ನವದೆಹಲಿ(ಅ.11): ಕಾಶ್ಮೀರ ವಿಚಾರ ತಮ್ಮ ಗಮನದಲ್ಲಿದೆ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿರುವ ಚೀನಾಗೆ ಸೂಕ್ತ ಪ್ರತಿಕ್ರಿಯೆ ನೀಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಕಾಶ್ಮೀರ ಕುರಿತು ಸೊಲ್ಲೆತ್ತುವ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಅವರಿಗೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಕಾಲ್ತೆಗೆಯುವಂತೆ ನಮ್ಮ 56 ಇಂಚಿನ ಪ್ರಧಾನಿ ಮೋದಿ ಹೇಳಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪಿಒಕೆಯಲ್ಲಿ ಚೀನಾ 5 ಸಾವಿರ ಎಕರೆ ಭೂಮಿ ಖರೀದಿಸಿದ್ದು, ಇದನ್ನು ಪ್ರಶ್ನಿಸದ ಮೋದಿ ಭಾರತದ ಶಕ್ತಿಯನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹರಿಹಾಯ್ದಿದ್ದಾರೆ.

ಚೀನಾ ಕಾಶ್ಮೀರ ವಿಚಾರ ಕೇಳಿದರೆ, ಹಾಂಕಾಂಗ್'ನಲ್ಲಿ ಅದು ನಡೆಸುತ್ತಿರುವ ದೌರ್ಜನ್ಯ, ಟಿಬೆಟ್‌ನಲ್ಲಿನ ಸ್ವಾತಂತ್ರ್ಯ ಹರಣ, ದಕ್ಷಿಣ ಚೀನಾ ಸಮುದ್ರದಲ್ಲಿ ಅದರ ಅಟ್ಟಹಾಸಗಳ ಕುರಿತು ಮೋದಿ ಪ್ರಶ್ನಿಸಬೇಕಲ್ಲವೇ ಎಂದು ಕಾಂಗ್ರೆಸ್ ಹೇಳಿದೆ.