Success Story: ಆರಂಭದಲ್ಲಿ ₹13 ಸಾವಿರ ಸಂಬಳ, ಮೊದಲ ಉದ್ಯಮ ಸೋಲು, ಶಾರ್ಕ್ ಟ್ಯಾಂಕ್ ನಿಂದ ತಿರಸಕಾರಕ್ಕೆ ಒಳಗಾದ ಕಂಪನಿಯ ಮೌಲ್ಯ ಈಗ ₹3,000 ಕೋಟಿಗೂ ಹೆಚ್ಚು. ಕೈಯಲ್ಲಿ ಹಣವೇ ಇಲ್ಲದೆ, ತಮ್ಮ ಪರಿಶ್ರಮದಿಂದ ಉದ್ಯಮ ಆರಂಭಿಸಿ ಈಗ ಕೋಟ್ಯಾಂತರ ರೂಪಾಯಿ ವ್ಯಾವಹಾರ ನಡೆಸುತ್ತಿರುವ ಆಕಾಶ್ ಗುಪ್ತಾ ಯಶೋಗಾಥೆ ಇದು.

ನೀವು ರಸ್ತೆಯಲ್ಲಿ ಓಡಾಡುತ್ತಿರುವ ಹಸಿರು ಬಣ್ಣದ ಸ್ಕೂಟರ್‌ ನೋಡಿರುತ್ತೀರಿ ಅಲ್ವಾ? ನಿಮ್ಮ ಮನೆಗೆ ಸಾಮಾನು ಡೆಲಿವರಿ ಮಾಡಲು ಬರುವುದು ಇದೇ ಸ್ಕೂಟರ್. ಆ ಹಸಿರು ಸ್ಕೂಟರ್ ಜಿಪ್ (Zypp) ಎಲೆಕ್ಟ್ರಿಕ್ ಕಂಪನಿಗೆ ಸೇರಿದ್ದು. ಇಂದು ಈ ಕಂಪನಿಯ ಆದಾಯ ₹470 ಕೋಟಿಗೂ ಅಧಿಕವಾಗಿದೆ. ಕಂಪನಿಯ ವ್ಯಾಲ್ಯೂಯೇಶನ್ ಕೂಡ ಸುಮಾರು ₹3,000 ಕೋಟಿಗೆ ತಲುಪಿದೆ. ಆದರೆ ಕೋಟ್ಯಂತರ ರೂಪಾಯಿಗಳ ಈ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ್ದು ಯಾವುದೇ ದೊಡ್ಡ ಹೂಡಿಕೆದಾರರಲ್ಲ, ಬದಲಿಗೆ ಒಂದು ತಾಯಿಯ ಏಟು! ಇದು ಜಿಪ್ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕ ಹಾಗೂ ಸಿಇಒ ಆಕಾಶ್ ಗುಪ್ತಾ ಅವರ ಯಶೋಗಾಥೆ.

ತಾಯಿಯ ಒಂದು ಏಟು ಜೀವನದ ದಿಕ್ಕನ್ನೇ ಬದಲಿಸಿತು

ಈ ಕಥೆ ಜೈಪುರದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಆರಂಭವಾಗುತ್ತದೆ. ಆಕಾಶ್ ಅವರ ತಂದೆ ಸರ್ಕಾರಿ ವೈದ್ಯರು. ತಾಯಿ ಗೃಹಿಣಿ. ಆಕಾಶ್ ಅವರ ಬಾಲ್ಯ ಸುಂದರವಾಗಿತ್ತು. ಜೀವನದ ಬಗ್ಗೆ ಗಂಭೀರತೆ ಇರಲೇ ಇಲ್ಲ. ಆದರೆ ನಾಲ್ಕನೇ ತರಗತಿಯಲ್ಲಿ ನಡೆದ ಒಂದು ಘಟನೆ ಅವರ ಜೀವನವನ್ನೆ ಬದಲಿಸಿತು ಅದು ಫಲಿತಾಂಶ ಬಂದ ದಿನ. 100ಕ್ಕೆ ಕೇವಲ 44 ಅಂಕಗಳು ಬಂದಿದ್ದವು. ಮಾರ್ಕ್‌ಶೀಟ್ ನೋಡಿ ತಾಯಿ ಕೋಪಗೊಂಡಿದ್ದರು. ಮನೆಗೆ ಬಂದ ಕೂಡಲೇ ತಾಯಿಯಿಂದ ಜೋರಾದ ಏಟು ಬಿತ್ತು. ಆ ದಿನ ಏಟಿಗಿಂತ ಹೆಚ್ಚು ನೋವುಂಟು ಮಾಡಿದ್ದು ತಾಯಿಯ ಕಣ್ಣಲ್ಲಿ ಕಾಣಿಸಿಕೊಂಡ ಕಣ್ಣೀರು. ತಾಯಿ ಅಳುತ್ತಾ, “ನಿನ್ನ ಹೆಸರನ್ನು ಆಕಾಶ್ ಎಂದು ಇಟ್ಟಿದ್ದು, ಜೀವನವನ್ನು ವ್ಯರ್ಥ ಮಾಡಲು ಅಲ್ಲ ಎಂದಿದ್ದರು. ಅದು ಆಕಾಶ್‌ಗೆ ಕೇವಲ ಒಂದು ಏಟಾಗಿರಲಿಲ್ಲ. ಅದು ಒಂದು ಎಚ್ಚರಿಕೆಯ ಗಂಟೆಯಾಗಿತ್ತು. ಏನನ್ನಾದರೂ ಸಾಧಿಸಬೇಕಾದರೆ ತಮ್ಮನ್ನು ತಾವು ಬದಲಿಸಿಕೊಳ್ಳಬೇಕು, ಕಷ್ಟಪಡಬೇಕು ಮತ್ತು ಬೆವರು ಸುರಿಸಬೇಕು ಎಂಬ ಅರಿವು ಅವರಿಗೆ ಅಂದೇ ಮೂಡಿತು.

₹13 ಸಾವಿರ ಸಂಬಳದಿಂದ ಆರಂಭವಾದ ಕನಸು

ಆಕಾಶ್ ಮನಸ್ಸಿನಲ್ಲಿ ಉದ್ಯಮಿಯಾಗಬೇಕು ಎಂಬ ಕನಸು ಬಾಲ್ಯದಲ್ಲೇ ಮೂಡಿತ್ತು. ಆದರೆ ಮಧ್ಯಮ ವರ್ಗದ ಕುಟುಂಬದ ಮುಂದಿದ್ದ ದಾರಿ ಎಂಜಿನಿಯರಿಂಗ್. ಐಐಟಿಯಲ್ಲಿ ಓದಬೇಕು ಎಂಬ ಕನಸು ನನಸಾಗಲಿಲ್ಲ. ಹೀಗಾಗಿ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದರು. ಕಾಲೇಜು ಮುಗಿದ ಬಳಿಕ ಇನ್ಫೋಸಿಸ್ನಲ್ಲಿ ಉದ್ಯೋಗ ಸಿಕ್ಕಿತು. ತಿಂಗಳ ಸಂಬಳ ಕೇವಲ ₹13,000. ಕುಟುಂಬಕ್ಕೆ ಸಂತೋಷವಾಗಿತ್ತು. ಆದರೆ ಆಕಾಶ್ ಅವರ ಮನಸ್ಸಿನಲ್ಲಿ ಅಸಮಾಧಾನವಿತ್ತು. ಐಐಟಿಯಲ್ಲಿ ಓದಿದ್ದ ಅವರ ಸ್ನೇಹಿತರು ₹10-12 ಲಕ್ಷದ ಪ್ಯಾಕೇಜ್ ಪಡೆಯುತ್ತಿದ್ದರು.

ಅಲ್ಲಿಯೇ ಆಕಾಶ್‌ಗೆ ಒಂದು ವಿಷಯ ಅರ್ಥವಾಯಿತು ಸಾಮಾನ್ಯ ದಾರಿಯಲ್ಲಿ ನಡೆದರೆ ತಾವು ಕೂಡ ಜನಸಮೂಹದ ಒಂದು ಭಾಗವಾಗಿಯೇ ಉಳಿಯುತ್ತೇವೆ. ಅವರು MBAಗೆ ತಯಾರಿ ಆರಂಭಿಸಿದರು. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಓದುವುದಕ್ಕೇ ಸಮಯ ಮೀಸಲಿಟ್ಟರು. ಈ ಪರಿಶ್ರಮದಿಂದ CAT ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ IMT ಗಾಜಿಯಾಬಾದ್ಗೆ ಪ್ರವೇಶ ಪಡೆದರು. ಅಲ್ಲಿ ಅವರಿಗೆ ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್ ಇಲ್ಲ ಎಂಬುದು ಇನ್ನಷ್ಟು ಸ್ಪಷ್ಟವಾಯಿತು. ದಿನಕ್ಕೆ 14ರಿಂದ 16 ಗಂಟೆಗಳ ಕಠಿಣ ಪರಿಶ್ರಮವೇ ಯಶಸ್ಸಿನ ದಾರಿ ಎಂಬುದನ್ನು ಅರಿತುಕೊಂಡರು.

₹1 ಕೋಟಿ ಪ್ಯಾಕೇಜ್... ನಂತರ ಮತ್ತೆ ಶೂನ್ಯ!

ಆಕಾಶ್ ಮುಂದಿನ 10 ವರ್ಷಗಳನ್ನು ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದರು. ಒಂದು ಹಂತದಲ್ಲಿ ಅವರ ವಾರ್ಷಿಕ ಪ್ಯಾಕೇಜ್ ₹1 ಕೋಟಿಗೆ ತಲುಪಿತು. ಆದರೆ ಮನಸ್ಸಿನಲ್ಲಿದ್ದ ಉದ್ಯಮಿಯಾಗಬೇಕು ಎಂಬ ಕನಸು ಇನ್ನೂ ಜೀವಂತವಾಗಿತ್ತು. ತಮ್ಮ ಪತ್ನಿ ರಾಶಿ ಮತ್ತು ತಾಯಿಯೊಂದಿಗೆ ಸೇರಿ ‘Let's Floatt’ ಎಂಬ ಸಣ್ಣ ಸ್ಟಾರ್ಟ್‌ಅಪ್ ಆರಂಭಿಸಿದರು. ನಂತರ ಆಕಾಶ್ ₹1 ಕೋಟಿ ಸಂಬಳದ ಉದ್ಯೋಗವನ್ನೇ ತ್ಯಜಿಸಿದರು. ಸಂಬಳ ₹0 ಆಯಿತು. ಈ ವಿಷಯವನ್ನು ಕುಟುಂಬದಿಂದಲೂ ಮುಚ್ಚಿಟ್ಟಿದ್ದರು. ನಂತರ Mobycy ಎಂಬ ಸೈಕಲ್ ಶೇರಿಂಗ್ ಉದ್ಯಮ ಆರಂಭಿಸಿದರು. ಈ ಉದ್ಯಮ ವಿಫಲವಾಯಿತು. ₹1 ಕೋಟಿ ಸಂಬಳದ ಉದ್ಯೋಗವನ್ನು ಬಿಟ್ಟಿದ್ದ ಆಕಾಶ್, ಮಧ್ಯಾಹ್ನದ ಬಿಸಿಲಿನಲ್ಲೇ ಮೆಟ್ರೋ ನಿಲ್ದಾಣಗಳ ಹೊರಗೆ ನಿಂತು ಕರಪತ್ರಗಳನ್ನು ಹಂಚುತ್ತಾ ಜನರನ್ನು ತಮ್ಮ ಸೇವೆ ಬಳಸುವಂತೆ ಮನವಿ ಮಾಡಬೇಕಾಯಿತು.

ವಿಫಲತೆಯಿಂದ ಹುಟ್ಟಿತು ‘ಜಿಪ್ ಎಲೆಕ್ಟ್ರಿಕ್’

ಹಣ ಖಾಲಿಯಾಗಿತ್ತು. ತಂಡದ ಸದಸ್ಯರ ಸಂಖ್ಯೆಯೂ ಅರ್ಧಕ್ಕೆ ಇಳಿದಿತ್ತು. ಆದರೆ ಸೋಲನ್ನು ಒಪ್ಪಿಕೊಳ್ಳುವುದು ಆಕಾಶ್ ಅವರ ಸ್ವಭಾವವಾಗಿರಲಿಲ್ಲ. ಸೈಕಲ್ ಶೇರಿಂಗ್ ಉದ್ಯಮ ವಿಫಲವಾದ ನಂತರ ಅವರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಗಮನ ಹರಿಸಿದರು. ಅಲ್ಲಿಂದಲೇ ಹುಟ್ಟಿಕೊಂಡದ್ದು Zypp Electric.

ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲೂ ತಿರಸ್ಕಾರ!

ಆಕಾಶ್ ಗುಪ್ತಾ ಮತ್ತು ಅವರ ಸಹ-ಸಂಸ್ಥಾಪಕಿ ರಾಶಿ ಅಗರ್ವಾಲ್ ಅವರು Zypp Electricನ ಐಡಿಯಾವನ್ನು Shark Tank India ವೇದಿಕೆಗೆ ತೆಗೆದುಕೊಂಡು ಹೋದರು. ಆ ಸಮಯದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರ ಇನ್ನಷ್ಟೇ ಬೆಳೆಯುತ್ತಿತ್ತು. ಅವರ ಬಳಿ ಸುಮಾರು 2,000 ಎಲೆಕ್ಟ್ರಿಕ್ ಸ್ಕೂಟರ್‌ಗಳಿದ್ದವು. ಆದರೆ ಮುಂದಿನ 6ರಿಂದ 8 ತಿಂಗಳಲ್ಲಿ 10,000 ಸ್ಕೂಟರ್‌ಗಳಿಗೆ ಹೆಚ್ಚಿಸುವ ವಿಶ್ವಾಸ ಆಕಾಶ್ ಅವರಿಗಿತ್ತು. ಅವರು ಕಂಪನಿಗೆ ₹220 ಕೋಟಿ ವ್ಯಾಲ್ಯೂಯೇಶನ್ ನೀಡಿ, ಶೇ.1ರಷ್ಟು ಪಾಲಿಗೆ ₹2.2 ಕೋಟಿ ಹೂಡಿಕೆ ಕೇಳಿದರು. ಆದರೆ ಶಾರ್ಕ್‌ಗಳಿಗೆ ಈ ಒಪ್ಪಂದ ಇಷ್ಟವಾಗಲಿಲ್ಲ. ಪರಿಣಾಮವಾಗಿ Zypp Electric ಯಾವುದೇ ಡೀಲ್ ಪಡೆಯದೆ ಶಾರ್ಕ್ ಟ್ಯಾಂಕ್‌ನಿಂದ ಹೊರಬರಬೇಕಾಯಿತು.

₹220 ಕೋಟಿಗೂ ಬೇಡವೆಂದ ಕಂಪನಿ ₹3,000 ಕೋಟಿಗೂ ಏರಿತು!

ಶಾರ್ಕ್ ಟ್ಯಾಂಕ್‌ನಿಂದ ತಿರಸ್ಕಾರ ಎದುರಾದರೂ ಆಕಾಶ್ ಮತ್ತು ರಾಶಿ ಹಿಂದೆ ಸರಿಯಲಿಲ್ಲ. ಅವರ ಸ್ಟಾರ್ಟ್‌ಅಪ್ ವೇಗವಾಗಿ ಬೆಳೆಯುತ್ತಾ ಹೂಡಿಕೆದಾರರ ಗಮನ ಸೆಳೆಯಿತು. ಮಾಹಿತಿಯ ಪ್ರಕಾರ, ಕಂಪನಿಯು GoodYear Ventures, Venture Catalysts, Indian Angel Network ಮತ್ತು 100 Unicorns ಸೇರಿದಂತೆ ಹಲವು ಹೂಡಿಕೆದಾರರಿಂದ ಒಟ್ಟು $76.5 ಮಿಲಿಯನ್ ಹಣ ಸಂಗ್ರಹಿಸಿದೆ. ಈ ಕಂಪನಿಯ ಮೌಲ್ಯ ಈಗ $331 ಮಿಲಿಯನ್, ಅಂದರೆ ಸುಮಾರು ₹3,000 ಕೋಟಿಗೂ ಹೆಚ್ಚು ತಲುಪಿತು. ಇಂದು Zypp Electric ದೇಶದಾದ್ಯಂತ ಸದ್ದು ಮಾಡುತ್ತಿದೆ.

ಒಮ್ಮೆ ತಿಂಗಳಿಗೆ ₹13,000 ಸಂಬಳ ಪಡೆಯುತ್ತಿದ್ದ ಆಕಾಶ್ ಗುಪ್ತಾ ಅವರ ಕಂಪನಿಯೊಂದಿಗೆ ಕೆಲಸ ಮಾಡುವ ಸಾವಿರಾರು ಡೆಲಿವರಿ ಪಾರ್ಟ್ನರ್‌ಗಳು ಇಂದು ತಿಂಗಳಿಗೆ ₹30,000-₹40,000ವರೆಗೆ ಗಳಿಸುತ್ತಿದ್ದಾರೆ. ತಮ್ಮಂತೆಯೇ ಮಧ್ಯಮ ವರ್ಗದ ಕುಟುಂಬಗಳಿಂದ ಬಂದಿರುವ, ಕುಟುಂಬಕ್ಕಾಗಿ ದಿನಕ್ಕೆ 14 ಗಂಟೆಗಳ ಕಾಲ ದುಡಿಯಲು ಸಿದ್ಧರಾಗಿರುವ ಗಿಗ್ ವರ್ಕರ್‌ಗಳೊಂದಿಗೆ ತಮ್ಮ ನಿಜವಾದ ಸಂಪರ್ಕವಿದೆ ಎಂದು ಆಕಾಶ್ ಹೇಳುತ್ತಾರೆ.