ಮಹಾಬಲಿಪುರಂ[ಅ.11]: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ತಮಿಳುನಾಡು ರಾಜಧಾನಿ ಚೆನ್ನೈ ಸಮೀಪದಲ್ಲಿರುವ ಸಮುದ್ರ ನಗರಿ ಮಹಾಬಲಿಪುರಂನಲ್ಲಿ ಅಕ್ಟೋಬರ್‌ 11 ಮತ್ತು 12ರಂದು ದ್ವಿಪಕ್ಷೀಯ ಶೃಂಗಸಭೆ ನಡೆಸಲಿದ್ದಾರೆ. ಈ ನಿಮಿತ್ತ ಚೆನ್ನೈ ಹಾಗೂ ಮಹಾಬಲಿಪುರಂ ನಗರಗಳು ಉಭಯ ನಾಯಕರನ್ನು ಸ್ವಾಗತಿಸಲು ಸರ್ವಸಿದ್ಧತೆ ಮಾಡಿಕೊಂಡಿವೆ.

ಮೋದಿ ಮತ್ತು ಕ್ಸಿ ಅವರು ಭಯೋತ್ಪಾದನೆ, ಪ್ರಾದೇಶಿಕ ಸಹಕಾರ, ಚೀನಾ-ಭಾರತ ನಡುವಿನ ಗಡಿ ವಿವಾದ ಇತ್ಯಾದಿಗಳ ಬಗ್ಗೆ ದ್ವಿಪಕ್ಷೀಯ ಶೃಂಗಸಭೆ ಕೈಗೊಳ್ಳಲಿದ್ದು, ಪರಸ್ಪರ ವಿಶ್ವಾಸವೃದ್ಧಿಗೆ ಮಾತುಕತೆ ನಡೆಸಲಿದ್ದಾರೆ. ಕಾಶ್ಮೀರ ವಿಷಯವು ಅಜೆಂಡಾದಲ್ಲಿ ಇಲ್ಲವಾದರೂ, ಒಂದು ವೇಳೆ ಕ್ಸಿ ಅವರು ಈ ಬಗ್ಗೆ ಪ್ರಸ್ತಾಪಿಸಿದರೆ ಭಾರತದ ನಿಲುವನ್ನು ಮೋದಿ ಸ್ಪಷ್ಟಪಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಚೀನಾ ಅಧ್ಯಕ್ಷ ಹಾಗೂ ಭಾರತದ ಪ್ರಧಾನಿ ನಡುವೆ ನಡೆಯುತ್ತಿರುವ ಮೂರನೇ ಶೃಂಗ ಇದಾಗಿದೆ. 2014ರಲ್ಲಿ ಸಾಬರಮತಿಯಲ್ಲಿ ಹಾಗೂ ಕಳೆದ ವರ್ಷ ಚೀನಾದ ವುಹಾನ್‌ನಲ್ಲಿ ದ್ವಿಪಕ್ಷೀಯ ಶೃಂಗ ನಡೆದಿದ್ದವು.

ಸಕಲ ಭದ್ರತೆ, ಸಾಂಸ್ಕೃತಿಕ ರಸದೂಟ:

ಚೆನ್ನೈಗೆ ಶುಕ್ರವಾರ ಬಂದಿಳಿಯಲಿರುವ ಕ್ಸಿ ಹಾಗೂ ಮೋದಿ ಅವರನ್ನು ಸ್ವಾಗತಿಸಲು ಸುಮಾರು 7 ಸಾವಿರ ಶಾಲಾ ಮಕ್ಕಳು ವಿಮಾನ ನಿಲ್ದಾಣದಲ್ಲಿ ಸೇರಲಿದ್ದಾರೆ. ವಿಮಾನ ನಿಲ್ದಾಣದಿಂದ ಚೆನ್ನೈನಲ್ಲಿರುವ ತಾರಾ ಹೋಟೆಲ್‌ಗೆ ಕ್ಸಿ ತೆರಳಲಿದ್ದು, ಅಲ್ಲಿ ಕೆಲಕಾಲ ವಿಶ್ರಮಿಸಲಿದ್ದಾರೆ. ಬಳಿಕ ಉಭಯ ನಾಯಕರು 55 ಕಿ.ಮೀ. ದೂರದ ಮಹಾಬಲಿಪುರಂಗೆ ತೆರಳಲಿದ್ದಾರೆ.

ಮಹಾಬಲಿಪುರಂನಲ್ಲಿ ಮಾತುಕತೆಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸರ್ವಸಿದ್ಧತೆ ಮಾಡಲಾಗಿದೆ. ಅಲ್ಲಿ 700 ಕಲಾವಿದರು ಭಾರತೀಯ ಸಂಸ್ಕೃತಿಯನ್ನು ಕ್ಸಿ ಅವರಿಗೆ ಉಣಬಡಿಸಲಿದ್ದಾರೆ. ಇನ್ನು ಭದ್ರತೆಗೆಂದು 9 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಚೆನ್ನೈ ಹಾಗೂ ಮಹಾಬಲಿಪುರಂ ರಸ್ತೆಯುದ್ದಕ್ಕೂ ಗಸ್ತು ನಡೆಸಲಾಗುತ್ತಿದೆ. 800 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಮುದ್ರದಲ್ಲಿ ಕರಾವಳಿ ಪಡೆಯ ಹಡಗುಗಳು ಗಸ್ತು ನಡೆಸುತ್ತಿದ್ದು, ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಿವೆ. ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಗುರುವಾರದಿಂದ 3 ದಿನ ನಿರ್ಬಂಧ ವಿಧಿಸಲಾಗಿದೆ.

ಮಹಾಬಲಿಪುರಂ ದೇವಾಲಯಕ್ಕೆ ಕ್ಸಿ ಹಾಗೂ ಮೋದಿ ಭೇಟಿ ನೀಡಿ, ಅಲ್ಲಿ ಮೈಸೂರಿನಿಂದ ತರಿಸಿ ಅಳವಡಿಸಿರುವ ಹುಲ್ಲುಹಾಸಿನ ಮೇಲೆ ನಡೆದಾಡಲಿದ್ದಾರೆ.

ಈಗಾಗಲೇ ಚೆನ್ನೈ ಹಾಗೂ ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷ ಹಾಗೂ ಭಾರತದ ಪ್ರಧಾನಿಯನ್ನು ಸ್ವಾಗತಿಸುವ ಕಮಾನುಗಳು ಹಾಗೂ ಭಿತ್ತಿಚಿತ್ರಗಳು ರಾರಾಜಿಸುತ್ತಿದ್ದು, ಅವುಗಳ ಮೇಲೆ ತಮಿಳು, ಹಿಂದಿ ಹಾಗೂ ಚೀನೀ ಭಾಷೆಯಲ್ಲಿ ಸ್ವಾಗತ ಕೋರಲಾಗಿದೆ.