'ಪೀಪಲ್ ಬೈ WTF' ಪಾಡ್‌ಕಾಸ್ಟ್‌ನಲ್ಲಿ ಝೆರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರು ಇನರ್ವೆನ್ಯೂ ಸಿಇಒ ಹೆನ್ನಿಂಗ್ ರಾಥ್ ಹಾಗೂ ಹೈನಾ ಬ್ಯಾಟರಿಯ ಕುನ್ ಟಾಂಗ್ ಅವರೊಂದಿಗೆ ಭಾರತದ ಬ್ಯಾಟರಿ ತಂತ್ರಜ್ಞಾನ ಮತ್ತು ಎನರ್ಜಿ ಟ್ರಾನ್ಸಿಷನ್ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಭಾರತದ ಭವಿಷ್ಯದ ಕ್ರಾಂತಿಕಾರಿ ಉದ್ಯಮ ಯಾವುದೆಂದು ರಿವೀಲ್ ಮಾಡಿದ್ದಾರೆ.

ಇಂದಿನ ತಂತ್ರಜ್ಞಾನ ಹಾಗೂ ವಾಹನ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ವೇಗವಾಗಿ ಬೆಳೆಯುತ್ತಿದೆ. ಆದರೆ ಇದರ ಜೊತೆಗೆ ಲಿಥಿಯಂ-ಐಯಾನ್ (Lithium-ion) ಬ್ಯಾಟರಿಗಳು ದಿಢೀರನೆ ಬೆಂಕಿಗೆಾಹುತಿಯಾಗುತ್ತಿರುವ ಘಟನೆಗಳು ಜಾಗತಿಕವಾಗಿ ದೊಡ್ಡ ಕಳವಳವನ್ನು ಹುಟ್ಟುಹಾಕಿವೆ. ಲಿಥಿಯಂ ಬ್ಯಾಟರಿಗಳು ಏಕೆ ಪದೇ ಪದೆ ವಿಫಲಗೊಳ್ಳುತ್ತಿವೆ? ಚೀನಾದ ಅಪರೂಪದ ಖನಿಜಗಳ (Rare Earths) ಮೇಲಿನ ಅವಲಂಬನೆ ಇಲ್ಲದೆ ಭಾರತ ತನ್ನದೇ ಆದ ಬ್ಯಾಟರಿ ಉದ್ಯಮವನ್ನು ಕಟ್ಟಲು ಸಾಧ್ಯವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಝೆರೋಧಾ (Zerodha) ಸಹಸಂಸ್ಥಾಪಕ ಹಾಗೂ ಹೂಡಿಕೆದಾರ ನಿಖಿಲ್ ಕಾಮತ್ ಮಾಡಿದ್ದಾರೆ.

ತಮ್ಮ ಜನಪ್ರಿಯ 'ಪೀಪಲ್ ಬೈ WTF' (People by WTF) ಪಾಡ್‌ಕಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ನಿಖಿಲ್ ಕಾಮತ್ ಅವರು 'ಇನರ್ವೆನ್ಯೂ' (EnerVenue) ಸಿಇಒ ಹೆನ್ನಿಂಗ್ ರಾಥ್ ಮತ್ತು 'ಹೈನಾ ಬ್ಯಾಟರಿ' (HiNa Battery) ಕಾರ್ಯಾಧ್ಯಕ್ಷ ಕುನ್ ಟಾಂಗ್ ಅವರೊಂದಿಗೆ ಸುದೀರ್ಘ ಸಂವಾದ ನಡೆಸಿದ್ದಾರೆ. ಈ ಚರ್ಚೆಯು ಬ್ಯಾಟರಿ ಕೆಮಿಸ್ಟ್ರಿ, ಕೈಗಾರಿಕಾ ನೀತಿ, ಇವಿ ತಯಾರಿಕೆ ಮತ್ತು ಎಐ (AI) ಮೂಲಸೌಕರ್ಯಗಳ ಸುತ್ತ ಸಾಗಿದೆ.

ಲಿಥಿಯಂ ಬ್ಯಾಟರಿಗಳ ಅಪಾಯ ಮತ್ತು ಆಘಾತಕಾರಿ ಅಂಕಿ-ಅಂಶ:

ಪ್ರಸ್ತುತ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಲಿಥಿಯಂ-ಐರನ್-ಫಾಸ್ಫೇಟ್ (LFP) ಬ್ಯಾಟರಿಗಳನ್ನೇ ಬಳಸುತ್ತಿವೆ. ಸಂವಾದದ ವೇಳೆ, ಬ್ಯಾಟರಿಯಲ್ಲಿನ ತಾಪಮಾನ ಮಿತಿಮೀರಿದಾಗ 'ಥರ್ಮಲ್ ರನ್‌ಅವೇ' (Thermal Runaway) ಎಂಬ ಪ್ರಕ್ರಿಯೆ ನಡೆದು ಬ್ಯಾಟರಿ ಬೆಂಕಿಗೆಾಹುತಿಯಾಗುತ್ತದೆ ಎಂದು ಹೆನ್ನಿಂಗ್ ರಾಥ್ ವಿವರಿಸಿದರು.

ಇದೇ ವೇಳೆ ಹೈನಾ ಬ್ಯಾಟರಿಯ ಕುನ್ ಟಾಂಗ್ ಆಘಾತಕಾರಿ ಅಂಕಿ-ಅಂಶವೊಂದನ್ನು ಬಿಚ್ಚಿಟ್ಟರು. 2025ರ ಒಂದೇ ವರ್ಷದಲ್ಲಿ ಜಾಗತಿಕವಾಗಿ 14,000ಕ್ಕೂ ಹೆಚ್ಚು LFP ಬ್ಯಾಟರಿ ಬೆಂಕಿ ಅವಘಡಗಳು ವರದಿಯಾಗಿವೆ. ಹೆಚ್ಚಿನ ಶಕ್ತಿ ಸಾಮರ್ಥ್ಯವಿದ್ದಷ್ಟೂ ಭದ್ರತೆಯ ಸವಾಲುಗಳು ಹೆಚ್ಚಾಗುತ್ತವೆ ಮತ್ತು ಸಣ್ಣ ಪ್ರಮಾಣದ ಉತ್ಪಾದಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಲಿಥಿಯಂಗೆ ಪರ್ಯಾಯವೇನು? ಸೋಡಿಯಂ-ಐಯಾನ್ ಕ್ರಾಂತಿ!

ಲಿಥಿಯಂ ಬ್ಯಾಟರಿಗಳಿಗೆ ಅತ್ಯಂತ ಸುರಕ್ಷಿತ ಹಾಗೂ ಅಗ್ಗದ ಪರ್ಯಾಯವಾಗಿ 'ಸೋಡಿಯಂ-ಐಯಾನ್' (Sodium-Ion) ತಂತ್ರಜ್ಞಾನ ಹೊರಹೊಮ್ಮುತ್ತಿದೆ. ಸೋಡಿಯಂ ಬ್ಯಾಟರಿಯ ವೆಚ್ಚವು ಲಿಥಿಯಂ ಬ್ಯಾಟರಿಗಿಂತ ಹತ್ತನೇ ಒಂದು ಭಾಗದಷ್ಟಿರುತ್ತದೆ (1/10th Cost). ಇದರಲ್ಲಿ ಬಳಸುವ ಸೋಡಿಯಂ, ಐರನ್ ಮತ್ತು ಫಾಸ್ಫೇಟ್‌ಗಳನ್ನು ಯಾವುದೇ ದೇಶವು ದೇಶೀಯವಾಗಿಯೇ ಪೂರೈಸಿಕೊಳ್ಳಬಹುದು. ಕಾರುಗಳಂತಹ ದೀರ್ಘಾವಧಿ ವಾಹನಗಳಿಗೆ ಇದು ಸದ್ಯಕ್ಕೆ ಸೂಕ್ತವಲ್ಲದಿದ್ದರೂ, ಭಾರತದ ದ್ವಿಚಕ್ರ (Scooters) ಮತ್ತು ತ್ರಿಚಕ್ರ (Three-Wheelers) ವಾಹನಗಳಿಗೆ ಹಾಗೂ ಗ್ರಿಡ್ ಎನರ್ಜಿ ಸ್ಟೋರೇಜ್‌ಗೆ ಇದು ಅತ್ಯುತ್ತಮ ತಂತ್ರಜ್ಞಾನವಾಗಿದೆ.

ಮತ್ತೊಂದೆಡೆ, 'ಇನರ್ವೆನ್ಯೂ' ಸಂಸ್ಥೆಯು ನಾಸಾ (NASA) ತಂತ್ರಜ್ಞಾನದಿಂದ ಪ್ರೇರಿತವಾದ 'ನಿಕ್ಕಲ್ ಆಧಾರಿತ' (Nickel-based) ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು 30,000 ಚಾರ್ಜ್ ಸೈಕಲ್‌ಗಳವರೆಗೆ ಬಾಳಿಕೆ ಬರುತ್ತದೆ ಮತ್ತು ಬೆಂಕಿಯ ಅಪಾಯವಿಲ್ಲ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಸಬೇಕೇ ಅಥವಾ ಬ್ಯಾಟರಿಯೇ?

ಇತ್ತೀಚಿನ ಚೀನಾ ಪ್ರವಾಸದ ನಂತರ ಭಾರತದಲ್ಲಿ ಹೊಸ ಉದ್ಯಮ ಪ್ರಾರಂಭಿಸುವ ಇಚ್ಛೆ ವ್ಯಕ್ತಪಡಿಸಿದ ನಿಖಿಲ್ ಕಾಮತ್, "ನಾನು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಕಂಪನಿ ತೆರೆಯಬೇಕೇ ಅಥವಾ ಬ್ಯಾಟರಿ ಕಂಪನಿ ತೆರೆಯಬೇಕೇ?" ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಹೆನ್ನಿಂಗ್ ರಾಥ್, "ಖಂಡಿತವಾಗಿಯೂ ಕಾರು ಕಂಪನಿಯ ಆಲೋಚನೆ ಬಿಟ್ಟುಬಿಡಿ. ಲಿಥಿಯಂ ಮತ್ತು ಅಪರೂಪದ ಖನಿಜಗಳ ಮೇಲಿನ ಅವಲಂಬನೆ ಇಲ್ಲದ 'ಬ್ಯಾಟರಿ ಕಂಪನಿ'ಯನ್ನು ಭಾರತದಲ್ಲಿ ಸ್ಥಾಪಿಸಿ" ಎಂದು ಖಚಿತ ಸಲಹೆ ನೀಡಿದರು. ಭಾರತದ ಬೃಹತ್ ಸ್ಕೂಟರ್ ಹಾಗೂ ಆಟೋ ಮಾರುಕಟ್ಟೆಗೆ ಸೋಡಿಯಂ-ಐಯಾನ್ ಬ್ಯಾಟರಿಗಳು ಕ್ರಾಂತಿಕಾರಿ ಬದಲಾವಣೆ ತರಬಲ್ಲವು.

ಒಟ್ಟಿನಲ್ಲಿ, ಮುಂಬರುವ ದಶಕದಲ್ಲಿ ವಿದ್ಯುದ್ದೀಕರಣ (Electrification), ಮ್ಯಾನುಫ್ಯಾಕ್ಚರಿಂಗ್ ಮತ್ತು ಎಐ ಸೂಪರ್ ಸೈಕಲ್‌ಗಳು ಒಂದಾಗುತ್ತಿದ್ದು, ಭಾರತೀಯ ಉದ್ಯಮಿಗಳಿಗೆ ಬ್ಯಾಟರಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ ಎಂಬುದನ್ನು ಈ ಸಂವಾದ ಸ್ಪಷ್ಟಪಡಿಸಿದೆ.