ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೌಕರರು ತಮ್ಮ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 25 ಮತ್ತು 26 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಿಬ್ಬಂದಿ ಕೊರತೆ, ಪಿಂಚಣಿ ಸೌಲಭ್ಯ, ವೇತನ ಅಸಮಾನತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೌಕರರು 16 ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿ ಮೇ 25, 26 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಒಕ್ಕೂಟ ( ಎಐಎಸ್‌ಬಿಐಎಸ್‌ಎಫ್) ದೇಶಾದ್ಯಂತ 2 ದಿನಗಳ ಮುಷ್ಕರ ನಡೆಸುವುದಾಗಿ ಘೋಷಿಸಿವೆ. ಬ್ಯಾಂಕುಗಳಲ್ಲಿ ಸಂದೇಶವಾಹಕ ನೇಮಕಾತಿ, ಸಶಸ್ತ್ರ ಗಾರ್ಡ್‌ಗಳ ಹೊಸ ನೇಮಕಾತಿ, ಸಿಬ್ಬಂದಿ ಕೊರತೆ, ಪಿಂಚಣಿ ಸೌಲಭ್ಯ ಸೇರಿದಂತೆ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರ ಪರಿಣಾಮ ಎಸ್‌ಬಿಐ ಶಾಖೆಗಳಲ್ಲಿ ಸತತ 4 ದಿನ ಗ್ರಾಹಕರಿಗೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಕಾರಣ 23 ನಾಲ್ಕನೇ ಶನಿವಾರ, 24 ಭಾನುವಾರ ಆಗಿರಲಿದೆ.
16 ಬೇಡಿಕೆಗಳ ಈಡೇರಿಕೆಗೆ ಆಗ್ರಹ
ನೌಕರರು ಒಟ್ಟು 16 ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಿದ್ದು, ಪ್ರಮುಖವಾಗಿ ಸಂದೇಶವಾಹಕರ (ಮೆಸೆಂಜರ್) ನೇಮಕಾತಿ, ಸಶಸ್ತ್ರ ಗಾರ್ಡ್‌ಗಳ ಹೊಸ ನೇಮಕಾತಿ, ಸಿಬ್ಬಂದಿ ಕೊರತೆ ನಿವಾರಣೆ, ಶಾಶ್ವತ ಹುದ್ದೆಗಳ ಹೊರಗುತ್ತಿಗೆ ನಿಲ್ಲಿಸುವುದು, ವೇತನ ಸಮಾನತೆ ಸಮಸ್ಯೆ ಪರಿಹಾರ, ಪಿಂಚಣಿ ಸೌಲಭ್ಯಗಳಲ್ಲಿ ಸುಧಾರಣೆ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ.
ಇದೇ ವೇಳೆ, 2019ರಿಂದ ಸೇರ್ಪಡೆಯಾದ ನೌಕರರಿಗೆ ಅಂತರ ವಲಯ (ಇಂಟರ್-ಸರ್ಕಲ್) ವರ್ಗಾವಣೆ ಜಾರಿಗೊಳಿಸುವುದು, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ವ್ಯಾಪ್ತಿಯಲ್ಲಿರುವ ನೌಕರರಿಗೆ ಪಿಂಚಣಿ ನಿಧಿ ನಿರ್ವಹಣೆಯಲ್ಲಿ ಆಯ್ಕೆ ನೀಡುವುದು, ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಸುಧಾರಣೆ ತರುವುದು, ವೃತ್ತಿ ಪ್ರಗತಿ ಯೋಜನೆಯ ಮರುಪರಿಶೀಲನೆ, ಎಚ್‌ಆರ್‌ಎಂಎಸ್ ಸಮಸ್ಯೆಗಳ ಪರಿಹಾರ ಮತ್ತು ಕಾರ್ಮಿಕರ ಪ್ರತಿನಿಧಿಗಳ ನೇಮಕ ಸೇರಿದಂತೆ ಬೇಡಿಕೆಗಳನ್ನೂ ಒಕ್ಕೂಟ ಮುಂದಿಟ್ಟಿದೆ.
ಸಿಬ್ಬಂದಿ ಕೊರತೆ, ಭದ್ರತಾ ಸಮಸ್ಯೆಗಳ ಬಗ್ಗೆ ಆತಂಕ
ಅಧೀನ ಕೇಡರ್‌ನಲ್ಲಿ ಸಿಬ್ಬಂದಿ ಕೊರತೆ ಗಂಭೀರವಾಗಿದ್ದು, ಸುಮಾರು ಮೂರು ದಶಕಗಳಿಂದ ಸಂದೇಶವಾಹಕರ ನೇಮಕಾತಿ ಸ್ಥಗಿತಗೊಂಡಿರುವುದಾಗಿ ಒಕ್ಕೂಟ ಹೇಳಿದೆ. ಇದರ ಪರಿಣಾಮವಾಗಿ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂದು ಆರೋಪಿಸಲಾಗಿದೆ. ಸಶಸ್ತ್ರ ಗಾರ್ಡ್‌ಗಳ ಕೊರತೆಯಿಂದ ಭದ್ರತಾ ಸಮಸ್ಯೆಗಳು ಎದುರಾಗುತ್ತಿವೆ ಎಂಬುದನ್ನೂ ಒಕ್ಕೂಟ ಉಲ್ಲೇಖಿಸಿದೆ. ಇತ್ತೀಚೆಗೆ ಸೂರತ್‌ನ ಎಸ್‌ಬಿಐ ಶಾಖೆಯಲ್ಲಿ ನಡೆದ ದರೋಡೆ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದು, ಇಂತಹ ನಿರ್ಲಕ್ಷ್ಯವು ನೌಕರರು ಹಾಗೂ ಗ್ರಾಹಕರ ಭದ್ರತೆಯನ್ನು ಹಾನಿಗೊಳಿಸುತ್ತದೆ ಎಂದು ಎಚ್ಚರಿಸಿದೆ.
ವೇತನ ಅಸಮಾನತೆ ಆರೋಪ
ಎಸ್‌ಬಿಐನಲ್ಲಿ ಅಧಿಕಾರಿಗಳು ಮತ್ತು ಕಾರ್ಮಿಕರ ನಡುವೆ ವೇತನ ಪರಿಷ್ಕರಣೆಯಲ್ಲಿ ಅಸಮಾನತೆ ಇದೆ ಎಂದು ಎಐಎಸ್‌ಬಿಐಎಸ್‌ಎಫ್ ಆರೋಪಿಸಿದೆ. 12ನೇ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಶೇ.17ರಷ್ಟು ವೇತನ ಹೆಚ್ಚಳ ಒಪ್ಪಂದವಾಗಿದ್ದರೂ, ವಿಶೇಷ ವೇತನದ ಮೂಲಕ ಅಧಿಕಾರಿಗಳು ಶೇ.22ರಷ್ಟು ಲಾಭ ಪಡೆದರೆ, ಕಾರ್ಮಿಕ ಸಿಬ್ಬಂದಿಗೆ ಶೇ.17ರಷ್ಟೇ ಸೀಮಿತವಾಗಿದೆ ಎಂದು ಹೇಳಲಾಗಿದೆ.
ಪ್ರತಿಭಟನೆಗಳ ಸರಣಿ ಕಾರ್ಯಕ್ರಮ
ಮುಷ್ಕರಕ್ಕೂ ಮುನ್ನ ಒಕ್ಕೂಟವು ಹಲವು ಹಂತಗಳಲ್ಲಿ ಪ್ರತಿಭಟನೆಗಳನ್ನು ಘೋಷಿಸಿದೆ. ಊಟದ ವಿರಾಮದ ವೇಳೆ ಪ್ರತಿಭಟನೆ, ಸಾಮಾಜಿಕ ಜಾಲತಾಣ ಅಭಿಯಾನ, ಮೌನ ಧರಣಿ, ಧರಣಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜೊತೆಗೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ. ನೌಕರರು ಮೇ 19ರಂದು ಹಣಕಾಸು ಸಚಿವರಿಗೆ ಮತ್ತು ಮೇ 21ರಂದು ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮೇ 25 ಅಥವಾ 26ರಂದು ರಜೆ ಬಂದಲ್ಲಿ, ಮುಷ್ಕರವನ್ನು ಮೇ 27ರಂದು ಮುಂದೂಡಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ.
ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ
ಈ ಮುಷ್ಕರದ ಪರಿಣಾಮವಾಗಿ ಎಸ್‌ಬಿಐ ಶಾಖೆಗಳಲ್ಲಿನ ದೈನಂದಿನ ಬ್ಯಾಂಕಿಂಗ್ ಕಾರ್ಯಾಚರಣೆಗಳು ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ. ಆದರೆ ಸೇವೆಗಳ ಅಡಚಣೆ ಕುರಿತು ಬ್ಯಾಂಕ್ ವತಿಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಒಟ್ಟಾರೆ, ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯವಾಗಿ ನಡೆಯಲಿರುವ ಈ ರಾಷ್ಟ್ರವ್ಯಾಪಿ ಮುಷ್ಕರ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಮತ್ತು ಬ್ಯಾಂಕ್ ಆಡಳಿತವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಗಮನಾರ್ಹವಾಗಿದೆ.


