ರಾಮಾಯಣದಲ್ಲಿ ಶೂರ್ಪಣಖಿಯಾಗಿ ನಟಿಸುತ್ತಿರುವ ನಟಿ ರಕುಲ್ ಪ್ರೀತ್ ಸಿಂಗ್ ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಪಾತ್ರ, ರಾಮಾಯಣ ಸಿನಿಮಾ ಮತ್ತು ತೆಲುಗು ಕಂಬ್ಯಾಕ್ ಬಗ್ಗೆ ನಟಿ ಹೇಳಿದ್ದೇನು?
‘ರಾಮಾಯಣ’ ಸಿನಿಮಾದಲ್ಲಿ ಶೂರ್ಪಣಖಿಯಾಗಿ ಕಾಣಿಸಿಕೊಳ್ಳುತ್ತಿರುವ ರಕುಲ್ ಪ್ರೀತ್ ಸಿಂಗ್, ತಮ್ಮ ಪಾತ್ರದ ಬಗ್ಗೆ, ಯಶ್ ಜೊತೆಗಿನ ಅನುಭವ, ಸಿನಿಮಾದಲ್ಲಿ ಕೆಲಸ ಮಾಡಿದ ಕ್ಷಣಗಳು ಹಾಗೂ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳುವ ಆಸೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ದಕ್ಷಿಣ ಭಾರತ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟಿ ರಕುಲ್ ಪ್ರೀತ್ ಸಿಂಗ್ ಈಗ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದ ಭಾಗವಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ರಾವಣನ ತಂಗಿ ಶೂರ್ಪಣಖಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಈ ಅದ್ಧೂರಿ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದು, ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇರುವ ಶೂರ್ಪಣಖಿಯ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆಗೆ ರಕುಲ್ ಆಸಕ್ತಿದಾಯಕ ಉತ್ತರ ನೀಡಿದ್ದಾರೆ. ಇಂತಹ ಬೃಹತ್ ಕನಸಿನ ಸಿನಿಮಾದ ಭಾಗವಾಗಬೇಕೆಂಬ ಆಸೆಯೇ ತಮಗೆ ಈ ಪಾತ್ರ ಒಪ್ಪಿಕೊಳ್ಳಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.
'ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ಯಾರೂ ಸೃಷ್ಟಿಸದಂತಹ ಒಂದು ಅದ್ಭುತ ದೃಷ್ಟಿಕೋನದ ಭಾಗವಾಗಬೇಕು ಎಂದು ನನಗೆ ಅನಿಸಿತ್ತು. ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಇದ್ದರೂ, ನಮಿತ್ ಸರ್ ಮತ್ತು ನಿತೇಶ್ ಸರ್ ರೂಪಿಸುತ್ತಿದ್ದ ಸಿನಿಮಾದ ಬೃಹತ್ ಕಲ್ಪನೆ ನನಗೆ ಕನಸಿನಂತಿತ್ತು. ಇಂತಹ ಮಹಾಕಾವ್ಯದ ಭಾಗವಾಗುವ ಅವಕಾಶವನ್ನು ಬಿಡಲು ನನಗೆ ಇಷ್ಟವಿರಲಿಲ್ಲ' ಎಂದು ರಕುಲ್ ಹೇಳಿದ್ದಾರೆ. ಅಷ್ಟೇ ಅಲ್ಲ, ರಾಮಾಯಣದಲ್ಲಿ ಶೂರ್ಪಣಖಿಯ ಪಾತ್ರ ಬಹಳ ಮಹತ್ವದ್ದಾಗಿದೆ.
ಆಕೆಯ ಪ್ರವೇಶವೇ ಮುಂದಿನ ಘಟನೆಗಳ ದಿಕ್ಕನ್ನು ಬದಲಿಸುತ್ತದೆ. ಹೀಗಾಗಿ ಈ ಪಾತ್ರ ಕಥೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ದೊಡ್ಡ ತಾರಾಗಣದ ಸಿನಿಮಾಗಳು ಅಪರೂಪವಾಗಿ ಮೂಡಿಬರುತ್ತವೆ. ಆದರೆ ಹಾಲಿವುಡ್ನಲ್ಲಿ ಇಂತಹ ಸಿನಿಮಾಗಳ ಮೂಲಕ ಅನೇಕ ದೊಡ್ಡ ಕಲಾವಿದರು ಒಟ್ಟಾಗಿ ಕೆಲಸ ಮಾಡುತ್ತಾರೆ. ‘ರಾಮಾಯಣ’ ಸಿನಿಮಾ ಕೂಡ ಅಂತಹದ್ದೇ ಒಂದು ಅದ್ಭುತ ಪ್ರಯತ್ನ ಎಂದು ರಕುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೂರ್ಪಣಖಿಯ ಬಗ್ಗೆ ಈಗ ಸಾಕಷ್ಟು ತಿಳಿದುಕೊಂಡಿದ್ದೇನೆ!
ರಾಮಾಯಣದ ಕಥೆ ಬಹುತೇಕ ಎಲ್ಲರಿಗೂ ಪರಿಚಿತ. ಆದರೆ ಈ ಸಿನಿಮಾದಲ್ಲಿ ಇದುವರೆಗೆ ಹೆಚ್ಚು ಚರ್ಚೆಯಾಗದ ಹಲವು ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ರಕುಲ್ ಹೇಳಿದ್ದಾರೆ. ನಾವು ಸಾಮಾನ್ಯವಾಗಿ ರಾಮಾಯಣದ ಜನಪ್ರಿಯ ಮತ್ತು ಸಂಕ್ಷಿಪ್ತ ರೂಪಗಳನ್ನಷ್ಟೇ ನೋಡಿದ್ದೇವೆ. ಆದರೆ ಈ ಸಿನಿಮಾದಲ್ಲಿ ಲಂಕೆಯ ಕಡೆಯ ಕಥೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಅದರಲ್ಲೂ ಶೂರ್ಪಣಖಿಯ ಪಾತ್ರವನ್ನು ಹೆಚ್ಚು ಆಳವಾಗಿ ತೋರಿಸಲಾಗಿದೆ.
ಈ ಪಾತ್ರವನ್ನು ಅರ್ಥಮಾಡಿಕೊಳ್ಳಲು ನಾನೂ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಚಿತ್ರತಂಡ ಕೂಡ ಹಲವು ವಿಚಾರಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದೆ. ಈ ಸಿನಿಮಾದಲ್ಲಿ ಶೂರ್ಪಣಖಿಯ ವ್ಯಕ್ತಿತ್ವದ ಹಲವು ಆಯಾಮಗಳನ್ನು ನೋಡಬಹುದು. ಈ ಪಾತ್ರ ಒಪ್ಪಿಕೊಳ್ಳುವ ಮೊದಲು ನನಗೆ ಆಕೆಯ ಬಗ್ಗೆ ಇಷ್ಟೊಂದು ವಿಚಾರಗಳು ತಿಳಿದಿರಲಿಲ್ಲ. ಈಗ ಸಾಕಷ್ಟು ತಿಳಿದುಕೊಂಡಿದ್ದೇನೆ ಎಂದು ರಕುಲ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಯಶ್ ಬಗ್ಗೆ ರಕುಲ್ ಹೇಳಿದ್ದೇನು ಗೊತ್ತಾ?
‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಬಗ್ಗೆಯೂ ರಕುಲ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಯಶ್ ಅದ್ಭುತ ವ್ಯಕ್ತಿ. ಅವರ ಸಾಮರ್ಥ್ಯವನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ ಎನ್ನುವಷ್ಟು ವಿಶೇಷವಾದ ವ್ಯಕ್ತಿತ್ವ ಅವರದ್ದು. ಅವರು ಅತ್ಯುತ್ತಮ ನಟ ಮಾತ್ರವಲ್ಲ, ಒಳ್ಳೆಯ ಮನುಷ್ಯ ಕೂಡ. ಅವರಲ್ಲಿರುವ ಕೆಲಸದ ಮೇಲಿನ ಪ್ರೀತಿ, ಶ್ರಮ, ಪ್ರತಿಭೆ ಮತ್ತು ಉತ್ಸಾಹ ನಿಜಕ್ಕೂ ಸ್ಫೂರ್ತಿ ನೀಡುತ್ತದೆ. ಅವರಂತಹ ವ್ಯಕ್ತಿಗಳ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ ಎಂದು ಯಶ್ ಅವರನ್ನು ಹಾಡಿಹೊಗಳಿದ್ದಾರೆ.
ವಿವಿಧ ಭಾಷೆಗಳ ಚಿತ್ರರಂಗದಲ್ಲಿ ಕೆಲಸ ಮಾಡಿರುವ ರಕುಲ್, ‘ರಾಮಾಯಣ’ ಸಿನಿಮಾದಲ್ಲಿ ಹಲವು ಚಿತ್ರರಂಗಗಳ ಪ್ರತಿಭಾವಂತ ಕಲಾವಿದರು ಒಂದಾಗಿರುವುದನ್ನು ವಿಶೇಷ ಅನುಭವ ಎಂದು ಹೇಳಿದ್ದಾರೆ. ಎಲ್ಲ ಕಲಾವಿದರೊಂದಿಗೂ ತೆರೆ ಹಂಚಿಕೊಳ್ಳುವ ಅವಕಾಶ ಸಿಗದಿದ್ದರೂ, ಟೇಬಲ್ ರೀಡಿಂಗ್ ಮತ್ತು ಆರಂಭಿಕ ತಯಾರಿಯ ಸಂದರ್ಭದಲ್ಲಿ ಹಲವರನ್ನು ಭೇಟಿಯಾಗಿ ಮಾತನಾಡುವ ಅವಕಾಶ ಸಿಕ್ಕಿತ್ತು ಎಂದಿದ್ದಾರೆ.
ಶೂರ್ಪಣಖಿಯ ಪಾತ್ರಕ್ಕೆ ತಯಾರಿ ಹೇಗಿತ್ತು?
ಪುರಾಣದ ಪಾತ್ರವೊಂದನ್ನು ತೆರೆಯ ಮೇಲೆ ಜೀವಂತಗೊಳಿಸುವುದು ಸವಾಲಿನ ಕೆಲಸವೇ ಎಂಬ ಪ್ರಶ್ನೆಗೆ ರಕುಲ್ ವಿಭಿನ್ನವಾಗಿ ಉತ್ತರಿಸಿದ್ದಾರೆ. ನನಗೆ ಇದು ಸವಾಲಿಗಿಂತಲೂ ಹೆಚ್ಚು ಉತ್ಸಾಹದಾಯಕ ಅನುಭವವಾಗಿತ್ತು. ಪಾತ್ರಕ್ಕೆ ಸರಿಯಾದ ಲುಕ್ ನೀಡುವುದು ಮಾತ್ರ ಸ್ವಲ್ಪ ಕಷ್ಟವಾಗಿತ್ತು. ಒಬ್ಬ ಪಾತ್ರವನ್ನು ಸಂಪೂರ್ಣವಾಗಿ ರೂಪಿಸುವುದು ಎಂದರೆ ಅದರ ಪ್ರತಿಯೊಂದು ಅಂಶದ ಬಗ್ಗೆಯೂ ಗಮನಹರಿಸಬೇಕು. ಆದರೆ ಇದನ್ನು ನಾನು ಸವಾಲು ಎಂದು ಕರೆಯುವುದಿಲ್ಲ. ಇಂತಹ ಪಾತ್ರಕ್ಕೆ ಜೀವ ತುಂಬುವುದೇ ಒಂದು ರೋಚಕ ಅನುಭವ ಎಂದು ಹೇಳಿದ್ದಾರೆ.
ಮತ್ತೆ ಕಂಬ್ಯಾಕ್ ಮಾಡ್ತಾರಾ ರಕುಲ್?
ರಕುಲ್ ಪ್ರೀತ್ ಸಿಂಗ್ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡು ಸುಮಾರು ಐದು ವರ್ಷಗಳಾಗಿವೆ. ಈ ದೀರ್ಘ ವಿರಾಮದ ಬಗ್ಗೆ ಮಾತನಾಡಿರುವ ಅವರು, ಉದ್ದೇಶಪೂರ್ವಕವಾಗಿ ತೆಲುಗು ಸಿನಿಮಾಗಳಿಂದ ದೂರ ಉಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲವೂ ಸಂದರ್ಭಕ್ಕೆ ತಕ್ಕಂತೆ ನಡೆದುಕೊಂಡು ಬಂದಿದೆ. ನನಗೆ ಮತ್ತೆ ತೆಲುಗು ಸಿನಿಮಾ ಮಾಡಬೇಕೆಂಬ ಆಸೆ ತುಂಬಾ ಇದೆ. ಆದರೆ ಈ ಬಾರಿ ಪ್ರೇಕ್ಷಕರು ಈ ಹಿಂದೆ ನನ್ನನ್ನು ನೋಡಿರುವ ಪಾತ್ರಗಳಿಗಿಂತ ಭಿನ್ನವಾಗಿರಬೇಕು. ನನ್ನೊಳಗಿನ ಹೊಸ ಆಯಾಮವನ್ನು ಅನಾವರಣಗೊಳಿಸುವ, ನನಗೆ ಸವಾಲೊಡ್ಡುವಂತಹ ಪಾತ್ರ ಸಿಗಬೇಕು ಎಂದು ಬಯಸುತ್ತೇನೆ. ತೆಲುಗು ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮತ್ತೆ ಇಲ್ಲಿ ಕೆಲಸ ಮಾಡಲು ಖಂಡಿತವಾಗಿಯೂ ಇಷ್ಟಪಡುತ್ತೇನೆ ಎಂದು ರಕುಲ್ ಹೇಳಿದ್ದಾರೆ.
ಹೊಸ ತಲೆಮಾರಿಗೂ ರಾಮಾಯಣ ತಲುಪಲಿದೆ ಎಂದ ನಟಿ!
‘ರಾಮಾಯಣ’ ಸಿನಿಮಾ ಕೇವಲ ಭಾರತೀಯ ಪ್ರೇಕ್ಷಕರನ್ನು ಮಾತ್ರವಲ್ಲದೆ, ಜಾಗತಿಕ ಮಟ್ಟದ ಪ್ರೇಕ್ಷಕರನ್ನೂ ತಲುಪಲಿದೆ ಎಂಬ ವಿಶ್ವಾಸ ರಕುಲ್ ಅವರದ್ದು. ಅದರಲ್ಲೂ ಇಂದಿನ ಯುವಜನತೆಗೆ ರಾಮಾಯಣದ ಮಹತ್ವವನ್ನು ತಿಳಿಸಲು ಈ ಸಿನಿಮಾ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಮಾಯಣ ನಮ್ಮ ಪುರಾಣ, ನಮ್ಮ ಸತ್ಯ ಮತ್ತು ಇತಿಹಾಸ. ಪ್ರತಿಯೊಬ್ಬ ಭಾರತೀಯನೂ ಈ ಕಥೆಯನ್ನು ತಿಳಿದುಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.
ಈ ಸಿನಿಮಾ ಅದನ್ನು ಹೊಸ ತಲೆಮಾರಿಗೆ ತಲುಪಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಅದ್ದೂರಿ ದೃಶ್ಯಗಳು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಥೆ ಹೇಳುವ ರೀತಿಯಿಂದ ಯುವಜನರನ್ನು ಸೆಳೆಯಲಿದೆ. ಇದು ಕೇವಲ ಭಾರತೀಯರಿಗಷ್ಟೇ ಸೀಮಿತವಾಗಬಾರದು. ಜಗತ್ತಿನಾದ್ಯಂತ ಜನರು ಇಂತಹ ಮಹಾಕಾವ್ಯದ ಬಗ್ಗೆ ತಿಳಿದುಕೊಳ್ಳಬೇಕು. ಇಂತಹ ಬೃಹತ್ ಸಿನಿಮಾವನ್ನು ನೋಡುವುದು ಪ್ರತಿಯೊಬ್ಬರಿಗೂ ವಿಶೇಷ ಅನುಭವವಾಗಲಿದೆ ಎಂದು ರಕುಲ್ ಹೇಳಿದ್ದಾರೆ.
ಹೊಸ ಸಿನಿಮಾಗಳ ಬಗ್ಗೆ ಸುಳಿವು ಕೊಟ್ಟ ರಕುಲ್!
ಸದ್ಯ ಕೆಲವು ಆಸಕ್ತಿದಾಯಕ ಸಿನಿಮಾಗಳ ಮಾತುಕತೆ ನಡೆಯುತ್ತಿದೆ ಎಂದು ಹೇಳಿರುವ ರಕುಲ್, ಈ ಬಗ್ಗೆ ಈಗಲೇ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸೂಕ್ತ ಸಮಯ ಬಂದಾಗ ಹೊಸ ಪ್ರಾಜೆಕ್ಟ್ಗಳ ಕುರಿತು ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಈ ಹಿಂದೆ ಪ್ರಯತ್ನಿಸದ ಹೊಸ ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಬೇಕು ಎಂಬುದು ತಮ್ಮ ಆಸೆ ಎಂದು ಹೇಳುವ ಮೂಲಕ ಮಾತು ಮುಗಿಸಿದ್ದಾರೆ.






