾರುತ್ತವೆ. ವಿಶೇಷ ಏನೆಂದರೆ ನಮ್ಮ ದೇಶದಿಂದ ಉತ್ತರದ ಮಂದಿ ಪ್ರತಿನಿಧಿಸಿದ ಹಾಗೆ ಬೇರೆ ಯಾರೂ ಅಲ್ಲಿ ಗುರುತಿಸಿಕೊಂಡಿಲ್ಲ. ದೇಶಕಂಡ ಅಪರೂಪದ ನಟ ಡಾ.ರಾಜ್ ಕುಮಾರ್ ಅವರಂಥ ಮಹಾನ್ ಪ್ರತಿಭೆ ನಮ್ಮ ರಾಜ್ಯದವರಾಗಿರುವಾಗ ಕನ್ನಡಕ್ಕೆ ಅಲ್ಲಿ ಪ್ರಾತಿನಿಧ್ಯ ಏಕಿಲ್ಲ? ಈ ವಿಚಾರವನ್ನು ಸಂಬಂಧ ಪಟ್ಟವರ ತನಕ ಒಯ್ಯಲೇಬೇಕು. ಆ ನಿಟ್ಟಿನಲ್ಲಿ  ಪ್ರಯತ್ನಿಸಲು ನಾನು ಸಿದ್ಧಳಿದ್ದೇನೆ. ಯಾಕೆಂದರೆ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಷ್ ಸೇರಿದಂತೆ ಮಹಾನ್ ನಟ, ನಟಿ, ನಿರ್ದೇಶಕರನ್ನು ದೇಶಕ್ಕೆ ಕೊಟ್ಟ ರಾಜ್ಯ ನಮ್ಮದು. ಅವರು `ನಮ್ಮ ದೇಶದ ಚಿತ್ರಗಳೆಂದರೆ ಬಾಲಿವುಡ್ ಸಿನಿಮಾ ಎಂದಷ್ಟೇ ಅಂದುಕೊಂಡಿದ್ದಾರೆ. ಹಾಗಾಗಿ ಅಲ್ಲಿ ಬಾಲಿವುಡ್ ಕಲಾವಿದರಷ್ಟೇ ತುಂಬಿದ್ದಾರೆ' ಎಂದುಕೊಂಡರೆ ತಪ್ಪು! ನನ್ನ ಜತೆಗೆ ವೃತ್ತಿ ಬದುಕು ಆರಂಭಿಸಿದ ತೆಲುಗು ನಟಿಯರ ಪ್ರತಿಮೆಗಳು ಕೂಡ ಅಲ್ಲಿವೆ. ಹಾಗಾದರೆ ಕನ್ನಡದ ಕಲಾವಿದರಿಗೇಕೆ ಅಲ್ಲಿ ಸ್ಥಾನ ಇಲ್ಲ? 

ನಟನೆಯ ವಿಚಾರದಲ್ಲಿ ಕೂಡ ಕನ್ನಡಕ್ಕೆ ಪ್ರಾಧಾನ್ಯತೆ ನಿಮ್ಮ ಕನ್ನಡಾಭಿಮಾನವೇ ಕಾರಣವೇ?
ಖಂಡಿತವಾಗಿಯೂ ಹೌದು. ನನ್ನ ಮಾತೃಭಾಷೆ ತೆಲುಗು ಆಗಿರಬಹುದು. ಆದರೆ ನಾನು ಶಾಲೆಯಲ್ಲಿ ಬರೆದು ಕಲಿತುಕೊಂಡಿದ್ದು ಕನ್ನಡವನ್ನು. ಇಂದಿಗೂ ನನಗೆ ತೆಲುಗು ಬರೆಯಲು, ಓದಲು ಬಾರದು. ತೆಲುಗು ಸಿನಿಮಾಗಳಲ್ಲಿ ಉತ್ತಮ ಅವಕಾಶ ಸಿಕ್ಕಾಗ ನಟಿಸಿದ್ದೇನೆ. ಸ್ವತಃ ಡಬ್ ಮಾಡಿದ್ದೇನೆ. ಆದರೆ ಉತ್ತಮ ಪಾತ್ರ ದೊರಕಿದಾಗ ಮಾತ್ರ ಒಪ್ಪಿದ್ದೇನೆ. ಅಲ್ಲಿನ ದೊಡ್ಡ ತಾರೆಯ ಜತೆಗೆ ನಟಿಸಬೇಕು ಎಂದೋ, ಅಲ್ಲಿ ಸಂಭಾವನೆ ಹೆಚ್ಚು ಎಂದೋ ನಾನು ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಒಳ್ಳೆಯ ಕತೆಯಲ್ಲಿ ಒಳ್ಳೆಯ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ನನ್ನ ಆದ್ಯತೆ ಎಂದಿಗೂ ಕನ್ನಡದಲ್ಲೇ ಇರುತ್ತದೆ. ಕನ್ನಡದಲ್ಲಿ `ಉಗ್ರಂ' ಚಿತ್ರ ಗೆದ್ದ ಸಂದರ್ಭದಲ್ಲೇ ತೆಲುಗಲ್ಲಿ ನನ್ನ ಸಾಲು ಸಾಲು  ಬರುತ್ತಿದ್ದವು. ಆದರೆ ಯಾವಾಗ ಕನ್ನಡದಲ್ಲೇ ಉತ್ತಮ ಅವಕಾಶಗಳು ದೊರಕತೊಡಗಿದವೋ, ತಕ್ಷಣ ನನ್ನ ಗಮನ ಕನ್ನಡಕ್ಕೆ ಸೀಮಿತಗೊಳಿಸಿದೆ. ನನಗೆ ಚೆನ್ನಾಗಿ ನಟಿಸಿ ಪ್ರೇಕ್ಷಕರಿಂದ ಉತ್ತಮ ನಟಿಯಾಗಿ ಗುರುತಿಸಿಕೊಳ್ಳುವುದಷ್ಟೇ ಗುರಿ. ಅದರಾಚೆ ಪ್ರಶಸ್ತಿ, ಸನ್ಮಾನಗಳ ನಿರೀಕ್ಷೆಗಳೇನೂ ಇಲ್ಲ!

ರಾಬರ್ಟ್ ಚಿತ್ರದ ಬಗ್ಗೆ ನಿರ್ದೇಶಕರು ಹೇಳಿದ್ದಿಷ್ಟು

ಪ್ರಶಸ್ತಿಗಳ ಮೇಲೆ ನಿರೀಕ್ಷೆ ಕಳೆದುಕೊಂಡಿದ್ದೇನೆ ಎನ್ನಲು ಕಾರಣವೇನು?
ಅದಕ್ಕೆ ಕಾರಣ ಚಿತ್ರರಂಗದಲ್ಲಿ ನನ್ನ ಆರಂಭ ಕಾಲದಲ್ಲಿ ನನಗಾದ ಕಹಿ ಅನುಭವಗಳು! ಅಂದರೆ ಬಹಳಷ್ಟು ನಿರೀಕ್ಷಿಸಿದ ಚಿತ್ರಗಳಿಗೆ ನನಗೆ ಪ್ರಶಸ್ತಿಯೇ ಬರುತ್ತಿರಲಿಲ್ಲ. ಹಾಗಂತ ಪ್ರಶಸ್ತಿ ಪಡೆದ ಚಿತ್ರಗಳು ಮತ್ತು ಅದರ ಕಲಾವಿದರು ನಮ್ಮ ಚಿತ್ರ ಮತ್ತು ಕಲಾವಿದರಿಗಿಂತ ಶ್ರೇಷ್ಠರು ಎಂದು ಹೇಳುವಂತೆ ಇರುತ್ತಿರಲಿಲ್ಲ! ಜತೆಗೆ ಚಿತ್ರೋದ್ಯಮದ ಹಿರಿಯರೇ ``ನಿನಗೆ ಈ ಬಾರಿ ಅವಾರ್ಡ್ ಬರಬಹುದು'' ಎಂದು ಹೇಳಿದಂಥ ಸಂದರ್ಭಗಳು ಇತ್ತು. ಆದರೆ ಆಗೆಲ್ಲ ನನಗೆ ಪ್ರಶಸ್ತಿಗಳು ಬರಲೇ ಇಲ್ಲ. ಅದು ರಾಜ್ಯ ಮಟ್ಟದ ಖಾಸಗಿ ಪ್ರಶಸ್ತಿಗಳಲ್ಲಾಗಲೀ, ಅಥವಾ ಸೌತ್ ಇಂಡಿಯನ್ ಮಟ್ಟದ ಪ್ರಶಸ್ತಿಗಳ ವಿಚಾರದಲ್ಲಾಗಲೀ.. ತಾರತಮ್ಯ ನಡೆದಿರುವುದನ್ನು ಕಂಡಿದ್ದೇನೆ. ಅದು ಯಾವ ಸಿನಿಮಾ ಎಂದು ಹೇಳಲು ಇಷ್ಟವಿಲ್ಲ. ಆದರೆ ಪ್ರಶಸ್ತಿಗಳ ಹೆಸರಲ್ಲಿ ರಾಜಕೀಯ ನಡೆಯುತ್ತದೆ ಎನ್ನುವ ಅರಿವಾದಾಗ ನಾನಾಗಿ ನಿರೀಕ್ಷಿಸುವುದನ್ನೇ ಬಿಟ್ಟುಬಿಟ್ಟೆ. ಆದರೆ ಪತ್ರಿಕೆಗಳಲ್ಲಿ ಬರುವ ವಿಮರ್ಶೆಗಳನ್ನು ಓದುತ್ತೇನೆ. ನನ್ನ ಬಗ್ಗೆ ನೆಗೆಟಿವ್ ಬರೆದಿದ್ದರೂ, ಪಾಸಿಟಿವ್ ಬರೆದಿದ್ದರೂ ಅವುಗಳನ್ನು ಇಂದಿಗೂ ಕತ್ತರಿಸಿ ಇರಿಸಿಕೊಳ್ಳುತ್ತೇನೆ ಎಂದರೆ ನೀವು ನಂಬಲೇಬೇಕು!

 

 

ಈ ವರ್ಷದ  ನಿಮ್ಮ ಸಿನಿಮಾ ಯೋಜನೆಗಳೇನು?
ಆಗಲೇ ಹೇಳಿದಂತೆ ಕತೆಗಳನ್ನು ಕೇಳಿಯೇ ಸಿನಿಮಾ ಒಪ್ಪಿಕೊಳ್ಳುತ್ತೇನೆ. ಸದ್ಯಕ್ಕೆ ಕತೆಗಳನ್ನು ಕೇಳುತ್ತಿದ್ದೇನೆ. ವಾರದ ಕೊನೆಗೆ ಗುಜರಾತ್ ಗೆ ಹೊರಟಿದ್ದೇನೆ. ಅಲ್ಲಿ ರಣ್ ಆಫ್ ಕಚ್ ಅಂತ ಕಚ್ ಉತ್ಸವ ನಡೆಯಲಿದೆ. ಅದು ಪ್ರತಿ ವರ್ಷವೂ ಮೂರು ತಿಂಗಳ ಕಾಲ ನಡೆಯುತ್ತದೆ. ಹಲವಾರು ವರ್ಷಗಳಿಂದ ಹೋಗಬೇಕು ಎಂದುಕೊಂಡಿದ್ದೆ. ಆದರೆ ಶೂಟಿಂಗ್ ಇರುತ್ತಿತ್ತು. ಈ ಬಾರಿ ಸಮಯ ಹೊಂದಾಣಿಕೆ ಮಾಡಿಕೊಂಡಿದ್ದೇನೆ. ಅಲ್ಲಿನ ಸಂದರ್ಶನಕ್ಕೆ  ಫುಲ್ ಮೂನ್ ಡೇ ದಿನ ತುಂಬ ಡಿಮ್ಯಾಂಡ್ ಇರುತ್ತದೆ. ಇದೇ ಶುಕ್ರವಾರ ನಾನು ಹೊರಡಲಿದ್ದು ಒಂದು ವಾರದ ಕಾಲ ಅಲ್ಲೇ ಇರುತ್ತೇನೆ. ಅಹಮ್ಮದಾ ಬಾದ್, ಭುಜ್ ಮೊದಲಾದೆಡೆಗಳಲ್ಲಿ ಕುಟುಂಬ ಮತ್ತು ಸ್ನೇಹಿತರ ಜತೆಗೆ ಸುತ್ತಾಡಿ ಬರುವ ಯೋಜನೆ ಹಾಕಿದ್ದೇನೆ. ಒಟ್ಟಿನಲ್ಲಿ ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೊಸ ಅನುಭವ ಪಡೆದು ಹಿಂದಿರುಗಲಿದ್ದೇನೆ. ಸದ್ಯಕ್ಕೆ ಜಯಣ್ಣ ಕಂಬೈನ್ಸ್ ನಲ್ಲಿ ತಯಾರಾಗಿರುವ ಇನ್ನೂ ಹೆಸರಿಡದ ಚಿತ್ರ ಸೇರಿದಂತೆ `ಬಿಚ್ಚುಗತ್ತಿ' ಮತ್ತು `ಅಮೃತಮತಿ' ಎನ್ನುವ ಮೂರು ಚಿತ್ರಗಳು ವರ್ಷಾರಂಭದ ಬಿಡುಗಡೆಗೆ ತಯಾರಾಗಿವೆ. 

ಫೆಬ್ರವರಿ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ ಮಾಡಿ