ಸಿಕ್ಕಿಂನ ಟೆಮಿ ಚಹಾ ಪುಡಿ ದಾಖಲೆಯ ₹27,000ಕ್ಕೆ ಮಾರಾಟವಾಗಿದೆ. ಬಿಜೆಪಿ ಹಿರಿಯ ನಾಯಕ ಬಲ್ಬೀರ್ ಪುಂಜ್ ನಿಧನರಾಗಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ವಿಪಕ್ಷಗಳು ಮತ್ತೆ ಯತ್ನಿಸುತ್ತಿವೆ. ದೇಶದಲ್ಲಿ ಎಲ್‌ಪಿಜಿ ಬೇಡಿಕೆ ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಿಕ್ಕಿಂ ಟೆಮಿ ಚಹಾ ಪುಡಿ ಕೇಜಿಗೆ ದಾಖಲೆಯ ₹27000ಕ್ಕೆ ಮಾರಾಟ

ಗ್ಯಾಂಗ್ಟಕ್‌: ಅಸ್ಸಾಂನ ಸರ್ಕಾರಿ ಸ್ವಾಮ್ಯದ ಟೆಮಿ ಚಹಾ ಎಸ್ಟೇಟ್‌ನಲ್ಲಿ ಬೆಳೆದ ಸಾವಯುವ ಚಹಾ ಪುಡಿ ಪ್ರಸ್ತುತ ಋತುವಿನಲ್ಲಿ ಕೇಜಿಗೆ 27,000 ರು.ಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಋತುವಿನ ಮೊದಲ ಬೆಳೆಯು ಸುವಾಸನೆ ಮತ್ತು ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿ. ಆದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆ ಜಾಸ್ತಿ. ಹೀಗಾಗಿ ಖರೀದಾರರು ಖರೀದಿಗೆ ಮುಗಿ ಬಿದ್ದಿದ್ದಾರೆ. ಮುಕ್ತ ಬಿಡ್ಡಿಂಗ್‌ ಮೂಲಕ ನೀಡಲಾಗುವ ಆರಂಭಿಕ ಲಾಟ್‌ಗಳು ಖರೀದಿದಾರರು ದುಬಾರಿ ಬೆಲೆಗೆ ಖರೀದಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ಬಲ್ಬೀರ್‌ ನಿಧನ

ನವದೆಹಲಿ: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಮಾಜಿ ಉಪಾಧ್ಯಕ್ಷ ಬಲ್ಬೀರ್‌ ಸಿಂಗ್‌ (76) ಅವರು ಶನಿವಾರ ನಿಧನರಾಗಿದ್ದಾರೆ. ಪಂಜಾಬಿನ ಲಲೋವಾಲ್‌ನಲ್ಲಿ ಜನಿಸಿದ ಪುಂಜ್‌ ರಾಜಕಾರಣ ಪ್ರವೇಶಿಸುವ ಮುನ್ನ ಪತ್ರಕರ್ತರಾಗಿದ್ದರು. 1971ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ್ದರು. ಆ ಬಳಿಕ ಬಿಜೆಪಿ ಸೇರಿದ ಅವರು ಎರಡು ಸಲ ರಾಜ್ಯಸಭಾ ಸಂಸದರಾಗಿದ್ದರು.2000ರಿಂದ 2006ರವರೆಗೆ ಉತ್ತರ ಪ್ರದೇಶದಿಂದ ಹಾಗೂ 2008ರಿಂದ 2014ರವರೆಗೆ ಒಡಿಶಾದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪುಂಜ್ ಅವರು ಕೇವಲ ರಾಜಕಾರಣಿಯಲ್ಲದೆ, ಚಿಂತಕರಾಗಿಯೂ ಗುರುತಿಸಿಕೊಂಡಿದ್ದರು. ಬಿಜೆಪಿ ಪಕ್ಷದ ಬೌದ್ಧಿಕ ಘಟಕದ ಸಂಚಾಲಕರಾಗಿ ಕೆಲಸ ಮಾಡಿ, ಪಕ್ಷದ ವಿಚಾರಧಾರೆ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಾಷ್ಟ್ರೀಯ ಯುವ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಯುವಜನತೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಗಳನ್ನು ಮುನ್ನಡೆಸಿದರು.

ಸಿಇಸಿ ಜ್ಞಾನೇಶ್‌ ಪದಚ್ಯುತಿಗೆ ಮತ್ತೆ ವಿಪಕ್ಷಗಳ ಪ್ರಯತ್ನ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಲು ವಿಪಕ್ಷಗಳು ಸಲ್ಲಿಸಿದ್ದ ನೋಟಿಸ್‌ ಈ ಹಿಂದೆ ಸಂಸತ್‌ನಲ್ಲಿ ತಿರಸ್ಕೃತಗೊಂಡಿದ್ದರೂ ಪ್ರತಿಪಕ್ಷಗಳು ಮತ್ತೊಮ್ಮೆ ಹಕ್ಕು ಮಂಡಿಸಲು ಮುಂದಾಗಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಎಸ್ಪಿ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಹೊಸ ನೋಟಿಸ್‌ ನೀಡಲು ಸಿದ್ಧತೆ ನಡೆಸಿವೆ ಎಂದು ತಿಳಿದು ಬಂದಿದೆ. ಆದರೆ ಯಾವಾಗ ಮಂಡಿಸಲಾಗುತ್ತದೆ. ಎರಡೂ ಸದನಗಳಲ್ಲಿಯೂ ಮಂಡಿಸಲಾಗುತ್ತದೆಯೋ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಜ್ಞಾನೇಶ್‌ ವಿಶೇಷ ಮತಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶಗಳನ್ನು ಧಿಕ್ಕರಿಸಿದ್ದಾರೆ ಎನ್ನುವುದು ವಿಪಕ್ಷಗಳ ಆರೋಪ.

ದೇಶದಲ್ಲಿ ಎಲ್‌ಪಿಜಿ ಬೇಡಿಕೆ ಸಹಜ ಸ್ಥಿತಿಯತ್ತ: ಕೇಂದ್ರ

ನವದೆಹಲಿ: 'ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಸೃಷ್ಟಿಯಾಗಿದ್ದ ಎಲ್‌ಪಿಜಿ ಆತಂಕ ನಿವಾರಣೆಯಾಗಿದ್ದು, ಬೇಡಿಕೆ ಯುದ್ಧ ಪೂರ್ವ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಪ್ರಸ್ತುತ ದೈನಂದಿನ ಬುಕಿಂಗ್‌ಗಳು 40-50 ಲಕ್ಷ ವ್ಯಾಪ್ತಿಯಲ್ಲಿವೆ. ಸರಬರಾಜು ಸಾಮಾನ್ಯವಾಗಿದೆ. ಏ.16ರಂದು ಸುಮಾರು 50 ಲಕ್ಷ ರೀಫಿಲ್ ಸಿಲಿಂಡರ್‌ಗಳನ್ನು ಬಳಕೆದಾರರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಇದು ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿದೆ ಎಂಬುದನ್ನು ತೋರಿಸುತ್ತದೆ' ಎಂದಿದ್ದಾರೆ. ಕಳೆದ ತಿಂಗಳು ದೈನಂದಿನ ಬುಕಿಂಗ್‌ಗಳು ಗರಿಷ್ಠ 80 ಲಕ್ಷವನ್ನು ಮೀರಿದ್ದವು. ಯುದ್ದಕ್ಕೂ ಮುನ್ನ ಎಲ್‌ಪಿಜಿ ಬುಕಿಂಗ್ ಪ್ರಮಾಣ 45 ಲಕ್ಷದಷ್ಟಿದ್ದವು.

ಬಜೆಟ್ ಅಧಿವೇಶನ ಅಂತ್ಯ: ಲೋಕಸಭೆ 93%, ರಾಜ್ಯಸಭೆ110% ಫಲಪ್ರದ

ನವದೆಹಲಿ: ಜ.28ರಿಂದ ಆರಂಭವಾಗಿದ್ದ ಲೋಕಸಭೆ ಮತ್ತು ರಾಜ್ಯಸಭೆಯ ಬಜೆಟ್ ಅಧಿವೇಶನಗಳು ಶುಕ್ರವಾರ ಮುಕ್ತಾಯಗೊಂಡಿದ್ದು, ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಶನಿವಾರ ಬೆಳಿಗ್ಗೆ 11 ಗಂಟೆಗೆ ಸಮಾರೋಪದ ಮಾತು ಗಳನ್ನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, 'ಒಟ್ಟು 31 ಕಲಾಪಗಳು ನಡೆದವು. 151 ಗಂಟೆ 42 ನಿಮಿಷಗಳ ಕಾಲ ಚರ್ಚೆ ನಡೆಯಿತು. ಅಧಿವೇಶನದ ಉತ್ಪಾದಕತೆ ಶೇ.93' ಎಂದು ತಿಳಿಸಿದರು. ಇತ್ತ ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಮಾತನಾಡಿ, 'ಅಧಿವೇಶನವು ಒಟ್ಟು 157 ಗಂಟೆ 40 ನಿಮಿಷಗಳ ಕಾಲ ನಡೆಯಿತು. ಶೇ.109.87ರಷ್ಟು ಉತ್ಪಾದಕತೆ ತೋರಿತು' ಎಂದರು.

ಇದನ್ನೂ ಓದಿ: ವಿದೇಶಿ ದೇಣಿಗೆಗೆ ಕಡಿವಾಣಕ್ಕೆ ಫಾದರ್ ಕಿಡಿ: ದೇಗುಲದ ಚಿನ್ನ ಸಮಾಜ ಸೇವೆಗೆ ಬಳಸಲಿ ಎಂದ ಫಾದರ್ ಪೌಲ್