Reddit Bangalore story: ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಆದರೆ ಬಜೆಟ್ ಕೈಗೆಟಕುವಂತಿರಲಿ ಎಂದು ನಗರದಿಂದ ಕೊಂಚ ದೂರ ಹೋದರೆ ಸಿಗುವ ಸುಖಕ್ಕಿಂತ ಪಡುವ ಕಷ್ಟವೇ ಹೆಚ್ಚಾ? ಇತ್ತೀಚೆಗೆ ಜಿಗಣಿಯಲ್ಲಿ ಫ್ಲಾಟ್ ಖರೀದಿಸಿದ ವ್ಯಕ್ತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು, ಅದು ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರನ್ನು ಕ್ಷಣಕಾಲ ಬೆಪ್ಪಾಗುವಂತೆ ಮಾಡಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ದರಗಳು ಗಗನಕ್ಕೇರುತ್ತಿರುವ ಈ ಕಾಲದಲ್ಲಿ, ನಗರದ ಹೊರವಲಯದಲ್ಲಿ ಮನೆ ಖರೀದಿಸುವುದು ಲಾಭದಾಯಕವೇ ಅಥವಾ ಸಂಕಷ್ಟವೇ ಎಂಬ ಚರ್ಚೆ ಸದಾ ನಡೆಯುತ್ತಿರುತ್ತದೆ. ಇತ್ತೀಚೆಗೆ ಜಿಗಣಿ (Jigani) ಪ್ರದೇಶದಲ್ಲಿ ₹55 ಲಕ್ಷಕ್ಕೆ ಫ್ಲಾಟ್ ಖರೀದಿಸಿದ ವ್ಯಕ್ತಿಯೊಬ್ಬರು ತಮ್ಮ ಒಂದು ವರ್ಷದ ಅನುಭವವನ್ನು ಹಂಚಿಕೊಂಡಿದ್ದು, ಅದು ಇಂಟರ್ನೆಟ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಬದಲಿಗೆ ಬೆಂಗಳೂರಿನ ಅತಿಯಾದ ವಿಸ್ತರಣೆ ಮತ್ತು ಮಧ್ಯಮ ವರ್ಗದ ಜನರ ಹೂಡಿಕೆಯ ಗೊಂದಲಕ್ಕೆ ಹಿಡಿದ ಕನ್ನಡಿಯಾಗಿದೆ.
ಮನೆಮಾಲೀಕರ ಪ್ರಾಮಾಣಿಕ ಅನಿಸಿಕೆ
ರೆಡಿಟ್ (Reddit) ಬಳಕೆದಾರರೊಬ್ಬರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರು 1,020 ಚದರ ಅಡಿಯ ಅಪಾರ್ಟ್‌ಮೆಂಟ್ ಅನ್ನು₹45 ಲಕ್ಷದ ಮೂಲ ಬೆಲೆಗೆ ಖರೀದಿಸಿದ್ದರು. ಆದರೆ ಇಂಟೀರಿಯರ್ ಡಿಸೈನ್, ಸ್ಟಾಂಪ್ ಡ್ಯೂಟಿ ಮತ್ತು ಇತರೆ ನೋಂದಣಿ ಶುಲ್ಕಗಳು ಸೇರಿದಾಗ ಅದರ ಒಟ್ಟು ಮೊತ್ತ ₹55 ಲಕ್ಷಕ್ಕೆ ತಲುಪಿದೆ. ಈ ಹೂಡಿಕೆಯ ಅನುಕೂಲಗಳ ಬಗ್ಗೆ ಮಾತನಾಡಿದ ಅವರು, "ಇಲ್ಲಿಂದ ಎಲೆಕ್ಟ್ರಾನಿಕ್ ಸಿಟಿಗೆ ಕೇವಲ 15 ನಿಮಿಷ ಹಾಗೂ ಬನ್ನೇರುಘಟ್ಟ ರಸ್ತೆ, ಹುಳಿಮಾವು ಮತ್ತು ಎಚ್‌ಎಸ್‌ಆರ್ ಲೇಔಟ್‌ಗಳಿಗೆ ಅರ್ಧ ಗಂಟೆಯೊಳಗೆ ತಲುಪಬಹುದು" ಎಂದು ಸಮಾಧಾನಪಟ್ಟುಕೊಂಡಿದ್ದಾರೆ.
ಆದರೆ, ನಾಣ್ಯದ ಇನ್ನೊಂದು ಮುಖವನ್ನು ವಿವರಿಸುತ್ತಾ ಅವರು ಕೆಲವು ಕಹಿಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. "ನಗರದ ಮುಖ್ಯ ಭಾಗದಿಂದ ಇದು ಬಹಳ ದೂರವಿದೆ. ಪ್ರತಿದಿನ ಕೆಲಸ ಮುಗಿಸಿ ತಡರಾತ್ರಿ ಮನೆಗೆ ಮರಳುವ ಪ್ರಯಾಣ ನನಗೆ ನರಕದಂತೆ ಭಾಸವಾಗುತ್ತಿದೆ. ಅತಿ ದೂರ ಎಂಬ ಕಾರಣಕ್ಕೆ ನನ್ನ ಸ್ನೇಹಿತರು ಯಾರೂ ಸಹ ಇದುವರೆಗೂ ನನ್ನ ಮನೆಗೆ ಬಂದು ನನ್ನನ್ನು ಭೇಟಿ ಮಾಡುವ ಧೈರ್ಯವನ್ನೇ ಮಾಡಿಲ್ಲ" ಎಂದು ತಮ್ಮ ಒಂಟಿತನ ಮತ್ತು ಪ್ರತಿದಿನದ ಸಂಚಾರದ ಆಯಾಸವನ್ನು ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ತೀಕ್ಷ್ಣ ಪ್ರತಿಕ್ರಿಯೆ
ಈ ಪೋಸ್ಟ್ ನೋಡಿದ ಅನೇಕ ಬೆಂಗಳೂರಿಗರು ಜಿಗಣಿಯನ್ನು ಬೆಂಗಳೂರಿನ ಭಾಗ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. "ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಮಗೆ ಗೊತ್ತು, ಜಿಗಣಿ ಎಂದರೆ ಜಿಗಣಿಯೇ ಹೊರತು ಅದು ಬೆಂಗಳೂರಲ್ಲ. ಅಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿ ವೇಗ ಬಹಳ ಕಡಿಮೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹೂಡಿಕೆಯ ದೃಷ್ಟಿಯಿಂದ ಇದನ್ನು ಟೀಕಿಸಿ, "ನೀವು ಮಾಡಿದ ಹೂಡಿಕೆ ಲಾಭದಾಯಕವಲ್ಲ ಎಂದು ನಿಮಗೂ ತಿಳಿದಿದೆ, ಆದರೆ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳಲು ಹೀಗೆ ಬರೆಯುತ್ತಿದ್ದೀರಿ" ಎಂದು ಕಾಲೆಳೆದಿದ್ದಾರೆ.
ಅನುಭವಿ ಹೂಡಿಕೆದಾರರು ಹೇಳುವಂತೆ, ಮರುಮಾರಾಟ ಮಾಡುವಾಗ ಜನರು ಹಳೆಯ ಫ್ಲಾಟ್‌ಗಿಂತ ಹೊಸದನ್ನೇ ಇಷ್ಟಪಡುವುದರಿಂದ, ನಗರದಿಂದ ಇಷ್ಟು ದೂರದಲ್ಲಿ ದೊಡ್ಡ ಲಾಭ ನಿರೀಕ್ಷಿಸುವುದು ಕಷ್ಟ. ಈ ಘಟನೆಯು ಬೆಂಗಳೂರಿನಲ್ಲಿ ಮನೆ ಖರೀದಿಸುವ ಮುನ್ನ ಬೆಲೆಯ ಜೊತೆಗೆ ಸಂಪರ್ಕ, ಸಾಮಾಜಿಕ ಜೀವನ ಮತ್ತು ಮೂಲಸೌಕರ್ಯಗಳನ್ನು ಪರಿಗಣಿಸುವುದು ಎಷ್ಟು ಮುಖ್ಯ ಎಂಬುದನ್ನು ನೆನಪಿಸುತ್ತದೆ. ಕಡಿಮೆ ಬೆಲೆಗೆ ದೊಡ್ಡ ಮನೆ ಸಿಗಬಹುದು, ಆದರೆ ಅದಕ್ಕೆ ನಾವು ನೀಡಬೇಕಾದ 'ಸಮಯ' ಮತ್ತು 'ನೆಮ್ಮದಿ'ಯ ಬೆಲೆ ಬಹಳ ದೊಡ್ಡದಾಗಿರುತ್ತದೆ.

ಬೆಂಗಳೂರಿನ ಇತಿಹಾಸವನ್ನು ಗಮನಿಸಿದರೆ, ಒಂದು ಕಾಲದಲ್ಲಿ ವಿಜಯನಗರ ಅಥವಾ ಜೆ.ಪಿ. ನಗರ ಕೂಡ ನಗರದ ಹೊರವಲಯವೆಂದೇ ಪರಿಗಣಿಸಲ್ಪಟ್ಟಿದ್ದವು. ಆದರೆ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ 'ಸಮಯ' ಮತ್ತು 'ಸೌಕರ್ಯ' ಮುಖ್ಯವಾಗುತ್ತದೆ. ಹಿಂದೆ ಹೊಸಕೋಟೆ ಅಥವಾ ದೇವನಹಳ್ಳಿಯಲ್ಲಿ ಹೂಡಿಕೆ ಮಾಡಿದವರು ಈಗಲೂ ಸೂಕ್ತ ಗ್ರಾಹಕರಿಗಾಗಿ ಕಾಯುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಜಿಗಣಿಯ ವಿಷಯದಲ್ಲೂ ಸಹ, ಕೇವಲ ಕಡಿಮೆ ಬೆಲೆಗೆ ಆಕರ್ಷಿತರಾಗಿ ಮನೆ ಖರೀದಿಸುವುದು ಎಷ್ಟು ಸರಿ? ಎಂಬ ಹಳೆಯ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.


