ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಮುಂಗಡವಾಗಿ 'ಟಿಪ್ಸ್' ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸಾರಿಗೆ ಸಚಿವಾಲಯವು ವಾಹನ ಅಗ್ರಿಗೇಟರ್‌ಗಳಿಗೆ ಖಡಕ್ ಸೂಚನೆ ನೀಡಿದೆ.
ನವದೆಹಲಿ (ಆ.13): ಕ್ಯಾಬ್ ಅಥವಾ ಆಟೋ ಬುಕ್ ಮಾಡುವ ಸಮಯದಲ್ಲಿಯೇ ಚಾಲಕರಿಗೆ 'ಟಿಪ್ಸ್' ನೀಡುವಂತೆ ಪ್ರಯಾಣಿಕರಿಗೆ ಪ್ರೇರೇಪಿಸುವ ಅಥವಾ ಉತ್ತೇಜಿಸುವ ಯಾವುದೇ ಆಯ್ಕೆಗಳನ್ನು (Prompts/Options) ತಮ್ಮ ಮೊಬೈಲ್ ಆಪ್‌ಗಳಿಂದ ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನ ಅಗ್ರಿಗೇಟರ್‌ಗಳಿಗೆ (ಕ್ಯಾಬ್ ಆಪ್ ಸಂಸ್ಥೆಗಳು) ಖಡಕ್ ಸೂಚನೆ ನೀಡಿದೆ. ಇಂತಹ ವೈಶಿಷ್ಟ್ಯಗಳು 'ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು 2025'ರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತವೆ ಎಂದು ಸಚಿವಾಲಯ ಹೇಳಿದೆ.
ಆಪ್‌ಗಳಲ್ಲಿ ಪ್ರಯಾಣಿಕರಿಗೆ "ಅಡ್ವಾನ್ಸ್ ಟಿಪ್" (Advance Tip), "ಚೂಸ್ ಆಡ್-ಆನ್" (Choose an Add-on) ಮತ್ತು "ರೈಡ್ ಶೀಘ್ರವೇ ಕನ್ಫರ್ಮ್ ಆಗುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಿ" (Improve your chances of quicker ride confirmation) ಮುಂತಾದ ಆಯ್ಕೆಗಳನ್ನು ತೋರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವಾಲಯವು ಈ ಹೊಸ ಆದೇಶವನ್ನು ಹೊರಡಿಸಿದೆ. ಅಲ್ಲದೆ, ಹೆಚ್ಚುವರಿ ಟಿಪ್ಸ್ ನೀಡಿದರೆ ಚಾಲಕರು ರೈಡ್ ಅನ್ನು ಬೇಗನೆ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಕೆಲವು ಆಪ್‌ಗಳು ಪ್ರಯಾಣಿಕರನ್ನು ದಾರಿ ತಪ್ಪಿಸುತ್ತಿರುವುದು ಕಂಡುಬಂದಿದೆ.
ಮಾರ್ಗಸೂಚಿಯ ಸ್ಪಷ್ಟ ನಿಯಮವನ್ನು ಉಲ್ಲೇಖಿಸಿರುವ ರಸ್ತೆ ಸಾರಿಗೆ ಸಚಿವಾಲಯ, "ಪ್ರಯಾಣಿಕರು ತಮ್ಮ ಇಷ್ಟದಂತೆ ಚಾಲಕರಿಗೆ ಟಿಪ್ಸ್ ನೀಡಲು ಬಯಸಿದರೆ, ಅದು ಪ್ರಯಾಣ (Ride) ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಮಾತ್ರವೇ ನೀಡಲು ಅವಕಾಶವಿರಬೇಕು. ಜೊತೆಗೆ ಪ್ರಯಾಣಿಕರು ನೀಡುವ ಸಂಪೂರ್ಣ ಟಿಪ್ಸ್ ಹಣವನ್ನು ಆಪ್ ಸಂಸ್ಥೆಗಳು ಯಾವುದೇ ಕಡಿತವಿಲ್ಲದೆ ನೇರವಾಗಿ ಚಾಲಕನ ಖಾತೆಗೆ ಜಮೆ ಮಾಡುವುದು ಕಡ್ಡಾಯ" ಎಂದು ತಿಳಿಸಿದೆ.
"ಗ್ರಾಹಕ ರಕ್ಷಣೆ ಕಾಯ್ದೆ, 2019 ಮತ್ತು ಅದರಡಿಯಲ್ಲಿನ ನಿಯಮಗಳಿಗೆ ವಿರುದ್ಧವಾದ, ಗ್ರಾಹಕರನ್ನು ದಾರಿ ತಪ್ಪಿಸುವ ಅಥವಾ ಅವರ ಮೇಲೆ ಒತ್ತಡ ಹೇರುವ ಯಾವುದೇ ಟಿಪ್ಸ್ ಆಯ್ಕೆಗಳನ್ನು ಮೊಬೈಲ್ ಆಪ್‌ಗಳಲ್ಲಿ ಒದಗಿಸುವಂತಿಲ್ಲ" ಎಂದು ನಿಯಮಾವಳಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಸಚಿವಾಲಯದ ಖಡಕ್ ಎಚ್ಚರಿಕೆ
ಪ್ರಯಾಣ ಆರಂಭವಾಗುವ ಮುನ್ನವೇ ಹೆಚ್ಚುವರಿ ಹಣ ಪಾವತಿಸುವುದರಿಂದ ರೈಡ್ ಬೇಗ ಕನ್ಫರ್ಮ್ ಆಗುತ್ತದೆ, ಚಾಲಕರು ಬೇಗ ಬುಕಿಂಗ್ ಒಪ್ಪಿಕೊಳ್ಳುತ್ತಾರೆ, ಕಾಯುವ ಸಮಯ ಕಡಿಮೆಯಾಗುತ್ತದೆ ಅಥವಾ ಉತ್ತಮ ಸೇವೆ ಸಿಗುತ್ತದೆ ಎಂದು "ನೇರವಾಗಿ ಅಥವಾ ಪರೋಕ್ಷವಾಗಿ ಪ್ರೇರೇಪಿಸುವ, ಭ್ರಮೆ ಹುಟ್ಟಿಸುವ" ಯಾವುದೇ ಫೀಚರ್‌ಗಳನ್ನು ಆಪ್‌ಗಳಲ್ಲಿ ಪ್ರದರ್ಶಿಸಬಾರದು ಎಂದು ಸಚಿವಾಲಯ ತಿಳಿಸಿದೆ.
ಇತ್ತೀಚೆಗಷ್ಟೇ ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಾಧಿಕಾರವು (CCPA) ಸಹ ಇಂತಹ ಅನೈತಿಕ ಪದ್ಧತಿ ಹಾಗೂ ದಾರಿ ತಪ್ಪಿಸುವ ಆಯ್ಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ರೈಡ್-ಹೇಲಿಂಗ್ (ಕ್ಯಾಬ್/ಆಟೋ ಸೇವಾ) ಪ್ಲಾಟ್‌ಫಾರ್ಮ್‌ಗಳಿಗೆ ನಿರ್ದೇಶನ ನೀಡಿತ್ತು.


