ಕೋವಿಡ್ ಸಮಯದಲ್ಲಿ ರೀಲ್ಸ್ ನೋಡುತ್ತಾ ಕಾಲ ಕಳೆದ 16 ವರ್ಷದ ದಿಗ್ವಿಜಯ ಸಿಂಗ್, ಮನೆಯಲ್ಲಿಯೇ ಚಾಕಲೇಟ್ ತಯಾರಿಸಲು ಆರಂಭಿಸಿದರು. ಹವ್ಯಾಸವಾಗಿ ಶುರುವಾದ ಈ ಚಾಕಲೇಟ್ ತಯಾರಿಕೆ, ಇಂದು 'ಸಾರಮ್' ಎಂಬ ಬ್ರ್ಯಾಂಡ್‌ನಡಿಯಲ್ಲಿ ಕೋಟಿ ರೂಪಾಯಿ ವ್ಯವಹಾರವಾಗಿ ಬೆಳೆದು, ಅವರನ್ನು ಯುವ ಉದ್ಯಮಿಯನ್ನಾಗಿಸಿದೆ.

ಕೋವಿಡ್​ ಎನ್ನೋ ಮಹಾಮಾರಿ 2019ರಿಂದ ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ಈಗ ಇತಿಹಾಸ. ಆ ಮಹಾಮಾರಿಯಿಂದ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿಯಾದರೆ, ಸಂಪೂರ್ಣ ನಷ್ಟ ಅನುಭವಿಸಿ ಬೀದಿ ಪಾಲಾದವರೂ ಅಷ್ಟೇ ಮಂದಿ. ಐದಾರು ವರ್ಷಗಳ ಬಳಿಕವೂ ಇಂದಿಗೂ ಬಿಜಿನೆಸ್​ನಲ್ಲಿ ಸುಧಾರಿಸಿಕೊಳ್ಳಲು ಆಗದೇ ದಿಕ್ಕೆಟ್ಟವರೂ ಇದ್ದಾರೆ, ಅಂದು ಅನುಭವಿಸಿದ ನಷ್ಟದಿಂದ ಇನ್ನೂ ಚೇತರಿಸಿಕೊಳ್ಳದವರೂ ಇದ್ದಾರೆ. ಆದರೆ ಇದೇ ಮಹಾಮಾರಿ ಅದೆಷ್ಟೋ ಮಂದಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಕೈಯಲ್ಲಿ ಕಾಸಿಲ್ಲದವರನ್ನು ಲಕ್ಷಾಧೀಶ್ವರನ್ನಾಗಿಸಿದೆ, ಮನೆಯಲ್ಲಿ ಕುಳಿತು ಮೊಬೈಲ್​ ನೋಡ್ತಿರೋರಿಗೂ ಉತ್ತಮ ಆದಾಯ ಗಳಿಸಿಕೊಟ್ಟಿದೆ. ಅಂಥವರಲ್ಲಿ ಒಬ್ಬಾತ 16ರ ಬಾಲಕ ದಿಗ್ವಿಜಯ ಸಿಂಗ್​.

ಕೋವಿಡ್​ನಲ್ಲಿ ರೀಲ್ಸ್​

16ನೇ ವಯಸ್ಸಿನಲ್ಲಿ ಕೋವಿಡ್​ ವೇಳೆ ರೀಲ್ಸ್ ನೋಡುತ್ತಾ ಕುಳಿತ ಈ ಬಾಲಕ ಈಗ 21ರ ತರುಣ. ಅದೇ ರೀಲ್ಸ್​ ಈತನ ಲೈಫ್​ ಚೇಂಜ್​ ಮಾಡಿದೆ. 21ನೇ ವಯಸ್ಸಿನಲ್ಲಿಯೇ ಕೋಟಿ ಕೋಟಿ ವ್ಯವಹಾರ ನಡೆಸುತ್ತಾ ದೊಡ್ಡ ಬಿಜಿನೆಸ್​ಮ್ಯಾನ್​ ಆಗಿದ್ದಾನೆ ಈ ಯುವಕ. ಇದೇನು ಸಿನಿಮಾನೋ, ಸೀರಿಯಲ್ಲೋ ಅಲ್ಲ, ರಿಯಲ್​ ಲೈಫ್​ನ ರೋಚಕ ಸ್ಟೋರಿ ಇದು. ಕೋವಿಡ್​ನಲ್ಲಿ ಈತನಿಗೆ ಸರಿಸುಮಾರು 16 ವರ್ಷ ವಯಸ್ಸು. ರಾಯಸ್ಥಾನದ ಉದಯಪುರದ ಈ ಬಾಲಕ ದಿಗ್ವಿಜಯ ಸಿಂಗ್​ ಎಲ್ಲರಂತೆ ಕಾಲ ಕಳೆಯಲು ಮೊಬೈಲ್​ ನೋಡುತ್ತಾ ಕುಳಿತ. ಅವನಿಗೆ ಕಂಡದ್ದು ಮನೆಯಲ್ಲಿಯೇ ಚಾಕಲೆಟ್​ ಮಾಡುವ ವಿಡಿಯೋ. ಇದನ್ನು ಬಹುತೇಕ ಎಲ್ಲರೂ ನೋಡಿಯೇ ಇರುತ್ತಾರೆ, ರೀಲ್ಸ್​ ನೋಡುವವರು, ಯುಟ್ಯೂಬ್ ನೋಡುವವರಿಗೆ ಮನೆಯಲ್ಲಿಯೇ ವಿವಿಧ ರೀತಿಯ ಆಹಾರ, ಚಾಕಲೇಟ್​ ತಯಾರಿಸುವ ವಿಡಿಯೋಗಳು ಕಂಡೇ ಇರುತ್ತವೆ. ಹೆಚ್ಚಿನವರು ಎಲ್ಲರೂ ಸ್ಕ್ರೋಲ್​ ಮಾಡಿ ಮುಂದಕ್ಕೆ ಹೋಗ್ತೇವೆ. ಆದರೆ ಬಾಲಕ ದಿಗ್ವಿಜಯ ಸಿಂಗ್​ ತಲೆಯಲ್ಲಿ ಹೊಳೆದದ್ದೇ ಬೇರೆ. ನಾನ್ಯಾಕೆ ಈ ಬಿಡುವಿನ ವೇಳೆಯನ್ನು ಇದಕ್ಕಾಗಿ ಬಳಸಿಕೊಳ್ಳಬಾರದು ಎಂದು ಯೋಚನೆ ಮಾಡಿದ.

ಸುಮ್ಮನೇ ಚಾಕಲೆಟ್​ ಮಾಡಿದ

ಸುಮ್ಮನೇ ಮನೆಯಲ್ಲಿ ಆತ ಚಾಕಲೆಟ್​ ತಯಾರಿಕೆ ಆರಂಭಿಸಿದ. ಅದನ್ನೇನು ಆತ ಬಿಜಿನೆಸ್​​ ಸ್ಟಾರ್ಟ್​ ಮಾಡಬೇಕು ಎಂದು ಮಾಡಿದವನಲ್ಲ. ಸುಮ್ಮನೇ ಟ್ರೈ ಮಾಡಿದ ಅಷ್ಟೇ. ಅದನ್ನು ಟೇಸ್ಟ್​ ಮಾಡಿದ ಮನೆಯವರೆಲ್ಲರೂ ವ್ಹಾವ್​ ಸಕತ್​ ಟೇಸ್ಟಿಯಾಗಿದೆ ಅಂದರು. ಅದೇ ಖುಷಿಯಲ್ಲಿ ಆತ ಚಾಕಲೆಟ್​ ತಯಾರಿಸಿ ಫ್ರೆಂಡ್ಸ್​, ಕುಟುಂಬದ ಸದಸ್ಯರು, ನೆಂಟರಿಷ್ಟರು ಕ್ರಮೇಣ ನೆರೆಹೊರೆಯವರಿಗೂ ಕೊಡಲು ಶುರು ಮಾಡಿದಾಗ, ಎಲ್ಲರೂ ಅದನ್ನು ಕೊಂಡಾಡಿದ್ದೇ ಕೊಂಡಾಡಿದ್ದು.

ಗಿಫ್ಟ್​ಪ್ಯಾಕ್​ ಮಾಡಿ ಕೊಟ್ಟ

ಈ ಪರಿಯ ಜನಪ್ರಿಯತೆ ಕಂಡ ಆ ಬಾಲಕನಿಗೆ ತಾನ್ಯಾಕೆ ಇದನ್ನು ಗಿಫ್ಟ್​ಪ್ಯಾಕ್​ ಮಾಡಿ ಮಾರಾಟ ಮಾಡಬಾರದು ಎನ್ನಿಸಿತು. ಮನೆಯವರ ಜೊತೆ ಚರ್ಚಿಸಿದ. ಅದು ದೀಪಾವಳಿಯ ಸಮಯ. ಹಾಗೆಯೇ ಚಾಕಲೆಟ್​ ಮಾಡಿ, ಪ್ಯಾಕ್​ ಮಾಡಿದ. ಆದರೆ ಮಾರಾಟ ಮಾಡುವುದು ಹೇಗೆ? ಯಾರಿಗೆ ಕೊಡುವುದು ಎಂದು ತಿಳಿಯಲಿಲ್ಲ. ಕೊನೆಗೆ ಅವನ ಮನೆಯ ಸಮೀಪದ ಕಾರಿನ ಷೋರೂಮ್​ನಲ್ಲಿ ಜನರನ್ನು ಸೆಳೆಯುವುದಕ್ಕಾಗಿ ಆಫರ್​ ಬಿಟ್ಟಿದ್ದರು. ಷೋರೂಮ್​ ಸಂಪರ್ಕಿಸಿದ ಬಾಲಕ, ಆ ಉಡುಗೊರೆ ಜೊತೆ, ಚಾಕೊಲೇಟ್‌ ಪ್ಯಾಕ್​ ಅನ್ನೂ ನೀಡಲು ವಿನಂತಿಸಿ, ಅವರನ್ನು ಒಪ್ಪಿಸಿದ.ಅಷ್ಟೇ.

ಕಾರಿನ ಷೋರೂಮ್​ನಲ್ಲಿ ಆರಂಭ

ಷೋರೂಮ್​ನವರು ಚಾಕಲೆಟ್​ ಟೇಸ್ಟ್​ ಮಾಡಿ ಅದಕ್ಕೆ ಮಾರು ಹೋಗಿ 2021 ರಲ್ಲಿ, ಅವರು ಒಂದು ಸಾವಿರ ಚಾಕೊಲೇಟ್‌ಗಳ ಮೊದಲ ಬೃಹತ್ ಆರ್ಡರ್ ಅನ್ನು ಪಡೆದರು. ಹಾಗೆಯೇ ಕೊಡುವುದು ಬೇಡ, ಒಂದು ಹೆಸರಿಟ್ಟು ಕೊಡೋಣ ಎಂದುಕೊಂಡ ದಿಗ್ವಿಜಯ ಅದಕ್ಕೆ ಸಾರಮ್ ಎಂದು ಹೆಸರಿಸಿ ಆ ಬ್ರ್ಯಾಂಡ್​ನಲ್ಲಿ ಚಾಕಲೇಟ್​ ಕೊಟ್ಟ. ಅಲ್ಲಿಂದ ಆರಂಭವಾದದ್ದು ಇದೀಗ ಬೃಹತ್​ ಉದ್ಯಮವಾಗಿ ಬೆಳೆದಿದೆ. ಇಂದು, ಸಾರಮ್ ಉತ್ತಮವಾದ ಬೀನ್-ಟು-ಬಾರ್ ಚಾಕೊಲೇಟ್‌ಗಳನ್ನು ಉತ್ಪಾದಿಸುತ್ತದೆ, ದೆಹಲಿ, ಬೆಂಗಳೂರು, ಜೈಪುರ ಮತ್ತು ಉದಯಪುರದಂತಹ ನಗರಗಳಲ್ಲಿ ಎರಡು ಟನ್‌ಗಳಿಗಿಂತ ಹೆಚ್ಚು ಮಾರಾಟ ಮಾಡುತ್ತದೆ. ಈ ಬಾಲಕನಿಗೆ ಈಗ 21 ವರ್ಷ. ಹವ್ಯಾಸವಾಗಿ ಪ್ರಾರಂಭವಾದದ್ದು ಈಗ 1 ಕೋಟಿ ರೂಪಾಯಿ ಬ್ರ್ಯಾಂಡ್ ಆಗಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾನೆ ಈ ಯುವಕ.