‘ಕಾಂತಾರ’ ಸಿನಿಮಾ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ನಟಿ ಸಪ್ತಮಿ ಗೌಡ, ಚಿತ್ರದ ಯಶಸ್ಸಿನ ಬಳಿಕ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ಕಾಂತಾರ’ ಸಿನಿಮಾದ ಅಭೂತಪೂರ್ವ ಯಶಸ್ಸು ನಟಿ ಸಪ್ತಮಿ ಗೌಡ ಅವರನ್ನು ರಾತ್ರೋರಾತ್ರಿ ಜನಪ್ರಿಯ ನಟಿಯನ್ನಾಗಿ ಮಾಡಿತು. ಈ ಚಿತ್ರದ ಬಳಿಕ ಅವರಿಗೆ ದೊಡ್ಡ ಮಟ್ಟದ ಗುರುತಿಸುವಿಕೆ ಸಿಕ್ಕಿತಾದರೂ, ಚಿತ್ರರಂಗದಲ್ಲಿ ಮುಂದಿನ ಹೆಜ್ಜೆ ಇಡುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಇದೀಗ ‘ಕಾಂತಾರ’ ಬಿಡುಗಡೆಯಾಗಿ ನಾಲ್ಕು ವರ್ಷಗಳ ಬಳಿಕ ತಮ್ಮ ಸಿನಿಪಯಣವನ್ನು ಮೆಲುಕು ಹಾಕಿರುವ ಸಪ್ತಮಿ ಗೌಡ, ಆಗ ಸಿಕ್ಕ ಅವಕಾಶಗಳನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆರಂಭದ ದಿನಗಳಲ್ಲಿ ಚಿತ್ರರಂಗದ ಬಗ್ಗೆ ಸರಿಯಾದ ಮಾರ್ಗದರ್ಶನ ಇಲ್ಲದೆ ವೃತ್ತಿಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಿತ್ತು ಎಂದೂ ಅವರು ಹೇಳಿಕೊಂಡಿದ್ದಾರೆ.

‘ಕಾಂತಾರ’ ಯಶಸ್ಸಿನ ಬಳಿಕ ಅನಿರೀಕ್ಷಿತವಾಗಿ ಸಿಕ್ಕ ಜನಪ್ರಿಯತೆಯನ್ನು ನಿಭಾಯಿಸುವಾಗ ತಾವು ಸಾಕಷ್ಟು ಚಿಕ್ಕವರಾಗಿದ್ದೆ, ಅನುಭವವೂ ಇರಲಿಲ್ಲ ಎಂದು ಸಪ್ತಮಿ ನೆನಪಿಸಿಕೊಂಡಿದ್ದಾರೆ. ಈಗ 30ನೇ ವಯಸ್ಸಿಗೆ ಕಾಲಿಟ್ಟಿರುವ ಅವರು, ಚಿತ್ರರಂಗದ ಕೆಲಸಕಾರ್ಯಗಳು, ವೃತ್ತಿಪರ ನಿರ್ಧಾರಗಳು ಹಾಗೂ ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಆದರೆ ಈ ತಿಳಿವಳಿಕೆ ಮೊದಲೇ ಇದ್ದಿದ್ದರೆ ವೃತ್ತಿಜೀವನದಲ್ಲಿ ಇನ್ನಷ್ಟು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು ಎಂಬ ಭಾವನೆ ಅವರಲ್ಲಿದೆ. ‘ಬೆಂಗಳೂರು ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೃತ್ತಿಜೀವನದ ಏಳುಬೀಳುಗಳು, ವೈಯಕ್ತಿಕ ಸವಾಲುಗಳು ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ರೂಪಿಸಿಕೊಳ್ಳಲು ಎದುರಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ಕಾಂತಾರ’ ಬಳಿಕ ಚಿತ್ರರಂಗದಲ್ಲಿ ದಾರಿ ಕಂಡುಕೊಳ್ಳುವುದು ಸುಲಭವಾಗಿರಲಿಲ್ಲ!

ಸಪ್ತಮಿ ಗೌಡ ಪಾಲಿಗೆ ‘ಕಾಂತಾರ’ ದೊಡ್ಡ ಬ್ರೇಕ್ ನೀಡಿದ ಸಿನಿಮಾ. ಆದರೆ ಆ ಯಶಸ್ಸಿನ ಬಳಿಕ ಯಾವ ರೀತಿಯ ಸಿನಿಮಾಗಳನ್ನು ಆಯ್ಕೆ ಮಾಡಬೇಕು, ವೃತ್ತಿಜೀವನವನ್ನು ಹೇಗೆ ಮುನ್ನಡೆಸಬೇಕು ಎಂಬ ಗೊಂದಲ ಎದುರಾಗಿತ್ತು. ಸಾಕಷ್ಟು ಸಿನಿಮಾಗಳ ಕಥೆಗಳು ಬಂದರೂ, ಯಾವುದು ತಮ್ಮ ವೃತ್ತಿಜೀವನಕ್ಕೆ ಸೂಕ್ತ ಎಂಬುದನ್ನು ನಿರ್ಧರಿಸುವುದು ಕಷ್ಟವಾಗಿತ್ತು. ಆಗ ಅವರಿಗೆ ಯಾವುದೇ ಮ್ಯಾನೇಜರ್ ಇರಲಿಲ್ಲ.

ಸಂಭಾವನೆ ಬಗ್ಗೆ ಮಾತುಕತೆ ನಡೆಸುವುದು, ಕಥೆಗಳನ್ನು ಆಯ್ಕೆ ಮಾಡುವುದು, ಚಿತ್ರರಂಗದ ವೃತ್ತಿಪರ ವ್ಯವಹಾರಗಳನ್ನು ಅರ್ಥಮಾಡಿಕೊಳ್ಳುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಅನುಭವದ ಕೊರತೆಯಿತ್ತು. ಅಷ್ಟೇ ಅಲ್ಲ, ಪಬ್ಲಿಕ್ ರಿಲೇಶನ್ಸ್ (PR), ವೃತ್ತಿಜೀವನದ ಯೋಜನೆ ಹಾಗೂ ತಮ್ಮ ಇಮೇಜ್ ರೂಪಿಸಿಕೊಳ್ಳುವ ಮಹತ್ವವೂ ಆರಂಭದಲ್ಲಿ ಅರ್ಥವಾಗಿರಲಿಲ್ಲ ಎಂದು ಹೇಳಿದ್ದಾರೆ. ಒಂದು ಸಿನಿಮಾ ಯಶಸ್ವಿಯಾದ ಮಾತ್ರಕ್ಕೆ ಚಿತ್ರರಂಗದಲ್ಲಿ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. ಆ ಯಶಸ್ಸಿನಿಂದ ಸಿಗುವ ಜನಪ್ರಿಯತೆಯನ್ನು ಉತ್ತಮ ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಕಲೆ ಕೂಡ ಕಲಿಯಬೇಕು ಎಂಬುದನ್ನು ಈಗ ಅರ್ಥಮಾಡಿಕೊಂಡಿರುವುದಾಗಿ ಸಪ್ತಮಿ ತಿಳಿಸಿದ್ದಾರೆ.

‘ಕಾಂತಾರ’ ಲೀಲಾ ಪಾತ್ರದ ಇಮೇಜ್‌ನಿಂದ ಹೊರಬರಲು ಸವಾಲು!

‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ನಿರ್ವಹಿಸಿದ್ದ ಲೀಲಾ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಗಾಢವಾಗಿ ಉಳಿದಿದೆ. ಎಷ್ಟರಮಟ್ಟಿಗೆ ಎಂದರೆ, ಕೆಲವರಿಗೆ ತೆರೆಯ ಮೇಲಿನ ಲೀಲಾ ಹಾಗೂ ನಿಜ ಜೀವನದ ಸಪ್ತಮಿ ನಡುವೆ ವ್ಯತ್ಯಾಸ ಗುರುತಿಸುವುದೇ ಕಷ್ಟವಾಗಿತ್ತು. ಸಿನಿಮಾದಲ್ಲಿ ಅವರ ಹಳ್ಳಿ ಹುಡುಗಿಯ ಲುಕ್‌ಗೆ ಪ್ರೇಕ್ಷಕರು ಎಷ್ಟು ಒಗ್ಗಿಕೊಂಡಿದ್ದರೆಂದರೆ, ನಿಜ ಜೀವನದಲ್ಲಿ ಅವರನ್ನು ನೋಡಿದಾಗ ಕೆಲವರು ಅಚ್ಚರಿಪಡುತ್ತಿದ್ದರಂತೆ.

‘ಕಾಂತಾರ’ ಯಶಸ್ಸಿನ ಬಳಿಕ ಸಹಜವಾಗಿಯೇ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಆರಂಭದಲ್ಲಿ ಭಾವಿಸಿದ್ದ ಸಪ್ತಮಿಗೆ, ಕಾಲಕ್ರಮೇಣ ಚಿತ್ರರಂಗದ ವಾಸ್ತವ ಅರ್ಥವಾಗಿದೆ. ಕೇವಲ ಒಳ್ಳೆಯ ಪಾತ್ರದಲ್ಲಿ ನಟಿಸಿದರೆ ಸಾಲದು, ನಟಿಯಾಗಿ ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಿಕೊಳ್ಳಬೇಕು ಮತ್ತು ಜನಪ್ರಿಯ ಪಾತ್ರದ ಇಮೇಜ್‌ನಿಂದ ಹೊರಬಂದು ಪ್ರತ್ಯೇಕ ಗುರುತು ಹೇಗೆ ರೂಪಿಸಿಕೊಳ್ಳಬೇಕು ಎಂಬುದೂ ಮುಖ್ಯ ಎಂಬುದನ್ನು ಅರಿತುಕೊಂಡಿದ್ದಾರೆ.

ವಯಸ್ಸಿಗೆ ಹೊಂದಿಕೆಯಾಗದ ಪಾತ್ರಗಳನ್ನು ಒಪ್ಪಿಕೊಳ್ಳಲು ಸಪ್ತಮಿ ಹಿಂದೇಟು!

ಸಿನಿಮಾಗಳ ಆಯ್ಕೆಯ ವಿಚಾರದಲ್ಲಿಯೂ ಸಪ್ತಮಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರಂತೆ. ತಂದೆ-ಮಗನ ಕಥಾಹಂದರದ ಸಿನಿಮಾಗಳಲ್ಲಿ ತನಗಿಂತ ಹೆಚ್ಚು ವಯಸ್ಸಿನ ನಟರಿಗೆ ನಾಯಕಿಯಾಗಿ ನಟಿಸುವ ಅವಕಾಶಗಳು ಬಂದಿದ್ದವು. ಕೆಲವೊಮ್ಮೆ ಪಾತ್ರದ ವಯಸ್ಸು ಹಾಗೂ ಕಥೆಯಲ್ಲಿನ ಸನ್ನಿವೇಶಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಅವರಿಗೆ ಮುಜುಗರ ತಂದಿತ್ತಂತೆ. ಕಥೆಗೆ ಅಗತ್ಯವಿದ್ದರೆ ವಯಸ್ಸಾದ ಪಾತ್ರಗಳಲ್ಲಿಯೂ ನಟಿಸಲು ತಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಪಾತ್ರದ ವಯಸ್ಸಿಗೆ ಸರಿಯಾದ ಕಾರಣ ಅಥವಾ ಕಥೆಯ ಸಮರ್ಥನೆ ಇಲ್ಲದಿದ್ದರೆ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಸಿನಿಮಾ ನ್ಯಾರೇಷನ್‌ಗಳನ್ನು ಅರ್ಥಮಾಡಿಕೊಳ್ಳುವುದು, ಸಂಭಾವನೆ ಕುರಿತು ಮಾತುಕತೆ ನಡೆಸುವುದು, ಒಪ್ಪಂದಗಳನ್ನು ನಿರ್ವಹಿಸುವುದು ಹಾಗೂ ಆಡಿಷನ್‌ಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ವೃತ್ತಿಯ ಹಲವು ಪ್ರಾಯೋಗಿಕ ವಿಚಾರಗಳನ್ನು ಕಲಿಯಬೇಕಾಯಿತು ಎಂದು ಹೇಳಿದ್ದಾರೆ. ಈಗ ತಮ್ಮ ವೃತ್ತಿಜೀವನದ ಬಗ್ಗೆ ಸಪ್ತಮಿ ಅವರಿಗೆ ಸ್ಪಷ್ಟತೆ ಮೂಡಿದೆ. ಮ್ಯಾನೇಜರ್ ಜೊತೆಗೂ ಉತ್ತಮ ಹೊಂದಾಣಿಕೆ ಬೆಳೆಸಿಕೊಂಡಿದ್ದಾರೆ. ಸದ್ಯ ಒಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ಅವರು, ತೆಲುಗು ಹಾಗೂ ತಮಿಳು ಚಿತ್ರರಂಗದ ಕೆಲವು ಪ್ರಾಜೆಕ್ಟ್‌ಗಳ ಬಗ್ಗೆಯೂ ಮಾತುಕತೆ ನಡೆಸುತ್ತಿದ್ದಾರೆ.

ವೈಯಕ್ತಿಕ ಜೀವನದ ಕಷ್ಟದ ಸಮಯದಲ್ಲಿ ಕುಟುಂಬವೇ ಬೆಂಬಲ!

ಕಳೆದ ಕೆಲವು ವರ್ಷಗಳಲ್ಲಿ ಸಪ್ತಮಿ ಗೌಡ ವೈಯಕ್ತಿಕ ಜೀವನದಲ್ಲಿಯೂ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಆದರೆ ಈ ವಿಚಾರ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ. ಸೂಕ್ತ ಸಮಯ ಬಂದಾಗ ಈ ಬಗ್ಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಕುಟುಂಬವೇ ಅವರಿಗೆ ದೊಡ್ಡ ಶಕ್ತಿಯಾಗಿತ್ತು. ಅದರಲ್ಲೂ ಪೊಲೀಸ್ ಅಧಿಕಾರಿಯಾಗಿರುವ ತಂದೆಗೆ ಕಾನೂನಿನ ಬಗ್ಗೆ ಇರುವ ತಿಳಿವಳಿಕೆ ಸಾಕಷ್ಟು ನೆರವಾಯಿತು ಎಂದು ಹೇಳಿದ್ದಾರೆ.

ಈ ಎಲ್ಲ ಸವಾಲುಗಳ ನಡುವೆ ತಮ್ಮ ವೃತ್ತಿಜೀವನದ ಮೇಲೆ ಗಮನಹರಿಸಬಹುದಾಗಿದ್ದ ಅಮೂಲ್ಯ ಸಮಯ ವ್ಯರ್ಥವಾಯಿತು ಎಂಬ ನೋವು ಕೆಲವೊಮ್ಮೆ ಕಾಡುತ್ತದೆ. ಆದರೆ ಇಂತಹ ಅನುಭವಗಳು ತಮ್ಮನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿಗೊಳಿಸಿವೆ ಎಂಬ ನಂಬಿಕೆಯೂ ಅವರಲ್ಲಿದೆ. ಕಷ್ಟದ ಸಂದರ್ಭಗಳಲ್ಲಿ ತಮ್ಮ ಸಹೋದರಿ ನೀಡಿದ ಬೆಂಬಲವನ್ನು ಸಪ್ತಮಿ ವಿಶೇಷವಾಗಿ ಸ್ಮರಿಸಿದ್ದಾರೆ. ತಾವು ಬೇಸರದಲ್ಲಿದ್ದಾಗ ಹಾಸ್ಯ ಚಟಾಕಿಗಳ ಮೂಲಕ ಮನಸ್ಸು ಹಗುರಗೊಳಿಸುತ್ತಿದ್ದ ಸಹೋದರಿ, ಕಠಿಣ ಸಮಯವನ್ನು ಎದುರಿಸಲು ನೆರವಾಗಿದ್ದಾರೆ. ಸಾಮಾನ್ಯವಾಗಿ ಯಾವುದೇ ವಿಚಾರಕ್ಕೆ ತಕ್ಷಣ ಪ್ರತಿಕ್ರಿಯಿಸುವ ಬದಲು ಅದನ್ನು ಅರ್ಥಮಾಡಿಕೊಂಡು ನಂತರ ನಿರ್ಧಾರ ತೆಗೆದುಕೊಳ್ಳುವುದು ತಮ್ಮ ಸ್ವಭಾವ. ಆದರೂ ಕೆಲವೊಮ್ಮೆ ಅನಿರೀಕ್ಷಿತವಾಗಿ ಆತಂಕ ಎದುರಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

‘ಒಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಸಿನಿಮಾಕ್ಕಿಂತ ಹೆಚ್ಚು ಹಣ ಗಳಿಸಬಹುದು!’

ಇಂದಿನ ಚಿತ್ರರಂಗದಲ್ಲಿ ಸೋಷಿಯಲ್ ಮೀಡಿಯಾ ಕೂಡ ನಟ-ನಟಿಯರ ವೃತ್ತಿಜೀವನದ ಪ್ರಮುಖ ಭಾಗವಾಗಿದೆ. ಅದರ ವಾಣಿಜ್ಯ ಮೌಲ್ಯವನ್ನು ಸಪ್ತಮಿ ಗೌಡ ಕೂಡ ಅರ್ಥಮಾಡಿಕೊಂಡಿದ್ದಾರೆ. ಆದರೆ ಸೋಷಿಯಲ್ ಮೀಡಿಯಾ ಕೆಲವೊಮ್ಮೆ ತಮ್ಮ ಖಾಸಗಿ ಬದುಕಿನೊಳಗೆ ಅತಿಯಾಗಿ ಪ್ರವೇಶಿಸಿದಂತೆ ಅನಿಸುತ್ತದೆ. ಹೀಗಾಗಿ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರಂತೆ.

ಸೋಷಿಯಲ್ ಮೀಡಿಯಾದಿಂದ ಸಿಗುವ ಆರ್ಥಿಕ ಲಾಭದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಕೆಲವೊಮ್ಮೆ ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ನಟರು ಒಂದು ಸಂಪೂರ್ಣ ಸಿನಿಮಾದಲ್ಲಿ ನಟಿಸಿ ಗಳಿಸುವುದಕ್ಕಿಂತಲೂ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈಗ ಸಿನಿಮಾಗಳ ಆಯ್ಕೆಯಲ್ಲಿ ಸಂಭಾವನೆಯೊಂದೇ ಮಾನದಂಡವಲ್ಲ. ಪಾತ್ರ ಇಷ್ಟವಾದರೆ, ಕಥೆ ತಮ್ಮನ್ನು ನಿಜವಾಗಿಯೂ ಆಕರ್ಷಿಸಿದರೆ ಹಣಕ್ಕಿಂತಲೂ ಆ ಅವಕಾಶಕ್ಕೆ ಹೆಚ್ಚಿನ ಮಹತ್ವ ನೀಡಲು ಸಿದ್ಧ ಎಂದು ಸಪ್ತಮಿ ಹೇಳಿದ್ದಾರೆ.

‘ಕಾಂತಾರ’ ಯಶಸ್ಸಿನ ನಾಲ್ಕು ವರ್ಷಗಳ ಬಳಿಕ ಸಪ್ತಮಿಗೆ ಹೊಸ ಸ್ಪಷ್ಟತೆ!

ಇನ್ನು ‘ಕಾಂತಾರ’ ಮೂಲಕ ಅಪಾರ ಜನಪ್ರಿಯತೆ ಗಳಿಸಿ ನಾಲ್ಕು ವರ್ಷಗಳಾಗಿವೆ. ಈ ಅವಧಿಯಲ್ಲಿ ಚಿತ್ರರಂಗದ ವ್ಯವಹಾರ, ಸಿನಿಮಾ ಆಯ್ಕೆ, ಸಂಭಾವನೆ ಮಾತುಕತೆ, ವೃತ್ತಿಪರ ಸಂಬಂಧಗಳು ಹಾಗೂ ತಮ್ಮ ಸಾರ್ವಜನಿಕ ಇಮೇಜ್ ನಿರ್ವಹಿಸುವ ಬಗ್ಗೆ ಸಾಕಷ್ಟು ಅನುಭವ ಗಳಿಸಿರುವುದಾಗಿ ಸಪ್ತಮಿ ಗೌಡ ಹೇಳಿದ್ದಾರೆ. ‘ಕಾಂತಾರ’ ಯಶಸ್ಸಿನ ಬಳಿಕ ಸಿಕ್ಕ ಅವಕಾಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು ಎಂಬ ಸಣ್ಣ ಬೇಸರ ಅವರಲ್ಲಿದೆ. ಆದರೆ ಆ ಅನುಭವಗಳೇ ತಮ್ಮ ವೃತ್ತಿಜೀವನವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬ ಸ್ಪಷ್ಟತೆ ನೀಡಿವೆ. ಇದೀಗ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿಯೂ ಹೊಸ ಅವಕಾಶಗಳನ್ನು ಎದುರು ನೋಡುತ್ತಿರುವ ಸಪ್ತಮಿ, ಮುಂದಿನ ದಿನಗಳಲ್ಲಿ ಹೆಚ್ಚು ಯೋಚಿಸಿ, ಉತ್ತಮ ನಿರ್ಧಾರಗಳೊಂದಿಗೆ ತಮ್ಮ ಸಿನಿಪಯಣವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.