ಟಾಟಾ ಗ್ರೂಪ್‌ನ ಮಾಲೀಕತ್ವ ಯಾವುದೇ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ಸೇರಿಲ್ಲ. ಇದರ ಪ್ರಮುಖ ಹೋಲ್ಡಿಂಗ್ ಕಂಪನಿಯಾದ 'ಟಾಟಾ ಸನ್ಸ್'ನ ಶೇ. 66ರಷ್ಟು ಷೇರುಗಳನ್ನು ವಿವಿಧ ಚಾರಿಟೇಬಲ್ ಟ್ರಸ್ಟ್‌ಗಳು ಹೊಂದಿದ್ದು, ಲಾಭಾಂಶವನ್ನು ಸಮಾಜ ಕಲ್ಯಾಣಕ್ಕೆ ಬಳಸಲಾಗುತ್ತದೆ.

ಮುಂಬೈ (ಆ.13): ಭಾರತದ ಅತ್ಯಂತ ದೊಡ್ಡ ಹಾಗೂ ಅತ್ಯಂತ ವಿಶ್ವಾಸಾರ್ಹ ಉದ್ಯಮ ಸಮೂಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಟಾಟಾ ಗ್ರೂಪ್' (Tata Group) ನೈಜ ಮಾಲೀಕರು ಯಾರು ಎಂಬ ಪ್ರಶ್ನೆ ಹಲವರಲ್ಲಿರಬಹುದು. ಆದರೆ, ಅಚ್ಚರಿಯ ವಿಷಯವೆಂದರೆ ಟಾಟಾ ಗ್ರೂಪ್‌ನ ಮಾಲೀಕತ್ವ ಯಾವುದೇ ಒಬ್ಬ ವ್ಯಕ್ತಿ ಅಥವಾ ಟಾಟಾ ಕುಟುಂಬದ ಏಕೈಕ ಸದಸ್ಯನ ಬಳಿಯಿಲ್ಲ!

ಟಾಟಾ ಸಮೂಹದ ಪ್ರಮುಖ ಹೋಲ್ಡಿಂಗ್ ಕಂಪನಿಯಾದ 'ಟಾಟಾ ಸನ್ಸ್' (Tata Sons) ಮಾಲೀಕತ್ವದ ರಚನೆಯು ದೇಶದ ಇತರ ಕುಟುಂಬ ಚಾಲಿತ ಉದ್ಯಮ ಸಂಸ್ಥೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಟಾಟಾ ಸನ್ಸ್‌ನ ಬಹುಪಾಲು ಷೇರುಗಳು ಟಾಟಾ ಕುಟುಂಬವು ಸ್ಥಾಪಿಸಿರುವ ವಿವಿಧ ದತ್ತಿ ಚಾರಿಟೇಬಲ್ ಟ್ರಸ್ಟ್‌ಗಳ (Charitable Trusts) ಬಳಿಯಿದ್ದು, ಅವುಗಳ ಮೂಲಕವೇ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ.

ಲಾಭಾಂಶದ ಸಿಂಹಪಾಲು ಚಾರಿಟೇಬಲ್ ಟ್ರಸ್ಟ್‌ಗಳಿಗೆ!

ಟಾಟಾ ಸನ್ಸ್ ಕಂಪನಿಯ ಸುಮಾರು ಶೇ. 66ರಷ್ಟು ಷೇರುಗಳು ವಿವಿಧ ಚಾರಿಟೇಬಲ್ ಟ್ರಸ್ಟ್‌ಗಳ ವಶದಲ್ಲಿವೆ. ಈ ಟ್ರಸ್ಟ್‌ಗಳು ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ, ಜೀವನಾಧಾರ ಹಾಗೂ ಕಲೆ-ಸಂಸ್ಕೃತಿಯಂತಹ ವಿವಿಧ ಸಾಮಾಜಿಕ ಕ್ಷೇಮಾಭಿವೃದ್ಧಿ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಅಂದರೆ, ಟಾಟಾ ಕುಟುಂಬವು ಈ ಬೃಹತ್ ಉದ್ಯಮ ಸಮೂಹವನ್ನು ತಮ್ಮ ಸ್ವಂತ ಹೆಸರಿನಲ್ಲಿ ನಡೆಸುತ್ತಿಲ್ಲ. ಬದಲಾಗಿ, ಕುಟುಂಬದೊಂದಿಗೆ ಜೋಡಣೆಯಾಗಿರುವ ಚಾರಿಟೇಬಲ್ ಟ್ರಸ್ಟ್‌ಗಳ ಮೂಲಕ ನಡೆಸುತ್ತದೆ. ಇನ್ನು ಈ ಟ್ರಸ್ಟ್‌ಗಳ ಹೆಸರಲ್ಲೇ ಟಾಟಾ ಸನ್ಸ್‌ನ ಗರಿಷ್ಠ ಷೇರುಗಳಿವೆ.

ಅತಿದೊಡ್ಡ ಷೇರುದಾರರು ಯಾರು?

ಟಾಟಾ ಸನ್ಸ್‌ನ ಅತಿದೊಡ್ಡ ಇಬ್ಬರು ಷೇರುದಾರರೆಂದರೆ 'ಸರ್ ದೊರಾಬ್ಜಿ ಟಾಟಾ ಟ್ರಸ್ಟ್' ಮತ್ತು 'ಸರ್ ರತನ್ ಟಾಟಾ ಟ್ರಸ್ಟ್'. ಈ ಎರಡೂ ಟ್ರಸ್ಟ್‌ಗಳು ಜಂಟಿಯಾಗಿ ಟಾಟಾ ಸನ್ಸ್‌ನಲ್ಲಿ ಶೇ. 51.54ರಷ್ಟು ಪ್ರಮುಖ ಷೇರುಗಳನ್ನು ಹೊಂದಿವೆ. ಶೇ. 51ಕ್ಕಿಂತ ಹೆಚ್ಚಿನ ಪಾಲು ಹೊಂದಿರುವ ಕಾರಣ, ಈ ಇಬ್ಬರೂ ಟ್ರಸ್ಟ್‌ಗಳು ಟಾಟಾ ಸನ್ಸ್‌ ಬಹುತೇಕ ನಿರ್ಧಾರ ಮಾಡುವಷ್ಟು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿವೆ.

ಇದರ ಜೊತೆಗೆ, ಟಾಟಾ ಕುಟುಂಬಕ್ಕೆ ಸೇರಿದ ಇತರ ಚಾರಿಟೇಬಲ್ ಟ್ರಸ್ಟ್‌ಗಳು ಹೊಂದಿರುವ ಷೇರುಗಳನ್ನು ಸೇರಿಸಿದರೆ ಒಟ್ಟು ಪಾಲುದಾರಿಕೆ ಶೇ. 66ರಷ್ಟಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ, ಈ ಟ್ರಸ್ಟ್‌ಗಳ ಬಳಿ ಇರುವ ಷೇರುಗಳು ಯಾವುದೇ ಒಬ್ಬ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. 'ಬೋರ್ಡ್ ಆಫ್ ಟ್ರಸ್ಟೀಸ್' (Board of Trustees) ಸದಸ್ಯರು ಈ ಟ್ರಸ್ಟ್‌ಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ನೋಯೆಲ್ ಟಾಟಾ, ಟಾಟಾ ಸನ್ಸ್‌ನ ಮಾಲೀಕರೇ?

'ಟಾಟಾ ಟ್ರಸ್ಟ್‌'ನ ಅಧ್ಯಕ್ಷರಾಗಿರುವ ನೋಯೆಲ್ ಟಾಟಾ (Noel Tata) ಅವರು ಟಾಟಾ ಸನ್ಸ್ ಷೇರುಗಳ ನಿಜವಾದ ಮಾಲೀಕರೇ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಆದರೆ ಉತ್ತರ 'ಖಂಡಿತ ಅಲ್ಲ'. ಚಾರಿಟೇಬಲ್ ಟ್ರಸ್ಟ್‌ಗಳ ಬಳಿ ಇರುವ ಷೇರುಗಳ ವೈಯಕ್ತಿಕ ಮಾಲೀಕರು ನೋಯೆಲ್ ಟಾಟಾ ಅವರಲ್ಲ. ಈ ಷೇರುಗಳು ಆಯಾ ಟ್ರಸ್ಟ್‌ಗಳ ಹೆಸರಿನಲ್ಲಿರುತ್ತವೆ ಮತ್ತು ಇವುಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಟ್ರಸ್ಟ್‌ನ ಧರ್ಮದರ್ಶಿಗಳ ಮಂಡಳಿಯು (Board of Trustees) ತೆಗೆದುಕೊಳ್ಳುತ್ತದೆ.

ಟಾಟಾ ಗ್ರೂಪ್‌ನಲ್ಲಿ ಟಾಟಾ ಸನ್ಸ್ ಪಾತ್ರವೇನು?

ಟಾಟಾ ಸನ್ಸ್, ಟಾಟಾ ಗ್ರೂಪ್‌ನ ಪ್ರಮುಖ ಹೂಡಿಕೆ ಹಾಗೂ ಕೇಂದ್ರ ಹೋಲ್ಡಿಂಗ್ ಕಂಪನಿಯಾಗಿದೆ. ಇದನ್ನು ಈ ಸಮೂಹದ ಪ್ರಮುಖ ಪ್ರಮೋಟರ್ ಕಂಪನಿ ಎಂದೂ ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಪ್ರತ್ಯೇಕ ವಿಭಾಗಗಳಲ್ಲಿ ಹಲವು ಬೃಹತ್ ಕಂಪನಿಗಳು ಉದ್ಯಮ ನಡೆಸುತ್ತಿವೆ. ಪ್ರತಿಯೊಂದು ಕಂಪನಿಗೂ ತನ್ನದೇ ಆದ ಸ್ವತಂತ್ರ ಆಡಳಿತ ಮಂಡಳಿ (Board) ಹಾಗೂ ಮ್ಯಾನೇಜ್‌ಮೆಂಟ್ ಇರುತ್ತದೆ. ಅಂದರೆ, ಟಾಟಾ ಗ್ರೂಪ್‌ನ ಪ್ರತಿಯೊಂದು ಕಂಪನಿಯ ದೈನಂದಿನ ಕಾರ್ಯಚಟುವಟಿಕೆಗಳನ್ನು ಟಾಟಾ ಕುಟುಂಬದ ಸದಸ್ಯರು ನೇರವಾಗಿ ನಿರ್ವಹಿಸುವುದಿಲ್ಲ.

ಎಂ.ಕೆ. ಟಾಟಾ ಟ್ರಸ್ಟ್ ಬಳಿಯೂ ಇವೆ ಷೇರುಗಳು!

ಟಾಟಾ ಸನ್ಸ್‌ನಲ್ಲಿ ಷೇರುಗಳನ್ನು ಹೊಂದಿರುವ ಟ್ರಸ್ಟ್‌ಗಳಲ್ಲಿ 'ಎಂ.ಕೆ. ಟಾಟಾ ಟ್ರಸ್ಟ್' (M. K. Tata Trust) ಕೂಡ ಒಂದಾಗಿದೆ. 2024ರ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ (ITAT) ತೀರ್ಪಿನ ಪ್ರಕಾರ, ಈ ಟ್ರಸ್ಟ್ ಬಳಿ ಟಾಟಾ ಸನ್ಸ್‌ನ 2,421 ಷೇರುಗಳಿವೆ. ಈ ಷೇರುಗಳನ್ನು 1959ರಲ್ಲಿ ಟ್ರಸ್ಟ್ ಸ್ಥಾಪನೆಯಾದ ಸಮಯದಲ್ಲಿ ಆರಂಭಿಕ ಸಂಪತ್ತಾಗಿ (Corpus) ಇರಿಸಲಾಗಿತ್ತು.

ಇತರ ಕಾರ್ಪೊರೇಟ್ ಸಂಸ್ಥೆಗಳಿಗಿಂತ ಸಂಪೂರ್ಣ ಭಿನ್ನ

ಸಾಮಾನ್ಯವಾಗಿ ಇತರ ಕುಟುಂಬ ಚಾಲಿತ ಉದ್ಯಮ ಸಮೂಹಗಳಲ್ಲಿ ಆ ಕುಟುಂಬದ ಸದಸ್ಯರೇ ಕಂಪನಿಯ ಅತಿ ದೊಡ್ಡ ವೈಯಕ್ತಿಕ ಷೇರುದಾರರಾಗಿರುತ್ತಾರೆ. ಆದರೆ ಟಾಟಾ ಸಮೂಹದಲ್ಲಿ ಹಾಗಲ್ಲ! ಇಲ್ಲಿ ಟಾಟಾ ಕುಟುಂಬಕ್ಕೆ ಸೇರಿದ ಚಾರಿಟೇಬಲ್ ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ ಗರಿಷ್ಠ ಪಾಲುದಾರಿಕೆಯನ್ನು ಹೊಂದಿವೆ. ಈ ಟ್ರಸ್ಟ್‌ಗಳಿಗೆ ಹರಿದುಬರುವ ಲಾಭಾಂಶದ ಕೋಟ್ಯಂತರ ರೂಪಾಯಿ ಹಣವನ್ನು ಸಮಾಜ ಕಲ್ಯಾಣ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗಾಗಿ ವಿನಿಯೋಗಿಸಲಾಗುತ್ತದೆ. ಹೀಗಾಗಿ, ಟಾಟಾ ಗ್ರೂಪ್ ಎಂಬುದು ಟಾಟಾ ಕುಟುಂಬದ ಯಾವುದೇ ಒಬ್ಬ ವ್ಯಕ್ತಿಯ ಖಾಸಗಿ ಸ್ವತ್ತಲ್ಲ. ನಿಜವಾದ ಆಡಳಿತಾತ್ಮಕ ನಿಯಂತ್ರಣವು ಚಾರಿಟೇಬಲ್ ಟ್ರಸ್ಟ್‌ಗಳ ವಶದಲ್ಲಿದೆ. ಇದೇ ಕಾರಣಕ್ಕೆ ಟಾಟಾ ಸಮೂಹದ ಮಾಲೀಕತ್ವದ ಮಾದರಿಯನ್ನು ಭಾರತದ ಉಳಿದ ಎಲ್ಲಾ ಉದ್ಯಮಿ ಕುಟುಂಬಗಳಿಗಿಂತ ಅತ್ಯಂತ ವಿಶಿಷ್ಟ ಹಾಗೂ ಮಾದರಿ ಎಂದು ಪರಿಗಣಿಸಲಾಗುತ್ತದೆ.