- Home
- Business
- ಡಿಕೆಶಿ ಸಿಎಂ ಆಗ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಸಂಚಲನ: ಒಂದೇ ದಿನ ಶೇ 20ರಷ್ಟು ಭಾರಿ ಜಿಗಿತ ಕಂಡ ಕಾಫಿ ಡೇ ಷೇರುಗಳು!
ಡಿಕೆಶಿ ಸಿಎಂ ಆಗ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಸಂಚಲನ: ಒಂದೇ ದಿನ ಶೇ 20ರಷ್ಟು ಭಾರಿ ಜಿಗಿತ ಕಂಡ ಕಾಫಿ ಡೇ ಷೇರುಗಳು!
ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಘೋಷಣೆಯಾಗುತ್ತಿದ್ದಂತೆ, ಅವರ ಕುಟುಂಬದ ಸಂಬಂಧವಿರುವ ಕಾಫಿ ಡೇ ಎಂಟರ್‌ಪ್ರೈಸಸ್ (ಸಿಸಿಡಿ) ಷೇರುಗಳ ಬೆಲೆಯಲ್ಲಿ ಶೇ 20ರಷ್ಟು ಭಾರಿ ಏರಿಕೆ ಕಂಡುಬಂದಿದೆ.

ಡಿಕೆಶಿ ಸಿಎಂ ಆಗಿ ಘೋಷಣೆ, ಕಾಫಿ ಡೇ ಷೇರು ಏರಿಕೆ
ಕಾಂಗ್ರೆಸ್ ಹೈಕಮಾಂಡ್‌ನ ನಿರ್ದೇಶನದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತವಾಗಿದ್ದು, ಜೂನ್ 3ಕ್ಕೆ ಪ್ರಮಾಣವಚನ ಸ್ವೀಕಾರ ಮಾಡುವುದು ನಿಶ್ಚಿತವಾಗಿದೆ. ಶನಿವಾರ ಸಿಎಲ್‌ಪಿ ಸಭೆಯಲ್ಲಿ ಡಿಕೆಶಿ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಘೋಷಣೆ ಮಾಡುವ ತಯಾರಿ ಆರಂಭವಾಗಿದೆ.
ಸಿಸಿಡಿ (CCD) ಷೇರುಗಳ ಬೆಲೆಯಲ್ಲಿ ಶೇ 20ರಷ್ಟು ಭಾರಿ ಜಿಗಿತ
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತಿದ್ದಂತೆ ಕೆಫೆ ಕಾಫಿ ಡೇ (ಸಿಸಿಡಿ) ಮಳಿಗೆಗಳನ್ನು ನಿರ್ವಹಿಸುವ 'ಕಾಫಿ ಡೇ ಎಂಟರ್‌ಪ್ರೈಸಸ್' ಷೇರುಗಳ ಬೆಲೆ ಶುಕ್ರವಾರ ಒಂದೇ ದಿನ ಶೇ 20ರಷ್ಟು ಭಾರಿ ಏರಿಕೆ ಕಂಡಿದೆ. ಗುರುವಾರ ಷೇರು ಮಾರುಕಟ್ಟೆಯಲ್ಲಿ ₹28.99 ರಷ್ಟಿದ್ದ ಸಿಸಿಡಿ ಷೇರು ಬೆಲೆ, ಶುಕ್ರವಾರ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ ಬರೋಬ್ಬರಿ ₹34.78ಕ್ಕೆ ಏರಿಕೆ ಕಾಣುವ ಮೂಲಕ ಹೂಡಿಕೆದಾರರಲ್ಲಿ ಹೊಸ ಸಂಚಲನ ಮೂಡಿಸಿದೆ.
ಡಿಕೆಶಿ ಕುಟುಂಬ ಹಾಗೂ ಸಿಸಿಡಿ ನಡುವಿನ ಗಾಢ ಸಂಬಂಧ
ನೂತನ ಮುಖ್ಯಮಂತ್ರಿಯಾಗಲಿರುವ ಡಿಕೆ ಶಿವಕುಮಾರ್ ಅವರ ಹಿರಿಯ ಮಗಳು ಐಶ್ವರ್ಯ ಅವರು ಸಿಸಿಡಿ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರನ್ನು ವಿವಾಹವಾಗಿದ್ದಾರೆ. ಅಮರ್ತ್ಯ ಹೆಗ್ಡೆ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ ಅವರ ಮೊಮ್ಮಗನೂ ಹೌದಾಗಿದ್ದು, ಡಿಕೆಶಿ ಮಗಳ ಕುಟುಂಬವೇ ಪ್ರಸ್ತುತ ಸಿಸಿಡಿಯ ಮಾಲೀಕತ್ವ ಹೊಂದಿದೆ. ಈ ಕೌಟುಂಬಿಕ ಮತ್ತು ರಾಜಕೀಯ ಸಂಬಂಧದ ಹಿನ್ನೆಲೆಯಲ್ಲಿ ಹೂಡಿಕೆದಾರರ ಭಾವನೆಗಳು ಸಕಾರಾತ್ಮಕವಾಗಿ ಬದಲಾಗಿದ್ದು ಷೇರು ಏರಿಕೆಗೆ ಕಾರಣವಾಗಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆಗೆ ₹132 ಕೋಟಿ ಭರ್ಜರಿ ಲಾಭ
ರಾಜಕೀಯ ಬೆಳವಣಿಗೆಗಳ ನಡುವೆ ಕೆಫೆ ಕಾಫಿ ಡೇ ಸಂಸ್ಥೆಯು ಆರ್ಥಿಕವಾಗಿಯೂ ಉತ್ತಮ ಸಾಧನೆ ಮಾಡಿದೆ. ಇತ್ತೀಚೆಗಷ್ಟೇ 2026ರ ಮಾರ್ಚ್‌ಗೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆಯು ಬರೋಬ್ಬರಿ ₹132.07 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದ ನಿವ್ವಳ ಲಾಭವಾದ ₹114.16 ಕೋಟಿಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದ ಪ್ರಗತಿಯನ್ನು ತೋರಿಸುತ್ತದೆ.
ಸಂಸ್ಥಾಪಕ ವಿ.ಜಿ. ಸಿದ್ದಾರ್ಥ ಅವರ ದುರಂತ ಸಾವು
ಕೆಫೆ ಕಾಫಿಡೇ ಸಂಸ್ಥಾಪಕ, ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಳಿಯ ಹಾಗೂ ಡಿಕೆ ಶಿವಕುಮಾರ್ ಅವರ ಆಪ್ತ ಸ್ನೇಹಿತರಾಗಿದ್ದ ವಿ.ಜಿ. ಸಿದ್ದಾರ್ಥ ಅವರು 2019ರ ಜೂನ್ 29ರಂದು ಹಠಾತ್ ನಾಪತ್ತೆಯಾಗಿದ್ದರು. ನಂತರ ಅವರು ಉಲ್ಲಾಳದ ಬಳಿ ನೇತ್ರಾವತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರುವುದು ದೃಢಪಟ್ಟಿತ್ತು ಮತ್ತು ಎರಡು ದಿನಗಳ ಸುದೀರ್ಘ ಹುಡುಕಾಟದ ಬಳಿಕ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಅಂತಹ ಕಠಿಣ ದಿನಗಳನ್ನು ಎದುರಿಸಿದ್ದ ಸಂಸ್ಥೆ ಈಗ ಮತ್ತೆ ಮಾರುಕಟ್ಟೆಯಲ್ಲಿ ಪುಟಿದೆದ್ದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

