ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ ಆರನೇ ವರ್ಷವೂ ಸಂಬಳವನ್ನು ತ್ಯಜಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ಈ ನಿರ್ಧಾರ ಮುಂದುವರೆಸಿದ್ದು, ಅವರ ಆದಾಯದ ಪ್ರಮುಖ ಮೂಲ ಈಗ ಕಂಪನಿಯಿಂದ ಬರುವ ಲಾಭಾಂಶವಾಗಿದೆ.
ಮುಂಬೈ (ಮೇ.28): ದೇಶದ ಅತ್ಯಂತ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಸತತ ಆರನೇ ವರ್ಷವೂ ಕಂಪನಿಯಿಂದ ಯಾವುದೇ ರೀತಿಯ ವೇತನವನ್ನು ಪಡೆದಿಲ್ಲ. ಕಂಪನಿಯು ಬಿಡುಗಡೆ ಮಾಡಿರುವ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲಿ ಮುಖೇಶ್ ಅಂಬಾನಿ ಅವರ ಸಂಬಳ, ಭತ್ಯೆಗಳು (Allowances) ಮತ್ತು ನಿವೃತ್ತಿ ಸೌಲಭ್ಯಗಳು ಸಂಪೂರ್ಣ ‘ಶೂನ್ಯ’ (Zero) ಆಗಿವೆ. ಪ್ರಸ್ತುತ ಕಂಪನಿಯಿಂದ ಸಿಗುವ ಡಿವಿಡೆಂಡ್ (ಲಾಭಾಂಶ) ಮಾತ್ರವೇ ಅವರ ಆದಾಯದ ಮುಖ್ಯ ಮೂಲವಾಗಿದೆ.
ಪ್ರಸ್ತುತ 69 ವರ್ಷ ವಯಸ್ಸಿನ ಮುಖೇಶ್ ಅಂಬಾನಿ ಅವರು ಜೂನ್ 2020 ರಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ದೇಶದ ಸಾಮಾಜಿಕ, ಆರ್ಥಿಕ ಮತ್ತು ಕೈಗಾರಿಕಾ ರಂಗದ ಮೇಲಾದ ಭೀಕರ ಪರಿಣಾಮವನ್ನು ಗಮನಿಸಿ ತಮ್ಮ ಸಂಪೂರ್ಣ ಸಂಬಳವನ್ನು ತ್ಯಜಿಸಲು ನಿರ್ಧರಿಸಿದ್ದರು. ರಿಲಯನ್ಸ್ ಸಂಸ್ಥೆಯ ಎಲ್ಲಾ ವ್ಯವಹಾರಗಳು ತನ್ನ ಪೂರ್ಣ ಗಳಿಕೆಯ ಸಾಮರ್ಥ್ಯಕ್ಕೆ ಮರಳುವವರೆಗೆ ತಾನು ಯಾವುದೇ ವೇತನವನ್ನು ಪಡೆಯುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದರು.
ಅದರಂತೆ, ಅವರು ಹಣಕಾಸು ವರ್ಷ 2021-22, 2022-23, 2023-24, 2024-25 ಮತ್ತು ಈಗ ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲೂ ಯಾವುದೇ ಸಂಬಳವಿಲ್ಲದೆ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ. ಇದಕ್ಕೂ ಮುನ್ನ 2008 ರಿಂದಲೇ ಅವರು ತಮ್ಮ ವಾರ್ಷಿಕ ವೇತನವನ್ನು ₹15 ಕೋಟಿಗೆ ಸೀಮಿತಗೊಳಿಸಿಕೊಂಡಿದ್ದರು ಎಂಬುದು ಗಮನಾರ್ಹ.
ವೇತನ ಶೂನ್ಯವಾದ್ರೂ ಡಿವಿಡೆಂಡ್‌ನಿಂದ ಬಂತು ₹3,996 ಕೋಟಿ!
ಮುಖೇಶ್ ಅಂಬಾನಿ ಅವರು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (CMD) ಹುದ್ದೆಯಲ್ಲಿದ್ದರೂ ಯಾವುದೇ ವೇತನ, ಭತ್ಯೆ ಅಥವಾ ಸ್ಟಾಕ್ ಆಪ್ಷನ್‌ಗಳನ್ನು ತೆಗೆದುಕೊಳ್ಳುತ್ತಿಲ್ಲ. ಆದರೆ, ವಿಶ್ವದ 22ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅವರ ಮುಖ್ಯ ಆದಾಯದ ಮೂಲ ಡಿವಿಡೆಂಡ್ ಆಗಿದೆ. ಸದ್ಯ ಮುಖೇಶ್ ಅಂಬಾನಿ ಅವರ ವೈಯಕ್ತಿಕ ಆಸ್ತಿ ಮೌಲ್ಯ (Net Worth) ಸುಮಾರು 92 ಬಿಲಿಯನ್ ಡಾಲರ್ (ಅಂದರೆ ಅಂದಾಜು ₹8.83 ಲಕ್ಷ ಕೋಟಿ ರೂಪಾಯಿ) ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಪ್ರಸಕ್ತ ಹಣಕಾಸು ವರ್ಷ 2025-26 ಕ್ಕೆ ಪ್ರತಿ ಷೇರಿಗೆ ₹6 ರಷ್ಟು ಡಿವಿಡೆಂಡ್ ಪ್ರಕಟಿಸಿದೆ.
ಮುಖೇಶ್ ಅಂಬಾನಿ ಅವರು ವೈಯಕ್ತಿಕವಾಗಿ ರಿಯಲನ್ಸ್ ಸಂಸ್ಥೆಯ 1.61 ಕೋಟಿ ಷೇರುಗಳನ್ನು ಹೊಂದಿದ್ದು, ಇದರಿಂದ ಅವರಿಗೆ ₹9.66 ಕೋಟಿ ವೈಯಕ್ತಿಕ ಡಿವಿಡೆಂಡ್ ಆದಾಯ ಬರಲಿದೆ. ಇದರ ಹೊರತಾಗಿ, ಅವರ ನಿಯಂತ್ರಣದಲ್ಲಿರುವ ಪ್ರಮೋಟರ್ ಗ್ರೂಪ್ ಕಂಪನಿಗಳು ರಿಯಲನ್ಸ್‌ನಲ್ಲಿ ಶೇ. 50.07 ರಷ್ಟು ಪಾಲನ್ನು (664.5 ಕೋಟಿ ಷೇರುಗಳು) ಹೊಂದಿವೆ. ಇದರಿಂದ ಪ್ರಮೋಟರ್ ಗ್ರೂಪ್‌ಗೆ ₹3,987 ಕೋಟಿ ಲಾಭಾಂಶ ಸಿಕ್ಕಿದೆ. ಒಟ್ಟಾರೆಯಾಗಿ ಈ ಎರಡೂ ಮೊತ್ತ ಸೇರಿದರೆ ಬರೋಬ್ಬರಿ ₹3,996.66 ಕೋಟಿ ಆಗುತ್ತದೆ.
ಮಕ್ಕಳ ಪ್ಯಾಕೇಜ್ ವಿವರ: ಅನಂತ್‌ಗೆ ಕೋಟಿ ಕೋಟಿ, ಆಕಾಶ್-ಈಶಾಗೆ ಸಿಟ್ಟಿಂಗ್ ಫೀಸ್ ಮಾತ್ರ
ಮುಖೇಶ್ ಅಂಬಾನಿ ಅವರ ಮೂವರು ಮಕ್ಕಳಾದ ಈಶಾ, ಆಕಾಶ್ ಮತ್ತು ಅನಂತ್ ಅವರನ್ನು ಅಕ್ಟೋಬರ್ 2023 ರಲ್ಲಿ ಯಾವುದೇ ಸಂಬಳವಿಲ್ಲದೆ ರಿಲಯನ್ಸ್ ಮಂಡಳಿಗೆ (Board) ಸೇರಿಸಿಕೊಳ್ಳಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲಿ ಇವರ ಪ್ಯಾಕೇಜ್ ವಿವರ ಬಹಿರಂಗವಾಗಿದೆ. ಆಕಾಶ್ ಮತ್ತು ಈಶಾ ಅಂಬಾನಿಗೆ ಪ್ರಸಕ್ತ ಸಾಲಿನಲ್ಲಿ ಕೇವಲ ₹5 ಲಕ್ಷ ಸಿಟ್ಟಿಂಗ್ ಫೀಸ್ (Siting Fees) ಮತ್ತು ₹2.5 ಕೋಟಿ ಪ್ರಾಫಿಟ್ ಕಮಿಷನ್ (ಲಾಭದ ಆಧಾರಿತ ಕಮಿಷನ್) ಮಾತ್ರ ಲಭಿಸಿದೆ.
ಮುಖೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಅವರನ್ನು ಕಳೆದ ವರ್ಷ ರಿಲಯನ್ಸ್ ಬೋರ್ಡ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ (ಕಾರ್ಯನಿರ್ವಾಹಕ ನಿರ್ದೇಶಕ) ಆಗಿ ನೇಮಕ ಮಾಡಲಾಗಿತ್ತು. ಈ ಹುದ್ದೆಯ ಅಡಿಯಲ್ಲಿ ಅವರು ಹಣಕಾಸು ವರ್ಷ 2025-26 ರಲ್ಲಿ ₹12.17 ಕೋಟಿ ವೇತನ ಪ್ಯಾಕೇಜ್ ಪಡೆದಿದ್ದಾರೆ (ಇದರಲ್ಲಿ ₹2.29 ಕೋಟಿ ಕಮಿಷನ್ ಸೇರಿದೆ).
ಇತರ ಅಧಿಕಾರಿಗಳ ವೇತನ
ಮುಖೇಶ್ ಅಂಬಾನಿ ಅವರ ಸೋದರಸಂಬಂಧಿಗಳಾದ ನಿಖಿಲ್ ಮೇಸ್ವಾನಿ ಮತ್ತು ಹಿತಲ್ ಮೇಸ್ವಾನಿ ಅವರ ವೇತನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಬ್ಬರಿಗೂ ತಲಾ ₹25 ಕೋಟಿ ಸಂಭಾವನೆ ಸಿಕ್ಕಿದೆ (ಇದರಲ್ಲಿ ₹10 ಕೋಟಿ ಸಂಬಳ ಮತ್ತು ಭತ್ಯೆ, ₹44 ಲಕ್ಷ ನಿವೃತ್ತಿ ಸೌಲಭ್ಯ ಮತ್ತು ₹14.56 ಕೋಟಿ ಲಾಭದ ಕಮಿಷನ್ ಸೇರಿದೆ). ಇನ್ನು ಎಕ್ಸಿಕ್ಯೂಟಿವ್ ಡೈರೆಕ್ಟರ್ ಪಿ.ಎಂ.ಎಸ್. ಪ್ರಸಾದ್ ಅವರ ಪ್ಯಾಕೇಜ್ ಕಳೆದ ಸಾಲಿನ ₹19.96 ಕೋಟಿಯಿಂದ ₹20.58 ಕೋಟಿಗೆ ಏರಿಕೆಯಾಗಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ಶೇ. 13 ರಷ್ಟು ಕುಸಿತ
ಹಣಕಾಸು ವರ್ಷ 2025-26 ರ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ ಅವಧಿ) ರಿಯಲನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿವ್ವಳ ಲಾಭದಲ್ಲಿ (Net Profit) ವಾರ್ಷಿಕ ಆಧಾರದ ಮೇಲೆ ಶೇ. 13 ರಷ್ಟು ಕುಸಿತ ಕಂಡುಬಂದಿದೆ. ಕಂಪನಿಯ ನಿವ್ವಳ ಲಾಭ ₹16,971 ಕೋಟಿಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹19,407 ಕೋಟಿ ಲಾಭ ಗಳಿಸಿತ್ತು. ಆದರೆ, ಇದೇ ಅವಧಿಯಲ್ಲಿ ಕಂಪನಿಯ ಒಟ್ಟು ಆದಾಯ (Revenue) ಶೇ. 13 ರಷ್ಟು ಹೆಚ್ಚಾಗಿದ್ದು, ₹2.98 ಲಕ್ಷ ಕೋಟಿ ತಲುಪಿದೆ. ಕಳೆದ ವರ್ಷದ (ಜನವರಿ-ಮಾರ್ಚ್ 2025) ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ₹2.64 ಲಕ್ಷ ಕೋಟಿ ರೂಪಾಯಿ ಆಗಿತ್ತು.


