ಚೆನ್ನೈ(ಅ.12): ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಭಾರತ ಭೇಟಿ ಮುಕ್ತಾಯ ಕಂಡಿದ್ದು, ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸೈ ಎಂದಿದ್ದಾರೆ. 

ಪ್ರಮುಖವಾಗಿ ವ್ಯಾಪಾರ ಕೊರತೆ ಕುರಿತ ಭಾರತದ ಕಳವಳ ಪರಿಹರಿಸಲು ಪ್ರಮಾಣಿಕ ಕ್ರಮ ಕೈಗೊಳ್ಳಲು ಕ್ಸಿ ಜಿನ್‌ಪಿಂಗ್ ಮುಂದಡಿ ಇಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ವ್ಯಾಪಾರ-ವಹಿವಾಟಿನಲ್ಲಿ ಉದ್ಭವಿಸಿದ್ದ ಗೊಂದಲಗಳಿಗೆ ತೆರೆ ಎಳೆಯಲು ಉಭಯ ನಾಯಕರು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.

ವ್ಯಾಪಾರ ಕೊರತೆ ಕುರಿತಂತೆ ಪ್ರಾಮಾಣಿಕ ಕ್ರಮ ಕೈಗೊಳ್ಳಲು ಚೀನಾ ಸಿದ್ಧವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸುವ ಭರವಸೆ ನೀಡಿದೆ ಎಂದು ಗೋಖಲೆ ಮಾಹಿತಿ ನೀಡಿದರು.

ವ್ಯಾಪಾರ, ಹೂಡಿಕೆ ಹಾಗೂ ಸೇವೆಗಳ ಕಾರ್ಯವಿಧಾನದಲ್ಲಿ ಮಹತ್ವದ ಬದಲಾವಣೆಗೆ ಭಾರತ-ಚೀನಾ ಸಜ್ಜಾಗಿದ್ದು, ಈ ನಿರ್ಣಯ ಭವಿಷ್ಯದಲ್ಲಿ ಅತ್ಯಂತ ಲಾಭದಾಯಕವಾಗಲಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.

ಮಾನಸ ಸರೋವರ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲ ಸ್ಥಾಪನೆ, ತಮಿಳುನಾಡು ಹಾಗೂ ಚೀನಾದ ಫುಜಿಯಾನ್ ಪ್ರಾಂತ್ಯದ ನಡುವಿನ ಸಂಪರ್ಕ ವೃದ್ಧಿಗೆ ಶೃಂಗಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇನ್ನು ಮುಂದಿನ ಶೃಂಗಸಭೆಗೆ ಚೀನಾ ಗೆ ಬರುವಂತೆ ಪ್ರಧಾನಿ ಮೋದಿ ಅವರನ್ನು ಚೀನಾ ಆಧ್ಯಕ್ಷ ಕ್ಸಿ ಜಿನ್ ಪಿಂಗ್ ಆಹ್ವಾನಿಸಿದ್ದು, ಈ ಆಹ್ವಾನವನ್ನು ಮೋದಿ ಒಪ್ಪಿಕೊಂಡಿದ್ದಾರೆ ಎಂದು ಗೋಖಲೆ ತಿಳಿಸಿದರು.

ಇನ್ನು ಶೃಂಗಸಭೆಯ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇಪಾಳಕ್ಕೆ ತೆರಳಿದ್ದು, ಪ್ರಧಾನಿ ಮೋದಿ ಚೀನಾ ಅಧ್ಯಕ್ಷರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.