ಸಾಂಪ್ರದಾಯಿಕ ಶತ್ರು ರಾಷ್ಟ್ರಗಳಾದ ಭಾರತ ಹಾಗೂ ಚೀನಾದ ಮುಖ್ಯಸ್ಥರ ನಡುವೆ ಮತ್ತೊಂದು ಅನೌಪಚಾರಿಕ ಸಭೆ ಇಂದು ತಮಿಳುನಾಡಿನ ಮಾಮಲ್ಲಾಪುರಂನಲ್ಲಿ ನಡೆಯುತ್ತಿದೆ. ಜಾಗತಿಕ ನಾಯಕರಾಗಲು ಪೈಪೋಟಿ ನಡೆಸುತ್ತಿರುವ ನರೇಂದ್ರ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್‌, ಉಭಯ ದೇಶಗಳ ನಡುವೆ ಇರುವ ಹಲವು ವಿವಾದಗಳಿಂದಾಗಿ ಜಾಗತಿಕ ವೇದಿಕೆಯಲ್ಲಿ ಅಖಂಡ ವೈರಿಗಳೆಂದೇ ಪರಿಗಣಿಸಲ್ಪಡುತ್ತಾರೆ. ಆದರೆ ಅನೌಪಚಾರಿಕ ಭೇಟಿಯ ವಿಷಯಕ್ಕೆ ಬಂದಾಗ ಇಬ್ಬರೂ ಇನ್ನಿಲ್ಲದ ಸ್ನೇಹಿತರಂತೆ ಬಿಂಬಿಸಿಕೊಳ್ಳುತ್ತಾ ಬಂದಿದ್ದಾರೆ.

1 ನೇ ಅನೌಪಚಾರಿಕ ಸಭೆ - ರಷ್ಯಾದ ಸುಚಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ನರೇಂದ್ರ ಮೋದಿ ಅವರ ಮಧ್ಯೆ 2018ರಲ್ಲಿ ನಡೆದ ಮೊದಲ ಅನೌಪಚಾರಿಕ ಸಭೆ ಇದು. ರಷ್ಯಾದ ಸುಚಿ ಪಟ್ಟಣದಲ್ಲಿ ಆಯೋಜಿಸಿದ್ದ ಈ ಶೃಂಗದಲ್ಲಿ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಉಭಯ ದೇಶಗಳ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದರು. ವಿಶ್ವಸಂಸ್ಥೆ, ಎಸ್‌ಸಿಒ ಬ್ರಿಕ್ಸ್‌ ಮತ್ತು ಜಿ-20 ಸಂಸ್ಥೆಗಳೂ ಸೇರಿದಂತೆ ಬಹುಹಂತದ ಸಂಸ್ಥೆಗಳ ಮೂಲಕ ಜೊತೆಯಾಗಿ ಕೆಲಸ ಮಾಡಲು ಮೋದಿ ಮತ್ತು ಪುಟಿನ್‌ ಒಪ್ಪಿಗೆ ಸೂಚಿಸಿದ್ದರು.

ಇಂದು ನಾಳೆ ಮೋದಿ- ಕ್ಸಿ ಶೃಂಗ ಸಕಲ ಭದ್ರತೆ, ಸಾಂಸ್ಕೃತಿಕ ರಸದೂಟ

2 ನೇ ಅನೌಪಚಾರಿಕ ಸಭೆ - ಚೀನಾದ ವುಹಾನ್‌

ಕಳೆದ ವರ್ಷ 2018ರ ಏಪ್ರಿಲ್‌ನಲ್ಲಿ 73 ದಿನಗಳ ಕಾಲ ಸಿಕ್ಕಿಂನ ಡೋಕ್ಲಾಂ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನಾಪಡೆಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ನಂತರ ಮೋದಿ ಮೊದಲ ಬಾರಿಗೆ ಚೀನಾದ ಜೊತೆಗೆ ಅನೌಪಚಾರಿಕ ಶೃಂಗ ಕೈಗೊಂಡಿದ್ದರು. ಚೀನಾದ ವುಹಾನ್‌ನಲ್ಲಿ ನಡೆದ ಶೃಂಗದಲ್ಲಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ಭಾಗವಹಿಸಿದ್ದರು. ಈ ವೇಳೆ ದ್ವಿಪಕೀಯ ಸಂಬಂಧ, ಜಾಗತಿಕ ಶಾಂತಿ ಮತ್ತಿತರ ವಿಚಾರಗಳ ಬಗ್ಗೆ ಸಮಾಲೋಚಿಸಿದ್ದರು.

3 ನೇ ಅನೌಪಚಾರಿಕ ಸಭೆ - ಭಾರತದ ಮಹಾಬಲಿಪುರಂ

ಸದ್ಯ ನರೇಂದ್ರ ಮೋದಿ ಅವರ ಮೂರನೇ ಅನೌಪಚಾರಿಕ ಸಭೆ ಹಾಗೂ ಚೀನಾ ಅಧ್ಯಕ್ಷರೊಂದಿಗಿನ 2ನೇ ಅನೌಪಚಾರಿಕ ಶೃಂಗ ತಮಿಳುನಾಡಿನ ಕಡಲತಡಿಯ ಪ್ರವಾಸಿ ತಾಣ ಮಾಮಲ್ಲಾಪುರಂನಲ್ಲಿ ಆಯೋಜಿತವಾಗಿದೆ. ಈ ವೇಳೆ ದ್ವಿಪಕ್ಷೀಯ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಹತ್ವದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ.

ಅನೌಪಚಾರಿಕ ಭೇಟಿ ಅಂದರೇನು?

ಯಾವುದೇ ಎರಡು ಅಥವಾ ಅದಕ್ಕಿಂತ ಹೆಚ್ಚು ದೇಶಗಳ ಮುಖ್ಯಸ್ಥರು ಶೃಂಗಸಭೆ ನಡೆಸುವುದು ಯಾವುದಾದರೂ ಒಂದು ದೇಶದ ರಾಜಧಾನಿಯಲ್ಲೇ ಆಗಿರುತ್ತದೆ. ಅಂತಹ ಭೇಟಿಯ ಹಿಂದೆ ಅಧಿಕೃತ ಅಜೆಂಡಾಗಳಿರುತ್ತವೆ. ಆ ಶೃಂಗದಲ್ಲಿ ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಆದರೆ, ಅನೌಪಚಾರಿಕ ಭೇಟಿಯ ಹಿಂದೆ ನಿರ್ದಿಷ್ಟಉದ್ದೇಶಗಳಿರುವುದಿಲ್ಲ.

ರಾಜಧಾನಿಯ ಹೊರಗೆ ಇಂತಹ ಭೇಟಿ ಏರ್ಪಡುತ್ತದೆ. ಉಭಯ ದೇಶಗಳ ನಾಯಕರು ತಮ್ಮ ದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಬೇಕಾದರೂ ಮಾತನಾಡಿ ಒಪ್ಪಂದಕ್ಕೆ ಬರಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಇಂತಹ ಭೇಟಿಯಲ್ಲಿ ಉಭಯ ನಾಯಕರ ನಡುವೆ ನಡೆಯುವ ಕೆಲ ಮಾತುಕತೆಗಳು ಎಲ್ಲೂ ದಾಖಲಾಗುವುದಿಲ್ಲ.

ಮಹಾಬಲಿಪುರಂ ಆಯ್ಕೆ ಏಕೆ?

ಚೀನಾ ಹಾಗೂ ಭಾರತದ ನಡುವಿನ ಸಂಬಂಧಕ್ಕೆ 2000 ವರ್ಷಗಳ ಇತಿಹಾಸವಿದೆ. ಪಲ್ಲವರ ಆಳ್ವಿಕೆಗೆ ಒಳಪಟ್ಟಿದ್ದ ಚೆನ್ನೈನಿಂದ 50 ಕಿ.ಮೀ. ದೂರವಿರುವ ಮಾಮಲ್ಲಾಪುರಂ ಪಟ್ಟಣ ಹಾಗೂ ಚೀನಾದ ನಡುವೆ ಪ್ರಾಚೀನ ಕಾಲದಲ್ಲೇ ರಕ್ಷಣಾ ಹಾಗೂ ವ್ಯಾಪಾರ ಒಪ್ಪಂದ ನಡೆದಿತ್ತು ಎನ್ನಲಾಗಿದೆ. ಉತ್ಖನನದ ವೇಳೆ ಲಭಿಸಿರುವ ನಾಣ್ಯಗಳು ಮತ್ತು ಚಿಹ್ನೆಗಳು ಇದನ್ನು ದೃಢಪಡಿಸಿವೆ. ಪಲ್ಲವರಿಗೂ ಮುನ್ನವೇ ಅಸ್ತಿತ್ವದಲ್ಲಿದ್ದ ಈ ಪಟ್ಟಣ, ಭಾರತ ಮತ್ತು ಚೀನಾ ನಡುವೆ ರೇಷ್ಮೆ ಹಾಗೂ ಸಂಬಾರ ಪದಾರ್ಥಗಳ ವ್ಯಾಪಾರದಲ್ಲಿ ಮುಖ್ಯ ಪಾತ್ರ ವಹಿಸಿತ್ತು.

ಕಾಂಚಿಪುರಂನ ಪ್ರಸಿದ್ಧ ರೇಷ್ಮೆ ಉದ್ಯಮ ಸ್ಥಾಪನೆಗೆ ಮಮಲ್ಲಾಪುರಂ ಬಂದರಿನ ಮೂಲಕವೇ ಚೀನಾದಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದ್ದರು ಎಂಬ ಐತಿಹ್ಯವಿದೆ. ಚೀನಿ ಯಾತ್ರಿಕ ಹ್ಯೂಯೆನ್‌ತ್ಸಾಂಗ್‌ 7ನೇ ಶತಮಾನದಲ್ಲಿ ಕಾಂಚಿಪುರಕ್ಕೆ ಭೇಟಿ ನೀಡಿದ್ದ. ಆ ಅವಧಿಯಲ್ಲಿ ಬೌದ್ಧ ಧರ್ಮವು ಚೀನಾಕ್ಕೆ ಪಸರಿಸಿತು ಎನ್ನಲಾಗುತ್ತದೆ. ಕ್ಸಿ ಅವರಿಗೆ ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿಯಿರುವುದರಿಂದ ಐತಿಹಾಸಿಕ ಊರನ್ನೇ ಮೋದಿ ಈ ಭೇಟಿಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಅಹ್ಮದಾಬಾದ್‌ನಲ್ಲೂ ನಡೆದಿತ್ತು ಇಂಥದ್ದೇ ಭೇಟಿ

ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷರ ನಡುವೆ 2014ರ ಸೆಪ್ಟೆಂಬರ್‌ನಲ್ಲಿ ಗುಜರಾತಿನ ಅಹ್ಮದಾಬಾದ್‌ನಲ್ಲಿ ಸಭೆ ನಡೆದಿತ್ತು. ರಾಜಧಾನಿಯ ಹೊರಗೆ ನಡೆದ ಆ ಶೃಂಗ ಕೂಡ ಅನೌಪಚಾರಿಕ ಶೃಂಗವೆಂದೇ ಹೇಳಬಹುದು. ಆದರೆ ಆ ಸಭೆಗೆ ಅಧಿಕೃತ ಅಜೆಂಡಾಗಳಿದ್ದವು. ಗಡಿ ವಿವಾದ, ಲಾಭದಾಯಕ ಒಪ್ಪಂದಗಳ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದ್ದರು.

ಮೋದಿ ಆರಂಭಿಸಿದ ಹೊಸ ಸಂಪ್ರದಾಯ

ಅನ್ಯ ದೇಶಗಳ ಜೊತೆಗೆ ಸ್ನೇಹ ವೃದ್ಧಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೇ ಆರಂಭಿಸಿದ ಹೊಸ ಪದ್ಧತಿ ಅನೌಪಚಾರಿಕ ಶೃಂಗ. ಇಲ್ಲಿ ಚರ್ಚೆಯಾಗುವ ವಿಷಯಗಳು ಪೂರ್ವ ನಿರ್ಧಾರಿತ ಅಲ್ಲ. ಭೇಟಿ ಬಳಿಕ ಕುಶಲೋಪರಿ ರೀತಿಯಲ್ಲಿ ವಿವಿಧ ವಿಷಯಗಳನ್ನು ಚರ್ಚಿಸಲಾಗುತ್ತದೆ. ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹಾಗೂ ಜಾಗತಿಕ ಶಾಂತಿಗೆ ಮೋದಿ ರೂಪಿಸಿದ ಅಸ್ತ್ರ ಇದು. ಜಾಗತಿಕ ನಾಯಕರ ಜೊತೆಗೆ ಖಾಸಗಿ ಸ್ನೇಹ ವೃದ್ಧಿಸಿಕೊಳ್ಳುವುದಕ್ಕೂ ಮೋದಿ ಇಂತಹ ಭೇಟಿಯನ್ನು ಆಯೋಜಿಸುತ್ತಾರೆ.