ದೇಶಾದ್ರಿ ಹೊಸ್ಮನೆ

ಶೂಟಿಂಗ್‌ ಜರ್ನಿ ಹೇಗಿತ್ತು, ಏನೆಲ್ಲ ಅನುಭವ ಆಯಿತು?

ಇದು ಒಟ್ಟು 108 ದಿನಗಳ ಜರ್ನಿ. 2019ರ ಮೇ-ಜೂನ್‌ ತಿಂಗಳಲ್ಲಿ ಚಿತ್ರೀಕರಣ ಶುರುವಾಗಿತ್ತು, ಅದೀಗ ಕಂಪ್ಲೀಟ್‌ ಆಗಿದೆ. ಸ್ಕಿ್ರಪ್ಟ್‌ನಲ್ಲಿ ನಾನೇನು ಅಂದುಕೊಂಡಿದ್ದೆನೋ ಅದು ಸ್ಕ್ರೀನ್‌ ಮೇಲೆ ಬಂದಿದೆ. ಇದೆಲ್ಲ ಸಾಧ್ಯವಾಗಿದ್ದಕ್ಕೆ ದರ್ಶನ್‌ ಮತ್ತು ನಿರ್ಮಾಪಕ ಉಮಾಪತಿ ಕಾರಣ. ನಿರ್ದೇಶಕ ಅಂದುಕೊಂಡಂತೆ ಸಿನಿಮಾ ತೆರೆಗೆ ಬರಬೇಕಾದರೆ ಹೀರೋ ಮತ್ತು ಪ್ರೊಡಕ್ಷನ್‌ ಹೌಸ್‌ ತುಂಬಾ ಇಂಪಾರ್ಟೆಂಟ್‌. ಆ ವಿಚಾರದಲ್ಲಿ ನಾನು ಲಕ್ಕಿ.

ಚಿತ್ರೀಕರಣದ ಲೊಕೇಷನ್‌ ಎಲ್ಲೆಲ್ಲಿ, ಕತೆಗೆ ಅದರ ಅಗತ್ಯತೆ ಏನು?

ಮೈಸೂರು, ಬೆಂಗಳೂರು, ಹೈದರಾಬಾದ್‌, ಚೆನ್ನೈ, ಪಾಂಡಿಚೇರಿ, ಲಕ್ನೋ, ವಾರಾಣಸಿ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆದಿದೆ. ಮುಕ್ಕಾಲು ಭಾಗದಷ್ಟುಚಿತ್ರೀಕರಣ ಸೆಟ್‌ನಲ್ಲೇ ಆಗಿದೆ. ಅದಕ್ಕಾಗಿ 35ಕ್ಕೂ ಹೆಚ್ಚು ಬೃಹತ್‌ ಪ್ರಮಾಣದ ಸೆಟ್‌ ಹಾಕಿದ್ದೆವು. ಎಲ್ಲವೂ ನೈಜವಾಗಿಯೇ ಬಂದಿದೆ. ಪ್ರೇಕ್ಷಕಕನಿಗೆ ಅದು ಸೆಟ್‌ ಎನ್ನುವ ಫೀಲ್‌ ಎಲ್ಲೂ ಕಾಣಿಸುವುದಿಲ್ಲ. ಅದೆಲ್ಲ ಕತೆಗೆ ಬೇಕಾಗಿದ್ದೇ ಹೊರತು ಅನಗತ್ಯವಾದ್ದದ್ದಲ್ಲ. ಪಾಂಡಿಚೇರಿ, ವಾರಣಾಸಿ, ಲಕ್ನೋಗೆ ಹೋಗಿ ಬಂದಿದ್ದೇಕೆ ಅನ್ನೋದು ಸಿನಿಮಾ ನೋಡಿದಾಗಲೇ ಗೊತ್ತಾಗುತ್ತೆ.

'ರಾಬರ್ಟ್‌' ಶೂಟಿಂಗ್‌ ಮುಕ್ತಾಯ; 300 ಮಂದಿಗೆ ಬಿರಿಯಾನಿ, ಹೊಸ ಬಟ್ಟೆ!

ದರ್ಶನ್‌ ಸೇರಿದಂತೆ ಕಲಾವಿದರ ಸಹಕಾರ ಹೇಗಿತ್ತು?

ಇಷ್ಟೆಲ್ಲ ಅಚ್ಚುಕಟ್ಟಾಗಿ ಶೂಟಿಂಗ್‌ ಮುಗಿದಿದ್ದರಲ್ಲಿ ದರ್ಶನ್‌ ಪಾಲು ಹೆಚ್ಚು. ಉಳಿದಂತೆ ಎಲ್ಲಾ ಕಲಾವಿದರ ಸಹಕಾರವೂ ಕಾರಣ. ತಮ್ಮದೇ ನಿರ್ಮಾಣದ ಸಿನಿಮಾ ಎನ್ನುವುಷ್ಟೇ ದರ್ಶನ್‌, ಕಾಳಜಿ ತೋರಿದರು. ಎಲ್ಲಾ ಕಡೆಯಲ್ಲೂ ನಮಗಿಂತ ಮುಂಚೆಯೇ ಸೆಟ್‌ನಲ್ಲಿದ್ದು ಶೂಟಿಂಗ್‌ ಮುಗಿಸಿಕೊಟ್ಟರು. ಅವರಂತೆ ಜಗಪತಿಬಾಬು, ರವಿ ಕಿಶನ್‌, ರವಿಶಂಕರ್‌, ದೇವರಾಜ್‌, ಸೋನಲ್‌ ಸಾಥ್‌ ಕೊಟ್ಟರು. ಅವರ ಬೆಂಬಲದ ಪ್ರತಿಫಲ ಇದು.

ರಾಬರ್ಟ್‌ ಯಾವ ಜಾನರ್‌ ಸಿನಿಮಾ?

ಇದು ಫುಲ್‌ ಆ್ಯಕ್ಷನ್‌ ಮತ್ತು ಫ್ಯಾಮಿಲಿ ಎಂಟರ್‌ಟೈನರ್‌ ಮೂವೀ. ದರ್ಶನ್‌ ಸಿನಿಮಾ ಅಂದ್ಮೇಲೆ ಆ್ಯಕ್ಷನ್‌ ಇರಲೇಬೇಕು. ಅದು ಅವರ ಫ್ಯಾನ್ಸ್‌ಗೆ ಇಷ್ಟವಾಗುವ ಅಂಶ. ಅವರಿಗೆ ಇಷ್ಟವಾಗುವಂತಹ ಐದು ಫೈಟ್ಸ್‌ ಚಿತ್ರದಲ್ಲಿವೆ. ಫೈಟ್ಸ್‌ ಅಂದಾಕ್ಷಣ ಸುಮ್ಮನೆ ಹೊಡಿ ಬಡಿ ಎನ್ನುವ ಹಾಗೆ ತೋರಿಸಿಲ್ಲ. ಕತೆಯ ಸನ್ನಿವೇಶಕ್ಕೆ ತಕ್ಕಂತೆ ತುಂಬಾ ಸಹಜತೆ ಇರುವ ಹಾಗೆ ಫೈಟ್ಸ್‌ ತೆರೆಗೆ ತರಲಾಗಿದೆ. ನಾಲ್ವರು ಸಾಹಸ ನಿರ್ದೇಶಕರು ಸ್ಟಂಟ್‌ ಕಂಪೋಸ್‌ ಮಾಡಿದ್ದಾರೆ. ಅದರ ಜತೆಗೆ ಲವ್‌ ಇದೆ. ಭಾವುಕತೆಯ ಬಂಧವೂ ಇಲ್ಲಿದೆ.

ಪೋಸ್ಟರ್‌ ಮೂಲಕ ಸೃಷ್ಟಿಯಾಗಿರುವ ರಾಬರ್ಟ್‌, ರಾಮನ ಚರ್ಚೆ ಬಗ್ಗೆ ಏನಂತೀರಿ?

ಅದು ಅವರವರ ಗ್ರಹಿಕೆಗೆ ಬಿಟ್ಟವಿಚಾರ. ಯಾವುದೂ ಗೊಂದಲದ ಸಂಗತಿ ಇಲ್ಲಿಲ್ಲ. ಇವತ್ತಿನ ಸಂದರ್ಭ, ಸನ್ನಿವೇಶಗಳಿಗೆ ತಳುಕು ಹಾಕಿ ಕೆಲವರು ರಾಬರ್ಟ್‌ ಹೆಸರು, ರಾಮನ ಅವತಾರ ಅಂತ ಮಾತನಾಡುತ್ತಿರಬಹುದು. ಆದ್ರೆ ಎರಡು ವರ್ಷಗಳ ಹಿಂದೆ ಬರೆದ ಕತೆಯಿದು. ಈ ತನಕ ಬಂದ ಪೋಸ್ಟರ್‌ಗಳಿಗೂ ಚಿತ್ರದ ಕತೆಗೂ ಲಿಂಕ್‌ ಇದೆ. ಅದೇ ಕಾರಣಕ್ಕೆ ಮೊದಲು ರಾಬರ್ಟ್‌ ಲುಕ್‌ ಬಿಟ್ಟಿದ್ದೆ. ಈಗ ರಾಮನ ಅವತಾರದ ಲುಕ್‌ ಬಂದಿದೆ. ಅದೆಲ್ಲದ್ದಕ್ಕೂ ಉತ್ತರ ಸಿನಿಮಾದಲ್ಲಿದೆ.

ಹನುಮನಾಗಲು ಮಾಂಸಾಹಾರ ತ್ಯಜಿಸಿದ್ರು ಡಿ ಬಾಸ್ ದರ್ಶನ್!

ರಾಬರ್ಟ್‌ ಕತೆ ಹುಟ್ಟಿದ್ದು ಹೇಗೆ?

‘ಚೌಕ’ ಸಿನಿಮಾ ಮಾಡುವಾಗ ಹೊಳೆದ ಕತೆಯಿದು. ಅದಕ್ಕೆ ಕಾರಣ ಆ ಚಿತ್ರದಲ್ಲಿದ್ದ ‘ರಾಬರ್ಟ್‌’ ಹೆಸರಿನ ಪಾತ್ರ. ಆ ಪಾತ್ರ ನನ್ನನ್ನು ತುಂಬಾ ಕಾಡಿಸಿತ್ತು. ಅದನ್ನೇ ಇಟ್ಟುಕೊಂಡು ಕತೆಯ ಒಂದು ಎಳೆ ರೆಡಿ ಮಾಡಿದೆ. ಆಗಲೇ ದರ್ಶನ್‌ ಜತೆಗೆ ಆ ಬಗ್ಗೆಯೂ ಚರ್ಚೆ ನಡೆಸಿ, ಕತೆಯ ಎಳೆ ಏನು ಅಂತಲೂ ವಿವರಿಸಿದ್ದೆ. ಆ ಹೊತ್ತಿಗೆ ಅವರಿಗೂ ಒಂದೊಳ್ಳೆಯ ಸ್ವಮೇಕ್‌ ಸಿನಿಮಾ ಮಾಡುವ ಆಸೆಯಲ್ಲಿದ್ದರು. ಹಾಗಾಗಿ ಕತೆಯ ಎಳೆ ಅವರಿಗೂ ಇಷ್ಟವಾಯಿತು. ಅದನ್ನೇ ಇಟ್ಟುಕೊಂಡು ಎರಡು ವರ್ಷಗಳ ಕಾಲ ಒಂದೆಡೆ ಕುಳಿತು ಕತೆ ಸಿದ್ಧಪಡಿಸಿದೆ.

ಏಪ್ರಿಲ್‌ 9ಕ್ಕೆ ತೆರೆಗೆ ಬರುವುದು ನಿಜವಾ?

ಸದ್ಯಕ್ಕೆ ಆ ಬಗ್ಗೆ ಚರ್ಚೆ ನಡೆದಿದೆ. ಅದೇ ಸೂಕ್ತವಾದ ಸಮಯ ಎನ್ನುವ ಅಭಿಪ್ರಾಯವೂ ಇದೆ. ಇನ್ನು ಏಪ್ರಿಲ್‌ 10ಕ್ಕೆ ಗುಡ್‌ ಫ್ರೈಡೇ ಇದೆ. ಅದಕ್ಕಿಂತ ಮುಂಚೆ ಏಪ್ರಿಲ್‌ 8ಕ್ಕೆ ರಾಮ ನವಮಿ ಇದೆ. ಎಲ್ಲವೂ ಕೂಡಿ ಬಂದಂತಾಗಿದೆ. ಈ ಸಿನಿಮಾದ ಪೋಸ್ಟರ್‌ ಬಂದ ಸಂದರ್ಭಗಳು ಹಾಗೆ ಇವೆ. ಕ್ರಿಸ್‌ಮಸ್‌ಗೆ ಫಸ್ಟ್‌ ಲುಕ್‌ ಬಂತು. ಅದಾದ ನಂತರ ಸಂಕ್ರಾಂತಿಗೆ ರಾಮನ ಲುಕ್‌ ಬಂತು. ಗೊತ್ತೋ ಗೊತ್ತಿಲ್ಲದೆಯೋ ಎಲ್ಲವೂ ಸಿಂಕ್‌ ಆಗುತ್ತಿವೆ. ಸಿನಿಮಾ ಏನು ಅನ್ನೋದು ನೋಡಿದಾಗ ಗೊತ್ತಾಗಲಿದೆ. ಒಂದೊಳ್ಳೆ ಸಿನಿಮಾ ಆಗುವ ಭರವಸೆ, ನಂಬಿಕೆಯಂತೂ ನಂಗಿದೆ.