- ಶಶಿಕರ ಪಾತೂರು

ಇದೇ ವಾರ ತೆರೆ ಕಾಣಲಿರುವ 'ಜಿಲ್ಕ' ಚಿತ್ರದ ಮೂಲಕ ಒಂದಷ್ಟು ಯುವ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರಲ್ಲಿ ಚಿತ್ರದ ನಾಯಕಿ ಪ್ರಿಯಾ ಹೆಗ್ಡೆ ಕೂಡ ಒಬ್ಬರು. ಮೂಲತಃ ಮೂಡಬಿದ್ರೆಯವರಾದ ಈಕೆ ಶೇಖರ್ ಮತ್ತು ಶಾರದಾ ಹೆಗ್ಡೆ ದಂಪತಿಯ ಮೂವರು ಮಕ್ಕಳಲ್ಲಿ ಮಧ್ಯಮದ ಹುಡುಗಿ. ಊರಿನಲ್ಲಿಯೇ ಸರ್ಕಾರಿ ಕೆಲಸದಲ್ಲಿರುವ ಅಕ್ಕ ಪೂರ್ಣಿಮಾ ಹೆಗ್ಡೆ ಮತ್ತು ಕಾಲೇಜ್ ವಿದ್ಯಾರ್ಥಿನಿಯಾಗಿರುವ ಭಾನುಪ್ರಿಯಾರ ನಡುವೆ ಸಿನಿಮಾ ಕ್ಷೇತ್ರದ ಮೂಲಕ ಗುರುತಿಸಿಕೊಳ್ಳುತ್ತಿರುವವರೇ ಪ್ರಿಯಾ. ಈಕೆಗೆ ದರ್ಶನ್ ಎಂದರೆ ಇಷ್ಟ. ಅನುಷ್ಕಾ ಶೆಟ್ಟಿ ಎಂದರೆ ಮಾದರಿ. ಇದೀಗ ಅವರೆಲ್ಲ ಕಾಣಿಸಿಕೊಳ್ಳುವ ಪರದೆಯ ಮೇಲೆ ತನ್ನನ್ನೇ ನೋಡಿಕೊಳ್ಳುವ ಕಾಲ ಬಂದಿದೆ. ಈ ಬಗ್ಗೆ ಆಕೆಯೊಂದಿಗೆ ನಾವು ನಡೆಸಿದಂಥ ಮಾತುಕತೆ ಇದು.

ಭಾವೀ ಪತ್ನಿಯ ಸೀಕ್ರೇಟ್ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ

ಚಿತ್ರರಂಗಕ್ಕೆ ಪ್ರವೇಶ ಮಾಡುವುದು ನಿಮ್ಮ ಪಾಲಿಗೆ ಸುಲಭವಾಗಿತ್ತೇ?

ಖಂಡಿತವಾಗಿ ಇಲ್ಲ. ಯಾಕೆಂದರೆ ಮೊದಲನೆಯದಾಗಿ ನನಗೆ ಮನೆಯಲ್ಲೇ ಪ್ರೋತ್ಸಾಹ ಇರಲಿಲ್ಲ! ಮೊದಲು ಕಲಿಕೆ; ಏನಿದ್ದರೂ ಆಮೇಲೆ ಎನ್ನುವುದು ಅವರ ಧೋರಣೆಯಾಗಿತ್ತು. ಯಾಕೆಂದರೆ `ಜಿಲ್ಕ' ಚಿತ್ರಕ್ಕೂ ಮೊದಲೇ ನಾನು ತುಳು ಸಿನಿಮಾದಲ್ಲಿ ನಟಿಸಿದ್ದೆ. ಅದರ ಹೆಸರು `ದಗಲ್ ಬಾಜಿ'. ಆದರೆ ಆ ಚಿತ್ರ ನಟನೆಗೆ ಒಪ್ಪಿಕೊಂಡಷ್ಟು ಸುಲಭದಲ್ಲಿ ಜಿಲ್ಕ ಚಿತ್ರದಲ್ಲಿ ನಟಿಸಲು ಮನೆಯಲ್ಲಿ ಒಪ್ಪಿಗೆ ಸಿಗಲಿಲ್ಲ. ಅದು ಅಲ್ಲದೆ ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈಗೆ ಬೇರೆ ಹೋಗಬೇಕಿತ್ತು. ಯಾಕೆಂದರೆ ಅದಾಗಷ್ಟೇ ಇಂಜಿನಿಯರಿಂಗ್ ವೃತ್ತಿಗೆ ಸೇರಿಕೊಂಡಿದ್ದ ನಾನು ಅಂಥದೊಂದು ಕೆಲಸ ಬಿಟ್ಟು ಸಿನಿಮಾದ ಬೆನ್ನು ಬೀಳುವುದು ಮನೆ ಮಂದಿಗೆ ಇಷ್ಟವಿರಲಿಲ್ಲ. ಆದರೆ ಈಗ ಪ್ರೋತ್ಸಾಹ ನೀಡ ತೊಡಗಿದ್ದಾರೆ.

ಜಿಲ್ಕ ಚಿತ್ರದಲ್ಲಿ ನಟಿಸಿದ ನಿಮ್ಮ ಅನುಭವ ಹೇಗಿತ್ತು?

ಒಂದೇ ಸಿನಿಮಾದೊಳಗೆ ಮೂರು ನೂರು ಸಿನಿಮಾಗಳಲ್ಲಿ ನಟಿಸಿದ ಅನುಭವ ತಂದುಕೊಟ್ಟಿದ್ದು ಜಿಲ್ಕ ಸಿನಿಮಾ. ಯಾಕೆಂದರೆ ಚಿತ್ರವನ್ನು ಮೂರು ಭಾಷೆಗಳಲ್ಲಿ ಚಿತ್ರೀಕರಿಸಲಾಯಿತು. ಆದರೆ ಅದಕ್ಕೆ ಬೇಕಾದ ತಯಾರಿಗಾಗಿ ಗ್ರೂಮಿಂಗ್ ಕ್ಲಾಸ್ ನಡೆಸಲಾಗಿತ್ತು. ಮುಂಬೈ ಚಿತ್ರೀಕರಣದ ವೇಳೆ ಚಿತ್ರದ ನಾಯಕನಿಗೆ ನೀಡುತ್ತಿದ್ದಷ್ಟೇ ಒಳ್ಳೆಯ ಆತಿಥ್ಯವನ್ನು ನನಗೂ ಕೊಟ್ಟಿದ್ದರು. ಹಾಗಾಗಿ ನನಗೆ ಅದೊಂದು ಒಳ್ಳೆಯ ಅನುಭವವೇ ಆಗಿತ್ತು.

ಜಿಲ್ಕ ಚಿತ್ರತಂಡದ ಬಗ್ಗೆ ಹೇಳಿ

ಇದು ಹೆಚ್ಚು ಕಡಿಮೆ ಹೊಸಬರದೇ ತಂಡ. ಸೊಮಾಲಿಯಾ ಭಾಷೆಯಲ್ಲಿ ಜಿಲ್ಕ ಎಂದರೆ ಜನರೇಶನ್ ಅಂತೆ. ಇದು ಜನರೇಶನ್ ಗ್ಯಾಪ್ ಬಗ್ಗೆ ಹೇಳುವ ಸಿನಿಮಾ. ಹಾಗಾಗಿ ಜಿಲ್ಕ ಎನ್ನುವ ಶೀರ್ಷಿಕೆಯೇ ಆಕರ್ಷಕವಾಗಿರುತ್ತದೆ ಎಂದು ನಮ್ಮ ನಿರ್ದೇಶಕ ಕವೀಶ್ ಶೆಟ್ಟಿಯವರು ಆ ಹೆಸರನ್ನೇ ಇರಿಸಿಕೊಂಡಿದ್ದಾರೆ. ಅಂದಹಾಗೆ ಕವೀಶ್ ಶೆಟ್ಟಿಯವರು ಚಿತ್ರದ ನಾಯಕರು ಕೂಡ ಹೌದು. ಅವರು ಚಿತ್ರದಲ್ಲಿ ಮೂರು ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಲಕ್ಷ್ಯ ಶೆಟ್ಟಿ ಎನ್ನುವ ಮತ್ತೋರ್ವ ನಾಯಕಿ ಕೂಡ ಇದ್ದಾರೆ. ನಾನು ಚಿತ್ರದೊಳಗೆ ಲೇಟಾಗಿ ಎಂಟ್ರಿ ನೀಡುತ್ತೇನೆ. ಆದರೆ ಸಂಪ್ರದಾಯಸ್ಥ ಯುವತಿಯಾಗಿ ಬಂದು ಪ್ರೇಕ್ಷಕರ ಮನಗೆಲ್ಲುತ್ತೇನೆ ಎನ್ನುವ ಭರವಸೆ ಇದೆ.

ಇನ್ನು ಮೇಲೆ ವರ್ಷಕ್ಕೆ ಮೂರು ಸಿನಿಮಾ ಮಾಡುವೆ

ಕನ್ನಡದಲ್ಲಿ ಬೇರೆ ಹೊಸ ಅವಕಾಶಗಳು ದೊರಕಿವೆಯೇ?

ನಿಜ ಹೇಳಬೇಕೆಂದರೆ ಜಿಲ್ಕ ಚಿತ್ರದ ಬಳಿಕ ನಾನು ಸಾಫ್ಟ್ ವೇರ್ ಕ್ಷೇತ್ರಕ್ಕೆ ಮರಳಬೇಕು ಎನ್ನುವ ತೀರ್ಮಾನದಲ್ಲಿದ್ದೆ. ಆದರೆ ತೆಲುಗು ಚಿತ್ರದಿಂದ ಅದಾಗಲೇ `ಮಿತ್ರ' ಎನ್ನುವ ಒಳ್ಳೆಯ ಆಫರ್ ಬಂದಿದೆ. ಪೂರಿ ಜಗನ್ನಾಥ್ ಅವರ ಸಹ ನಿರ್ದೇಶಕರೊಬ್ಬರು ಹಾರರ್ ಸಬ್ಜೆಕ್ಟ್ ಒಂದರಲ್ಲಿ ಅವಕಾಶ ನೀಡಿದ್ದಾರೆ. ವಿಶೇಷ ಏನೆಂದರೆ ಇದು ಹಾರರ್ ಜತೆಗೆ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾ. ಹಾಗಾಗಿ ಸಿನಿಮಾದ ಶೀರ್ಷಿಕೆಯಲ್ಲಿರುವ ಪಾತ್ರವಾಗಿಯೇ ನಟಿಸುವ ಅದೃಷ್ಟ ದೊರಕಿದೆ.