ಸೈಬರ್ ವಂಚನೆಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತರಲು ಚಿಂತಿಸುತ್ತಿದೆ. ಈ ನಿಯಮದ ಪ್ರಕಾರ, ಯುಪಿಐ ಮೂಲಕ ಹೊಸ ಬಳಕೆದಾರರಿಗೆ ಮೊದಲ ಬಾರಿಗೆ ₹10,000 ಕ್ಕಿಂತ ಹೆಚ್ಚು ಹಣ ವರ್ಗಾಯಿಸಿದರೆ, ಅದು ಕ್ರೆಡಿಟ್ ಆಗಲು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ವಂಚನೆ ಎಂದು ತಿಳಿದರೆ ವಹಿವಾಟನ್ನು ರದ್ದುಗೊಳಿಸಲು ಅವಕಾಶವಿರುತ್ತದೆ.

ಇದು ಡಿಜಿಟಲ್​ ಯುಗ. ಯಾರ ಬಳಿಯೂ ಕ್ಯಾಷ್​ ಇರೋದೇ ಕಷ್ಟ. 1 ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ವ್ಯವಹಾರ ಒಂದೇ ಕ್ಲಿಕ್​ನಲ್ಲಿ ಆಗುತ್ತದೆ. ಅದರಲ್ಲಿಯೂ 10-20 ಸಾವಿರ ರೂಪಾಯಿ ಟ್ರಾನ್ಸ್​ಫರ್​ ಮಾಡುವುದಿದ್ದರೆ ಗೂಗಲ್​ಪೇ, ಫೋನ್​ ಪೇ ಎಂದೆಲ್ಲಾ ಕ್ಷಣ ಮಾತ್ರದಲ್ಲಿ ದುಡ್ಡು ನೀಡಲಾಗುತ್ತದೆ. ಆದರೆ ಇನ್ನು ಮುಂದೆ ಹೀಗೆಲ್ಲಾ ಮಾಡುವಂತಿಲ್ಲ. ಏಕೆಂದರೆ ಇನ್ಮುಂದೆ 10 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಬೇರೆಯವರಿಗೆ ವರ್ಗ ಮಾಡಿದರೆ, ಅವರಿಗೆ ಅದು ತಕ್ಷಣ ಸಿಗುವುದಿಲ್ಲ. ಬದಲಿಗೆ ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳುತ್ತದೆ. ಹೌದು. ಇಂಥದ್ದೊಂದು ಹೊಸ ರೂಲ್ಸ್ ಶೀಘ್ರವೇ ಬರಲಿದೆ. ವೇಟ್​, ವೇಟ್​... ಹಾಗೆಂದು ನೀವು ಗಾಬರಿಯಾಗುವ ಅಗತ್ಯವಿಲ್ಲ. ಬಾಯಿಗೆ ಬಂದಂತೆ ಶಾಪ ಹಾಕುವುದೂ ಬೇಕಿಲ್ಲ. ಏನಿದು ಹೊಸ ರೂಲ್ಸ್​,, ಯಾಕೆ ಇದನ್ನು ಮಾಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಸೈಬರ್​ ಕ್ರೈಂ ತಡೆಗೆ ಕ್ರಮ

ಇದೀಗ ಡಿಜಿಟಲ್​ ವ್ಯವಹಾರ ಹೆಚ್ಚಿದಂತೆ ಸೈಬರ್​ ಕ್ರೈಂಗಳು ಹೆಚ್ಚುತ್ತಿವೆ. ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿದಿನವೂ ನೂರಾರು ಮಂದಿ ಇದರ ವಂಚನೆಗೆ ಒಳಗಾಗುತ್ತಿದ್ದಾರೆ. ವಂಚನೆ ಬಗ್ಗೆ ಎಷ್ಟೇ ಬಾಯಿ ಬಡಿದುಕೊಂಡರೂ, ಯಾರೋ ಆಫರ್ ನೀಡಿದ್ರು ಎಂದೋ, ಇನ್ನಾರೋ ಏನನ್ನೋ ಗಿಫ್ಟ್​ ಅಂತ ಕೊಟ್ಟು ಲಿಂಕ್​ ಕ್ಲಿಕ್​ ಮಾಡಿ ಅಂದುಬಿಟ್ಟರೆ ಸಾಕು, ಹಿಂದೆ ಮುಂದೆ ನೋಡದೇ ಆಫರ್​ ಆಸೆಗೆ ಬಿದ್ದು ಲಿಂಕ್​ ಕ್ಲಿಕ್​ ಮಾಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ ಎಜುಕೇಟೆಡ್​ ಮಂದಿ. ಆದ್ದರಿಂದ ಈ ಹೊಸ ವ್ಯವಸ್ಥೆಯನ್ನು ಮಾಡಲು ಚಿಂತನೆ ನಡೆಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮ ಜಾರಿಗೆ ಮುಂದಾಗಿದ್ದು ಶೀಘ್ರವೇ ಇದು ಜಾರಿಗೆ ಬರಲಿದೆ.

10 ಸಾವಿರಕ್ಕಿಂತ ಹೆಚ್ಚಿಗೆ ಹಣವಿದ್ದರೆ...

ಅದೇನೆಂದರೆ, UPI ಮೂಲಕ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಕಳುಹಿಸಲು ಮುಂದಿನ ದಿನಗಳಲ್ಲಿ ಒಂದು ತಾಸು ಬೇಕಾಗಲಿದೆ. ಅಂದರೆ, ಯುಪಿಐ ಮೂಲಕ ನಾವು ಹಣ ಕಳುಹಿಸಿದರೆ, ಅದು ಒಂದು ತಾಸಿನ ಬಳಿಕ ಬೇರೆಯವರಿಗೆ ಕ್ರೆಡಿಟ್ ಆಗುತ್ತದೆ. ಆದರೆ, ಇದು ಎಲ್ಲರಿಗೂ ಅನ್ವಯ ಅಲ್ಲ. ಕೇವಲ ಹೊಸ ಬಳಕೆದಾರರು ಅಥವಾ ಇಬ್ಬರು ವ್ಯಕ್ತಿಗಳು ಮೊದಲ ಬಾರಿಗೆ ವಹಿವಾಟು ನಡೆಸುತ್ತಿದ್ದರೆ ಮಾತ್ರ ಅನ್ವಯಿಸುತ್ತದೆ. 10 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಹಣವನ್ನು ಮೊದಲ ಬಾರಿ ವರ್ಗಾಯಿಸುವಾಗ ಅದು ಆ ವ್ಯಕ್ತಿಗೆ ಕ್ರೆಡಿಟ್​ ಆಗಲು ಒಂದು ಗಂಟೆ ಬೇಕಾಗುತ್ತದೆ.

ಹೆಚ್ಚು ಬಾರಿ ವಹಿವಾಟು

ಇಬ್ಬರು ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಬಾರಿ ವಹಿವಾಟು ನಡೆಸುತ್ತಿದ್ದರೆ, ಇದು ಅನ್ವಯ ಆಗುವುದಿಲ್ಲ. ಒಂದು ವೇಳೆ 10 ಸಾವಿರಕ್ಕಿಂತ ಹೆಚ್ಚು ವರ್ಗಾವಣೆ ಆದರೆ, ಅದು ಆ ವ್ಯಕ್ತಿಗೆ ಮೊದಲ ಬಾರಿಗೆ ತಲುಪಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ. ಒಂದು ವೇಳೆ, ನಿಮಗೆ ಅದು ವಂಚನೆ ಎನ್ನಿಸಿದರೆ ಅಥವಾ ಏನೋ ಎಡವಟ್ಟು ಆಯಿತು ಎಂದರೆ, ಆ ಹಣವನ್ನು ಹಿಂದಕ್ಕೆ ಪಡೆಯಲು ಅಥವಾ ವಹಿವಾಟನ್ನು ರದ್ದುಗೊಳಿಸಲು ಈ ಸಮಯಾವಕಾಶ ನೀಡಲಾಗುತ್ತದೆ. ಇದು ಏನಿದ್ದರೂ ಸೈಬರ್​ ಕ್ರೈಂ ತಡೆಗಟ್ಟುವ ವಿಧಾನವಾಗಿದೆ. ನಿಮ್ಮ ಫೋನ್​ ಟ್ಯಾಪ್​ ಆಗಿ ನಿಮ್ಮ ಫೋನ್​ನಿಂದ 10 ಸಾವಿರಕ್ಕಿಂತ ಹೆಚ್ಚಿನ ಹಣ ಬೇರೆಯವರಿಗೆ ವರ್ಗವಾಗಿದ್ದು ತಿಳಿಯುತ್ತಲೇ ನೀವು ಅದನ್ನು ಹಿಂದಕ್ಕೆ ಪಡೆಯಲು ಅವಕಾಶ ಸಿಗಲಿದೆ. ಆದರೆ ಸದ್ಯ ಆ ರೀತಿ ಇಲ್ಲ. ಎಷ್ಟು ಲಕ್ಷ ಬೇಕಾದರೂ ಕ್ಷಣ ಮಾತ್ರದಲ್ಲಿ ವರ್ಗಾವಣೆ ಆಗಿ ಮೋಸ ಆಗುತ್ತಿದೆ.